logo
ಕನ್ನಡ ಸುದ್ದಿ  /  ಕ್ರಿಕೆಟ್  /  ಅಬ್ಬಬ್ಬಾ T20ಯಲ್ಲಿ 314 ರನ್‌, 9 ಎಸೆತಗಳಲ್ಲಿ ಅರ್ಧಶತಕ, 34 ಬಾಲ್​ಗಳಲ್ಲಿ ಶತಕ; ಹೊಸ ಚರಿತ್ರೆ ಸೃಷ್ಟಿಸಿದ ನೇಪಾಳ

ಅಬ್ಬಬ್ಬಾ T20ಯಲ್ಲಿ 314 ರನ್‌, 9 ಎಸೆತಗಳಲ್ಲಿ ಅರ್ಧಶತಕ, 34 ಬಾಲ್​ಗಳಲ್ಲಿ ಶತಕ; ಹೊಸ ಚರಿತ್ರೆ ಸೃಷ್ಟಿಸಿದ ನೇಪಾಳ

Prasanna Kumar P N HT Kannada

Sep 27, 2023 02:35 PM IST

ಕ್ರಿಕೆಟ್ ಯುಗದಲ್ಲಿ ಹೊಸ ಚರಿತ್ರೆ ಸೃಷ್ಟಿಸಿದ ನೇಪಾಳ ತಂಡ.

    • Asia Cup 2023, Nepal vs Mongolia: ಏಷ್ಯನ್ ಗೇಮ್ಸ್‌ನಲ್ಲಿ ಮಂಗೋಲಿಯಾ ವಿರುದ್ಧದ ತಮ್ಮ ಆರಂಭಿಕ ಪಂದ್ಯದಲ್ಲಿ ಪವರ್-ಹಿಟ್ಟಿಂಗ್‌ ಮೂಲಕ ನಂಬಲಾಗದ ಪ್ರದರ್ಶನದೊಂದಿಗೆ ನೇಪಾಳ ತಂಡವು ಅನೇಕ ವಿಶ್ವದಾಖಲೆಗಳನ್ನು ಮುರಿದಿದೆ.
ಕ್ರಿಕೆಟ್ ಯುಗದಲ್ಲಿ ಹೊಸ ಚರಿತ್ರೆ ಸೃಷ್ಟಿಸಿದ ನೇಪಾಳ ತಂಡ.
ಕ್ರಿಕೆಟ್ ಯುಗದಲ್ಲಿ ಹೊಸ ಚರಿತ್ರೆ ಸೃಷ್ಟಿಸಿದ ನೇಪಾಳ ತಂಡ.

ಏಷ್ಯನ್ ಗೇಮ್​​​ನಲ್ಲಿ (Asian Games 2023) ಪುರುಷರ ಕ್ರಿಕೆಟ್​ ವಿಭಾಗದ ಗ್ರೂಪ್​ ಹಂತದ ಪಂದ್ಯದಲ್ಲಿ ಮಂಗೋಲಿಯಾ ವಿರುದ್ಧ ನೇಪಾಳ ತಂಡವು (Nepal vs Mongolia) ಹೊಸ ಚರಿತ್ರೆ ಸೃಷ್ಟಿಸಿದೆ. ಈ ಪಂದ್ಯದಲ್ಲಿ ಹಲವು ನೂತನ ವಿಶ್ವ ದಾಖಲೆಗಳನ್ನು ನಿರ್ಮಿಸಿದೆ. ಮಹಿಳೆಯರ ಕ್ರಿಕೆಟ್​ ಮುಕ್ತಾಯದ ಬೆನ್ನಲ್ಲೇ ಇದೀಗ ಪುರುಷರ ಕ್ರಿಕೆಟ್​ಗೆ ಆರಂಭಗೊಂಡಿದೆ. ಅದರಂತೆ ನಡೆದ ಮೊದಲ ಪಂದ್ಯದಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ದಾಖಲೆಗಳ (Cricket Record) ಮೇಲೆ ದಾಖಲೆಗಳು ಸೃಷ್ಟಿಯಾಗಿವೆ.

ಟ್ರೆಂಡಿಂಗ್​ ಸುದ್ದಿ

ಮಳೆಯಿಂದ ಪಂದ್ಯ ರದ್ದು; ಎಲಿಮಿನೇಟರ್​​ನಲ್ಲಿ ಆರ್​​ಸಿಬಿಗೆ ರಾಜಸ್ಥಾನ್ ರಾಯಲ್ಸ್ ಎದುರಾಳಿ, ಪ್ಲೇಆಫ್​ ವೇಳಾಪಟ್ಟಿ ಹೀಗಿದೆ

ಆರ್​ಸಿಬಿ ಫೈನಲ್​ ಗೆದ್ದಂತೆ ಹಾರಾಡ್ತಿದೆ ಎಂದ ರಾಯುಡು; ಇವರಿಗೆ ಅರಗಿಸಿಕೊಳ್ಳೊಕೆ ಆಗ್ತಿಲ್ಲ ಎಂದ ಬೆಂಗಳೂರು ಮಾಜಿ ಆಟಗಾರ

ವಿರಾಟ್ ಕೊಹ್ಲಿಗೆ ಕರ್ನಾಟಕದ ನಂಟು; ಎರಡನೇ ತವರು ಬೆಂಗಳೂರಲ್ಲಿ ವಿರುಷ್ಕಾ ದಂಪತಿ ಓಡಾಡಿರುವ ಜಾಗಗಳಿವು

ಬ್ಯಾಟರ್‌ಗಳ ಅಬ್ಬರ; ಪಂಜಾಬ್‌ ಮಣಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ನೆಗೆದ ಸನ್‌ರೈಸರ್ಸ್‌ ಹೈದರಾಬಾದ್

ಮಂಗೋಲಿಯಾ ವಿರುದ್ಧ ಮೊದಲು ಬ್ಯಾಟಿಂಗ್ ನಡೆಸಿದ ನೇಪಾಳ ತಂಡವು, ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಬರೋಬ್ಬರಿ ಗಳಿಸಿದ್ದು 314 ರನ್. ಇದು ನಂಬಲು ಅಸಾಧ್ಯ ಎನಿಸಿದ ಸ್ಕೋರ್​. ಅಸಾಧಾರಣ ಬ್ಯಾಟಿಂಗ್ ಮೂಲಕ ಕೇವಲ 120 ಎಸೆತಗಳಲ್ಲಿ 300 ರನ್​ ದಾಖಲಿಸಿ ಹೊಸ ದಾಖಲೆ ನಿರ್ಮಿಸಿದೆ. ಟಿ20 ಕ್ರಿಕೆಟ್​ ಇತಿಹಾಸದಲ್ಲಿ 20 ಓವರ್​​ಗಳಲ್ಲಿ 300 ರನ್​ ದಾಟಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೊಂದೇ ಅಲ್ಲ, ಹಲವು ರೆಕಾರ್ಡ್ಸ್​ ಕ್ರಿಕೆಟ್​ ಇತಿಹಾಸದ ದಾಖಲೆ ಪುಸ್ತಕ ಸೇರಿಕೊಂಡಿವೆ.

ವೇಗದ ಅರ್ಧಶತಕ, ಯುವಿ ದಾಖಲೆ ಧ್ವಂಸ

ಟೀಮ್ ಇಂಡಿಯಾದ ಆಲ್​ರೌಂಡರ್​ ಯುವರಾಜ್ ಸಿಂಗ್​ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಅತಿವೇಗದ ಹಾಫ್ ಸೆಂಚುರಿ ಬಾರಿಸಿ ಇತಿಹಾಸ ನಿರ್ಮಿಸಿದ್ದರು. ಆದರೀಗ ಈ ದಾಖಲೆಯನ್ನು ನೇಪಾಳ ಕ್ರಿಕೆಟಿಗ ದೀಪೇಂದ್ರ ಸಿಂಗ್ ಐರಿ ಮುರಿದಿದ್ದಾರೆ. ದೀಪೇಂದ್ರ ಕೇವಲ 9 ಎಸೆತಗಳಲ್ಲಿ ಸಿಡಿಲಬ್ಬರದ ಅರ್ಧಶತಕ ಬಾರಿಸಿ 10 ಎಸೆತಗಳಲ್ಲಿ ಅಜೇಯ 52 ರನ್ ಗಳಿಸಿದರು. ಅವರ ಈ ಇನ್ನಿಂಗ್ಸ್​​ನಲ್ಲಿ 8 ಸಿಕ್ಸರ್​ಗಳೇ ಇವೆ. ಅಂದರೆ 48 ರನ್​ಗಳು ಸಿಕ್ಸರ್​ಗಳ ಮೂಲಕವೇ ಬಂದಿರುವುದು ವಿಶೇಷ.

ಅತಿ ವೇಗದ ಶತಕ, ರೋಹಿತ್ ರೆಕಾರ್ಡ್ ಉಡೀಸ್

ಯುವರಾಜ್ ಸಿಂಗ್ ವೇಗ ಅರ್ಧಶತಕ ಮಾತ್ರವಲ್ಲ, ಭಾರತ ತಂಡದ ನಾಯಕ ರೋಹಿತ್​ ಶರ್ಮಾ ಮತ್ತು ಸೌತ್ ಆಫ್ರಿಕಾದ ಡೇವಿಡ್ ಮಿಲ್ಲರ್​ ಅವರ ವೇಗದ ಟಿ20 ಶತಕದ ಜಂಟಿ ದಾಖಲೆಯನ್ನೂ ಮುರಿಯಲಾಗಿದೆ. ಇವರಿಬ್ಬರೂ 35 ಎಸೆತಗಳಲ್ಲಿ ಶತಕ ಸಿಡಿಸಿ ವೇಗದ ಶತಕ ಬಾರಿಸಿದ ದಾಖಲೆ ಬರೆದಿದ್ದರು. ಆದರೀಗ ಈ ವಿಶ್ವ ದಾಖಲೆಯನ್ನು ನೇಪಾಳದ ಬ್ಯಾಟರ್​​ ಕುಶಾಲ್ ಮಲ್ಲಾ ಹಿಂದಿಕ್ಕಿದ್ದಾರೆ. ಕುಶಾಲ್ ಮಲ್ಲಾ ಕೇವಲ 34 ಎಸೆತಗಳಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ವೇಗದ ಶತಕ ಬಾರಿಸಿದ್ದಾರೆ. ಮಲ್ಲಾ 12 ಸಿಕ್ಸರ್​, 8 ಬೌಂಡರಿ ಸಹಿತ 50 ಎಸೆತಗಳಲ್ಲಿ ಅಜೇಯರಾಗಿ 137 ರನ್ ಗಳಿಸಿದರು.

ಒಂದೇ ಪಂದ್ಯದಲ್ಲಿ 26 ಸಿಕ್ಸರ್​ಗಳು

ಮತ್ತೊಂದು ದಾಖಲೆ ಅಂದರೆ, ಟಿ20 ಕ್ರಿಕೆಟ್​ನಲ್ಲಿ ಒಂದೇ ಇನ್ನಿಂಗ್ಸ್​​ನಲ್ಲಿ ಅಧಿಕ ಸಿಕ್ಸರ್​​ಗಳು ದಾಖಲಾಗಿವೆ. ಚುಟುಕು ಕ್ರಿಕೆಟ್ ಇತಿಹಾಸದಲ್ಲಿ ಯಾವ ತಂಡವೂ ಒಂದು ಇನ್ನಿಂಗ್ಸ್​ನಲ್ಲಿ ಇಷ್ಟು ಸಿಕ್ಸರ್ ಸಿಡಿಸಿಲ್ಲ. ಈ ಹಿಂದೆ ಅಫ್ಘಾನಿಸ್ತಾನ 2019 ರಲ್ಲಿ 278/3 ಸ್ಕೋರ್ ಮಾಡಿದ್ದಾಗ 22 ಸಿಕ್ಸರ್​ ಬಾರಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಈಗ ಈ ದಾಖಲೆಯನ್ನೂ ಮುರಿದಿದೆ.

ಅತಿ ದೊಡ್ಡ ಅಂತರದ ಗೆಲುವು

ಮೊದಲು ಬ್ಯಾಟಿಂಗ್ ನಡೆಸಿದ ನೇಪಾಳ, ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 314 ರನ್​ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ಮಂಗೋಲಿಯಾ 41 ರನ್​ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ನೇಪಾಳ 273 ರನ್​ಗಳ ಅಂತರದ ಗೆಲುವು ಸಾಧಿಸಿತು. ಟಿ20 ಕ್ರಿಕೆಟ್​ನಲ್ಲಿ ಅತಿ ದೊಡ್ಡ ಅಂತರದ ಗೆಲುವು ವಿಶ್ವ ದಾಖಲೆಯನ್ನೂ ತನ್ನದಾಗಿಸಿಕೊಂಡಿದೆ ನೇಪಾಳ. ಅಲ್ಲದೆ, ಮಂಗೋಲಿಯಾ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಕಳೆ ದಾಖಲೆಗೂ ಒಳಗಾಗಿದೆ.

ಟಿ20ಐ ಇತಿಹಾಸದಲ್ಲಿ ಅತ್ಯಧಿಕ ಸ್ಕೋರ್‌ ಪಟ್ಟಿ ಇಲ್ಲಿದೆ

  1. ನೇಪಾಳ - 314/4 ವಿರುದ್ಧ ಮಂಗೋಲಿಯಾ (2023)
  2. ಅಫ್ಘಾನಿಸ್ತಾನ - 278/3 ವಿರುದ್ಧ ಐರ್ಲೆಂಡ್ (2019)
  3. ಜೆಕ್ ರಿಪಬ್ಲಿಕ್ - 278/4 ವಿರುದ್ಧ ಟರ್ಕಿ (2019)
  4. ಆಸ್ಟ್ರೇಲಿಯಾ - 263/3 ವಿರುದ್ಧ ಶ್ರೀಲಂಕಾ (2016)
  5. ಶ್ರೀಲಂಕಾ 260/6 ವಿರುದ್ಧ ಕೀನ್ಯಾ (2007)

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ