logo
ಕನ್ನಡ ಸುದ್ದಿ  /  ಚುನಾವಣೆಗಳು  /  Shimoga News: ಶಿವಮೊಗ್ಗಕ್ಕೆ ಪ್ರಧಾನಿ ಬಂದರೂ ಈಶ್ವರಪ್ಪ ಬರಲಿಲ್ಲ: ಮೋದಿಗೆ ತಟ್ಟಿದ ಬಿಜೆಪಿ ಬಂಡಾಯದ ಬಿಸಿ

Shimoga News: ಶಿವಮೊಗ್ಗಕ್ಕೆ ಪ್ರಧಾನಿ ಬಂದರೂ ಈಶ್ವರಪ್ಪ ಬರಲಿಲ್ಲ: ಮೋದಿಗೆ ತಟ್ಟಿದ ಬಿಜೆಪಿ ಬಂಡಾಯದ ಬಿಸಿ

Umesha Bhatta P H HT Kannada

Mar 18, 2024 03:23 PM IST

google News

ಶಿವಮೊಗ್ಗಕ್ಕೆ ಬಂದ ಪ್ರಧಾನಿ ಮೋದಿ, ಊರಲ್ಲಿದ್ದರೂ ಬಾರದ ಈಶ್ವರಪ್ಪ.

    • ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆ ಪ್ರಚಾರಕ್ಕೆಂದು ಶಿವಮೊಗ್ಗಕ್ಕೆ ಆಗಮಿಸಿದರು. ಆದರೆ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಆಗಮಿಸಲೇ ಇಲ್ಲ.
ಶಿವಮೊಗ್ಗಕ್ಕೆ ಬಂದ ಪ್ರಧಾನಿ ಮೋದಿ, ಊರಲ್ಲಿದ್ದರೂ ಬಾರದ ಈಶ್ವರಪ್ಪ.
ಶಿವಮೊಗ್ಗಕ್ಕೆ ಬಂದ ಪ್ರಧಾನಿ ಮೋದಿ, ಊರಲ್ಲಿದ್ದರೂ ಬಾರದ ಈಶ್ವರಪ್ಪ.

ಶಿವಮೊಗ್ಗ: ಲೋಕಸಭೆ ಚುನಾವಣೆಯಲ್ಲಿ ಹಾವೇರಿ- ಗದಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಮ್ಮ ಪುತ್ರ ಕಾಂತೇಶ್‌ಗೆ ಅವಕಾಶ ಕೊಡಲಿಲ್ಲ ಎಂದು ಆಕ್ರೋಶಗೊಂಡು ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಆಗಮಿಸಲೇ ಇಲ್ಲ. ಇದರಿಂದ ಲೋಕಸಭೆ ಚುನಾವಣೆ ಪ್ರಚಾರಕ್ಕೆಂದು ಮೂರು ದಿನದ ಅಂತರದಲ್ಲಿಯೇ ಕರ್ನಾಟಕಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದಲ್ಲಿ ಬಂಡಾಯದ ಬಿಸಿ ತಟ್ಟಿತು.

ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಾಹ್ನ 3ರ ಹೊತ್ತಿಗೆ ತೆಲಂಗಾಣದಿಂದ ವಿಶೇಷ ವಿಮಾನದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅವರನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಆರ್‌.ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಾವಣಗೆರೆ, ಚಿತ್ರದುರ್ಗ ಭಾಗದ ಬಿಜೆಪಿ ಮುಖಂಡರ ಸಹಿತ ಹಲವರು ಬರ ಮಾಡಿಕೊಂಡರು. ಈ ವೇಳೆ ಬಿಜೆಪಿಯ ಹಿರಿಯ ನಾಯಕರಾಗಿರುವ ಕೆ.ಎಸ್.ಈಶ್ವರಪ್ಪ ಅವರ ಗೈರು ಹಾಜರಿ ಎದ್ದುಕಂಡಿತು. ಮೋದಿ ಅವರು ಬಂಡಾಯದ ಬಿಸಿ ನಡುವೆಯೇ ವೇದಿಕೆಗೆ ಆಗಮಿಸಿದರು.

ಎರಡು ದಿನದಿಂದ ಈಶ್ವರಪ್ಪ ಅವರ ಮನ ಒಲಿಸುವ ಕೆಲಸ ಬಿಜೆಪಿ ಹಿರಿಯ ನಾಯಕರಿಂದ ಆಗಿತ್ತು. ಆರ್‌.ಆಶೋಕ್‌ ಅವರೂ ಮನ ಒಲಿಸುವುದಾಗಿ ಹೇಳಿದ್ದರು. ಆದರೆ ಯಾವುದೇ ಕಾರಣಕ್ಕೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಈಶ್ವರಪ್ಪ ಸಂದೇಶ ರವಾನಿಸಿದ್ದರಿಂದ ಅವರು ಪ್ರಧಾನಿ ಕಾರ್ಯಕ್ರಮಕ್ಕೆ ಬರುವುದಿಲ್ಲ ಎನ್ನುವುದು ಖಚಿತವಾಯಿತು. ಕೊನೆಗೆ ಅವರ ಹೆಸರನ್ನು ಕೈ ಬಿಡಲಾಯಿತು. ಈಶ್ವರಪ್ಪ ಅವರು ವೇದಿಕೆಯಲ್ಲಿ ಇರುವ ಬಗ್ಗೆ ನಿರ್ಧರಿಸಲಾಗಿತ್ತು. ಕೊನೆ ಕ್ಷಣದಲ್ಲಿ ಅವರ ಹೆಸರು ಪಟ್ಟಿಯಿಂದ ಬಿಡಲಾಯಿತು ಎಂದು ಮುಖಂಡರು ತಿಳಿಸಿದರು.

ಈಶ್ವರಪ್ಪ ಅವರು ಈಗಾಗಲೇ ಬೆಂಬಲಿಗರ ಸಭೆ ನಡೆಸಿ ಶಿವಮೊಗ್ಗ ಕ್ಷೇತ್ರದಿಂದಲೇ ಕಣಕ್ಕೆ ಇಳಿಯುವುದಾಗಿ ಎರಡು ದಿನದ ಹಿಂದೆ ಘೋಷಿಸಿದ್ದರು. ಯಾವುದೇ ಕಾರಣಕ್ಕೆ ತಮ್ಮ ನಿರ್ಧಾರ ಬದಲು ಮಾಡುವುದಿಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ದ ಹರಿ ಹಾಹಾಯ್ದಿದ್ದರು.

ಭಾರೀ ಜನಸ್ತೋಮ

ಈ ನಡುವೆ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲಿರುವ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು- ಉಡುಪಿ ಅಭ್ಯರ್ಥಿಗಳ ಪರ ಪ್ರಚಾರವನ್ನು ಮೋದಿ ಕೈಗೊಂಡರು. ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಬಿಜೆಪಿ ಅಭ್ಯರ್ಥಿ ಮತ ಯಾಚಿಸಿದರು. ನಾಲ್ಕೈದು ಜಿಲ್ಲೆಗಳಿಂದ ಸಹಸ್ರಾರು ಬಿಜೆಪಿ ಕಾರ್ಯಕರ್ತರು, ಪ್ರಮುಖರು ಆಗಮಿಸಿದ್ದರು. ಶಿವಮೊಗ್ಗ, ಉಡುಪಿ- ಚಿಕ್ಕಮಗಳೂರು, ದಾವಣಗೆರೆ ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಪರವಾಗಿ ಪ್ರಚಾರವನ್ನು ಮೋದಿ ನಡೆಸಿದರು.

ಪ್ರ ಧಾನಿ ಮೋದಿ ಶಿವಮೊಗ್ಗ ನಗರಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸಿ ಸುಮಾರು 14 ಕಿ.ಮೀ ದೂರ ಎಸ್​ಪಿಜಿ ಭದ್ರತೆಯಲ್ಲಿ ಕಾರಿನಲ್ಲಿ ಸಂಚಾರಿಸಿದರು. ಇದರಿಂದಾಗಿ ವಿಮಾನ‌ ನಿಲ್ದಾಣದ ಎನ್.ಆರ್.ಪುರ ರಸ್ತೆಯಿಂದ ಶಿವಮೊಗ್ಗದ ಬಿ.ಹೆಚ್.ರಸ್ತೆ, ನೆಹರು ರಸ್ತೆ, ಬೈಪಾಸ್ ರಸ್ತೆ ಸರ್.ಎಂ.ವಿಶ್ವೇಶ್ವರಯ್ಯ ರಸ್ತೆ, ಸಂಗೊಳ್ಳಿ ರಾಯಣ್ಣ ರಸ್ತೆ ಒಳಗೊಂಡು ಹಲವು ಕಡೆ ಮೂರು ಗಂಟೆ ಕಾಲ ಸಂಚಾರ ಬಂದ್‌ ಆಗಿತ್ತು. ಇದು ಪ್ರಮುಖ ರಸ್ತೆಯಾಗಿದ್ದರಿಂದ ಜನ ತೊಂದರ ಅನುಭವಿಸಿದರು. ಈ ಮಾರ್ಗದಲ್ಲಿ ಭಾರೀ ಭದ್ರತೆ ಹಾಕಲಾಗಿತ್ತು.

ಐದು ವರ್ಷದ ಹಿಂದೆ ಚುನಾವಣೆ ಪ್ರಚಾರ ನಡೆಸಿದ್ದ ಮೋದಿ ಕಳೆದ ವರ್ಷ ವಿಮಾನ ನಿಲ್ದಾಣ ಉದ್ಘಾಟನೆಗೆ ಶಿವಮೊಗ್ಗಕ್ಕೆ ಬಂದಿದ್ದರು. ನಂತರ ವಿಧಾನಸಭೆ ಚುನಾವಣೆ ವೇಳೆಯೂ ಶಿವಮೊಗ್ಗದಲ್ಲಿ ಪ್ರಚಾರ ನಡೆಸಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ