logo
ಕನ್ನಡ ಸುದ್ದಿ  /  ಕರ್ನಾಟಕ  /  Shivamogga Politics: ಈಶ್ವರಪ್ಪ ಪುತ್ರ ಕಾಂತೇಶನಿಗೆ ಸಿಗಲಿಲ್ಲ ಟಿಕೆಟ್, ಬಿಜೆಪಿ ನಾಯಕರ ಲೆಕ್ಕಾಚಾರಗಳ ಒಳಸುಳಿಗಳಿವು

Shivamogga Politics: ಈಶ್ವರಪ್ಪ ಪುತ್ರ ಕಾಂತೇಶನಿಗೆ ಸಿಗಲಿಲ್ಲ ಟಿಕೆಟ್, ಬಿಜೆಪಿ ನಾಯಕರ ಲೆಕ್ಕಾಚಾರಗಳ ಒಳಸುಳಿಗಳಿವು

D M Ghanashyam HT Kannada

Jan 05, 2024 06:15 AM IST

google News

ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ

    • KS Eshwarappa: ಶಿವಮೊಗ್ಗ ವಿಧಾನಸಭಾ ಕ್ಷೇತ್ರದ (Shivmogga Assembly Constituency) ಬಿಜೆಪಿ ಟಿಕೆಟ್ ಕೊನೆಗೂ ಈಶ್ವರಪ್ಪ ಪುತ್ರ ಕಾಂತೇಶ ಅವರಿಗೆ ದಕ್ಕಿಲ್ಲ. ಈ ಬೆಳವಣಿಗೆಯ ಹಿಂದೆ ಸಾಕಷ್ಟು ಅಂಶಗಳು ಕೆಲಸ ಮಾಡಿವೆ.
ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ
ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ

Karnataka Assembly Elections 2023: ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು (ಏ 20) ಕೊನೆಯ ದಿನವಾಗಿದ್ದು, ನಿನ್ನೆ (ಏ 19) ರಾತ್ರಿ ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ಪಕ್ಷಗಳು ಅಂತಿಮ ಪಟ್ಟಿ ಪ್ರಕಟಿಸಿವೆ. ಕೊನೆಯ ಕ್ಷಣದವರೆಗೂ ಬಿಜೆಪಿ ಶಿವಮೊಗ್ಗ ಹಾಗೂ ಮಾನ್ವಿ ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಬಾಕಿ ಉಳಿಸಿಕೊಂಡಿತ್ತು. ಕಾಂಗ್ರೆಸ್ ಶಿಗ್ಗಾಂವಿ, ಮುಳಬಾಗಲು, ಕೆ.ಆರ್.ಪುರ, ಪುಲಕೇಶಿನಗರ ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿತ್ತು. ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಯ ಹಿರಿಯ ನಾಯಕ ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ ಅವರ ಮಗ ಕೆ.ಇ.ಕಾಂತೇಶ ಅವರಿಗೆ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಬಿಜೆಪಿ ಚನ್ನಬಸಪ್ಪ ಅವರನ್ನು ಕಣಕ್ಕಿಳಿಸಲು ನಿರ್ಧರಿಸುವ ಮೂಲಕ ಅಚ್ಚರಿಯ ನಡೆಗೆ ಮುಂದಾಗಿದೆ. ಇದರ ಲೆಕ್ಕಾಚಾರಗಳು ಏನಿರಬಹುದು ಎಂಬ ಬಗ್ಗೆಯೂ ಕರ್ನಾಟಕದಲ್ಲಿ ಹಲವು ವಿಶ್ಲೇಷಣೆಗಳು ಚಾಲ್ತಿಗೆ ಬಂದಿವೆ. ಮಾನ್ವಿ ಕ್ಷೇತ್ರದಲ್ಲಿ ಬಿ.ವಿ.ನಾಯಕ್ ಅವರಿಗೆ ಬಿಜೆಪಿ ಅವಕಾಶ ನೀಡಿದೆ.

ಶಿವಮೊಗ್ಗ ಶಾಸಕ ಕೆ.ಎಸ್.ಈಶ್ವರಪ್ಪ ಅವರು 'ನನ್ನ ಹೆಸರನ್ನು ಯಾವುದೇ ಕ್ಷೇತ್ರಕ್ಕೆ ಪರಿಗಣಿಸಬಾರದು, ನಾನು ಚುನಾವಣಾ ರಾಜಕೀಯದಿಂದ ನಿವೃತ್ತನಾಗಲು ಬಯಸಿದ್ದೇನೆ' ಎಂದು ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿದ್ದರು. ಈ ಪತ್ರದ ಹಿಂದೆ ಮಗನಿಗೆ ಟಿಕೆಟ್ ಕೊಡಿಸುವ ಉದ್ದೇಶವಿದೆ ಎಂದೇ ವ್ಯಾಖ್ಯಾನಿಸಲಾಗಿತ್ತು. ನಿನ್ನೆ (ಏ 19) ರಾತ್ರಿ ಪ್ರಕಟವಾಗಿರುವ ಪಟ್ಟಿಯಲ್ಲಿ ಈಶ್ವರಪ್ಪ ಪುತ್ರನಿಗೆ ಅವಕಾಶ ಸಿಗದಿರುವುದು ಅಚ್ಚರಿ ಉಂಟು ಮಾಡಿದೆ.

ಶಿವಮೊಗ್ಗ ಕ್ಷೇತ್ರದಿಂದಲೇ ಟಿಕೆಟ್ ಬಯಸಿದ್ದ ಮತ್ತೋರ್ವ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಬಿಜೆಪಿಯಿಂದ ದೂರ ಸರಿದಿದ್ದಾರೆ. ಜೆಡಿಎಸ್‌ಗೆ ಸೇರ್ಪಡೆಯಾಗಿರುವ ಅವರು ಅದೇ ಪಕ್ಷದಿಂದ ಶಿವಮೊಗ್ಗ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ.

ಬಿಜೆಪಿ ಲೆಕ್ಕಾಚಾರಗಳೇನು?

ತಮಗೆ ಈ ಬಾರಿ ಟಿಕೆಟ್ ನಿರಾಕರಿಸಬಹುದು ಎಂಬ ಸಂಗತಿ ಬಹುಹಿಂದೆಯೇ ಕೆ.ಎಸ್.ಈಶ್ವರಪ್ಪ ಅವರಿಗೆ ಅರ್ಥವಾಗಿತ್ತು. ತಳಮಟ್ಟದಿಂದ ಪಕ್ಷ ಸಂಘಟಿಸಿರುವ ಅವರಿಗೆ ರಾಜ್ಯದ ಹಲವೆಡೆ ಕಾರ್ಯಕರ್ತರೊಂದಿಗೆ ಉತ್ತಮ ಒಡನಾಟವಿದೆ. ಜನರ ನಾಡಿಮಿಡಿತದೊಂದಿಗೆ ಪಕ್ಷದ ಹಿರಿಯ ನಾಯಕರ ಚಿಂತನೆ ಹೇಗಿರಬಹುದು ಎಂದು ವಿಶ್ಲೇಷಿಸುವ ಸಾಮರ್ಥ್ಯವೂ ಇದೆ. ಶಿವಮೊಗ್ಗವನ್ನು ಬಿಜೆಪಿಯ ಭದ್ರಕೋಟೆಯಾಗಿ ರೂಪಿಸಲು ಈಶ್ವರಪ್ಪ ಸಾಕಷ್ಟು ಶ್ರಮಪಟ್ಟಿದ್ದಾರೆ. ಈ ಬಾರಿ ಈಶ್ವರಪ್ಪ ಮತ್ತು ಅವರ ಕುಟುಂಬಕ್ಕೆ ಟಿಕೆಟ್ ನಿರಾಕರಿಸಲು ಇರಬಹುದಾದ ಕಾರಣಗಳ ಬಗ್ಗೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಮಾತುಗಳಿವು.

1) ಹರ್ಷ ಹತ್ಯೆ: ಬಜರಂಗದಳದ ಕಾರ್ಯಕರ್ತ ಹರ್ಷ (ಹರ್ಷ ಹಿಂದೂ) ಅವರ ಕೊಲೆ ಫೆಬ್ರುವರಿ 20, 2022ರಂದು ನಡೆದಿತ್ತು. ರಾಷ್ಟ್ರೀಯ ತನಿಖಾ ದಳ (NIA) ಈ ಪ್ರಕರಣದ ಕೈಗೆತ್ತಿಕೊಂಡಿತ್ತು. ಹಿಜಾಬ್‌ ವಿವಾದದ ಬಿಸಿಯಲ್ಲಿ ನಡೆದಿದ್ದ ಈ ಹತ್ಯೆಯ ನಂತರ ಬಿಜೆಪಿ ಕಾರ್ಯಕರ್ತರಲ್ಲಿ ಈಶ್ವರಪ್ಪ ಅವರ ಬಗೆಗಿನ ಭಾವನೆ ಬದಲಾಗಿತ್ತು.

2) ಸಾವರ್ಕರ್ ವಿವಾದ: ಕಳೆದ ಆಗಸ್ಟ್ ತಿಂಗಳಲ್ಲಿ ಶಿವಮೊಗ್ಗದ ಸಿಟಿ ಸೆಂಟರ್ ಮಾಲ್‌ನಲ್ಲಿ ನಡೆದಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮಾರಂಭದಲ್ಲಿ ಸಾವರ್ಕರ್ ಭಾವಚಿತ್ರ ಪ್ರದರ್ಶಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ನಂತರ ನಡೆದ ಬೆಳವಣಿಗೆಯಲ್ಲಿ ಅಮೀರ್ ಅಹಮದ್ ಸರ್ಕಲ್‌ನಲ್ಲಿ ಸಾವರ್ಕರ್ ಪೋಸ್ಟರ್ ಕಾಣಿಸಿಕೊಂಡಿದ್ದನ್ನು ವಿರೋಧಿಸಿ ಪ್ರತಿಭಟನೆಗಳು ನಡೆದವು. ಕೋಮು ಗಲಭೆ, ಹಿಂಸಾಚಾರಗಳಿಗೂ ಶಿವಮೊಗ್ಗ ಸಾಕ್ಷಿಯಾಯಿತು. ಈ ಸಂದರ್ಭದಲ್ಲಿ ಈಶ್ವರಪ್ಪ ಶಾಂತಿ ಕಾಪಾಡಲು ಯತ್ನಿಸಿದ ರೀತಿಯ ಬಗ್ಗೆಯೂ ಆಕ್ಷೇಪಗಳು ಕೇಳಿಬಂದಿದ್ದವು.

3) ಸಾಲುಸಾಲು ಬಂದ್: ಕೊವಿಡ್ ಹೊಡೆತದಿಂದ ಆಗಷ್ಟೇ ಚೇತರಿಸಿಕೊಳ್ಳುತ್ತಿದ್ದ ಶಿವಮೊಗ್ಗ ನಗರದಲ್ಲಿ ಕೋಮು ಸೌಹಾರ್ದ ಕದಡಿದ್ದು ವ್ಯಾಪಾರ ವಹಿವಾಟಿಗೆ ಧಕ್ಕೆಯಾಯಿತು. ಹಲವು ಬಂದ್‌ಗಳು ನಡೆದವು. ಅಂದು ದುಡಿದು ಅಂದೇ ತಿನ್ನುವವರಿಗೆ ಇದು ಬಿಸಿತುಪ್ಪವಾಯಿತು. ಈಶ್ವರಪ್ಪ ಸಮರ್ಪಕವಾಗಿ ಪರಿಸ್ಥಿತಿ ನಿರ್ವಹಿಸಿದ್ದರೆ ಪರಿಸ್ಥಿತಿ ಇಷ್ಟು ಹದಗೆಡುತ್ತಿರಲಿಲ್ಲ ಎಂಬ ಭಾವನೆ ಈ ವರ್ಗದಲ್ಲಿ ಬಲಿಯಿತು.

4) ದೂರವಾದ ಆಯನೂರು: ಬಿಜೆಪಿ ಟಿಕೆಟ್ ಬಯಸಿದ್ದ ಮತ್ತೋರ್ವ ಪ್ರಮುಖ ನಾಯಕ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ತಮಗೆ ಟಿಕೆಟ್ ಸಿಗುವುದಿಲ್ಲ ಎಂದು ದೃಢಪಟ್ಟ ನಂತರ ಈಶ್ವರಪ್ಪ ವಿರುದ್ಧ ಹರಿಹಾಯ್ದರು. 'ಕೆಲವರ ಬಾಯಿಗೆ ಹೊಲಿಕೆ ಬೀಳಬೇಕಿದೆ. ಸಂಘರ್ಷದ ವಾತಾವರಣವಿದ್ದಾಗ ಶಾಂತಿ ಕಾಪಾಡಲು ಶ್ರಮಿಸಬೇಕು. ಅದುಬಿಟ್ಟು ವೈಯಕ್ತಿಕ ಸ್ವಾರ್ಥಕ್ಕಾಗಿ ಕೋಮು ಸೌಹಾರ್ದ ಕದಡುವಂತೆ ದ್ವೇಷದ ಪ್ರಚಾರ ಮಾಡಿದರು' ಎಂದು ಅವರು ಪರೋಕ್ಷವಾಗಿ ಈಶ್ವರಪ್ಪ ವಿರುದ್ಧ ಹರಿಹಾಯ್ದಿದ್ದರು. ಇದು ಹಳೆಯ ಘಟನೆಗಳನ್ನು ಎಲ್ಲರೂ ಮೆಲುಕು ಹಾಕುವಂತೆ ಮಾಡಿತ್ತು.

5) ಭ್ರಷ್ಟಾಚಾರದ ಆರೋಪ: ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತಮ್ಮನ್ನು ಬಿಜೆಪಿ ಕಾರ್ಯಕರ್ತ ಎಂದು ಕರೆದುಕೊಂಡಿದ್ದ ಅವರು ಈಶ್ವರಪ್ಪ ಅವರ ಕಮಿಷನ್ ಹಾವಳಿಯಿಂದ ನಾನು ಸಾಲಗಾರನಾಗಿದ್ದೇನೆ. ಮಾಡಿರುವ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲು ಸತಾಯಿಸುತ್ತಿದ್ದಾರೆ, ಕಮಿಷನ್ ಕೇಳುತ್ತಿದ್ದಾರೆ ಎಂದು ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖಿಸಿದ್ದರು. ಈ ಘಟನೆಯ ನಂತರ ಈಶ್ವರಪ್ಪ ಅವರು ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು. ಈ ಘಟನೆಯನ್ನೇ ಆಧಾರವಾಗಿ ಇರಿಸಿಕೊಂಡು ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿತ್ತು. ಈಶ್ವರಪ್ಪ ಅವರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂಬ ಭಾವನೆ ಎಲ್ಲೆಡೆ ಮೂಡಿತು. ಈಶ್ವರಪ್ಪ ಅವರಿಗೆ ಮುಂದಿನ ಬಾರಿ ಟಿಕೆಟ್ ನಿರಾಕರಿಸಬಹುದು ಎಂಬ ಮಾತುಗಳ ಆಗಿನಿಂದಲೇ ಕೇಳಿಬರಲು ಆರಂಭವಾಗಿತ್ತು. ಈಶ್ವರಪ್ಪ ಅವರ ಪುತ್ರನಿಗೆ ಟಿಕೆಟ್ ನಿರಾಕರಣೆಯ ಹಿಂದೆ ಈ ಅಂಶವೂ ಕೆಲಸ ಮಾಡಿರಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Yediyurappa Interview: ಬಿಜೆಪಿ ನಾಯಕರು ಹಿಜಾಬ್, ಹಲಾಲ್ ವಿಚಾರಗಳನ್ನು ಬೆಂಬಲಿಸುವುದು ಸರಿಯಲ್ಲ; ಬಿಎಸ್ ಯಡಿಯೂರಪ್ಪ ವಿಶೇಷ ಸಂದರ್ಶನ

ಮೇ 10ಕ್ಕೆ ಕರ್ನಾಟಕದಲ್ಲಿ ಮತದಾನ

ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಚುನಾವಣಾ ಆಯೋಗವು ಮಾರ್ಚ್ 29ರಂದು ಘೋಷಿಸಿತ್ತು. ಇಂದು (ಏ 20) ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಏ 21ರಂದು ನಾಮಪತ್ರ ಪರಿಶೀಲನೆ, 24 ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಮೇ 10ಕ್ಕೆ ಮತದಾನ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ಕರ್ನಾಟಕದಲ್ಲಿ ಹಾಲಿ ಅಸ್ತಿತ್ವದಲ್ಲಿರುವ 15ನೇ ವಿಧಾನಸಭೆಯ ಅವಧಿ ಮೇ 23ಕ್ಕೆ ಕೊನೆಯಾಗಲಿದೆ. ಪ್ರಸ್ತುತ ಬಿಜೆಪಿ 119, ಕಾಂಗ್ರೆಸ್ 75, ಜೆಡಿಎಸ್‌ 28 ಶಾಸಕ ಬಲ ಹೊಂದಿವೆ. ಬಿಜೆಪಿಯ ಉಮೇಶ್ ಕತ್ತಿ ಹಾಗೂ ಆನಂದ್ ಮಾಮನಿ ನಿಧನರಾದ ಹಿನ್ನೆಲೆಯಲ್ಲಿ 2 ಸ್ಥಾನಗಳು ಖಾಲಿಯಿವೆ. ಈ ಸ್ಥಾನಗಳಿಗೆ ಉಪ ಚುನಾವಣೆ ನಡೆದಿರಲಿಲ್ಲ.

ಕರ್ನಾಟಕದಲ್ಲಿ ಈ ಬಾರಿ 5.24 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ. ಈ ಪೈಕಿ 2.63 ಕೋಟಿ ಪುರುಷರು ಮತ್ತು 2.60 ಕೋಟಿ ಮಹಿಳೆಯರು. 100 ವರ್ಷ ದಾಟಿರುವ 16,976 ಮತದಾರರಿದ್ದರೆ, 18ರಿಂದ 19 ವರ್ಷದ ಯುವ ಮತದಾರರ ಸಂಖ್ಯೆ 9.58 ಲಕ್ಷ. 80 ವರ್ಷ ದಾಟಿದವರ ಸಂಖ್ಯೆಯೂ (12.15 ಲಕ್ಷ) ಗಣನೀಯ ಪ್ರಮಾಣದಲ್ಲಿದೆ.

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಚುನಾವಣಾ ಆಯೋಗವು ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಪ್ರತಿ ಅಭ್ಯರ್ಥಿಗೆ 40 ಲಕ್ಷ ರೂಪಾಯಿ ವೆಚ್ಚ ಮಿತಿ ಘೋಷಿಸಲಾಗಿದೆ. ಚುನಾವಣಾ ಕರ್ತವ್ಯಕ್ಕಾಗಿ 3.51 ಲಕ್ಷ ಸಿಬ್ಬಂದಿ ಶ್ರಮಿಸಲಿದ್ದಾರೆ. ವೆಚ್ಚದ ಪರಿಶೀಲನೆಗಾಗಿ 234 ವೆಚ್ಚ ವೀಕ್ಷಕರನ್ನು ಗುರುತಿಸಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ