ನಾವು ಪ್ರಯತ್ನಿಸಿದೆವು, ಆದರೆ..; ನತಾಶಾ ಸ್ಟಾಂಕೋವಿಕ್ ಜತೆಗಿನ ವಿಚ್ಛೇದನ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?
Jul 18, 2024 11:14 PM IST
ನಾವು ಪ್ರಯತ್ನಿಸಿದೆವು, ಆದರೆ..; ನತಾಶಾ ಸ್ಟಾಂಕೋವಿಕ್ ಜತೆಗಿನ ವಿಚ್ಛೇದನ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?
- Hardik Pandya - Natasa Stankovic divorce: ಹಾರ್ದಿಕ್ ಪಾಂಡ್ಯ ಅವರು ಪತ್ನಿ ನತಾಶಾ ಸ್ಟಾಂಕೋವಿಕ್ ಅವರಿಗೆ ವಿಚ್ಛೇದನ ನೀಡಿರುವುದಾಗಿ ಅಧಿಕೃತವಾಗಿ ಘೋಷಣೆ ಹೊರಡಿಸಿದ್ದಾರೆ.
ಭಾರತ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್ ಅವರೊಂದಿಗಿನ ಸಂಬಂಧ ಕೊನೆಗೊಳಿಸುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ನತಾಶಾಗೆ ಡಿವೋರ್ಸ್ ನೀಡಿರುವ ವಿಚಾರವನ್ನು ಸ್ಟಾರ್ ಕ್ರಿಕೆಟಿಗ ತಮ್ಮ ಅಧಿಕೃತ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಈ ಸುದ್ದಿಯನ್ನು ದೃಢಪಡಿಸಿದ್ದಾರೆ.
4 ವರ್ಷಗಳ ಕಾಲ ಒಟ್ಟಿಗೆ ಇದ್ದ ನಂತರ, ನತಾಶಾ ಮತ್ತು ನಾನು ಪರಸ್ಪರ ಬೇರ್ಪಡಲು ನಿರ್ಧರಿಸಿದ್ದೇವೆ. ನಾವು ಒಟ್ಟಿಗೆ ನಮ್ಮ ಅತ್ಯುತ್ತಮ ಪ್ರಯತ್ನ ಮಾಡಿದ್ದೇವೆ. ನಾವು ಎಲ್ಲವನ್ನೂ ಅರ್ಪಿಸಿದ್ದೇವೆ. ಇದೀಗ ನಮ್ಮಿಬ್ಬರ ಉತ್ತಮ ಹಿತದೃಷ್ಟಿಗಾಗಿ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ನಾವು ಒಟ್ಟಿಗೆ ಆನಂದಿಸಿದ ಸಂತೋಷ, ಪರಸ್ಪರ ಗೌರವ ಮತ್ತು ಒಡನಾಟವನ್ನು ಗಮನದಲ್ಲಿಟ್ಟುಕೊಂಡು ಮತ್ತು ನಾವು ಕುಟುಂಬವಾಗಿ ಬೆಳೆದಿದ್ದ ಕಾರಣ ಈ ತೀರ್ಮಾನ ತೆಗೆದುಕೊಳ್ಳಲು ನಮಗೆ ಕಠಿಣ ನಿರ್ಧಾರವಾಗಿತ್ತು ಎಂದು ಹಾರ್ದಿಕ್ ಬರೆದಿದ್ದಾರೆ.
ನಾವು ಅಗಸ್ತ್ಯನನ್ನು ಪಡೆದಿದ್ದೇವೆ. ಅಗಸ್ತ್ಯ ನಮ್ಮಿಬ್ಬರ ಜೀವನದ ಕೇಂದ್ರಬಿಂದುವಾಗಿ ಮುಂದುವರಿಯಲಿದ್ದಾನೆ. ಅವನ ಸಂತೋಷಕ್ಕಾಗಿ ನಾವು ಸಾಧ್ಯವಿರುವ ಎಲ್ಲವನ್ನೂ ನೀಡುತ್ತೇವೆ ಎಂದು ಖಚಿತಪಡಿಸುತ್ತೇವೆ. ಈ ಕಷ್ಟಕರ ಮತ್ತು ಸೂಕ್ಷ್ಮ ಸಮಯದಲ್ಲಿ ನಮಗೆ ಗೌಪ್ಯತೆ ನೀಡಲು ನಿಮ್ಮ ಬೆಂಬಲವನ್ನು ನಾವು ಪ್ರಾಮಾಣಿಕವಾಗಿ ವಿನಂತಿಸುತ್ತೇವೆ ಎಂದು ಹಾರ್ದಿಕ್ ತನ್ನ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಶ್ರೀಲಂಕಾ ವಿರುದ್ಧದ ಸೀಮಿತ ಓವರ್ಗಳ ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಘೋಷಿಸಿದ ಸ್ವಲ್ಪ ಸಮಯದ ನಂತರವೇ ಹಾರ್ದಿಕ್ ಈ ಹೇಳಿಕೆ ನೀಡಿದ್ದಾರೆ. ಆ ಕಡೆ ಭಾರತ ತಂಡದಲ್ಲೂ ಹಾರ್ದಿಕ್ಗೆ ಹಿಂಬಡ್ತಿಯಾಗಿದ್ದು, ಇದೀಗ ತನ್ನ ವೈಯಕ್ತಿಕ ಜೀವನದಲ್ಲೂ ಹಿಂಬಡ್ತಿಯಾಗಿದೆ. ಟೀಮ್ ಇಂಡಿಯಾದಲ್ಲಿ ಟಿ20ಐ ಕ್ರಿಕೆಟ್ ತಂಡದಲ್ಲಿ ನಾಯಕ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಅವರ ಬದಲಿಗೆ ಸೂರ್ಯಕುಮಾರ್ ನೂತನ ಟಿ20ಐ ನಾಯಕನಾಗಿ ನೇಮಕಗೊಂಡಿದ್ದಾರೆ.
ಕಳೆದ ತಿಂಗಳು ನಡೆದ ವಿಶ್ವಕಪ್ನಲ್ಲಿ ಭಾರತ ತಂಡದ ಉಪನಾಯಕನಾಗಿದ್ದ ಹಾರ್ದಿಕ್ ಇದೀಗ ಏಕದಿನ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಜೊತೆಗೆ ಅಲ್ಲೂ ವೈಸ್ ಕ್ಯಾಪ್ಟನ್ ಪಟ್ಟ ಕಳೆದುಕೊಂಡಿದ್ದಾರೆ. ಫಿಟ್ನೆಸ್ ಸಮಸ್ಯೆ ಎದುರಿಸುತ್ತಿರುವ ಕಾರಣ ಆಲ್ರೌಂಡರ್ ಅವರನ್ನು ನಾಯಕತ್ವದ ಸ್ಥಾನಕ್ಕೆ ಕಡೆಗಣಿಸಲಾಗಿದೆ ಎಂದು ವರದಿಯಾಗಿದೆ. ಈ ನಿರ್ಧಾರದ ಬಗ್ಗೆ ಹಾರ್ದಿಕ್ಗೆ ಈಗಾಗಲೇ ತಿಳಿಸಲಾಗಿತ್ತು ಎಂದು ವರದಿಯಾಗಿದೆ. ಸೂರ್ಯಕುಮಾರ್ ನಾಯಕತ್ವದಲ್ಲಿ ಟಿ20ಐ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಭಾಗವಹಿಸಲಿದ್ದಾರೆ.
ಎರಡೆರಡು ಬಾರಿ ಮದುವೆ
ಸರ್ಬಿಯಾದ ನತಾಶಾ ಸ್ಟಾಂಕೋವಿಕ್ ಅವರನ್ನು ಹಾರ್ದಿಕ್ ಪಾಂಡ್ಯ ಅವರನ್ನು ಮೇ 31, 2020 ರಂದು ಮದುವೆಯಾಗಿದ್ದರು. ಮದುವೆಗೂ ಮುನ್ನವೇ ಸ್ಟಾಂಕೋವಿಕ್ ಗರ್ಭಿಣಿಯಾಗಿದ್ದರು. ನಂತರ ಫೆಬ್ರವರಿ 2023ರಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಧರ್ಮದ ಆಚರಣೆಗಳ ಪ್ರಕಾರ ಈ ಜೋಡಿ, ತಮ್ಮ ಮಗ ಅಗಸ್ತ್ಯನ ಮುಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಕಳೆದ ಕೆಲವು ತಿಂಗಳುಗಳಿಂದ ಹಾರ್ದಿಕ್ ಮತ್ತು ನಟಾಸಾ ನಡುವಿನ ಸಂಬಂಧದ ಬಗ್ಗೆ ಊಹಾಪೋಹಗಳು ಹರಡಿದ್ದವು. ಹಾರ್ದಿಕ್ ನಾಯಕರಾಗಿದ್ದ ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಋತುವಿನ ನಂತರ ಅವರು ವೇಗವನ್ನು ಪಡೆದುಕೊಂಡರು. ನತಾಶಾ ಇನ್ಸ್ಟಾಗ್ರಾಂನಲ್ಲಿ ಆಲ್ರೌಂಡರ್ ಜೊತೆಗಿನ ತನ್ನ ಎಲ್ಲಾ ಚಿತ್ರಗಳನ್ನು ಅಳಿಸಿದ್ದರು. ಇದು ವಿಚ್ಛೇದನ ಸುದ್ದಿಗೆ ತುಪ್ಪ ಸುರಿದಿತ್ತು. ಇದೇ ವೇಳೆ ಅಭಿಮಾನಿಗಳು ಹಾರ್ದಿಕ್ಗೆ ಬೆಂಬಲ ಸೂಚಿಸುವ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ.
ಆಕೆಯನ್ನು ಬಿಡಿ ಸರ್ ನೀವು ಆಕೆಗಿಂತಲೂ ಉತ್ತಮವಾದದ್ದಕ್ಕೆ ಅರ್ಹರು ಎಂದು ಅಭಿಮಾನಿಗಳು ಪೋಸ್ಟ್ ಹಾಕಿದ್ದಾರೆ. ವಿಚ್ಛೇದನದಲ್ಲಿ ನತಾಶಾ ಎಷ್ಟು ಪಡೆಯುತ್ತಾರೆ ಎಂಬ ಬಗ್ಗೆ ಮತ್ತೊಮ್ಮೆ ಕಾಮೆಂಟ್ ಮಾಡಲು ಪ್ರಾರಂಭಿಸಿದ ಒಬ್ಬ ವ್ಯಕ್ತಿ, 'ನತಾಶಾ ಈಗ ನಿಮ್ಮ ಆಸ್ತಿಯ ಎಷ್ಟು ಭಾಗವನ್ನು ತೆಗೆದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಹಾರ್ದಿಕ್ ತನ್ನ ಆಸ್ತಿಯ ಭಾಗದಲ್ಲಿ 50ರಷ್ಟು ತನ್ನ ತಾಯಿಯ ಹೆಸರಿಗೆ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ನತಾಶಾ ಜೀವನಾಂಶ ಪಡೆದಿದ್ದರೂ, ಹಾರ್ದಿಕ್ ಹೆಸರಿನಲ್ಲಿದ್ದ ಆಸ್ತಿಯಲ್ಲಿ ಮಾತ್ರ ಪಡೆಯಲು ಸಾಧ್ಯ.