Sanju Samson: ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ; ಸಂಜು ಸ್ಯಾಮ್ಸನ್ ಸ್ಟ್ಯಾಂಡಿಂಗ್ ಆಟಗಾರ
Aug 21, 2023 02:43 PM IST
ಐರ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದ ವೇಳೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಮತ್ತು ಸಂಜು ಸ್ಯಾಮ್ಸನ್ (ANI)
ಏಷ್ಯಕಪ್‌ಗೆ ಪ್ರಕಟಿಸಿರುವ ಟೀಂ ಇಂಡಿಯಾದಲ್ಲಿ ಸಂಜು ಸ್ಯಾಮ್ಸನ್ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದಾರೆ. ಆದರೆ ಸ್ಟ್ಯಾಂಡಿಂಗ್ ಆಟಗಾರರಾಗಿ ಭಾರತ ತಂಡದೊಂದಿಗೆ ಶ್ರೀಲಂಕಾಗೆ ತೆರಳಲಿದ್ದಾರೆ.
ಮುಂಬೈ: ಬಹು ನಿರೀಕ್ಷಿತ ಐಸಿಸಿ ಪುರುಷರ ವಿಶ್ವಕಪ್‌ಗೂ ಮುನ್ನ ನಡೆಯಲಿರುವ ಏಷ್ಯಾ ಕಪ್‌ಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ಗಾಯದ ಸಮಸ್ಯೆಯಿಂದಾಗಿ ಹಲವು ದಿನಗಳಿಂದ ಕ್ರಿಕೆಟ್ ಆಟದಿಂದ ದೂರ ಉಳಿದಿದ್ದ ಕನ್ನಡಿಗ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ತಂಡಕ್ಕೆ ವಾಪಸ್ ಆಗಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಮೂಲಕ ಮಿಂಚಿದ್ದ ಯುವ ಪ್ರತಿಮೆ ತಿಲಕ್ ವರ್ಮಾ ಏಷ್ಯಾ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಟಿ20 ಸ್ಪೆಷಲಿಸ್ಟ್ ಸೂರ್ಯಕುಮಾರ್ ಯಾದವ್‌ಗೆ ಬಿಸಿಸಿಐ ಆಯ್ಕೆ ಸಮಿತಿ ಮಣೆಹಾಕಿದೆ.
ಟೀಂ ಇಂಡಿಯಾದ ಭವಿಷ್ಯದ ನಾಯಕ ಅಂತಲೇ ಕರೆಯಲ್ಪಡುವ ಸಂಜು ಸ್ಯಾಮ್ಸನ್ ಏಷ್ಯ ಕಪ್‌ಗೆ ಆಯ್ಕೆಯಾಗುವಲ್ಲಿ ವಿಫಲವಾಗಿದ್ದಾರೆ. ಇದಕ್ಕೆ ಕಾರಣ ಅವರು ಹಿಂದಿನ ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯ ಎಂದು ಹೇಳಲಾಗುತ್ತಿದೆ. ಆದರೆ ಸ್ಯಾಮ್ಸನ್ ಟೂರ್ನಿಗೆ ಆಯ್ಕೆಯಾಗದಿದ್ದರೂ ಸ್ಟ್ಯಾಂಡಿಂಗ್ ಆಟಗಾರನಾಗಿ ತಂಡದೊಂದಿಗೆ ಶ್ರೀಲಂಕಾಗೆ ಹೊರಡಲಿದ್ದಾರೆ.
ಸಂಜು ಸ್ಯಾಮ್ಸನ್‌ಗೆ ಏಷ್ಯಾ ಕಪ್ ತಂಡದಲ್ಲಿ ಅವಕಾಶ ನೀಡದಿದ್ದಕ್ಕೆ ಅವರ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ಬಿಸಿಸಿಐ ವಿರುದ್ಧ ಆಕ್ರೋಶಗೊಂಡಿದ್ದಾರೆ.
ನಾನು ನಿಮಗೆ ಒಂದು ಸಲಹೆಯನ್ನು ನೀಡುತ್ತೇನೆ. ಸಂಜು ದಯವಿಟ್ಟು ಬೇರೆ ದೇಶಗಳಿಗೆ ಹೋಗಿ ಆಡಿ. ನೀವು ಭಾರತದಲ್ಲಿ ರಾಜಕೀಯವನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಸಂಜು ಸ್ಯಾಮ್ಸನ್ ಇರಾ ಎಂಬ ಟ್ವಿಟರ್ (ಈಗ ಎಕ್ಸ್) ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಮುಕುಲ್ ಎಂಬುವವರು ಬಿಸಿಸಿಐ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಬಿಸಿಸಿಐ ಒಂದು ನಾಚಿಕೆಗೇಡಿನ ಮಂಡಳಿಯಾಗಿದ್ದು, ಏಷ್ಯಾ ಕಪ್‌ಗೆ ಮುಂಬೈ ಲಾಬಿ ನಡೆದಿದೆ. ಹೀಗಾಗಿ ಸಂಜು ಸ್ಯಾಮ್ಸನ್ ಬದಲಿಗೆ ಇಬ್ಬರನ್ನು ಆಯ್ಕೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡದ ತಿಲಕ್ ವರ್ಮಾ ಮತ್ತು ಏಕದಿನ ಪಂದ್ಯಗಳನ್ನು ಏನೂ ಮಾಡದ ಸೂರ್ಯಕುಮಾರ್ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಕಿಡಿಕಾರಿದ್ದು, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ಅವರ ಅಂಕಿ ಅಂಶಗಳನ್ನು ಹಂಚಿಕೊಂಡಿದ್ದಾರೆ.
ಏಷ್ಯಾ ಕಪ್‌ಗೆ ಟೀಂ ಇಂಡಿಯಾ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ಉಪ ನಾಯಕ) ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಟ್ರಾವೆಲಿಂಗ್ ಸ್ಟ್ಯಾಂಡ್-ಬೈ ಆಟಗಾರ: ಸಂಜು ಸ್ಯಾಮ್ಸನ್