logo
ಕನ್ನಡ ಸುದ್ದಿ  /  ಚುನಾವಣೆಗಳು  /  ಸಂಸತ್‌ ಪ್ರವೇಶಕ್ಕೆ ರಹದಾರಿಯಂತಿರುವ ಉತ್ತರ ಪ್ರದೇಶದಲ್ಲಿ ತ್ರಿಕೋನ ಪೈಪೋಟಿ; ಯುಪಿ ಚುನಾವಣಾ ಕಣದಲ್ಲಿ ಗೆಲ್ಲೋರ್ಯಾರು

ಸಂಸತ್‌ ಪ್ರವೇಶಕ್ಕೆ ರಹದಾರಿಯಂತಿರುವ ಉತ್ತರ ಪ್ರದೇಶದಲ್ಲಿ ತ್ರಿಕೋನ ಪೈಪೋಟಿ; ಯುಪಿ ಚುನಾವಣಾ ಕಣದಲ್ಲಿ ಗೆಲ್ಲೋರ್ಯಾರು

Jayaraj HT Kannada

Jun 01, 2024 08:25 AM IST

google News

ಸಂಸತ್‌ ಪ್ರವೇಶಕ್ಕೆ ರಹದಾರಿ ಉತ್ತರ ಪ್ರದೇಶ ಚುನಾವಣಾ ಕಣದಲ್ಲಿ ಗೆಲ್ಲೋರ್ಯಾರು?

    • Uttar Pradesh Lok Sabha election 2024: ಪ್ರತಿಬಾರಿಯ ಚುನಾವಣೆಯಲ್ಲೂ ಭಾರತದ ಗಮನ ಸೆಳೆಯುವ ರಾಜ್ಯ ಉತ್ತರ ಪ್ರದೇಶ. ಕಳೆದ ಬಾರಿಗಿಂತ ಈ ಬಾರಿ ಯುಪಿ ಚುನಾವಣಾ ಅಖಾಡ ಭಿನ್ನವಾಗಿದೆ. ಇಂಡಿಯಾ ಮೈತ್ರಿಕೂಟವು ಪ್ರಬಲ ಬಿಜೆಪಿಗೆ ಸವಾಲೆಸೆಯಲಿದ್ದು, ಬಿಎಸ್‌ಪಿ ಸ್ವತಂತ್ರ ಪ್ರಬಲ ಪಕ್ಷವಾಗಿದೆ. ರಾಜ್ಯದಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಹೀಗಿದೆ.
ಸಂಸತ್‌ ಪ್ರವೇಶಕ್ಕೆ ರಹದಾರಿ ಉತ್ತರ ಪ್ರದೇಶ ಚುನಾವಣಾ ಕಣದಲ್ಲಿ ಗೆಲ್ಲೋರ್ಯಾರು?
ಸಂಸತ್‌ ಪ್ರವೇಶಕ್ಕೆ ರಹದಾರಿ ಉತ್ತರ ಪ್ರದೇಶ ಚುನಾವಣಾ ಕಣದಲ್ಲಿ ಗೆಲ್ಲೋರ್ಯಾರು?

ಲೋಕಸಭಾ ಚುನಾವಣೆಯಲ್ಲಿ ದೇಶದ ಗಮನ ಸೆಳೆಯುವ ಪ್ರಮುಖ ರಾಜ್ಯ ಉತ್ತರ ಪ್ರದೇಶ. ಭಾರತದ ಸಂಸತ್ತಿಗೆ ಅತ್ಯಧಿಕ ಸಂಖ್ಯೆಯ ಸಂಸದರನ್ನು ಕಳುಹಿಸಿಕೊಡುವ ರಾಜ್ಯ ಎಂಬ ಹೆಗ್ಗಳಿಕೆ ಈ ರಾಜ್ಯದ್ದು. ಭಾರತದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿ ಒಟ್ಟು 80 ಲೋಕಸಭಾ ಸ್ಥಾನಗಳಿವೆ. ದೇಶದ ರಾಜಕಾರಣದಲ್ಲಿರುವ ಘಟಾನುಘಟಿ ನಾಯಕರು ಈ ರಾಜ್ಯದಲ್ಲಿ ಅದೃಷ್ಟ ಪರೀಕ್ಷೆಗಳಿದಿದ್ದಾರೆ. ದೆಹಲಿ ಗದ್ದುಗೆಗೇರಲು ರಹದಾರಿ ಎಂದೇ ಕರೆಸಿಕೊಳ್ಳುವ ಉತ್ತರ ಪ್ರದೇಶದಲ್ಲಿ ಈ ಬಾರಿ ಲೋಕಸಭಾ ಚುನಾವಣೆಯ ಕಾವು ಹೇಗಿದೆ? ಎಕ್ಸಿಟ್‌ ಪೋಲ್‌ಗೂ ಮುನ್ನ ರಾಜ್ಯದ ರಾಜಕೀಯ ಚಿತ್ರಣ ಹೇಗಿದೆ ಎಂಬುದನ್ನು ನೋಡೋಣ.

ಮೇ 31ರ ಗುರುವಾರ ಸಂಜೆ ವೇಳೆಗೆ ಲೋಕಸಭೆ ಚುನಾವಣೆಯ ಸುಮಾರು ಎರಡು ತಿಂಗಳ ಪ್ರಚಾರದ ಅಬ್ಬರಕ್ಕೆ ತೆರೆ ಬಿದ್ದಿದೆ. ಇದೀಗ ಇಂದು (ಜೂನ್ 1) ಏಳನೇ ಮತ್ತು ಅಂತಿಮ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇಂದು ಮತದಾನ ಪೂರ್ಣಗೊಂಡ ಬೆನ್ನಲ್ಲೇ ಪ್ರಕಟವಾಗುವ ಚುನಾವಣೋತ್ತರ ಸಮೀಕ್ಷೆ ಮೇಲೆ ದೇಶದ ಜನರ ಕುತೂಹಲ ನೆಟ್ಟಿದೆ.

ಕೊನೆಯ ಹಂತದಲ್ಲಿ ಉತ್ತರ ಪ್ರದೇಶದ 13 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಈ 13 ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸುತ್ತಿರುವ ವಾರಣಾಸಿಯೂ ಸೇರಿದೆ. ಈ ಹಂತದಲ್ಲಿ ಮಹಾರಾಜ್‌ಗಂಜ್, ಗೋರಖ್‌ಪುರ, ಕುಶಿನಗರ, ಡಿಯೋರಿಯಾ, ಬನ್ಸ್‌ಗಾಂವ್, ಘೋಸಿ, ಸೇಲಂಪುರ, ಬಲ್ಲಿಯಾ, ಗಾಜಿಪುರ, ಚಂದೌಲಿ, ವಾರಣಾಸಿ, ಮಿರ್ಜಾಪುರ ಮತ್ತು ರಾಬರ್ಟ್ಸ್‌ಗಂಜ್ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಈ ಲೋಕಸಭಾ ಸ್ಥಾನಗಳ ಜೊತೆಗೆ ಸೋನಭದ್ರ ಜಿಲ್ಲೆಯ ತೆರವಾಗಿರುವ ದುಡ್ಡಿ ವಿಧಾನಸಭಾ ಸ್ಥಾನಕ್ಕೂ ಉಪಚುನಾವಣೆಗೆ ಮತದಾನ ನಡೆಯಲಿದೆ.

ಪ್ರಮುಖ ಅಭ್ಯರ್ಥಿಗಳು

ಸಹಜವಾಗಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಮುಖ ಅಭ್ಯರ್ಥಿ. ವಾರಣಾಸಿಯಲ್ಲಿ ಕಾಂಗ್ರೆಸ್ ನಾಯಕ ಅಜಯ್ ರಾಯ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸಲಿದ್ದು, ಸತತ ಮೂರನೇ ಅವಧಿಗೆ ಭರ್ಜರಿ ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ. 2014 ಮತ್ತು 2019ರಲ್ಲಿ ವಾರಣಾಸಿ ಕ್ಷೇತ್ರದಿಂದ ಮೋದಿ ಭಾರಿ ಅಂತರದಿಂದ ಗೆದ್ದು ಪ್ರಧಾನಿ ಪಟ್ಟ ಅಲಂಕರಿಸಿದ್ದರು. ಈ ಹಿಂದೆ ಬಿಜೆಪಿ ನಾಯಕರಾಗಿದ್ದ ಅಜಯ್ ರಾಯ್, 2012ರಲ್ಲಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದರು.

ವಾರಣಾಸಿ ಜೊತೆಗೆ ಸಿಎಂ ಯೋಗಿ ಅವರ ಜಿಲ್ಲೆ ಗೋರಖ್‌ಪುರಕ್ಕೂ ಇಂದು ಚುನಾವಣೆ ನಡೆಯುತ್ತಿದೆ. ಈ ಕ್ಷೇತ್ರದಲ್ಲಿ ರವಿಕಿಶನ್ ಮತ್ತೆ ಕಣಕ್ಕಿಳಿದ್ದಾರೆ. ಮೋದಿ ಮತ್ತು ರವಿಕಿಶನ್ ಹೊರತಾಗಿ ಮಿರ್ಜಾಪುರದಿಂದ ಕಣಕ್ಕಿಳಿಯುತ್ತಿರುವ ಅಪ್ನಾ ದಳದ ಅಧ್ಯಕ್ಷೆ ಅನುಪ್ರಿಯಾ ಪಟೇಲ್ ಸ್ಟಾರ್‌ ಅಭ್ಯರ್ಥಿ.

ಈಗಾಗಲೇ ಕಾಂಗ್ರೆಸ್‌ನಿಂದ ರಾಹುಲ್‌ ಗಾಂಧಿ ಸ್ಪರ್ಧಿಸಿದ್ದ ರಾಯ್‌ಬರೇಲಿ, ಬಿಜೆಪಿಯಿಂದ ಸ್ಮೃತಿ ಇರಾನಿ ಕಣಕ್ಕಿಳಿದ ಅಮೇಥಿ ಸ್ಪರ್ಧಿಸಿದ ಕ್ಷೇತ್ರಗಳಿಗೆ ಮತದಾನ ಪೂರ್ಣಗೊಂಡಿದೆ. ಎರಡು ದಶಕಗಳಿಂದ ಬಿಜೆಪಿ ವಶದಲ್ಲಿರುವ ಲಕ್ನೋ ಕ್ಷೇತ್ರದಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಸ್ಪರ್ಧಿಸುತ್ತಿದ್ದು, ಎಸ್‌ಪಿಯ ರವಿದಾಸ್ ಮಹೋತ್ರಾ ಮತ್ತು ಬಿಎಸ್‌ಪಿಯ ಸರ್ವರ್ ಮಲಿಕ್ ಪೈಪೋಟಿ ನೀಡುತ್ತಿದ್ದಾರೆ. ಸುಲ್ತಾನ್‌ಪುರದಲ್ಲಿ ಬಿಜೆಪಿಯಿಂದ ಮನೇಕಾ ಗಾಂಧಿ ಅಭ್ಯರ್ಥಿಯಾಗಿದ್ದಾರೆ.

ಕಳೆದ ಬಾರಿಯ ಚುನಾವಣೆಯಲ್ಲಿ ಏನಾಗಿತ್ತು?

ಬಿಜೆಪಿಯ ಭದ್ರಕೋಟೆಯಾಗಿರುವ ಉತ್ತರಪ್ರದೇಶದಲ್ಲಿ ಬಿಜೆಪಿ 62 ಸೀಟು ಗೆಲ್ಲುವುದರೊಂದಿಗೆ ಎನ್‌ಡಿಎ 64 ಸ್ಥಾನಗಳಲ್ಲಿ ಗೆದ್ದಿತ್ತು. ಕಾಂಗ್ರೆಸ್‌ ಕೇವಲ 1 ಸ್ಥಾನ ಗೆಲ್ಲಲು ಸಾಧ್ಯವಾಗಿತ್ತು. ರಾಜ್ಯದ ಮತ್ತೊಂದು ಪ್ರಮುಖ ಪಕ್ಷ ಬಿಎಸ್‌ಪಿ ನೇತೃತ್ವದ ಮಹಾಘಟಬಂಧನ್‌ 10 ಕ್ಷೇತ್ರಗಳಲ್ಲಿ ಗೆದ್ದಿತ್ತು. ಪ್ರಧಾನಿ ಅಭ್ಯರ್ಥಿಯಾಗಿ ಅಮೇಥಿಯಿಂದ ಸ್ಪರ್ಧಿಸಿದ್ದ ರಾಹುಲ್‌ ಗಾಂಧಿ, ಸ್ಮೃತಿ ಇರಾನಿ ವಿರುದ್ಧ ಸೋತಿದ್ದರು. ಆದರೆ ಕೇರಳದ ವಯನಾಡ್‌ನಿಂದಲೂ ಸ್ಪರ್ಧಿಸಿದ್ದ ನೆಹರೂ ಕುಟುಂಬದ ಕುಡಿ, ಅಲ್ಲಿಂದ ಜಯ ಗಳಿಸಿ ತಮ್ಮ ಘನತೆ ಉಳಿಸಿಕೊಂಡರು.

ಈ ಬಾರಿ ಹೇಗಿದೆ ಚುನಾವಣಾ ರಂಗ?

ಈ ಬಾರಿ ಉತ್ತರ ಪ್ರದೇಶದಲ್ಲಿ ಎನ್‌ಡಿಎ ಮೈತ್ರಿಕೂಟ ಎಲ್ಲಾ 80 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಬಿಜೆಪಿಯಿಂದಲೇ 74 ಅಭ್ಯರ್ಥಿಗಳು ಕಣಕ್ಕಿಳಿದರೆ, ಉಳಿದಂತೆ ಅಪ್ನಾ ದಳ್, ಆರ್‌ಎಲ್‌ಡಿ ಮತ್ತು ಎಸ್‌ಬಿಎಸ್‌ಪಿ ಕಣಕ್ಕಿಳಿದಿದ್ದಾರೆ. ಅತ್ತ ಇಂಡಿಯಾ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ನಿಂದ 17 ಅಭ್ಯರ್ಥಿಗಳು ಕಣಕ್ಕಿಳಿದರೆ, ಆಲ್‌ ಇಂಡಿಯಾ ಟಿಎಂಸಿಇ ಪಕ್ಷದ ಒಬ್ಬರು ಕಣಕ್ಕಿಳಿದಿದ್ದಾರೆ. ಕಳೆದ ಬಾರಿ 37 ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ 5 ಸ್ಥಾನಗಳಲ್ಲಿ ಗೆದ್ದಿದ್ದ ಸಮಾಜವಾದಿ ಪಕ್ಷ ಈ ಬಾರಿ 62 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ. ಮಾಯಾವತಿ ನೇತೃತ್ವದ ಬಿಎಸ್‌ಪಿಯು ಸ್ವತಂತ್ರವಾಗಿ 79 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ.

ರಾಜ್ಯದಲ್ಲಿ ಅಖಿಲೇಶ್‌ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷ ಹಾಗೂ ಮಾಯಾವತಿ ನೇತೃತ್ವದ ಬಿಎಸ್‌ಪಿ ತನ್ನದೇ ಆದ ಮತ ಬ್ಯಾಂಕ್ ಹೊಂದಿದೆ. ಸ್ವತಂತ್ರವಾಗಿ ಸ್ಪರ್ಧಿಸಿದ ಬಲಿಷ್ಠ ಬಿಎಸ್‌ಪಿಯನ್ನು ಪಕ್ಕಕ್ಕಿಟ್ಟರೂ, ಮೈತ್ರಿಗೆ ಕೈಕಾರ ಹಾಕಿರುವ ಸಮಾಜವಾದಿ ಪಕ್ಷದ ಮುಂದೆ ರಾಷ್ಟ್ರೀಯ ಪಕ್ಷ ಎನಿಸಿಕೊಂಡ ಕಾಂಗ್ರೆಸ್‌ ತುಂಬಾ ಸಣ್ಣದು. ಇಂಡಿಯಾ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ ನಿಲ್ಲಿಸಿದ್ದು ಕೇವಲ 17 ಅಭ್ಯರ್ಥಿಗಳನ್ನು ಮಾತ್ರ. ಉಳಿದ 62 ಕ್ಷೇತ್ರಗಳಲ್ಲಿ ಅಖಿಲೇಶ್‌ ಯಾದವ್‌ಗೆ ಮೇಲುಗೈ ಸಾಧಿಸುವ ಭರವಸೆ ಇದೆ. ಇದು ಕಾಂಗ್ರೆಸ್‌ ಗೆಲುವಿನ ಆಶಾವಾದಕ್ಕೂ ಕಾರಣವಾಗಿದೆ.

ಉತ್ತರ ಪ್ರದೇಶ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಕಳೆದ ಎರಡು ಚುನಾವಣಾ ಅವಧಿಯಲ್ಲಿ ಯುಪಿಯಲ್ಲಿ ಯೋಗಿ ಮತ್ತು ಮೋದಿ ಹವಾ ಸದ್ದು ಮಾಡಿತ್ತು. ಅದು ವಿಧಾನಸಭಾ ಚುನಾವಣೆಯಲ್ಲೂ ಅಷ್ಟೆ. ಆದರೆ, ಈ ಬಾರಿ ಇದರೊಂದಿಗೆ ಹೊಸ ಹೊಸ ಚರ್ಚೆಗಳಿವೆ. ಮೈತ್ರಿಕೂಟ ಬಲವಾಗಿದೆ. ಬಿಜೆಪಿ ವಿರುದ್ಧವಾಗಿ ಧ್ವನಿಯೆತ್ತಲು ಇಂಡಿಯಾ ಮೈತ್ರಿಕೂಟಕ್ಕೆ ಹಲವು ವಿಷಯಗಳು ಸಿಕ್ಕಿವೆ.

ಮೋದಿ ಅಜಯ್‌ ರಾಯ್ ನಡುವೆ ನೇರ ಸ್ಪರ್ಧೆ

ಮೋದಿ ಅವರ ಪ್ರತಿಷ್ಠಿತ ಕ್ಷೇತ್ರ ವಾರಣಾಸಿಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಅಜಯ್ ರಾಯ್ ಅವರನ್ನು ಕಣಕ್ಕಿಳಿಸಿದೆ. ಕಳೆದ ಎರಡು ಚುನಾವಣೆಗಳಲ್ಲಿ ಮೋದಿ ವಿರುದ್ಧ ಸ್ಪರ್ಧಿಸಿ ಅಜಯ್‌ ಸೋತಿದ್ದರು. 2014 ಮತ್ತು 2019ರಲ್ಲಿ, ಕ್ರಮವಾಗಿ ನಾಲ್ಕು ಮತ್ತು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಆದರೆ, ಈ ಬಾರಿ ಪರಿಸ್ಥಿತಿ ಬದಲಾಗಿದೆ. 2014ರಲ್ಲಿ ಅಜಯ್ ರಾಯ್ ಅವರಲ್ಲದೆ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಸಮಾಜವಾದಿ ಪಕ್ಷದಿಂದ ಕೈಲಾಶ್ ಚೌರಾಸಿಯಾ ಕೂಡ ಕಣದಲ್ಲಿದ್ದರು. ಅಂಥಾ ಪರಿಸ್ಥಿತಿಯಲ್ಲಿ ಅಜಯ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಿತ್ತು. 2019ರಲ್ಲಿ ಎಸ್‌ಪಿಯ ಶಾಲಿನಿ ಯಾದವ್ ಕಣದಲ್ಲಿದ್ದರು. ಹೀಗಾಗಿ ಅಜಯ್ ಮೂರನೇ ಸ್ಥಾನ ಪಡೆಯಬೇಕಾಯ್ತು. ಆದರೆ ಈ ಬಾರಿ ಅಜಯ್ ರಾಯ್ ಅವರು ಪ್ರಧಾನಿ ಮೋದಿಯವರೊಂದಿಗೆ ನೇರ ಸ್ಪರ್ಧೆಯಲ್ಲಿದ್ದಾರೆ. ಹೀಗಾಗಿ ಮತ ವಿಭಜನೆ ಕಡಿಮೆಯಾಗಿ ಉಭಯ ನಾಯಕರಿಗೆ ಮತ ಹಂಚಿಕೆಯಾಗಲಿದೆ.

ಬಿಜೆಪಿಗೆ ಹೆಚ್ಚಿದ ಸವಾಲು

ಉತ್ತರ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ದೇಶದ ಒಟ್ಟು ಜನಸಂಖ್ಯೆಯ ಶೇ.20ರಷ್ಟನ್ನು ಹೊಂದಿರುವ ಬೃಹತ್‌ ರಾಜ್ಯದಲ್ಲಿ ಉದ್ಯೋಗಕ್ಕಾಗಿ ಯುವಕರು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. ಉದ್ಯೋಗ ಸೃಷ್ಟಿಯಲ್ಲಿ ಬಿಜೆಪಿ ವಿಫಲವಾಗಿರುವುದು ಯುವಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ಇದರೊಂದಿಗೆ ಅಗ್ನಿಪಥ್ ಯೋಜನೆ, ಸರ್ಕಾರಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಜನರು ರೋಸಿ ಹೋಗಿದ್ದಾರೆ. ಹೀಗಾಗಿ ಇಂಡಿಯಾ ಮೈತ್ರಿಕೂಟವು ಉತ್ತರ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನೇ ಪ್ರಮುಖ ಅಸ್ತ್ರವಾಗಿ ಪ್ರಯೋಗಿಸಿದೆ. ಖಾಲಿ ಇರುವ ಸರ್ಕಾರಿ ಉದ್ಯೋಗಗಳನ್ನು ಅಧಿಕಾರಕ್ಕೆ ಬಂದ ಕೂಡಲೇ ಭರ್ತಿ ಮಾಡುವುದಾಗಿ ಪ್ರನಾಳಿಕೆಯಲ್ಲಿ ಘೋಷಿಸಿದೆ. ಯುವ ಜನತೆಗೆ ಇದು ಒಂದು ಆಶಾವಾದ ಮೂಡಿಸಿದೆ.

ಮಹಿಳೆಯರ ಮನಗೆದ್ದ ಆ ಒಂದು ಲಕ್ಷ

ಟಕಾ ಟಕ್‌ ಟಕಾ ಟಕ್‌ ಎನ್ನುತ್ತಾ, ಪ್ರತಿ ತಿಂಗಳು ಕುಟುಂಬದ ಯಜಮಾನಿಯ ಖಾತೆಗೆ ಎಂಟೂವರೆ ಸಾವಿರ ರೂಪಾಯಿ ಹಾಕುವುದಾಗಿ ರಾಹುಲ್‌ ಗಾಂಧಿ ಘೋಷಿಸಿದ್ದಾರೆ. ವರ್ಷಕ್ಕೆ ಒಂದು ಲಕ್ಷ ರೂಪಾಯಿ ಬರುತ್ತದೆ ಎಂದು ಮಹಿಳೆಯರು ಆಸೆಯಿಂದಿದ್ದಾರೆ. ಉತ್ತರ ಪ್ರದೇಶ ಮಾತ್ರವಲ್ಲದೆ ದೇಶದ ಎಲ್ಲಾ ರಾಜ್ಯಗಳಲ್ಲೂ ಈ ಭರವಸೆಯೊಂದಿಗೆ ಮಹಿಳೆಯರ ಮತವನ್ನು ಇಂಡಿಯಾ ಮೈತ್ರಿಕೂಟ ಆಕರ್ಷಿಸಿದೆ.

ಯಾರಿಗೆ ಎಷ್ಟು ಸ್ಥಾನ ಸಿಗಲಿದೆ?

ಬಿಜೆಪಿ ನೇತೃತ್ವದ ಎನ್‌ಡಿಎ, ಕಾಂಗ್ರೆಸ್‌ ಹಾಗೂ ಸಮಾಜವಾದಿ ಪಕ್ಷವಿರುವ ಇಂಡಿಯಾ ಮೈತ್ರಿಕೂಟ ಮತ್ತು ಸ್ವತಂತ್ರವಾಗಿ ಸ್ಪರ್ಧಿಸುತ್ತಿರುವ ಬಹುಜನ ಸಮಾಜ ಪಾರ್ಟಿ ಉತ್ತರ ಪ್ರದೇಶದಲ್ಲಿ ಕಣದಲ್ಲಿರುವ ಮತ್ತು ಗೆಲ್ಲುವ ಪ್ರಮುಖ ಪಕ್ಷಗಳು. ಹೀಗಾಗಿ ಹಲವು ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವುದು ಖಚಿತ. ಮೈತ್ರಿಯೊಂದಿಗೆ ಕಾಂಗ್ರೆಸ್‌ ಪಕ್ಷವು ಆತ್ಮವಿಶ್ವಾಸದಿಂದ ಬೀಗುತ್ತಿದ್ದು, 80ರ ಪೈಕಿ ನಾವು 40ರಿಂದ 50ರಷ್ಟು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಇಂಡಿಯಾ ಮೈತ್ರಿಕೂಟದ ನಾಯಕರು ಹೇಳುತ್ತಿದ್ದಾರೆ. ಅತ್ತ ದೇಶದೆಲ್ಲೆಡೆ ಭಾರಿ ಸುದ್ದಿಯಲ್ಲಿರುವ ಚುನಾವಣಾ ಶಾಸ್ತ್ರಜ್ಞ ಪ್ರಶಾಂತ್ ಕಿಶೋರ್ ಅವರು, ಇಂಡಿಯಾ ಮೈತ್ರಿಕೂಟವು ಉತ್ತರ ಪ್ರದೇಶದಲ್ಲಿ 25ರಿಂದ 30ರಷ್ಟು ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಇಂದು ಬರಲಿರುವ ಎಕ್ಸಿಟ್‌ ಪೋಲ್‌ ಪ್ರಕಾರ, ಲೆಕ್ಕಾಚಾರ ಬಹುತೇಕ ಅಂತಿಮ ರೂಪ ಪಡೆದುಕೊಳ್ಳಲಿದೆ.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ