ಹಾರ್ದಿಕ್ ಪಾಂಡ್ಯ ಕಿತ್ತಾಕಿ ಸೂರ್ಯಕುಮಾರ್ಗೆ ಪಟ್ಟ ಕಟ್ಟಿದ್ದೇಕೆ ಗಂಭೀರ್; ಏಕದಿನ ತಂಡದಿಂದ ಹೊರಬಿದ್ದರೇ ಜಡೇಜಾ?
Jul 20, 2024 06:00 AM IST
ಹಾರ್ದಿಕ್ ಪಾಂಡ್ಯ ಕಿತ್ತಾಕಿ ಸೂರ್ಯಕುಮಾರ್ಗೆ ಪಟ್ಟ ಕಟ್ಟಿದ್ದೇಕೆ ಗಂಭೀರ್; ಏಕದಿನ ತಂಡದಿಂದ ಹೊರಬಿದ್ದರೇ ಜಡೇಜಾ?
- Indian Cricket Team: ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯಕುಮಾರ್ ಯಾದವ್ ಅವರಿಗೆ ಟಿ20ಐ ಕ್ರಿಕೆಟ್ ನಾಯಕತ್ವ ನೀಡಿದ್ದೇಕೆ? ರವೀಂದ್ರ ಜಡೇಜಾ ಅವರನ್ನು ಏಕದಿನ ತಂಡಕ್ಕೆ ಏಕೆ ಆಯ್ಕೆ ಮಾಡಿಲ್ಲ? ಇಲ್ಲಿದೆ ವಿವರ.
ಶ್ರೀಲಂಕಾ ವಿರುದ್ಧದ ವೈಟ್-ಬಾಲ್ ಪ್ರವಾಸಕ್ಕೆ ಭಾರತ ತಂಡ (Indian Cricket Team) ಪ್ರಕಟಿಸಲಾಗಿದೆ. ಟಿ20ಐ ಕ್ರಿಕೆಟ್ಗೆ ನಾಯಕನಾಗಿ ಬಡ್ತಿ ಪಡೆದಿರುವ ಸೂರ್ಯಕುಮಾರ್ ಯಾದವ್‌ಗೆ (Suryakumar Yadav) ಇದು ಕಹಿ-ಸಿಹಿ ಕ್ಷಣವಾಗಿದೆ. ಸ್ಫೋಟಕ ಬ್ಯಾಟರ್ಗೆ ಟಿ20ಐ ನಾಯಕತ್ವ ಪಡೆದಿದ್ದಕ್ಕೆ ಸಂತೋಷವಾಗಿದ್ದರೂ ಏಕದಿನ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದು ಕಹಿ ಸುದ್ದಿಯಾಗಿದೆ. ಆದರೆ, ಹಾರ್ದಿಕ್ ಬದಲಿಗೆ ಸೂರ್ಯಗೆ ಟಿ20ಐ ಕ್ಯಾಪ್ಟನ್ ಪಟ್ಟ ಕಟ್ಟಿದ್ದೇಕೆ? ಈ ನಡುವೆ ರವೀಂದ್ರ ಜಡೇಜಾ (Ravindra Jadeja) ಏಕದಿನ ತಂಡದಲ್ಲಿ ಸ್ಥಾನ ಪಡೆಯದ ಕಾರಣ ವೃತ್ತಿಜೀವನ ಅಂತ್ಯಕ್ಕೆ ಸಮೀಪಿಸಿತೇ? ಎಂಬ ಪ್ರಶ್ನೆಗಳು ಎದ್ದಿವೆ.
ಹಾರ್ದಿಕ್ ಪಾಂಡ್ಯ (Hardik Pandya) ಅವರ ಪುನರಾವರ್ತಿತ ಗಾಯದ ಸಮಸ್ಯೆಗಳು ಮತ್ತು ಕೆಲಸದ ಹೊರೆ ನಿರ್ವಹಣೆಯ ಸಮಸ್ಯೆಗಳಿಂದ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿದೆ ಎಂದು ಹೇಳಲಾಗಿದೆ. ಪಾಂಡ್ಯ, 2023ರ ಏಕದಿನ ವಿಶ್ವಕಪ್ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡ ನಂತರ 6 ತಿಂಗಳ ಕ್ರಿಕೆಟ್ ಸೇವೆಯಿಂದ ದೂರ ಉಳಿದಿದ್ದರು. ಹಿಂದೆ 2021ರಲ್ಲಿ ಬೆನ್ನುನೋವಿನಿಂದ ಬಳಲುತ್ತಿದ್ದರು. ಅದಕ್ಕೂ ಮುನ್ನ ಏಷ್ಯಾಕಪ್-2018ರಲ್ಲಿ ಬೆನ್ನುನೋವಿಗೆ ಒಳಗಾಗಿ ಸಮಸ್ಯೆ ಎದುರಿಸಿ ಬಹಳ ಸಮಯ ಬೌಲಿಂಗ್ ಮಾಡಿರಲಿಲ್ಲ.
ಸಂಶಯಾಸ್ಪದ ಗಾಯಗಳ ಕಾರಣದಿಂದ ಗಂಭೀರ್‌ಗೆ ಸೂರ್ಯರನ್ನು ನಾಯಕತ್ವದ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಸೂರ್ಯ, ಗಂಭೀರ್ ಅವರ ನೆಚ್ಚಿನ ಆಟಗಾರನೂ ಆಗಿದ್ದು, ಅವರ ಮೇಲೆ ಹೆಚ್ಚು ಒಲವು ತೋರಿದ್ದಾರೆ. ಟಿ20ಐ ಕ್ರಕೆಟ್ನಲ್ಲಿ ಹೆಚ್ಚು ಸ್ಥಿರ ಪ್ರದರ್ಶನ ನೀಡುತ್ತಿರುವುದು ಕೂಡ ನಾಯಕನನ್ನಾಗಿ ನೇಮಿಸಲು ಕಾರಣವಾಗಿದೆ. ಭವಿಷ್ಯದ ದೃಷ್ಟಿಯಿಂದ ನಿರ್ಧಾರ ತೆಗೆದುಕೊಂಡಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಭಾರತ ಪರ ಸಾಮರ್ಥ್ಯ ನಿರೂಪಿಸಲು ವಿಫಲವಾದ ಕಾರಣ ಸ್ಥಾನ ಕಳೆದುಕೊಂಡಿದ್ದಾರೆ. ಇನ್ಮುಂದೆ ಅವರು ತಂಡದಲ್ಲಿ ಅವಕಾಶ ಪಡೆಯುವುದು ಕಷ್ಟ.
ಜಡೇಜಾಗೂ ಏಕದಿನ ತಂಡದಲ್ಲಿಲ್ಲ ಸ್ಥಾನ
ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡದ ಹಲವು ಅಚ್ಚರಿಗಳ ಪೈಕಿ ರವೀಂದ್ರ ಜಡೇಜಾ ಅವರನ್ನು ಕೈಬಿಟ್ಟಿದ್ದು ಕೂಡ ಒಂದು. ಜಡೇಜಾ ಎಲ್ಲಾ 3 ಸ್ವರೂಪಗಳಲ್ಲಿ ಭಾರತ ತಂಡದ ಸದಸ್ಯರಾಗಿದ್ದರು. ವಿಶ್ವಕಪ್ ಗೆಲುವಿನ ನಂತರ ಅವರು ಟಿ20ಐಗೆ ನಿವೃತ್ತಿ ಘೋಷಿಸಿದರು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಗಂಭೀರ್ ವಿನಂತಿಸಿ ಏಕದಿನ ಸರಣಿಗೆ ಮರಳುವಂತೆ ಮಾಡಿದರು. ಆದರೆ ಜಡೇಜಾ ಅವರನ್ನು ಆಡಲು ಗಂಭೀರ್ ವಿನಂತಿಸಲೇ ಇಲ್ಲ ಎಂದು ವರದಿಯಾಗಿದೆ. ಇದು ನೋಡಿದರೆ ಜಡೇಜಾ ಚಾಂಪಿಯನ್ಸ್ ಟ್ರೋಫಿ ಯೋಜನೆಯಲ್ಲಿ ಇಲ್ಲ ಎಂದು ತಿಳಿಯುತ್ತಿದೆ.
ಇತ್ತೀಚಿಗೆ ವೈಟ್-ಬಾಲ್ ಕ್ರಿಕೆಟ್ನಲ್ಲಿ ಜಡೇಜಾ ಅವರ ಫಾರ್ಮ್ ಉತ್ತಮವಾಗಿಲ್ಲ. 2024ರ ಟಿ20 ವಿಶ್ವಕಪ್‌ನಲ್ಲೂ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಅಕ್ಷರ್ ಪಟೇಲ್ ಉತ್ತಮ ಪ್ರದರ್ಶನ ನೀಡುತ್ತಿರುವ ಕಾರಣ, ಆಯ್ಕೆದಾರರ ನೆಚ್ಚಿನ ಆಟಗಾರನಾಗಿದ್ದಾರೆ. ಜಡೇಜಾಗೆ ಸಮಾನವಾದ ಬದಲಿ ಆಟಗಾರನಾಗಿ ರೂಪುಗೊಂಡಿದ್ದಾರೆ. ಅಕ್ಷರ್ ಮೇಲೆ ಬಿಸಿಸಿಐ ನಂಬಿಕೆಯಿಟ್ಟ ಕಾರಣ ಜಡೇಜಾಗೆ ಕೊಕ್ ನೀಡಲಾಗಿದೆ. ಬಹುಶಃ ಜಡ್ಡು ಟೆಸ್ಟ್ ಮಾತ್ರ ಮುಂದುವರೆಯುವ ಸಾಧ್ಯತೆ ಇದೆ.
ರವೀಂದ್ರ ಮತ್ತೊಂದು ಮುಳುವು ಅಂದರೆ ಗಾಯ. ಅವರು ಹೆಚ್ಚು ಗಾಯಗೊಳ್ಳುತ್ತಿದ್ದು, ಪ್ರಮುಖ ಸರಣಿಗಳಿಂದ ಹೊರಗುಳಿದಿದ್ದರು. ಏಷ್ಯಾ ಕಪ್ 2022 ರಲ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದ ಜಡ್ಡು, ಸುಮಾರು 6 ತಿಂಗಳ ಕಾಲ ಕ್ರಿಕೆಟ್ ಸೇವೆಯಿಂದ ಹೊರಗುಳಿದಿದ್ದರು. ಮಂಡಿರಜ್ಜು ಗಾಯದಿಂದ ಅವರು ಇಂಗ್ಲೆಂಡ್ ವಿರುದ್ಧದ ನಾಲ್ಕು ಟೆಸ್ಟ್‌ಗಳನ್ನೂ ತಪ್ಪಿಸಿಕೊಂಡರು. ಪ್ರಸ್ತುತ ಜಡೇಜಾ ಟೆಸ್ಟ್ ತಂಡದ ಪ್ರಮುಖ ಸದಸ್ಯರಾಗಿದ್ದು, ಏಕದಿನ ತಂಡದಲ್ಲಿ ಸ್ಥಾನ ಕಳೆದುಕೊಂಡರೂ ಮುಂದಿನ ಟೆಸ್ಟ್ ಸರಣಿಗಳಲ್ಲಿ ಅವಕಾಶ ಪಡೆಯಲಿದ್ದಾರೆ.