ಹೇ ವೀರು, ನಾನು ಈಗಾಗ್ಲೇ ಎರಡು ಸಲ ಡಕೌಟ್ ಆಗಿದ್ದೀನಿ; ಅಂಪೈರ್ ಜೊತೆ ರೋಹಿತ್ ಹಾಸ್ಯ ಚಟಾಕಿ
Jan 18, 2024 08:22 AM IST
ಅಂಪೈರ್ ವೀರೇಂದ್ರ ಶರ್ಮಾ ಜೊತೆ ರೋಹಿತ್ ಶರ್ಮಾ ಹಾಸ್ಯ ಚಟಾಕಿ.
- Rohit Sharma: ಅಫ್ಘಾನಿಸ್ತಾನದ ಮೂರನೇ ಟಿ20 ಪಂದ್ಯದಲ್ಲಿ ಭಾರತದ ಇನ್ನಿಂಗ್ಸ್ ಆರಂಭದಲ್ಲಿ ರೋಹಿತ್ ಶರ್ಮಾ ಬ್ಯಾಟ್ ಎಡ್ಜ್ ಆಗಿದ್ದರೂ ಅಂಪೈರ್ ಲೆಗ್ಬೈಸ್ ನೀಡಿದರು. ಹಾಗಾಗಿ ಅಂಪೈರ್ ಜೊತೆ ನಗುತ್ತಲೇ ವಾಗ್ವಾದ ನಡೆಸಿದ ರೋಹಿತ್, ನಾನು ಈಗಾಗ್ಲೆ 2 ಸಲ ಡಕೌಟ್ ಆಗಿದ್ದೀನಿ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧದ ಮೊದಲ 2 ಟಿ20 ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದ ರೋಹಿತ್ ಶರ್ಮಾ (Rohit Sharma), ಮೂರನೇ ಟಿ20ಯಲ್ಲಿ ಎದುರಾಳಿ ಬೌಲಿಂಗ್ ಪಡೆಯನ್ನು ವಿಧ್ವಂಸಗೊಳಿಸಿದರು. ರೋಶಾವೇಷದಲ್ಲಿ ಬ್ಯಾಟಿಂಗ್ ನಡೆಸಿದ ಹಿಟ್ಮ್ಯಾನ್, ವಿನಾಶಕಾರಿ ವಿಶ್ವದಾಖಲೆಯ ಶತಕ ಸಿಡಿಸಿದರು. ಆದರೆ ಈ ಶತಕಕ್ಕೂ ಮುನ್ನ ಇನ್ನಿಂಗ್ಸ್ ಆರಂಭದ ಸಮಯದಲ್ಲಿ ಅಂಪೈರ್ ಜೊತೆಗೆ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ (India vs Afghanistan) ಮೊದಲು ಬ್ಯಾಟಿಂಗ್ ನಡೆಸಿದ ಭಾರತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಅಫ್ಘನಿಸ್ತಾನ 6 ವಿಕೆಟ್ ನಷ್ಟಕ್ಕೆ ಅಷ್ಟೇ ರನ್ ಗಳಿಸಿ ಟೈ ಮಾಡಿತು. ನಂತರ ಆಡಿದ ಸೂಪರ್ ಓವರ್ನಲ್ಲಿ ಭಾರತ ಡ್ರಾ ಸಾಧಿಸಿತು. ಹೀಗಾಗಿ 2ನೇ ಸೂಪರ್ ಓವರ್ ಆಡಿಸಲಾಯಿತು. ಆಗ ಭಾರತ 10 ರನ್ಗಳಿಂದ ಗೆದ್ದಿತು.
ರೋಹಿತ್ 3ನೇ ಟಿ20ಐನಲ್ಲಿ ಸಿಂಗಲ್ ಪಡೆಯಲು ಥರ್ಡ್ ಮ್ಯಾನ್‌ಗೆ ಚೆಂಡನ್ನು ಟ್ಯಾಪ್ ಮಾಡಿದ ನಂತರ 14 ತಿಂಗಳ ನಂತರ ತಮ್ಮ ಮೊದಲ ಟಿ20ಐ ರನ್ ಸಿಡಿಸಿದರು. 2022ರ ಟಿ20 ವಿಶ್ವಕಪ್ ನಂತರ ಭಾರತದ ಪರ ಟಿ20 ಆಡದ ರೋಹಿತ್, ಅಫ್ಘನ್ ಸರಣಿಗಾಗಿ 14 ತಿಂಗಳ ನಂತರ ಚುಟುಕು ಕ್ರಿಕೆಟ್ಗೆ ಮರಳಿದರು. ಆದರೆ, ಭಾರತದ ನಾಯಕ ಮೊದಲ ಎರಡು ಪಂದ್ಯಗಳಲ್ಲಿ ಖಾತೆ ತೆರೆಯಲು ವಿಫಲರಾಗಿದ್ದರು.
ಅಂಪೈರ್ ಜೊತೆ ಹಾಸ್ಯ ಚಟಾಕಿ
ಮೊದಲ ಪಂದ್ಯದಲ್ಲಿ ಎರಡು ಎಸೆತಗಳನ್ನು ಎದುರಿಸಿ ಸೊನ್ನೆಗೆ ರನ್ ಔಟ್ ಆಗಿದ್ದ ಹಿಟ್ಮ್ಯಾನ್, ಎರಡನೇ ಟಿ20ಯಲ್ಲಿ ಫಜಲ್ಹಕ್ ಫಾರೂಕಿ ಅವರ ಬೌಲಿಂಗ್ನಲ್ಲಿ ಗೋಲ್ಡನ್ಗೆ ಬಲಿಯಾಗಿದ್ದರು. ಆದರೆ ಮೂರನೇ ಟಿ20 ಪಂದ್ಯದ ಆರಂಭಿಕ ಎಸೆತವನ್ನು ಫೈನ್ಲೆಗ್ಗೆ ಬೌಂಡರಿಗಾಗಿ ಫ್ಲಿಕ್ ಮಾಡಿ ರನ್ ಖಾತೆ ತೆರೆಯಲು ಮುಂದಾದರು. ಆದರೆ, ಆಶ್ಚರ್ಯ ಎನ್ನುವಂತೆ ಅಂಪೈರ್ ಲೆಗ್ಬೈ ನೀಡಿದರು.
ಈ ವೇಳೆ ಅಂಪೈರ್ ಜೊತೆ ರೋಹಿತ್ ಹಾಸ್ಯ ಚಟಾಕಿ ಹಾರಿಸಿದರು. ಬ್ಯಾಟ್ಗೆ ಬಿದ್ದರೂ ಲೆಗ್ ಬೈ ಕೊಟ್ಟಿದ್ದಕ್ಕೆ ಅಂಪೈರ್ಗೆ ಪ್ರಶ್ನಿಸಿದರು. ಹೇ ವೀರು (ವೀರೇಂದ್ರ ಶರ್ಮಾ) ನೀವು ಮೊದಲನೇ ಬಾಲ್ ಅನ್ನೇ ಲೆಗ್ಬೈಸ್ ನೀಡಿದ್ದೀರಾ? ಅದು ಸ್ಪಷ್ಟವಾಗಿ ಬ್ಯಾಟ್ ಅನ್ನು ಮುಟ್ಟಿದೆ. ನಾನು ಈಗಾಗಲೇ ಸರಣಿಯಲ್ಲಿ ಎರಡು ಡಕೌಟ್ ಆಗಿದ್ದೇನೆ. ಮತ್ತೆ ಔಟ್ ಆಗೋ ರೀತಿ ಮಾಡಬೇಡ ಎಂದು ನಗುತ್ತಾ, ಅಂಪೈರ್ ವೀರೇಂದ್ರ ಶರ್ಮಾಗೆ ರೋಹಿತ್ ಹೇಳಿದರು. ಅಂಪೈರ್ ಸಹ ನಕ್ಕರು.
ಧೋನಿ ದಾಖಲೆ ಮುರಿದ ರೋಹಿತ್
ಈ ಪಂದ್ಯಕ್ಕೂ ಮುನ್ನ ನಾಯಕನಾಗಿ ಮಹೇಂದ್ರ ಸಿಂಗ್ ಧೋನಿ ದಾಖಲೆ ಸರಿಗಟ್ಟಿದ್ದ ರೋಹಿತ್, ಈಗ ರೆಕಾರ್ಡ್ ಅನ್ನು ಮುರಿದಿದ್ದಾರೆ. 3ನೇ ಟಿ20 ಗೆಲುವಿನೊಂದಿಗೆ ಅಧಿಕ ಟಿ20 ಗೆಲುವು ದಾಖಲಿಸಿದ ಭಾರತದ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಾಯಕನಾಗಿ ಧೋನಿ ಟಿ20 ಕ್ರಿಕೆಟ್ನಲ್ಲಿ ಭಾರತಕ್ಕೆ 41 ಗೆಲುವು ತಂದುಕೊಟ್ಟಿದ್ದರು. ಹಿಟ್ಮ್ಯಾನ್ 42 ಗೆಲುವು ಸಾಧಿಸಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಅದು ಕೂಡ ಅತಿ ಕಡಿಮೆ ಪಂದ್ಯಗಳಲ್ಲಿ ಎಂಬುದು ವಿಶೇಷ.
72 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಧೋನಿ, 41 ಗೆಲುವು, 28 ಸೋಲು ಕಂಡಿದ್ದಾರೆ. 1 ಟೈನಲ್ಲಿ ಅಂತ್ಯಕಂಡಿದೆ. ಗೆಲುವಿನ ಪ್ರಮಾಣ 56.94. ಅದೇ ರೋಹಿತ್ ಶರ್ಮಾ 55 ಪಂದ್ಯಗಳಲ್ಲಿ ತಂಡಕ್ಕೆ ನಾಯಕನಾಗಿದ್ದು, 42 ಗೆಲುವು, 12 ಸೋಲು, 1 ಟೈ ಕಂಡಿದ್ದಾರೆ. ಗೆಲುವಿನ ಪ್ರಮಾಣ 75.92. ಈಗ ರೋಹಿತ್ ಅಗ್ರಸ್ಥಾನದಲ್ಲಿದ್ದಾರೆ. 3ನೇ ಸ್ಥಾನದಲ್ಲಿರುವ ವಿರಾಟ್, 50 ಟಿ20ಗಳಲ್ಲಿ ಕ್ಯಾಪ್ಟನ್ ಆಗಿದ್ದು, 30 ಜಯ, 16 ಸೋಲು ಕಂಡಿದ್ದಾರೆ. ಗೆಲುವಿನ ಪ್ರಮಾಣ 60.