ತಿಲಕ್ ವರ್ಮಾ ಸಿಕ್ಕ ಅವಕಾಶ ಕೈಚೆಲ್ಲಿದ್ರು, 2ನೇ ಪಂದ್ಯಕ್ಕೆ ಕೈಬಿಡಿ; ಆಕಾಶ್ ಚೋಪ್ರಾ ಸಲಹೆ
Jan 12, 2024 05:35 PM IST
ತಿಲಕ್ ವರ್ಮಾ.
- Tilak Varma: ತಿಲಕ್ ತಮಗೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳಬೇಕಿತ್ತು. ಆದರೆ, ಸುವರ್ಣಾವಕಾಶ ಕೈಚೆಲ್ಲಿದರು. ಹಾಗಾಗಿ ಎರಡನೇ ಟಿ20ಯಲ್ಲಿ ವಿರಾಟ್ ಕೊಹ್ಲಿ ಅವರಿಗೆ ದಾರಿ ಮಾಡಿಕೊಡಬಹುದು ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ ತಿಲಕ್ ವರ್ಮಾ (Tilak Varma) ಸಿಕ್ಕ ಅವಕಾಶ ಉಪಯೋಗಿಸಿಕೊಳ್ಳಲು ವಿಫಲರಾಗಿದ್ದಾರೆ. ಹಾಗಾಗಿ ಎರಡನೇ ಟಿ20 ಪಂದ್ಯಕ್ಕೆ ವಿರಾಟ್ ಕೊಹ್ಲಿಗೆ (Virat Kohli) ದಾರಿ ಮಾಡಿಕೊಡಲು ತಿಲಕ್ ಅವರನ್ನು ತಂಡದಿಂದ ಕೈ ಬಿಡುವುದೇ ಉತ್ತಮ. ಟೀಮ್ ಮ್ಯಾನೇಜ್ಮೆಂಟ್ ತೀರ್ಮಾನವೂ ಅದೇ ಆಗಿರುತ್ತದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ (Aakash Chopra) ಸಲಹೆ ನೀಡಿದ್ದಾರೆ.
ಅವಕಾಶ ಬಳಸಿಕೊಳ್ಳಲಿಲ್ಲ ಎಂದ ಆಕಾಶ್ ಚೋಪ್ರಾ
ಅಫ್ಘಾನಿಸ್ತಾನ ವಿರುದ್ಧ ಟಿ20 ವಿಶ್ವಕಪ್ಗೂ ಮುನ್ನ ನಡೆಯುವ ಕೊನೆಯ ಟಿ20 ಸರಣಿ ನಡೆಯುತ್ತಿದೆ. ಹಾಗಾಗಿ ತಿಲಕ್ ತಮಗೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳಬೇಕಿತ್ತು. ಆದರೆ, ಸುವರ್ಣಾವಕಾಶ ಕೈಚೆಲ್ಲಿದರು. ಹಾಗಾಗಿ ಎರಡನೇ ಟಿ20ಯಲ್ಲಿ ಸ್ಥಾನ ಕಳೆದುಕೊಳ್ಳಬಹುದು. ಆ ಮೂಲಕ ವಿರಾಟ್ ಕೊಹ್ಲಿ ಅವರಿಗೆ ದಾರಿ ಮಾಡಿಕೊಡಬಹುದು ಎಂದು ಅವರು ಹೇಳಿದ್ದಾರೆ.
ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಔಟಾದ ನಂತರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದರು. ಶಿವಂ ದುಬೆ ಅವರನ್ನು 4ನೇ ಕ್ರಮಾಂಕಕ್ಕೆ ಕಳುಹಿಸಲಾಯಿತು. ತಿಲಕ್ ಸ್ವಲ್ಪ ಸಮಯ ಚೆನ್ನಾಗಿ ಆಡಿದರಾದರೂ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡಿಲ್ಲ. 22 ಎಸೆತಗಳಲ್ಲಿ 26 ರನ್ ಗಳಿಸಿ ಔಟಾದರು. ಹಾಗಾಗಿ ಅವರೇ ವಿರಾಟ್ ಕೊಹ್ಲಿಗೆ ಸ್ಥಾನ ಬಿಟ್ಟುಕೊಡಬೇಕು. ಉಳಿದಂತೆ ಎಲ್ಲರಿಂದಲೂ ಅದ್ಭುತ ಪ್ರದರ್ಶನ ಹೊರ ಬಂತು ಎಂದು ಹೇಳಿದ್ದಾರೆ.
ಜಿತೇಶ್ ಶರ್ಮಾ ಉತ್ತಮ ಇನ್ನಿಂಗ್ಸ್ (20 ಎಸೆತಗಳಲ್ಲಿ 31) ಅನ್ನು ಶ್ಲಾಘಿಸಿದ ಆಕಾಶ್ ಚೋಪ್ರಾ, ಭಾರತದ ಸಂಭಾವ್ಯ ಟಿ20 ವಿಶ್ವಕಪ್ ತಂಡದಲ್ಲಿ ವಿಕೆಟ್ ಕೀಪರ್ ಸ್ಥಾನಕ್ಕೆ ಭಾರಿ ಪೈಪೋಟಿ ಇರುವುದರಿಂದ ವಿದರ್ಭ ಆಟಗಾರನೇ ಪಂದ್ಯವನ್ನು ಮುಗಿಸಬೇಕಿತ್ತು. ಆ ಮೂಲಕ ಆಯ್ಕೆದಾರರ ಗಮನವನ್ನು ಇನ್ನಷ್ಟು ಸೆಳೆಯಬಹುದಿತ್ತು. ಮುಂದಿನ ಪಂದ್ಯಗಳನ್ನೂ ಈ ಅವಕಾಶ ಕೈಬಿಡಬಾರದು ಎಂದಿದ್ದಾರೆ.
ಕೊಹ್ಲಿ ಆಗಮನ, ಯಾರು ಔಟ್?
ವೈಯಕ್ತಿಕ ಕಾರಣಗಳಿಂದ ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20ಐ ಪಂದ್ಯಕ್ಕೆ ವಿರಾಟ್ ಕೊಹ್ಲಿಗೆ ಅಲಭ್ಯರಾದರು. ಆದರೆ, ಅವರು ಭಾನುವಾರ ಇಂದೋರ್‌ನಲ್ಲಿ ನಡೆಯಲಿರುವ ಎರಡನೇ ಪಂದ್ಯಕ್ಕೆ ಲಭ್ಯರಾಗುವ ನಿರೀಕ್ಷೆಯಿದೆ. ಕೊಹ್ಲಿ 14 ತಿಂಗಳ ನಂತರ ಟಿ20 ತಂಡಕ್ಕೆ ಕೊಹ್ಲಿ ಕಂಬ್ಯಾಕ್ ಮಾಡಿದ್ದಾರೆ. ಇದೀಗ 2ನೇ ಟಿ20 ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವುದು ಖಚಿತ.
ಮೊದಲ ಪಂದ್ಯ ಗೆದ್ದಿರುವ ಭಾರತ ಈಗ 2ನೇ ಟಿ20 ಸಿದ್ಧತೆ ನಡೆಸುತ್ತಿದೆ. ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಕೊಹ್ಲಿ ಈಗ ತಂಡ ಸೇರಿದ್ದಾರೆ. ಕೊಹ್ಲಿ ಆಗಮನದಿಂದ ಯಾರು ತಂಡದಿಂದ ಹೊರಗುಳಿಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಆರಂಭಿಕರಾಗಿ ರೋಹಿತ್-ಗಿಲ್ ಕಣಕ್ಕಿಳಿದರೆ, 3ನೇ ಕ್ರಮಾಂಕದಲ್ಲಿ ಕೊಹ್ಲಿ ಆಡಲಿದ್ದಾರೆ. ಹಾಗಾಗಿ ತಿಲಕ್ 2ನೇ ಪಂದ್ಯಕ್ಕೆ ಬೆಂಚ್ ಬಿಸಿ ಮಾಡಬೇಕಾಗುತ್ತದೆ.
ಏಕೆಂದರೆ ತಿಲಕ್ಗೆ ಹೋಲಿಸಿದರೆ ಉಳಿದ ಆಟಗಾರರು ಸಹ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಮೊಹಾಲಿಯಲ್ಲಿ ಗುರುವಾರ (ಜ.11ರಂದು) ನಡೆದ ಮೊದಲ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ತಾನ ಭಾರತಕ್ಕೆ 159 ರನ್‌ಗಳ ಗುರಿ ನೀಡಿತು. ಭಾರತ ಆರು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.