logo
ಕನ್ನಡ ಸುದ್ದಿ  /  ಕ್ರಿಕೆಟ್  /  Team India Records: ಶ್ರೀಲಂಕಾ ವಿರುದ್ಧ ಟ್ರೋಫಿ ಗೆದ್ದಿದ್ದಲ್ಲದೆ ಪ್ರಮುಖ ವಿಶ್ವ ದಾಖಲೆಗಳನ್ನು ನಿರ್ಮಿಸಿದ ಭಾರತ!

Team India Records: ಶ್ರೀಲಂಕಾ ವಿರುದ್ಧ ಟ್ರೋಫಿ ಗೆದ್ದಿದ್ದಲ್ಲದೆ ಪ್ರಮುಖ ವಿಶ್ವ ದಾಖಲೆಗಳನ್ನು ನಿರ್ಮಿಸಿದ ಭಾರತ!

Prasanna Kumar P N HT Kannada

Sep 18, 2023 06:00 AM IST

google News

ಏಷ್ಯಾಕಪ್ ಜಯಿಸಿ ವಿಶ್ವ ದಾಖಲೆಗಳನ್ನು ನಿರ್ಮಿಸಿದ ಭಾರತ.

    • ಏಷ್ಯಾಕಪ್​ ಫೈನಲ್​ ಪಂದ್ಯದಲ್ಲಿ ಭರ್ಜರಿ ಗೆಲುವಿನೊಂದಿಗೆ ಭಾರತ ಹಲವು ವಿಶ್ವದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಅವುಗಳನ್ನು ಈ ಮುಂದೆ ನೋಡೋಣ.
ಏಷ್ಯಾಕಪ್ ಜಯಿಸಿ ವಿಶ್ವ ದಾಖಲೆಗಳನ್ನು ನಿರ್ಮಿಸಿದ ಭಾರತ.
ಏಷ್ಯಾಕಪ್ ಜಯಿಸಿ ವಿಶ್ವ ದಾಖಲೆಗಳನ್ನು ನಿರ್ಮಿಸಿದ ಭಾರತ. (BCCI Twitter)

ಪ್ರಸಕ್ತ ಸಾಲಿನ ಏಷ್ಯಾಕಪ್ ಟೂರ್ನಿಗೆ (Asia Cup 2023) ಅದ್ಧೂರಿ ತೆರೆ ಬಿದ್ದಿದೆ. ಫೈನಲ್​​ನಲ್ಲಿ​ ಶ್ರೀಲಂಕಾ ವಿರುದ್ಧ ಅಮೋಘ ಗೆಲುವು ದಾಖಲಿಸಿದ ಭಾರತ (India vs Australia) 8ನೇ ಏಷ್ಯಾಕಪ್​ ಟೈಟಲ್​ಗೆ ಮುತ್ತಿಕ್ಕಿದೆ. ಟೀಮ್ ಇಂಡಿಯಾ ಪ್ರಶಸ್ತಿ ಗೆಲ್ಲುವುದರ ಜೊತೆಗೆ ಹಲವು ದಾಖಲೆಗಳನ್ನೂ ನಿರ್ಮಿಸಿದೆ. ವಿಶೇಷ ಅಂದರೆ ಅವೆಲ್ಲವೂ ಸಹ ವಿಶ್ವದಾಖಲೆಗಳೇ.

ಕೊಲೊಂಬೊದ ಪ್ರೇಮದಾಸ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ಲೆಕ್ಕಾಚಾರಗಳನ್ನು ಭಾರತೀಯ ಬೌಲರ್​​ಗಳು ತಲೆಕೆಳಗಾಗಿಸಿ ಬಿಟ್ಟರು. ಇನ್ನಿಂಗ್ಸ್​ ಆರಂಭದ ಓವರ್​ನಲ್ಲೇ ಜಸ್ಪ್ರೀತ್ ಬುಮ್ರಾ ಮೊದಲ ಯಶಸ್ಸು ತಂದುಕೊಟ್ಟರು. ಬಳಿಕ ಮೊಹಮ್ಮದ್ ಸಿರಾಜ್​ ಮೋಡಿ ಆರಂಭವಾಯಿತು.

4ನೇ ಓವರ್​ನಲ್ಲಿ ಒಟ್ಟು 4 ವಿಕೆಟ್ ಉರುಳಿಸಿ ಲಂಕಾ ದಹನಕ್ಕೆ ಕಾರಣರಾದರು. ಸಿರಾಜ್ 7 ಓವರ್​ಗಳಲ್ಲಿ 21 ರನ್ ನೀಡಿ 6 ವಿಕೆಟ್ ಉರುಳಿಸಿದರೆ, ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ 2.2 ಓವರ್​ಗಳಲ್ಲಿ 3 ರನ್ ನೀಡಿ 3 ವಿಕೆಟ್ ಪಡೆದರು. ಮಾರಕ ಬೌಲಿಂಗ್ ದಾಳಿಯಿಂದ ಶ್ರೀಲಂಕಾ 15.2 ಓವರ್​ಗಳಲ್ಲಿ 50 ರನ್​ಗಳಿಸಿ ಆಲೌಟ್​​ ಆಗಿ ಕೆಟ್ಟ ದಾಖಲೆ ಬರೆಯಿತು.

51 ರನ್​ಗಳ ಸಣ್ಣ ಗುರಿ ಬೆನ್ನಟ್ಟಿದ ಭಾರತ 6.1 ಓವರ್​ಗಳಲ್ಲೇ ಗೆಲುವಿನ ನಗೆ ಬೀರಿತು. ಆರಂಭಿಕರಾಗಿ ಕಣಕ್ಕಿಳಿದ ಶುಭ್ಮನ್ ಗಿಲ್ ಹಾಗೂ ಇಶಾನ್ ಕಿಶನ್ ಬಿರುಸಿನ ಬ್ಯಾಟಿಂಗ್ ನಡೆಸುವ ಮೂಲಕ ಜಯದ ಕಾಣಿಕೆ ನೀಡಿದರು. ಈ ಗೆಲುವಿನೊಂದಿಗೆ ಭಾರತ ಹಲವು ವಿಶ್ವದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಅವುಗಳನ್ನು ಈ ಮುಂದೆ ನೋಡೋಣ.

ಫೈನಲ್‌ನಲ್ಲಿ ದೊಡ್ಡ ಜಯ (ಉಳಿದಿರುವ ಎಸೆತಗಳ ಲೆಕ್ಕಾಚಾರ)

ಏಕದಿನ ಕ್ರಿಕೆಟ್​ನ ಫೈನಲ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ಬಾಕಿ ಎಸೆತಗಳು ಇರುವಂತೆಯೇ ಗೆಲುವು ದಾಖಲಿಸಿದ ವಿಶ್ವದಾಖಲೆಯನ್ನು ಭಾರತ ತನ್ನದಾಗಿಸಿಕೊಂಡಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ಈ ದಾಖಲೆ ಬರೆದಿತ್ತು. 2003ರಲ್ಲಿ ಇಂಗ್ಲೆಂಡ್​ ಎದುರು 226 ಎಸೆತಗಳು ಬಾಕಿಯಿರುವಂತೆ ಗೆದ್ದಿತ್ತು. ಈಗ ಭಾರತ 263 ಎಸೆತಗಳನ್ನು ಬಾಕಿ ಉಳಿಸಿಯೇ ಭರ್ಜರಿ ಗೆಲುವು ಸಾಧಿಸಿದೆ.

  1. ಸೆಪ್ಟೆಂಬರ್ 17ರಂದು ಕೊಲೊಂಬೊದಲ್ಲಿ 263 ಎಸೆತಗಳು ಬಾಕಿ ಇರುವಂತೆ ಶ್ರೀಲಂಕಾವನ್ನು ಭಾರತ ಸೋಲಿಸಿದೆ.
  2. 2003ರಲ್ಲಿ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 226 ಎಸೆತಗಳು ಬಾಕಿ ಇರುವಂತೆ ಆಸ್ಟ್ರೇಲಯಾ ಜಯ ಸಾಧಿಸಿದೆ.
  3. 1999ರಲ್ಲಿ ಲಾರ್ಡ್ಸ್​​​ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ 179 ಎಸೆತಗಳ ಅಂತರದಲ್ಲಿ ಗೆದ್ದಿತ್ತು.

ಕಡಿಮೆ ಬೌಲ್​ ಮಾಡಿದ ಪಂದ್ಯ

ಫೈನಲ್​​ ಪಂದ್ಯದಲ್ಲಿ ಭಾರತ 15.2 ಓವರ್​ಗಳನ್ನು ಎಸೆದಿತ್ತು. ಶ್ರೀಲಂಕಾ 6.1 ಓವರ್​ ಬೌಲ್ ಮಾಡಿತ್ತು. ಎರಡೂ ಇನ್ನಿಂಗ್ಸ್​ ಸೇರಿ ಕೇವಲ 129 ಎಸೆತಗಳಲ್ಲಿ ಪಂದ್ಯ ಮುಗಿದಿದೆ. ಹಾಗಾಗಿ ಏಕದಿಕ ಕ್ರಿಕೆಟ್​ ಇತಿಹಾಸದಲ್ಲಿ ಅತೀ ಕಡಿಮೆ ಎಸೆತಗಳಲ್ಲಿ ಪೂರ್ಣಗೊಂಡ 3ನೇ ಏಕದಿನ ಪಂದ್ಯವಾಗಿದೆ.

  1. 2020ರಲ್ಲಿ ಕೀರ್ತಿಪುರ್​​ನಲ್ಲಿ ನಡೆದ ನೇಪಾಳ vs ಯುಎಸ್​ಎ ನಡುವಿನ ಪಂದ್ಯವು ಕೇವಲ 104 ಎಸೆತಗಳು ಮುಗಿದಿತ್ತು.
  2. 2001ರಲ್ಲಿ ಕೊಲೊಂಬೊದಲ್ಲಿ ನಡೆದ ಶ್ರೀಲಂಕಾ vs ಜಿಂಬಾಬ್ವೆ ಪಂದ್ಯವು 120 ಎಸೆತಗಳಲ್ಲಿ ಪೂರ್ಣಗೊಂಡಿತ್ತು.
  3. 2023ರ ಸೆಪ್ಟೆಂಬರ್​ 17ರಂದು ಕೊಲೊಂಬೊದಲ್ಲಿ ನಡೆದ ಭಾರತ vs ಶ್ರೀಲಂಕಾ ಪಂದ್ಯವು 129 ಎಸೆತಗಳಲ್ಲಿ ಅಂತಿಗೊಂಡಿದೆ.
  4. 2003ರಲ್ಲಿ ಪಾರ್ಲ್​​ನಲ್ಲಿ ನಡೆದ ಶ್ರೀಲಂಕಾ vs ಕೆನಡಾ ಪಂದ್ಯವು 140 ಎಸೆತಗಳಲ್ಲಿ ಮುಕ್ತಾಯಗೊಂಡಿತ್ತು.

ಟೀಮ್ ಇಂಡಿಯಾದ ದೊಡ್ಡ ಗೆಲುವುಗಳು

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡದ ಅತಿ ದೊಡ್ಡ ಗೆಲುವು ಇದಾಗಿದೆ.ಈ ಪಂದ್ಯದಲ್ಲಿ 263 ಎಸೆತಗಳನ್ನು ಬಾಕಿ ಉಳಿಸಿ 10 ವಿಕೆಟ್​ಗಳ ಗೆಲುವು ಸಾಧಿಸಿದೆ. ಈ ಹಿಂದೆ ಕೀನ್ಯಾ ವಿರುದ್ಧ ಈ ಸಾಧನೆ ಮಾಡಿತ್ತು.

  1. 2023ರ ಸೆಪ್ಟೆಂಬರ್​ 17ರಂದು ಕೊಲೊಂಬೊದಲ್ಲಿ ನಡೆದ ಶ್ರೀಲಂಕಾ ಎದುರು ಭಾರತ 263 ಎಸೆತಗಳನ್ನು ಉಳಿಸಿ ಜಯಿಸಿದೆ.
  2. 2001ರಲ್ಲಿ ಬ್ಲೋಮ್​ ಫಾಂಟೈನ್​ನಲ್ಲಿ ನಡೆದ ಕೀನ್ಯಾ ವಿರುದ್ಧ ಭಾರತ 231 ಎಸೆತಗಳು ಬಾಕಿ ಇರುವಂತೆಯೇ ಗೆದ್ದುಕೊಂಡಿತ್ತು.
  3. 2018ರಲ್ಲಿ ತಿರುವನಂತಪುರದಲ್ಲಿ ನಡೆದ ವೆಸ್ಟ್ ಇಂಡೀಸ್ ಎದುರಿನ ಪಂದ್ಯದಲ್ಲಿ ಭಾರತ 211 ಎಸೆತಗಳು ಬಾಕಿ ಇರುವಂತೆ ಪೂರ್ಣಗೊಂಡಿತ್ತು.
  4. 2022ರಲ್ಲಿ ದಿ ಓವಲ್​​​ನಲ್ಲಿ ಇಂಗ್ಲೆಂಡ್ ವಿರುದ್ಧ 188 ಎಸೆತಗಳನ್ನು ಬಾಕಿ ಉಳಿದಿ ಭಾರತ ಗೆಲುವಿನ ನಗೆ ಬೀರಿತ್ತು.

ಫೈನಲ್ ಪಂದ್ಯದಲ್ಲಿ 10 ವಿಕೆಟ್​ಗಳ ಜಯ

ಶ್ರೀಲಂಕಾ ವಿರುದ್ಧ 10 ವಿಕೆಟ್​ಗಳ ಭರ್ಜರಿ ಸಾಧಿಸಿದ ಭಾರತ ಆ ಮೂಲಕ ವಿಶೇಷ ದಾಖಲೆ ಬರೆದಿದೆ. ಆ ಮೂಲಕ 2ನೇ ಸಲ ಫೈನಲ್ ಪಂದ್ಯದಲ್ಲಿ 10 ವಿಕೆಟ್​ಗಳ ಭರ್ಜರಿ ಗೆಲುವನ್ನು ತನ್ನದಾಗಿಸಿಕೊಂಡಿದೆ.

  1. 1998ರಲ್ಲಿ ಶಾರ್ಜಾದಲ್ಲಿ ನಡೆದಿದ್ದ ಫೈನಲ್ ಪಂದ್ಯವೊಂದರಲ್ಲಿ ಜಿಂಬಾಬ್ವೆ ವಿರುದ್ಧ ಭಾರತ 197/0 ರನ್ ಗಳಿಸಿ 10 ವಿಕೆಟ್​ಗಳ ಜಯ ಸಾಧಿಸಿತ್ತು.
  2. 2003ರಲ್ಲಿ ಸಿಡ್ನಿತಲ್ಲಿ ನಡೆದಿದ್ದ ಫೈನಲ್ ಪಂದ್ಯವೊಂದರಲ್ಲಿ ಆಸ್ಟ್ರೇಲಿಯಾ ತಂಡವು, ಇಂಗ್ಲೆಂಡ್ ತಂಡವನ್ನು 118/0 ರನ್ ಗಳಿಸಿ 10 ವಿಕೆಟ್​ಗಳ ಗೆಲುವಿನ ಸಾಧನೆ ಮಾಡಿತ್ತು.
  3. ಸೆಪ್ಟೆಂಬರ್ 17ರಂದು (2023) ಶ್ರೀಲಂಕಾ ವಿರುದ್ದ 51/0 ರನ್ ಗಳಿಸಿ 10 ವಿಕೆಟ್​ಗಳ ಗೆಲುವಿನ ಸಾಧನೆ ಮಾಡಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ