Karnataka Exit poll result 2024: ಕಲ್ಯಾಣ ಕರ್ನಾಟಕದಲ್ಲಿ ಕೈಗೆ ಮುನ್ನಡೆ, ಬಿಜೆಪಿ ಹಿಂದೆ, ಖರ್ಗೆ ಕೈಗೆ ಬಲ ತಂದ ಸಮೀಕ್ಷೆ ಭವಿಷ್ಯ
Jun 01, 2024 10:21 PM IST
ಕಲ್ಯಾಣ ಕರ್ನಾಟಕದಲ್ಲಿ ಮತ್ತೆ ಮಲ್ಲಿಕಾರ್ಜುನ ಖರ್ಗೆ ಹವಾ ಎನ್ನುತ್ತಿವೆ ಮತಗಟ್ಟೆ ಸಮೀಕ್ಷೆಗಳು.
- Kalyan Karnataka ಕಲ್ಯಾಣ ಕರ್ನಾಟಕದ ಐದು ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೊದಲಿನಿಂದ ಬಲ ಇದ್ದರೂ ಕಳೆದ ಬಾರಿ ಶೂನ್ಯ ಸಾಧನೆ ಮಾಡಿತ್ತು. ಈ ಬಾರಿ ಚೇತರಿಸಿಕೊಳ್ಳುವ ಸಾಧ್ಯತೆಯಿದೆ ಎನ್ನುವ ಸೂಚನೆಯನ್ನು ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ: ಕಲಬುರಗಿ ಕೇಂದ್ರಿತ ಕಲ್ಯಾಣ ಕರ್ನಾಟಕದಲ್ಲಿನ ಲೋಕಸಭೆ ಚುನಾವಣೆ ಫಲಿತಾಂಶ ಏನಾಗಬಹುದು ಎನ್ನುವ ಕುತೂಹಲವಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆಯೇ ಇಲ್ಲಿ ನೇರ ಹಣಾಹಣಿ. ಆದರೂ ಕಾಂಗ್ರೆಸ್ ಗೆ ಮುನ್ನಡೆ ಸಿಗುತ್ತಿತ್ತು. 2014 ರ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಗೆದ್ದಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಏಕಾಏಕಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿತು. ಬಿಜೆಪಿ ಸಂಪೂರ್ಣ ಗೆದ್ದಿತ್ತು. ಈ ಬಾರಿ ಕಲ್ಯಾಣ ಕರ್ನಾಟಕದಲ್ಲಿ ಮತ್ತೆ ವಾತಾವರಣ ಬದಲಾಗಿದೆ. ಅಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಒಂದು ಸ್ಥಾನ ಹೆಚ್ಚು ಪಡೆಯಬಹುದು ಎನ್ನುವುದನ್ನು ಮತಗಟ್ಟೆ ಸಮೀಕ್ಷೆಗಳೂ ಹೇಳುತ್ತಿವೆ.
ಹಿಂದಿನ ಚುನಾವಣೆಯಲ್ಲಿ ಮೋದಿ ಅಲೆ, ಕಾಂಗ್ರೆಸ್ ವಿರುದ್ದದ ವಾತಾವರಣ, ಗೆಲ್ಲಲೇ ಬೇಕು ಎಂದು ಬಿಜೆಪಿ ಸಂಘಟಿತ ಪ್ರಯತ್ನ ನಡೆಸಿದ್ದು ಮುನ್ನಡೆ ಸಾಧಿಸಿತ್ತು. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿರುವ ಜತೆಗೆ ಮಲ್ಲಿಕಾರ್ಜುನ ಖರ್ಗೆ ಪ್ರಭಾವವೂ ವಾತಾವರಣವನ್ನು ಬದಲಿಸಿದೆ ಎನ್ನುವ ಅಂಶಗಳು ಸಮೀಕ್ಷೆಯಿಂದ ಹೊರ ಬರುತ್ತಿವೆ.
ಉತ್ತರ ಕರ್ನಾಟಕದ ಕಲ್ಯಾಣ ಕರ್ನಾಟಕ ಭಾಗದ ಮೊದಲಿನಿಂದಲೂ ಕಾಂಗ್ರೆಸ್ ಭದ್ರಕೋಟೆ. ಕಳೆದ ಬಾರಿ ಮೋದಿ ಅಲೆ ನಡುವೆ ಎಲ್ಲಾ ಕ್ಷೇತ್ರಗಳೂ ಬಿಜೆಪಿ ಪಾಲಾಗಿದ್ದವರು. ಅದರಲ್ಲೂ ಕಲ್ಯಾಣ ಕರ್ನಾಟಕದ ಕಲಬುರಗಿ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ಹಾಲಿ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋತಿದ್ದರು. ಇದಲ್ಲದೇ ಬೀದರ್, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿಯಲ್ಲೂ ಬಿಜೆಪಿ ಗೆದ್ದಿತ್ತು. ಇದಕ್ಕೂ ಮೊದಲಿನ 2014 ರ ಲೋಕಸಭೆ ಚುನಾವಣೆಯಲ್ಲಿ ಐದರಲ್ಲಿ ಎರಡು ಕಾಂಗ್ರೆಸ್ ಗೆದ್ದರೆ, ಮೂರರಲ್ಲಿ ಬಿಜೆಪಿ ಗೆದ್ದಿತ್ತು. ಉಪ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಕಾಂಗ್ರೆಸ್ ಗೆದ್ದಿತ್ತು.
ಐದೇ ವರ್ಷದಲ್ಲಿ ಫಲಿತಾಂಶದಲ್ಲಿ ಬದಲಾವಣೆಯಾಗಿ ಬಿಜೆಪಿ ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಹಿಂದಿಕ್ಕಿತ್ತು, ಬೀದರ್ ನಿಂದ ಸತತ ಎರಡು ಬಾರಿ ಗೆದ್ದಿದ್ದ ಭಗವಂತ ಖೂಬಾ ಅವರು ಕೇಂದ್ರದಲ್ಲಿ ಮಂತ್ರಿಯೂ ಆಗಿದ್ದರು. ಕಲಬುರಗಿಯಲ್ಲಿ ಕಾಂಗ್ರೆಸ್‌ನಿಂದ ಬಂದಿದ್ದ ಡಾ.ಉಮೇಶ್ ಜಾಧವ್ ಗೆಲುವು ಸಾಧಿಸಿದ್ದರು. ಕೊಪ್ಪಳದಲ್ಲಿ ಎರಡು ಬಾರಿ ಸಂಸದರಾಗಿ ಕರಡಿ ಸಂಗಣ್ಣ ಆಯ್ಕೆಯಾಗಿದ್ದರು. ರಾಯಚೂರಿನಲ್ಲಿ ರಾಜಾ ಅಮರೇಶ್ವರ ನಾಯಕ್, ಬಳ್ಳಾರಿಯಲ್ಲಿ ರಾಮುಲು ಸಂಬಂಧಿ ದೇವೇಂದ್ರಪ್ಪ ಅವರು ಟಿಕೆಟ್ ಪಡೆದು ಗೆದ್ದಿದ್ದರು.
ಈ ಬಾರಿ ಈ ಭಾಗದಲ್ಲಿ ಸನ್ನಿವೇಶ ಬದಲಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಬೀದರ್ ನಲ್ಲಿ ಬಿಜೆಪಿಯ ಬಂಡಾಯದ ಸನ್ನಿವೇಶ ಭಗವಂತ್ ಖೂಬಾ ಅವರ ಫಲಿತಾಂಶ ಏನಾಗಬಹುದು ಎನ್ನುವ ಕುತೂಹಲವಿದೆ. ಕಲಬುರಗಿಯಲ್ಲಿ ಕಳೆದ ಬಾರಿ ಖರ್ಗೆ ವಿರುದ್ದ ಸಿಡಿದೆದಿದ್ದ ಹಲವು ನಾಯಕರು ಈ ಬಾರಿ ಕಾಂಗ್ರೆಸ್‌ಗೆ ಮರಳಿದ್ದಾರೆ. ಇಲ್ಲಿ ಖರ್ಗೆ ಅವರ ಅಳಿಯ ರಾಧಾಕೃಷ್ಣ ಅಭ್ಯರ್ಥಿಯಾಗಿದ್ದು, ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವುದರಿಂದ ಫಲಿತಾಂಶ ಯಾವ ರೀತಿ ಬರಬಹುದು ಎನ್ನುವ ಚರ್ಚೆಗಳು ನಡೆದಿವೆ. ರಾಯಚೂರಿನಲ್ಲೂ ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಸಾಕಷ್ಟು ಗೊಂದಲಗಳಾಗಿರುವುದು ಫಲಿತಾಂಶದಲ್ಲಿ ವ್ಯತ್ಯಾಸ ಆಗಬಹುದು ಎನ್ನಲಾಗುತ್ತಿದೆ. ಕೊಪ್ಪಳದಲ್ಲಿ ಎರಡು ಬಾರಿಗೆ ಗೆದ್ದಿದ್ದ ಕರಡಿ ಸಂಗಣ್ಣ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಅನ್ನು ಬೆಂಬಲಿಸಿದ್ದು ಇಲ್ಲಿಯೂ ಫಲಿತಾಂಶದ ಮೇಲೆ ಕುತೂಹಲವಿದೆ. ಬಳ್ಳಾರಿಯಲ್ಲೂ ಕಾಂಗ್ರೆಸ್ ಬಲದ ಎದುರು ರಾಮುಲು ಕೂಡ ತುರುಸಿನ ಸ್ಪರ್ಧೆ ಎದುರಿಸಿದ್ದಾರೆ. ಕಲ್ಯಾಣ ಕರ್ನಾಟಕದ ಐದರಲ್ಲಿ ಕಾಂಗ್ರೆಸ್ ಮುನ್ನಡೆ ಪಡೆಯುವ ಲೆಕ್ಕಾಚಾರ ಕಂಡು ಬರುತ್ತಿದೆ.
ಲೋಕಸಭೆ ಚುನಾವಣೆಯ ಕರ್ನಾಟಕದ ಮತಗಟ್ಟೆ ಸಮೀಕ್ಷೆ ಕುರಿತು ಲೈವ್ ಅಪ್ಡೇಟ್ಸ್ ಅನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲೂ ಕ್ಷಣ ಕ್ಷಣಕ್ಕೂ ಒದಗಿಸಲಾಗುತ್ತಿದ್ದು, ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಬಹುದು.
(ಗಮನಿಸಿ: ಚುನಾವಣೆ ಫಲಿತಾಂಶ ಎಕ್ಸಿಟ್ ಪೋಲ್ ಸಂಖ್ಯೆಗಳಿಗಿಂತ ಭಿನ್ನವಾಗಿ ಇರಬಹುದು)