Dr. Vishnuvardhan: ವಿಷ್ಣು ಪುಣ್ಯಭೂಮಿಯಲ್ಲಿ ಸಾಹಸ ಸಿಂಹನ 50 ಕಟೌಟ್; ‘ಯಜಮಾನೋತ್ಸವ’ಕ್ಕೆ ಶುರುವಾಯ್ತು ತಯಾರಿ..
Sep 09, 2022 04:01 PM IST
ವಿಷ್ಣು ಪುಣ್ಯಭೂಮಿಯಲ್ಲಿ ಸಾಹಸ ಸಿಂಹನ 50 ಕಟೌಟ್; ‘ಯಜಮಾನೋತ್ಸವ’ಕ್ಕೆ ಶುರುವಾಯ್ತು ತಯಾರಿ..
- ಈ ವರ್ಷ ವಿಷ್ಣು ಅಭಿಮಾನಿಗಳಿಗೆ ಸಂಭ್ರಮವೋ ಸಂಭ್ರಮ. ಅದಕ್ಕೆ ಕಾರಣ; ಚಿತ್ರರಂಗಕ್ಕೆ ದಾದಾ ಪಾದಾರ್ಪಣೆ ಮಾಡಿ ಬರೋಬ್ಬರಿ 50 ವರ್ಷ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಷ್ಣು ಸೇನಾನಿಗಳು, ಈಗಿನಿಂದಲೇ ಭರ್ಜರಿ ತಯಾರಿ ನಡೆಸಿದ್ದಾರೆ.
ಬೆಂಗಳೂರು: ಸೆಪ್ಟಂಬರ್ 18 ಸಾಹಸ ಸಿಂಹ ವಿಷ್ಣುವರ್ಧನ್ ಅವರ ಹುಟ್ಟುಹಬ್ಬ. ಈ ವಿಶೇಷ ದಿನವನ್ನು ಈಗಲೂ ಅದ್ದೂರಿಯಾಗಿಯೇ ಮಾಡುತ್ತಾರೆ ಅವರ ಅಭಿಮಾನಿಗಳು. ವರ್ಷದಿಂದ ವರ್ಷಕ್ಕೆ ಹೊಸ ಹೊಸ ಪರಿಕಲ್ಪನೆಯೊಂದಿಗೆ ಹಬ್ಬದಾಚರಣೆ ರೀತಿ ಆಯೋಜಿಸುವ ಅವರ ಅಭಿಮಾನಿಗಳು, ಈ ಸಲ ಒಂದು ಹೆಜ್ಜೆ ಮುಂದೆ ಹೋಗಿ, ಜಯಂತಿಯನ್ನು ಮತ್ತಷ್ಟು ಝಗಮಗ ಮಾಡುತ್ತಿದ್ದಾರೆ.
ಈ ವರ್ಷ ವಿಷ್ಣು ಅಭಿಮಾನಿಗಳಿಗೆ ಸಂಭ್ರಮವೋ ಸಂಭ್ರಮ. ಅದಕ್ಕೆ ಕಾರಣ; ಚಿತ್ರರಂಗಕ್ಕೆ ದಾದಾ ಪಾದಾರ್ಪಣೆ ಮಾಡಿ ಬರೋಬ್ಬರಿ 50 ವರ್ಷ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಷ್ಣು ಸೇನಾನಿಗಳು, ಈಗಿನಿಂದಲೇ ಭರ್ಜರಿ ತಯಾರಿ ನಡೆಸಿದ್ದಾರೆ. ಪುಣ್ಯ ಭೂಮಿಯಲ್ಲಿ ಹಬ್ಬದ ವಾತಾವರಣವನ್ನು ನಿರ್ಮಿಸಲು ಹೊರಟಿದ್ದಾರೆ. ಪ್ರತಿ ವರ್ಷ ಅನ್ನದಾನ, ನೇತ್ರದಾನ, ರಕ್ತದಾನ ಸೇರಿ ಹತ್ತು ಹಲವು ಕಾರ್ಯಕ್ರಮಗಳು ನಡೆಯುತ್ತಿದ್ದವು. ಇದೀಗ ಅವುಗಳ ಜತೆಗೆ ಕಟೌಟ್ ಸಂಭ್ರಮ ಜೋರಾಗಿರಲಿದೆ.
ಸಾಹಸಿ ಸಿಂಹ ಡಾ.ವಿಷ್ಣುವರ್ಧನ್ 72ನೇ ಜಯಂತೋತ್ಸವಕ್ಕೆ ದಾದಾ ಅಭಿಮಾನಿಗಳು ಸಜ್ಜಾಗುತ್ತಿದ್ದಾರೆ. ಇದೇ ಸೆಪ್ಟಂಬರ್ 18ರಂದು ವಿಷ್ಣುವರ್ಧನ್ ಹುಟ್ಟುಹಬ್ಬ ಹಿನ್ನೆಲೆ ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯಲಿವೆ. ಅದೇ ರೀತಿ ಬರುವ ಡಿಸೆಂಬರ್ 29ಕ್ಕೆ ವಿಷ್ಣು ಚಿತ್ರರಂಗಕ್ಕೆ ಬಂದು 50 ವರ್ಷಗಳು ಪೂರೈಸಲಿವೆ. ಈ ಹಿನ್ನೆಲೆಯಲ್ಲಿ ಡಾ.ವಿಷ್ಣುವರ್ಧನ್ ಸೇನಾ ಸಮಿತಿ ವಿಷ್ಣು ಪುಣ್ಯಭೂಮಿಯಲ್ಲಿ ದಾದಾನ ಪ್ರಮುಖ ಸಿನಿಮಾಗಳು ಐವತ್ತು ಕಟೌಟ್ ನಿಲ್ಲಿಸಿ ದಾಖಲೆ ಬರೆಯಲು ಸಜ್ಜಾಗಿದೆ.
ವಿಷ್ಣುಸೇನಾ ಸಮಿತಿ ಆನಂದ್ ಮಾತನಾಡಿ, "ಇದೇ ಡಿಸೆಂಬರ್ 29ಕ್ಕೆ ವಿಷ್ಣುವರ್ಧನ್ ಅವರು ಚಿತ್ರರಂಗಕ್ಕೆ ಬಂದು 50 ವರ್ಷಗಳು ಕಂಪ್ಲೀಟ್ ಆಗುತ್ತದೆ. ಈ ವಿಶೇಷತಯನ್ನೇ ಇಟ್ಟುಕೊಂಡು ವಿಷ್ಣು ಪುಣ್ಯಭೂಮಿಯಲ್ಲಿ ವಿಷ್ಣುವರ್ಧನ್ ಸೇನಾನಿ ಮತ್ತು ಹಲವು ಸಂಘ ಸಂಸ್ಥೆಗಳು ಅಧ್ಯಕ್ಷರು ಸೇರಿ ಒಂದೇ ಜಾಗದಲ್ಲಿ ಐವತ್ತು ಕಟೌಟ್ ಹಾಕುತ್ತೇವೆ. ವಿಷ್ಣುವರ್ಧನ್ ಅವರ ಯಶಸ್ಸಿ ಚಿತ್ರಗಳ ಕಟೌಟ್ ನಿಲ್ಲಿಸಿ ದಾಖಲೆ ಬರೆಯಲು ಮುಂದಾಗಿದ್ದೇವೆ. ಒಂದು ಕಟೌಟ್ 40 ಅಡಿ ಇರಲಿದೆ. ಇಲ್ಲಿವರೆಗೆ ಭಾರತೀಯ ಚಿತ್ರರಂಗದಲ್ಲಿ ಏಕಸ್ಥಳದಲ್ಲಿ ಯಾವುದೇ ಸ್ಟಾರ್ ಗೆ ಈ ರೀತಿ ಕಟೌಟ್ ನಿಲ್ಲಿಸಿಲ್ಲ ಎಂದು ಮಾಹಿತಿ ಹಂಚಿಕೊಂಡರು.