ಏಷ್ಯನ್ ಗೇಮ್ಸ್ ಭಾರತ ಕ್ರಿಕೆಟ್ ತಂಡಕ್ಕೆ ವಿವಿಎಸ್ ಲಕ್ಷ್ಮಣ್ ಮುಖ್ಯ ಕೋಚ್; ಕಾರಣ ಹೀಗಿದೆ
Aug 27, 2023 07:01 PM IST
ರುತುರಾಜ್ ಗಾಯಕ್ವಾಡ್, ವಿವಿಎಸ್ ಲಕ್ಷ್ಮಣ್
- VVS Laxman: ರುತುರಾಜ್ ಗಾಯಕ್ವಾಡ್ ನೇತೃತ್ವದ ಏಷ್ಯನ್ ಗೇಮ್ಸ್ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ಆಗಿ ಬ್ಯಾಟಿಂಗ್ ದಿಗ್ಗಜ ವಿವಿಎಸ್ ಲಕ್ಷ್ಮಣ್ ಅವರನ್ನು ಚೀನಾ ದೇಶಕ್ಕೆ ಕಳುಹಿಸುವ ಸಾಧ್ಯತೆಯಿದೆ.
ಇತ್ತ ಏಷ್ಯಾಕಪ್ ಹಾಗೂ ವಿಶ್ವಕಪ್ ಪಂದ್ಯಾವಳಿಯ ನಡುವೆ, ಅತ್ತ ಏಷ್ಯನ್ ಗೇಮ್ಸ್ (Asian Games) ಕೂಡಾ ನಡೆಯಲಿದೆ. ಮೇಲಿಂದ ಮೇಲೆ ಕ್ರೀಡಾ ಟೂರ್ನಿಗಳು ನಡೆಯುತ್ತಿದ್ದು, ಕ್ರೀಡಾಸಕ್ತರಿಗೆ ಸುಗ್ಗಿಕಾಲ ಆರಂಭವಾಗಿದೆ. ಭಾರತ ಪುರುಷರ ಕ್ರಿಕೆಟ್ ತಂಡವು ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್‌ಗೆ ಕೊನೆಯ ಹಂತದ ತಯಾರಿಯಲ್ಲಿದೆ. ವಿಶ್ವಕಪ್ ಪಂದ್ಯಗಳು ಆರಂಭವಾಗುವುದಕ್ಕೂ ಮುನ್ನ ಚೀನಾದಲ್ಲಿ ಏಷ್ಯನ್ ಗೇಮ್ಸ್ ಕೂಡಾ ಪ್ರಾರಂಭವಾಗಲಿದೆ.
ಭಾರತ ಕ್ರಿಕೆಟ್ ತಂಡವು ವಿಶ್ವಕಪ್ ತಯಾರಿಯಲ್ಲಿರುವಾಗಲೇ ಏಷ್ಯನ್ ಗೇಮ್ಸ್‌ಗಾಗಿ ಭಾರತದ ಮತ್ತೊಂದು ತಂಡ ಚೀನಾಗೆ ಹಾರಬೇಕಿದೆ. ರೋಹಿತ್ ಶರ್ಮಾ ನೇತೃತ್ವದ ತಂಡದೊಂದಿಗೆ ಟೀಮ್ ಇಂಡಿಯಾದ ನಿಯಮಿತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಇರಬೇಕಾಗಿರುವುದರಿಂದ, ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸುವ ಭಾರತದ ಎರಡನೇ ಕ್ರಿಕೆಟ್ ತಂಡಕ್ಕೆ ಮತ್ತೋರ್ವ ಕೋಚ್ ಬೇಕಿದೆ. ಹೀಗಾಗಿ ಭಾರತದ ಬ್ಯಾಟಿಂಗ್ ದಂತಕಥೆ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರು ಮುಖ್ಯ ಕೋಚ್ ಆಗಿ ಪ್ರಯಾಣಿಸುವ ಸಾಧ್ಯತೆ ಇದೆ.
ಏಷ್ಯನ್ ಗೇಮ್ಸ್‌ನಲ್ಲಿ ಸೆಪ್ಟೆಂಬರ್ 19ರಿಂದ ಕ್ರಿಕೆಟ್ ಪಂದ್ಯಗಳು ಆರಂಭವಾಗಲಿದ್ದು, ಮಹಿಳಾ ತಂಡಗಳ ಟೂರ್ನಿ ಪ್ರಾರಂಭವಾಗಲಿದೆ. ಐಸಿಸಿ ಶ್ರೇಯಾಂಕದ ಪ್ರಕಾರ, ಭಾರತವು ಕ್ವಾರ್ಟರ್‌ಫೈನಲ್ ಹಂತದಿಂದ ಆಡಲಿದೆ. ಸೆಪ್ಟೆಂಬರ್ 26ರಂದು ಫೈನಲ್ ಪಂದ್ಯ ನಡೆಯಲಿದೆ. ಅತ್ತ ಪುರುಷರ ಕ್ರಿಕೆಟ್ ಪಂದ್ಯವು ಸೆಪ್ಟೆಂಬರ್ 28ರಿಂದ ಪ್ರಾರಂಭವಾಗಲಿದೆ. ಅಕ್ಟೋಬರ್ 7ರಂದು ಫೈನಲ್ ಪಂದ್ಯ ನಡೆಯಲಿದೆ. ಅದಾದ ಒಂದು ದಿನದ ಬಳಿಕ ವಿಶ್ವಕಪ್‌ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
2023ರ ಜೂನ್ 1ರ ಐಸಿಸಿ ಶ್ರೇಯಾಂಕದ ಆಧಾರದಲ್ಲಿ, ಪುರುಷರ ವಿಭಾಗದಲ್ಲಿ 15 ತಂಡಗಳು ಮತ್ತು ಮಹಿಳೆಯರ ವಿಭಾಗದಲ್ಲಿ ಒಂಬತ್ತು ಕ್ರಿಕೆಟ್ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ.
ಸುದ್ದಿಸಂಸ್ಥೆ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಪುರುಷರ ಏಷ್ಯನ್ ಗೇಮ್ಸ್ ತಂಡದೊಂದಿಗೆ ಮುಖ್ಯ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಚೀನಾಗೆ ತೆರಳಲಿದ್ದಾರೆ. ಅವರೊಂದಿಗೆ ಸಹಾಯಕ ಸಿಬ್ಬಂದಿಯಾಗಿ ಭಾರತದ ಮಾಜಿ ಲೆಗ್ ಸ್ಪಿನ್ನರ್ ಸಾಯಿರಾಜ್ ಬಹುತುಲೆ ಅವರು ಬೌಲಿಂಗ್ ಕೋಚ್ ಆಗಿ ಮತ್ತು ಫೀಲ್ಡಿಂಗ್ ಕೋಚ್ ಆಗಿ ಕಾಮುನಿಶ್ ಬಾಲಿ ಡ್ರ್ಯಾಗನ್ ರಾಷ್ಟ್ರಕ್ಕೆ ಪ್ರಯಾಣಿಸಲಿದ್ದಾರೆ.
ಏಷ್ಯನ್ ಗೇಮ್ಸ್ 2018ರ ಆವೃತ್ತಿಗೆ ಕ್ರಿಕೆಟ್ ಅನ್ನು ತಿರಸ್ಕರಿಸಿದ ಬಳಿಕ, ಇತಿಹಾಸದಲ್ಲಿ ಮೂರನೇ ಬಾರಿಗೆ ಏಷ್ಯನ್ ಗೇಮ್ಸ್‌ನಲ್ಲಿ ಕ್ರಿಕೆಟ್ ಆಡಿಸಲಾಗುತ್ತಿದೆ. ಇತ್ತ ಇದೇ ಮೊದಲ ಬಾರಿಗೆ ಭಾರತವು ಪುರುಷರ ತಂಡವನ್ನು ಕ್ರೀಡಾಕೂಟಕ್ಕೆ ಕಳುಹಿಸುತ್ತಿದೆ.
ಏಷ್ಯನ್ ಗೇಮ್ಸ್‌ಗೆ ಭಾರತದ ಪುರುಷರ ಕ್ರಿಕೆಟ್ ತಂಡದಲ್ಲಿ ಸಂಪೂರ್ಣ ಯುವ ಆಟಗಾರರೇ ತುಂಬಿದ್ದಾರೆ. ತಂಡವನ್ನು ರುತುರಾಜ್ ಗಾಯಕ್ವಾಡ್ ಮುನ್ನಡೆಸಲಿದ್ದಾರೆ. ಇದೇ ವೇಳೆ ಐಪಿಎಲ್‌ನ ಫಿನಿಶಿಂಗ್ ಸ್ಟಾರ್ ರಿಂಕು ಸಿಂಗ್, ಪ್ರಭ್‌ಸಿಮ್ರಾನ್ ಸಿಂಗ್ ಕೂಡಾ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಏಷ್ಯನ್ ಗೇಮ್ಸ್‌ಗೆ ಭಾರತ ತಂಡ ಹೀಗಿದೆ
ರುತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಶಿವಂ ಮಾವಿ, ಶಿವಂ ದುಬೆ, ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್).
ಸ್ಟ್ಯಾಂಡ್‌ಬೈ ಆಟಗಾರರು
ಯಶ್ ಠಾಕೂರ್, ಸಾಯಿ ಕಿಶೋರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಸಾಯಿ ಸುದರ್ಶನ್.