ಬ್ಯಾಟರ್‌ಗಳ ಅಬ್ಬರ; ಪಂಜಾಬ್ ಮಣಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ನೆಗೆದ ಸನ್‌ರೈಸರ್ಸ್ ಹೈದರಾಬಾದ್
May 19, 2024 07:20 PM IST
ಪಂಜಾಬ್ ಮಣಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ನೆಗೆದ ಸನ್‌ರೈಸರ್ಸ್ ಹೈದರಾಬಾದ್
- ಪಂಜಾಬ್ ಕಿಂಗ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡವು ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ಆ ಮೂಲಕ ನೇರವಾಗಿ ಕ್ವಾಲಿಫೈಯರ್ ಪಂದ್ಯ ಆಡುವ ಅವಕಾಶಕ್ಕೆ ಹತ್ತಿರವಾಗಿದೆ.
ಪಂಜಾಬ್ ಕಿಂಗ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡವು 4 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ತವರು ಮೈದಾನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಜಯಭೇರಿ ಬಾರಿಸುವ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಇಂದಿನ ಎರಡನೇ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ರಾಜಸ್ಥಾನ ರಾಯಲ್ಸ್ ಸೋತರೆ, ಎಸ್‌ಆರ್‌ಎಚ್ ಎರಡನೇ ಸ್ಥಾನದಲ್ಲೇ ಉಳಿದು ಕ್ವಾಲಿಫೈಯರ್ ಪಂದ್ಯ ಆಡಲಿದೆ. ಒಂದು ವೇಳೆ ಅಲ್ಲಿ ಆರ್‌ಆರ್ ಗೆದ್ದರೆ, ಎಸ್‌ಆರ್‌ಎಚ್ ಮೂರನೇ ಸ್ಥಾನಕ್ಕೆ ಕುಸಿದು ಆರ್‌ಸಿಬಿ ವಿರುದ್ಧ ಎಲಿಮನೇಟರ್ ಪಂದ್ಯವಾಡಲಿದೆ. ಹೀಗಾಗಿ ಪ್ಲೇಆಫ್ ಪಂದ್ಯಗಳ ಸಂಪೂರ್ಣ ಚಿತ್ರಣ ಸಿಗಲು, ಐಪಿಎಲ್ 2024ರ ಲೀಗ್ ಹಂತದ ಅಂತಿಮ ಪಂದ್ಯದ ಫಲಿತಾಂಶ ಸಿಗಬೇಕಾಗಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 214 ರನ್ ಗಳಿಸಿತು. ಬೃಹತ್ ಗುರಿ ಚೇಸ್ ಮಾಡಿದ ಪ್ಯಾಟ್ ಕಮಿನ್ಸ್ ಪಡೆ, 19.1 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 215 ರನ್ ಗಳಿಸಿ ಗುರಿ ತಲುಪಿತು.
ಪಂಜಾಬ್ ಉತ್ತಮ ಮೊತ್ತ
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. 10 ಭಾರತೀಯ ಆಟಗಾರರೊಂದಿಗೆ ಕಣಕ್ಕಿಳಿದ ತಂಡವು, ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ನಡೆಸಿತು. ಆರಂಭಿಕರಾದ ಅಥರ್ವ ಟೈಡೆ ಹಾಗೂ ಪ್ರಭ್‌ಸಿಮ್ರಾನ್ ಸಿಂಗ್ ಮೊದಲ ವಿಕೆಟ್‌ಗೆ 97 ರನ್‌ಗಳ ಜೊತೆಯಾಟವಾಡಿದರು. 46 ರನ್ ಗಳಿಸಿದ ಅಥರ್ವ ಅರ್ಧಶತಕದ ಅಂಚಿನಲ್ಲಿ ಔಟಾದರು. ಅಬ್ಬರ ಮುಂದುವರೆಸಿದ ಪ್ರಭ್‌ಸಿಮ್ರಾನ್ 4 ಸಿಕ್ಸರ್ ಸಹಿತ 71 ರನ್ ಕಲೆ ಹಾಕಿದರು. ತಂಡದ ಎರಡು ವಿಕೆಟ್ ಪತನವಾಗುವ ವೇಳೆಗೆ 151 ರನ್ ಬಂದಾಗಿತ್ತು. ಶಶಾಂಕ್ ಸಿಂಗ್ 2 ರನ್ ಗಳಿಸಿದ್ದಾಗ ರನೌಟ್ ಆದರು.
ಪಂಜಾಬ್ ಪರ ಕಣಕ್ಕಿಳಿದ ಏಕೈಕ ವಿದೇಶಿ ಆಟಗಾರ ರೋಸ್ಸೋ 49 ರನ್ ಗಳಿಸಿ ಅರ್ಧಶತಕ ವಂಚಿತರಾದರು. ಅಶುತೋಶ್ ಶರ್ಮಾ ಆಟ ಕೂಡಾ 2 ರನ್‌ಗಳಿಗೆ ಅಂತ್ಯವಾಯ್ತು. ಡೆತ್ ಓವರ್ಗಳಲ್ಲಿ ಬಂದು ತಂಡಕ್ಕೆ ಪರ್ಫೆಕ್ಟ್ ಫಿನಿಶಿಂಗ್ ನೀಡಿದ ನಾಯಕ ಜಿತೇಶ್ ಶರ್ಮಾ 15 ಎಸೆತಗಳಲ್ಲಿ 32 ರನ್ ಪೇರಿಸಿದರು. ಅಂತಿಮವಾಗಿ ತಂಡವು 5 ವಿಕೆಟ್ ನಷ್ಟಕ್ಕೆ 214 ರನ್ ಕಲೆ ಹಾಕಿತು. ಹೈದರಾಬಾದ್ ಪರ ನಟರಾಜನ್ 2 ವಿಕೆಟ್ ಪಡೆದರು.
ಮೊದಲ ಎಸೆತದಲ್ಲಿ ವಿಕೆಟ್ ಪತನ
215 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್, ಮೊದಲ ಎಸೆತದಲ್ಲೇ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್ ವಿಕೆಟ್ ಕಳೆದುಕೊಂಡಿತು. ಆಸೀಸ್ ದೈತ್ಯನ ವಿಕೆಟ್ ಪಡೆದು ಅರ್ಷದೀಪ್ ಸಿಂಗ್ ಅಬ್ಬರಿಸಿದರು. ಎರಡನೇ ವಿಕೆಟ್‌ಗೆ ಜೊತೆಯಾದ ಅಭಿಷೇಕ್ ಶರ್ಮಾ ಮತ್ತು ತ್ರಿಪಾಠಿ 72 ರನ್‌ಗಳ ಜೊತೆಯಾಟವಾಡಿದರು. ತ್ರಿಪಾಠಿ 33 ರನ್ ಗಳಿಸಿದರೆ, ಸಿಕ್ಸರ್‌ಗಳ ಸರದಾರ ಅಭಿಷೇಕ್ 66 ರನ್ ಸಿಡಿಸಿ ಔಟಾದರು.
ಅಬ್ಬರದ ಆಟ ಮುಂದುವರೆಸಿದ ಎಸ್‌ಆರ್‌ಎಚ್ ಸಿಕ್ಸರ್-ಬೌಂಡರಿಗಳಲ್ಲೇ ಇನ್ನಿಂಗ್ಸ್ ಮುಂದುವರೆಸಿತು. ನಿತೀಶ್ ರೆಡ್ಡಿ ಹಾಗೂ ಕ್ಲಾಸೆನ್ ಮತ್ತೆ ಸಿಕ್ಸರ್‌ಗಳ ಸುರಿಮಳೆ ಸುರಿಸಿ 47 ರನ್ ಜೊತೆಗೂಡಿಸಿದರು. 37 ರನ್ ಗಳಿಸಿ ನಿತೀಶ್ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಅಬ್ದುಲ್ ಸಮದ್ ಮತ್ತು ಸನ್ವಿರ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ಪಂಜಾಬ್ ತಂಡವು ಸೋಲಿನ ವಿದಾಯ ಹೇಳಿತು.
ಇದನ್ನೂ ಓದಿ | ಅಂದು ಟೀಕಿಸಿದವರಿಂದಲೇ ಇಂದು ಶಹಬ್ಬಾಷ್‌ಗಿರಿ; ಟ್ರೋಲ್‌ಗಳಿಗೆ ಕುಗ್ಗದೆ ಆರ್‌ಸಿಬಿ ಅದೃಷ್ಟವನ್ನೇ ಬದಲಿಸಿದ ಯಶ್ ದಯಾಳ್
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)