ಹರಾಜಿನಲ್ಲಿ ಇತಿಹಾಸ ನಿರ್ಮಿಸಿದ ಭಾರತದ ಅನ್‌ಕ್ಯಾಪ್ಡ್ ಆಟಗಾರ್ತಿ; 2 ಕೋಟಿ ಪಡೆದ ಕಾಶ್ವೀ ಗೌತಮ್ ಯಾರು?
Dec 09, 2023 06:35 PM IST
ಕಾಶ್ವೀ ಗೌತಮ್.
- WPL Auction 2024: ಮಹಿಳಾ ಪ್ರೀಮಿಯರ್ ಲೀಗ್ನ ಹರಾಜಿನಲ್ಲಿ ಘಟಾನುಘಟಿ ಆಟಗಾರ್ತಿಯರನ್ನೇ ಹಿಂದಿಕ್ಕಿದ ಭಾರತದ ಅನ್‌ಕ್ಯಾಪ್ಡ್ ಪ್ಲೇಯರ್ ಕಾಶ್ವೀ ಗೌತಮ್ ಯಾರು? ಈ ಮುಂದೆ ನೋಡೋಣ.
ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಇತಿಹಾಸದಲ್ಲಿ ಅತ್ಯಂತ ದುಬಾರಿ ಅನ್‌ಕ್ಯಾಪ್ಡ್ ಆಟಗಾರ್ತಿ ಎಂಬ ದಾಖಲೆಗೆ ಭಾರತದ ಅನ್‌ಕ್ಯಾಪ್ಡ್ ಕಾಶ್ವೀ ಗೌತಮ್ ಪಾತ್ರರಾಗಿದ್ದಾರೆ. ಘಟಾನುಘಟಿ ಆಟಗಾರ್ತಿಯರನ್ನೇ ಹಿಂದಿಕ್ಕಿ ಅಚ್ಚರಿಯಂತೆ ಬಿಡ್ಡಿಂಗ್ ವಾರ್ನಲ್ಲಿ 2 ಕೋಟಿ ಜಾಕ್ಪಾಟ್ ಪಡೆದು ಗುಜರಾತ್ ಜೈಂಟ್ಸ್ ಪಾಲಾಗಿದ್ದಾರೆ.
ಕೆಲವೇ ನಿಮಿಷಗಳಲ್ಲಿ ದಾಖಲೆ
ಅಲ್ಲದೆ, ಕೆಲವೇ ನಿಮಿಷಗಳಲ್ಲಿ 1.3 ಕೋಟಿಗೆ ಯುಪಿ ವಾರಿಯರ್ಸ್ ತಂಡದ ಪಾಲಾಗಿ ದಾಖಲೆ ಬರೆದಿದ್ದ ವೃಂದಾ ದಿನೇಶ್ ದಾಖಲೆ ಕಾಶ್ವೀ ಗೌತಮ್ ಮುರಿದರು. ಇದೇ ಡಬ್ಲ್ಯುಪಿಎಲ್ ಮಿನಿ ಹರಾಜಿನಲ್ಲಿ ವೃಂದಾ ಯುಪಿ ತೆಕ್ಕೆಗೆ ಬಿದ್ದು ಅತ್ಯಂತ ದುಬಾರಿ ಅನ್‌ಕ್ಯಾಪ್ಡ್ ಪ್ಲೇಯರ್ ಎನಿಸಿಕೊಂಡಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ಈ ದಾಖಲೆ ಕಾಶ್ವೀ ಪಾಲಾಯಿತು.
ಖರೀದಿಗೆ ತಂಡಗಳ ನಡುವೆ ಪೈಪೋಟಿ
ಚಂಡೀಗಢದ ಕಾಶ್ವೀ ಗೌತಮ್ ಖರೀದಿಗೆ ಹಲವು ಫ್ರಾಂಚೈಸಿಗಳು ಹೋರಾಟ ನಡೆಸಿದವು. ಅವರ ಮೂಲ ಇದ್ದಿದ್ದು 10 ಲಕ್ಷ. ಹರಾಜಿನಲ್ಲಿದ್ದ 5 ಫ್ರಾಂಚೈಸಿಗಳು ಸಹ ಕಾಶ್ವೀ ಖರೀದಿಗೆ ಮುಗಿಬಿದ್ದವು. ನೋಡ ನೋಡುತ್ತಿದ್ದಂತೆ 75 ಲಕ್ಷಕ್ಕೆ ಏರಿಕೆಯಾಯಿತು. ಅಲ್ಲಿಯವರೆಗೂ ನಿಧಾನಕ್ಕೆ ಏರುತ್ತಿದ್ದ ಹರಾಜು ಮೊತ್ತ ತದನಂತರ ಏಕಾಏಕಿ ಏರಿಕೆಯಾಗತೊಡಗಿತು.
ಯುಪಿ ವಾರಿಯರ್ಜ್ ಅಚಲವಾದ ಸಂಕಲ್ಪದೊಂದಿಗೆ ಹಣ ಸುರಿಯಲು ನಿರ್ಧರಿಸಿತು. ಯುಪಿ ಬಿಡ್ ಅನ್ನು 1 ಕೋಟಿ ಮಿತಿಯನ್ನು ದಾಟಿಸಿತು. ಬಳಿಕ ಗುಜರಾತ್ ಜೈಂಟ್ಸ್ ಗೇರ್ ಜೇಂಜ್ ಮಾಡಿತು. 10 ಲಕ್ಷದಂತೆ ಏರಿಸುತ್ತಾ ಹೋಯಿತು. ಬಿಡ್ ಅನ್ನು 1.4 ಕೋಟಿಗೆ ಏರಿಸಿದಾಗ ಉದ್ವೇಗವು ಹೆಚ್ಚಾಯಿತು. ಪಟ್ಟು ಬಿಡದ ಗುಜರಾತ್, ಅಂತಿಮವಾಗಿ 2 ಕೋಟಿಗೆ ತನ್ನ ತಂಡಕ್ಕೆ ಸೇರಿಸಿಕೊಂಡಿತು.
ಯಾರು ಕಾಶ್ವೀ ಗೌತಮ್?
2020ರಲ್ಲಿ ದೇಶೀಯ ಕ್ರಿಕೆಟ್ನ ಅಂಡರ್-19 ಟೂರ್ನಿಯಲ್ಲಿ ಅತ್ಯಮೋಘ ಪ್ರದರ್ಶನ ನೀಡಿದ್ದರು. ಅರುಣಾಚಲ ಪ್ರದೇಶ ವಿರುದ್ಧ ಚಂಡೀಗಢವನ್ನು ಪ್ರತಿನಿಧಿಸಿದ ಕಾಶ್ವೀ, ಹ್ಯಾಟ್ರಿಕ್ ಸೇರಿದಂತೆ ಎದುರಾಳಿಯ ಎಲ್ಲಾ 10 ವಿಕೆಟ್ಗಳನ್ನು ಪಡೆದ ಸಾಧನೆ ಮಾಡಿದ್ದ ಕಾಶ್ವೀ, ಗಮನ ಸೆಳೆದಿದ್ದರು. ದೇಶೀಯ ಕ್ರಿಕೆಟ್ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿದ್ದಾರೆ.
ಆಂಧ್ರಪ್ರದೇಶದ ಕೆಎಸ್‌ಆರ್‌ಎಂ ಕಾಲೇಜು ಮೈದಾನದಲ್ಲಿ ಅರುಣಾಚಲ ಪ್ರದೇಶದ ವಿರುದ್ಧದ ಪಂದ್ಯದಲ್ಲಿ ಗೌತಮ್ ಚಂಡೀಗಢದ ಪರ ಈ ಸಾಧನೆ ಮಾಡಿದರು. 14ನೇ ವಯಸ್ಸಿನಲ್ಲಿ ಕ್ರೀಡೆಗೆ ಬಂದ ಕಾಶ್ವೀ, ನಂತರ ಹಿಂತಿರುಗಿ ನೋಡಲಿಲ್ಲ. ಡಬ್ಲ್ಯುಪಿಎಲ್ಗೂ ಮೊದಲು ಕೆಲವು ವರ್ಷಗಳ ಕಾಲ ಐಪಿಎಲ್ ಜೊತೆಗೆ ಬಿಸಿಸಿಐ ನಡೆಸುತ್ತಿದ್ದ ಮಹಿಳಾ T20 ಚಾಲೆಂಜ್‌ನ ಭಾಗವೂ ಆಗಿದ್ದರು.
ಈ ವರ್ಷ ಗೌತಮ್ ಪ್ರದರ್ಶನ
ದೇಶೀಯ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಕಾಶ್ವೀ, ಈ ವರ್ಷ ಮಹಿಳಾ ಟಿ20 ಟ್ರೋಫಿಯಲ್ಲಿ 7 ಪಂದ್ಯಗಳಲ್ಲಿ 12 ವಿಕೆಟ್ ಪಡೆದಿದ್ದಾರೆ. ಕೇವಲ 4.14ರ ಎಕಾನಮಿ ಹೊಂದಿದ್ದಾರೆ. ಗೌತಮ್ ಅಂಡರ್-23 ತಂಡದ ಭಾಗವಾಗಿ ಹಾಂಗ್ಕಾಂಗ್ನಲ್ಲಿ ನಡೆದ ಎಸಿಸಿ ಎಮರ್ಜಿಂಗ್ ಏಷ್ಯಾಕಪ್ ಟೂರ್ನಮೆಂಟ್‌ನಲ್ಲಿ ಚಾಂಪಿಯನ್ ಭಾರತ ತಂಡದ ಭಾಗವಾಗಿದ್ದರು.
ಭುವಿಯ ಅಪ್ಪಟ್ಟ ಅಭಿಮಾನಿ ಕಾಶ್ವೀ
ಭಾರತ ಪುರುಷರ ತಂಡದ ಸ್ವಿಂಗ್ ಬೌಲರ್ ಭುವನೇಶ್ವರ್ ಕುಮಾರ್ ಅವರ ಅಪ್ಪಟ್ಟ ಅಭಿಮಾನಿ ಕಾಶ್ವೀ ಗೌತಮ್. ಭುವನೇಶ್ವರ್ ಅವರು ಯಾವಾಗಲೂ ನನಗೆ ಸ್ಫೂರ್ತಿ ನೀಡುವ ವ್ಯಕ್ತಿ. ಅವರು ವಿಶ್ವ ದರ್ಜೆಯ ಬೌಲರ್. ನಾನು ಯಾವಾಗಲೂ ಅವರನ್ನು ಅನುಕರಿಸಲು ಬಯಸುತ್ತೇನೆ. ಅವರಂತೆಯೇ ಪ್ರಭಾವ ಸೃಷ್ಟಿಸಲು ಪ್ರಯತ್ನಿಸುತ್ತೇನೆ ಎಂದು ಮಹಿಳಾ ಕ್ರಿಕ್‌ಜೋನ್‌ಗೆ ಸಂದರ್ಶನವೊಂದರಲ್ಲಿ ಕಾಶ್ವೀ ಹೇಳಿದ್ದರು.