Darshan on Hospet Incident: ‘ಇಂಥ ಘಟನೆ ವ್ಯಕ್ತಿಯನ್ನು ಮತ್ತಷ್ಟು ಬಲಪಡಿಸುತ್ತದೆಯೇ ಹೊರತು ಬಲಹೀನಗೊಳಿಸಲ್ಲ’ ಎಂದ ದರ್ಶನ್..
Dec 22, 2022 12:09 PM IST
‘ಇಂಥ ಘಟನೆ ವ್ಯಕ್ತಿಯನ್ನು ಮತ್ತಷ್ಟು ಬಲಪಡಿಸುತ್ತದೆಯೇ ಹೊರತು ಬಲಹೀನಗೊಳಿಸಲ್ಲ’ ಎಂದ ದರ್ಶನ್..
- ನನಗಿಂತ ಹೆಚ್ಚು ನನ್ನ ಅಭಿಮಾನಿಗಳಿಗೆ ಈ ಘಟನೆಯಿಂದ ನೋವಾಗಿದೆ ಎಂದಿರುವ ದರ್ಶನ್, ವಿಶೇಷ ಕಿರು ಬರಹವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇಲ್ಲಿದೆ ನೋಡಿ ಆ ಬರಹ..
Darshan on Hospet Incident: ಹೊಸಪೇಟೆಯಲ್ಲಿ ಕ್ರಾಂತಿ ಚಿತ್ರದ ಹಾಡಿನ ಬಿಡುಗಡೆ ಸಂದರ್ಭದಲ್ಲಿ ಘಟಿಸಿದ ದುರ್ಘಟನೆ ನಿಜಕ್ಕೂ ದುರದೃಷ್ಟಕರ. ಈ ಸಂದರ್ಭದಲ್ಲಿ ಇಡೀ ಸ್ಯಾಂಡಲ್‌ವುಡ್ ಮತ್ತು ಅಭಿಮಾನಿ ಬಳಗ ದರ್ಶನ್ ಬೆನ್ನಿಗೆ ನಿಂತಿತ್ತು. ಮುನಿಸು ಮರೆತು ಕಿಚ್ಚ ಸುದೀಪ್ ಸಹ ಸ್ನೇಹಿತನ ಪರವಾಗಿ ಬ್ಯಾಟ್ ಬೀಸಿದ್ದರು. ಸೋಷಿಯಲ್ ಮೀಡಿಯಾದಲ್ಲಿಯೂ ಅಭಿಮಾನಿಗಳು ದರ್ಶನ್ ಪರವಾಗಿ ಬೆಂಬಲ ಸೂಚಿಸಿದ್ದರು. ಇದೆಲ್ಲವನ್ನು ಕಂಡ ದರ್ಶನ್ ಹಾಗೆ ಬೆನ್ನಿಗೆ ನಿಂತ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.
ನನಗಿಂತ ಹೆಚ್ಚು ನನ್ನ ಅಭಿಮಾನಿಗಳಿಗೆ ಈ ಘಟನೆಯಿಂದ ನೋವಾಗಿದೆ ಎಂದಿರುವ ದರ್ಶನ್, ವಿಶೇಷ ಕಿರು ಬರಹವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇಲ್ಲಿದೆ ನೋಡಿ ಆ ಬರಹ..
"ಈ ಸಮಯದಲ್ಲಿ ನನಗಿಂತಲೂ ನನ್ನ ಸೆಲೆಬ್ರಿಟಿಗಳಿಗೆ ಹೆಚ್ಚು ನೋವಾಗಿದೆ ಎಂಬ ಅರಿವು ನನಗಿದೆ. ಇಂಥ ಘಟನೆಗಳು ಒಬ್ಬ ವ್ಯಕ್ತಿಯನ್ನು ಮತ್ತಷ್ಟು ಬಲಪಡಿಸುತ್ತದೆಯೇ ಹೊರತೂ ಬಲಹೀನನನ್ನಾಗಿ ಮಾಡುವುದಿಲ್ಲ. ಅದಕ್ಕೆ ತಕ್ಕ ಉದಾಹರಣೆಗಳು ನಮ್ಮ ಕನ್ನಡ ನೆಲದಲ್ಲೇ ನೋಡಿದ್ದೇವೆ. ಈ ಸಮಯದಲ್ಲಿ ನ್ಯಾಯದ ಪರ ನಿಂತ ಪ್ರತಿಯೊಬ್ಬ ಚಿತ್ರರಂಗದ ಗೆಳೆಯರು, ನಟರಿಗೆ ಧನ್ಯವಾದಗಳು. ಈ ಘಟನೆಯನ್ನು ತಪ್ಪು ಹಾದಿಯಲ್ಲಿ ಪ್ರೇರೇಪಿಸಲು ಪ್ರಯತ್ನಿಸಿದ ಕೆಲವರಿಗೂ ಧನ್ಯವಾದಗಳು. ಮೊದಲಿಂದಲೂ ಹೇಳಿಕೊಂಡು ಬಂದಿದ್ದೇನೆ, ಹಾಳು ಮಾಡೋಕೆ ನೂರು ಜನ ಇದ್ರೆ, ಕಾಯೋಕೆ ನಮ್ಮ ಕೋಟ್ಯಾಂತರ ಸೆಲೆಬ್ರಿಟಿಗಳಿರುತ್ತಾರೆ. ನಿಮ್ಮ ಈ ಪ್ರೀತಿಯ ಅಪ್ಪುಗೆಗೆ ಈ ದಾಸ ಸದಾ ಚಿರಋಣಿ" ಎಂದು ಪೋಸ್ಟ್ ಮಾಡಿದ್ದಾರೆ.
ನೀವಿಬ್ಬರೂ ಒಂದಾದರೆ ಸುಟ್ಟಜಾಗ ನಂದನವನ
ಚಿತ್ರರಂಗ ಮತ್ತು ಒಗ್ಗಟ್ಟಿನ ವಿಚಾರದಲ್ಲಿ ಸದಾ ಒಂದಿಲ್ಲೊಂದು ಸಲಹೆ ನೀಡುತ್ತಲೇ ಬರುವ ಚಂದನವನದ ಹಿರಿಯ ನಟ ಜಗ್ಗೇಶ್, ಕಿಚ್ಚ ಸುದೀಪ್ ಮತ್ತು ದರ್ಶನ್ ನಡುವಿನ ಈ ಟ್ವಿಟ್ ಮುಖಾಮುಖಿಗೆ ಮನಸೋತಿದ್ದಾರೆ. ಹೊಸಪೇಟೆ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿ ಸುದೀರ್ಘ ಪತ್ರ ಬರೆದಿದ್ದ ಸುದೀಪ್, ದರ್ಶನ್ ಬೆನ್ನಿಗೆ ನಿಂತಿದ್ದರು. ಅದಕ್ಕೆ ಪ್ರತಿಯಾಗಿ ದರ್ಶನ್ ಧನ್ಯವಾದ ಅರ್ಪಿಸಿದ್ದರು. ಆ ಟ್ವಿಟ್ ಪುಳಕವನ್ನು ನಟ ಜಗ್ಗೇಶ್ ಹೀಗೆ ವರ್ಣಿಸಿದ್ದಾರೆ.
"ಪ್ರೀತಿಯ ದರ್ಶನ್ ಹಳೆಯ ಚಿಂತನೆಗೆ ವಿನಾಯ್ತಿ ಹೇಳಿ ಹೊಸ ಸ್ನೇಹದ ಭಾಷ್ಯಕ್ಕೆ ಮುನ್ನುಡಿ ಬರೆದು ಕಿಚ್ಚ ಸುದೀಪ್ ನೀನು ಒಂದಾಗಿ ಸಹಸ್ರ ಅಭಿಮಾನಿಗಳಿಗೆ ಹರ್ಷದ ಹೊನಲುಹರಸಿ. ನೀವಿಬ್ಬರು ಒಂದಾದರೆ ಕೋಟಿಮನ ಒಂದಾಗಿ ಭಿನ್ನಾಭಿಪ್ರಾಯ ಎಂಬ ಕಾಡ್ಗಿಚ್ಚು ತಣ್ಣಗಾಗಿ ಸುಟ್ಟಜಾಗ ನಂದನವನ ಆಗುತ್ತದೆ! ಹಳೆದನ್ನು ಮರೆತು ಒಂದು ಅಪ್ಪುಗೆ ನೀಡಿ.." ಎಂದಿದ್ದಾರೆ.
"ಇಬ್ಬರು ಸ್ನೇಹಿತರು ಒಂದಾಗಲಿ ಎಂದು ಹರಸಿದಕ್ಕೆ ಸಂಭ್ರಮಿಸಿದ ಅಭಿಮಾನಿಗಳ ಕಂಡು ಪುಳಕಿತನಾಗಿ 12.07 ರಾತ್ರಿವರೆಗೂ ಎಲ್ಲರ ಪ್ರತಿಕ್ರಿಯೆ ನೋಡಿ ಆನಂದಿಸಿದೆ! ನಾಳೆ ಮೋದಿ ಅವರು ಎಲ್ಲರ ಪ್ರಶ್ನೆಗಳ ಉತ್ತರಿಸಲು ರಾಜ್ಯಸಭೆಗೆ ಬರುತ್ತಾರೆ. ಏಳಲು ತಡವಾದರೆ ಮಂಗಳಾರತಿ ನನಗೆ. ಮಲಗುವೆ ಶುಭವಾರ್ತೆ ಬಯಸುವೆ ನಾಳೆ... ಶುಭರಾತ್ರಿ.." ಎಂದು ಟ್ವಿಟ್ ಮಾಡಿದ್ದಾರೆ.