logo
ಕನ್ನಡ ಸುದ್ದಿ  /  ಚುನಾವಣೆಗಳು  /  ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮುನ್ನಡೆ ಎಂದ ಎಕ್ಸಿಟ್‌ ಪೋಲ್; ಟಿಎಂಸಿ ಹಿನ್ನಡೆಗೆ ಕಾರಣವಾಯ್ತಾ ಸಂದೇಶ್‌ಖಾಲಿ ಕೇಸ್?

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮುನ್ನಡೆ ಎಂದ ಎಕ್ಸಿಟ್‌ ಪೋಲ್; ಟಿಎಂಸಿ ಹಿನ್ನಡೆಗೆ ಕಾರಣವಾಯ್ತಾ ಸಂದೇಶ್‌ಖಾಲಿ ಕೇಸ್?

Jayaraj HT Kannada

Jun 01, 2024 09:35 PM IST

google News

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮುನ್ನಡೆ ಎಂದ ಎಕ್ಸಿಟ್‌ ಪೋಲ್; ಟಿಎಂಸಿ ಹಿನ್ನಡೆಗೆ ಕಾರಣವೇನು?

    • ಲೋಕಸಭಾ ಚುನಾವಣೆ 2024ರ ಎಕ್ಸಿಟ್‌ ಪೋಲ್‌ ಫಲಿತಾಂಶದ ಪ್ರಕಾರ, ದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಅತ್ತ ಟಿಎಂಸಿ ಭದ್ರಕೋಟೆ ಪಶ್ಚಿಮ ಬಂಗಾಳದಲ್ಲೂ ಬಿಜೆಪಿ ತನ್ನ ಸ್ಥಾನ ಹೆಚ್ಚಿಸಿ ಮುನ್ನಡೆ ಸಾಧಿಸಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಇದಕ್ಕೆ ಕಾರಣಗಳೇನು ಎಂಬುದನ್ನು ನೋಡೋಣ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮುನ್ನಡೆ ಎಂದ ಎಕ್ಸಿಟ್‌ ಪೋಲ್; ಟಿಎಂಸಿ ಹಿನ್ನಡೆಗೆ ಕಾರಣವೇನು?
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮುನ್ನಡೆ ಎಂದ ಎಕ್ಸಿಟ್‌ ಪೋಲ್; ಟಿಎಂಸಿ ಹಿನ್ನಡೆಗೆ ಕಾರಣವೇನು?

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಭದ್ರಕೋಟೆ ಪಶ್ಚಿಮ ಬಂಗಾಳದಲ್ಲಿ ನೆಲೆಯೂರಲು ಕಳೆದೊಂದು ದಶಕದಿಂದಲೂ ಬಿಜೆಪಿ ಭಾರಿ ಪ್ರಯತ್ನ ನಡೆಸುತ್ತಿದೆ. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಚ್ಚರಿಯ ರೀತಿಯಲ್ಲಿ 18 ಸ್ಥಾನಗಳಲ್ಲಿ ಗೆದ್ದಿತ್ತು. ಒಟ್ಟು 42 ಸಂಸದರನ್ನು ಸಂಸತ್ತಿಗೆ ಕಳುಹಿಸುವ ಪಶ್ಚಿಮ ಬಂಗಾಳದಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಾಗದಿದ್ದರೂ, ಟಿಎಂಸಿಗೆ ಠಕ್ಕರ್‌ ಕೊಡುವಲ್ಲಿ ಮೋದಿ ಹವಾ ಯಶಸ್ವಿಯಾಗಿತ್ತು. 2014ರಲ್ಲಿ ಕೇವಲ 2 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ, ಈ ಬಾರಿಯ ಚುನಾವಣಾ ಫಲಿತಾಂಶದಲ್ಲಿ ಇನ್ನೂ ಗಮನಾರ್ಹ ಪ್ರದರ್ಶನ ನೀಡಲಿದೆ ಎಂದು ಎಕ್ಸಿಟ್‌ ಪೋಲ್‌ ಫಲಿತಾಂಶಗಳು ತಿಳಿಸಿವೆ.

ಪಶ್ಚಿಮ ಬಂಗಾಳ ರಾಜ್ಯದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾಗಲಿದೆ ಎಂಬುದು ಚುನಾವಣೋತ್ತರ ಸಮೀಕ್ಷೆಗಳು ಹೇಳಿದ ವರದಿಯ ಸಾರಾಂಶ. ನಾಲ್ಕು ಎಕ್ಸಿಟ್ ಪೋಲ್‌ ಫಲಿತಾಂಶಗಳ ಪ್ರಕಾರ, ಬಂಗಾಳದಲ್ಲಿ ಬಿಜೆಪಿ ಈಗ ಅತಿ ದೊಡ್ಡ ಪಕ್ಷವಾಗಲಿದೆ ಎಂದು ಹೇಳಿದೆ.

ಜನ್ ಕಿ ಬಾತ್‌ನ ಸಮೀಕ್ಷೆಯ ಪ್ರಕಾರ ಬಿಜೆಪಿಯು 21 ರಿಂದ 26 ಸ್ಥಾನಗಳಲ್ಲಿ ಗೆದ್ದರೆ, ಟಿಎಂಸಿ ಕೇವಲ 16-18 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ. ಇಂಡಿಯಾ ನ್ಯೂಸ್-ಡಿ-ಡೈನಾಮಿಕ್ಸ್‌ ಸಮೀಕ್ಷೆ ಪ್ರಕಾರ, ಬಿಜೆಪಿಯು 21 ಸ್ಥಾನ ಗೆದ್ದರೆ, ಟಿಎಂಸಿ 19 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಲಿದೆ. ರಿಪಬ್ಲಿಕ್ ಭಾರತ್-ಮ್ಯಾಟ್ರಿಜ್ ಪ್ರಕಾರ ಬಿಜೆಪಿ 21ರಿಂದ 25 ಸ್ಥಾನ ಗೆದ್ದರೆ, ಮಮತಾ ಪಕ್ಷವು 16ರಿಂದ 20 ಸ್ಥಾನಗಳಿಗೆ ಕುಸಿಯಲಿದೆ ಎಂದು ಹೇಳಿದೆ. P-MARQ ಎಕ್ಸಿಟ್ ಪೋಲ್ ಫಲಿತಾಂಶದ ಪ್ರಕಾರ, ಬಿಜೆಪಿ 22 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ಟಿಎಂಸಿ 20 ಸ್ಥಾನಗಳಲ್ಲಿ ಗೆಲ್ಲಲಿದೆ. ಕಾಂಗ್ರೆಸ್‌ ಸೇರಿದಂತೆ ಇತರ ಪಕ್ಷಗಳು ಖಾತೆಯನ್ನೇ ತೆರೆಯಲ್ಲ ಎಂಬುದು ಮತಗಟ್ಟೆ ಸಮೀಕ್ಷೆಗಳು ಬಹಿರಂಗಪಡಿಸಿದ ಅಂಶ. ಇಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ 22 ಕ್ಷೇತ್ರಗಳಲ್ಲಿ ಗೆದ್ದಿತ್ತು ಎಂಬುದು ಗಮನಾರ್ಹ ಅಂಶ.

ರಾಜ್ಯದಲ್ಲಿ ಬಿಜೆಪಿಯ ಸಂಭಾವ್ಯ ಮುನ್ನಡೆಗೆ ಕಾರಣವೇನು ಎಂಬುದನ್ನು ಮುಂಚಿತವಾಗಿ ಹೇಳುವುದು ಕಷ್ಟ. 2021ರ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಹಿನ್ನಡೆ ಅನುಭವಿಸಿದ ಪಕ್ಷವು, ಕೇವಲ 77 ಸ್ಥಾನಗಳಲ್ಲಿ ಗೆದ್ದಿತು. ಒಟ್ಟು 294 ವಿಧಾನಸಭಾ ಸ್ಥಾನಗಳಲ್ಲಿ ಕನಿಷ್ಠ 200 ಸ್ಥಾನ ಗೆಲ್ಲುವ ಗುರಿ ಹೊಂದಿದ್ದ ಪಕ್ಷವು ಹಿನ್ನಡೆ ಅನುಭವಿಸಿತು.

ಗೆಲುವಿಗಾಗಿ ಹಲವಾರು ತಂತ್ರಗಳನ್ನು ಅನುಸರಿಸಿದ್ದ ಬಿಜೆಪಿ, ಟಿಎಂಸಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿತು. ಮಮತಾ ಅವರು ರಾಜ್ಯದ ಮುಸ್ಲಿಮರನ್ನು ಸಮಾಧಾನಪಡಿಸುತ್ತಿದ್ದಾರೆ ಎಂದು ಛೇಡಿಸಿತು. ಇವೆಲ್ಲಕ್ಕಿಂತ ಹೆಚ್ಚು ಇಲ್ಲಿ ಸುದ್ದಿಯಾಗಿದ್ದು ಸಂದೇಶ್‌ಖಾಲಿ ಪ್ರಕರಣ. ಇದು ಬಿಜೆಪಿಗೆ ಪ್ರಮುಖ ಚುನಾವಣಾ ಅಸ್ತ್ರವಾಯ್ತು.

ಬಿಜೆಪಿಗೆ ಲಾಭವಾದ ಸಂದೇಶ್‌ಖಾಲಿ ಪ್ರಕರಣ

ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಚರ್ಚೆಯಾಗಿದ್ದೇ ಸಂದೇಶ್‌ಖಾಲಿ ಪ್ರಕರಣ. ಇದನ್ನೇ ಅಸ್ತ್ರವಾಗಿ ಬಳಸಿದ ಬಿಜೆಪಿ, ಮೇಲುಗೈ ಸಾಧಿಸಿದೆ. ಟಿಎಂಸಿ ನಾಯಕ ಶಹಜಹಾನ್‌ ಶೇಕ್‌ ಹಾಗೂ ಆತನ ಸಹಚರರು, ಸಂದೇಶ್‌ಖಾಲಿ ಎಂಬ ಗ್ರಾಮದ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದಾರೆ ಎಂಬ ಆರೋಪ ಕೇಳಿಬಂತು. ಪ್ರಕರಣ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಯಿತು. ಟಿಎಂಸಿ ನಾಯಕ ಹಾಗೂ ಪಕ್ಷದ ವಿರುದ್ಧ ಬಿಜೆಪಿ ಕೆಂಡಕಾರಿತು. ವ್ಯಾಪಕ ಖಂಡನೆ ಬಳಿಕ ಶಹಜಹಾನ್‌ ಬಂಧನವಾಯ್ತು. ಸದ್ಯ ಪ್ರಕರಣ ಸಿಬಿಐ ತನಿಖೆಯಲ್ಲಿದೆ. ಈ ಪ್ರಕರಣವನ್ನು ಇಟ್ಟುಕೊಂಡು ಬಿಜೆಪಿ ಮತಬೇಟೆ ನಡೆಸಿತ್ತು. ಇದು ಫಲಕೊಟ್ಟಿರುವಂತಿದೆ.

ಮತದಾರರ ಬೆದರಿಸಲು ಪೊಲೀಸರ ಬಳಕೆ ಎಂದು ಬಿಜೆಪಿ ಆರೋಪ

ಪಶ್ಚಿಮ ಬಂಗಾಳದಲ್ಲಿ ಇಂದು (ಜೂನ್‌ 1) ಅಂತಿಮಹಂತದ ಮತದಾನ ನಡೆಯಿತು. ಇದಕ್ಕೂ ಮುನ್ನ ಸಂದೇಶ್‌ಖಾಲಿಯಲ್ಲಿ ಹಿಂಸಾಚಾರ ನಡೆಸುವ ಮೂಲಕ ಮತದಾರರನ್ನು ಬೆದರಿಸಲು ಟಿಎಂಸಿ ಪೊಲೀಸರನ್ನು ಬಳಸಿಕೊಂಡಿದೆ ಎಂದು ಬಿಜೆಪಿ ಆರೋಪ ಹೊರಹಾಕಿತು. ಸಿಎಂ ಮಮತಾ ಬ್ಯಾನರ್ಜಿ ಆದೇಶದ ಮೇರೆಗೆ ಪಶ್ಚಿಮ ಬಂಗಾಳ ಪೊಲೀಸರು ಸಂದೇಶ್‌ಖಾಲಿ ಗ್ರಾಮದ ಮತದಾರರನ್ನು ಸೆಳೆಯಲು ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಆರೋಪಿಸಿದರು. ಅಂತಿಮ ಹಂತದ ಫಲಿತಾಂಶದ ಮೇಲೆ ಈ ಆರೋಪ ಕೂಡಾ ಪ್ರಭಾವ ಬೀರಿದಂತಿದೆ. ಏನೇ ಇದ್ದರೂ, ಇದು ಲೆಕ್ಕಾಚಾರವಷ್ಟೆ. ಅಂತಿಮ ಫಲಿತಾಂಶಕ್ಕೆ ಜೂನ್‌ 4ರವರೆಗೆ ಕಾಯಬೇಕಿದೆ.

ಗಮನಿಸಿ: ಚುನಾವಣೆ ಫಲಿತಾಂಶ ಎಕ್ಸಿಟ್‌ ಪೋಲ್ ಸಂಖ್ಯೆಗಳಿಗಿಂತ ಭಿನ್ನವಾಗಿ ಇರಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ