UV Krishnam Raju Death: ಪ್ರಭಾಸ್ ಚಿಕ್ಕಪ್ಪ, ತೆಲುಗಿನ ಹಿರಿಯ ನಟ ಕೃಷ್ಣಂ ರಾಜು ನಿಧನ!
Sep 11, 2022 08:59 AM IST
ನಟ ಪ್ರಭಾಸ್ ಚಿಕ್ಕಪ್ಪ, ತೆಲುಗಿನ ಹಿರಿಯ ನಟ ಕೃಷ್ಣಂ ರಾಜು ನಿಧನ!
- ತೆಲುಗಿನ ಜನಪ್ರಿಯ ನಟ, ಮಾಜಿ ಕೇಂದ್ರ ಸಚಿವ ಯು.ವಿ. ಕೃಷ್ಣಂ ರಾಜು (82) ಅನಾರೋಗ್ಯದ ಹಿನ್ನೆಲೆಯಲ್ಲಿ ಭಾನುವಾರ ಬೆಳಗಿನ ಜಾವ 3.45ರ ಸುಮಾರಿಗೆ ಕೊನೆಯುಸಿರೆಳೆದರು.
ಹೈದರಾಬಾದ್: ತೆಲುಗಿನ ಜನಪ್ರಿಯ ನಟ, ಮಾಜಿ ಕೇಂದ್ರ ಸಚಿವ ಯು.ವಿ. ಕೃಷ್ಣಂ ರಾಜು (82) ಅನಾರೋಗ್ಯದ ಹಿನ್ನೆಲೆಯಲ್ಲಿ ಭಾನುವಾರ ಬೆಳಗಿನ ಜಾವ 3.45ರ ಸುಮಾರಿಗೆ ಕೊನೆಯುಸಿರೆಳೆದರು. ಟಾಲಿವುಡ್‌ನಲ್ಲಿ ರೆಬೆಲ್ ಸ್ಟಾರ್ ಎಂದೇ ಕರೆಸಿಕೊಳ್ಳುತ್ತಿದ್ದ ಕೃಷ್ಣ ರಾಜು, ನಟ ಪ್ರಭಾಸ್ ಅವರ ಚಿಕ್ಕಪ್ಪ. ಇವರ ನಿಧನಕ್ಕೆ ಇಡೀ ಟಾಲಿವುಡ್ ಕಂಬನಿ ಮಿಡಿದಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಕೃಷ್ಣಂ ರಾಜು ಅವರನ್ನು ಶನಿವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ, ನಿಧನಹೊಂದಿದ್ದಾರೆ.
1940 ರ ಜನವರಿ 20ರಂದು ಜನಿಸಿದ್ದ ಕೃಷ್ಣಂ ರಾಜು, ವೃತ್ತಿಜೀವನದ ಆರಂಭದಲ್ಲಿ ಪತ್ರಕರ್ತರಾಗಿದ್ದರು. 1966ರಲ್ಲಿ "ಚಿಲಕಾ ಗೋರ್ನಿಕಾ" ಸಿನಿಮಾ ಮೂಲಕ ಟಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಮೊದಲ ಚಿತ್ರಕ್ಕೆ ಪ್ರತಿಷ್ಠಿತ ನಂದಿ ಪ್ರಶಸ್ತಿಯೂ ಲಭಿಸಿತು. ಇದರ ನಂತರ ಅವರು ಎನ್‌ಟಿ ರಾಮರಾವ್ ಅವರೊಂದಿಗೆ ಪೌರಾಣಿಕ ಸಿನಿಮಾ "ಶ್ರೀ ಕೃಷ್ಣಾವತ್ರಂ"ನಲ್ಲಿ ಕಾಣಿಸಿಕೊಂಡರು. ಮುಂದಿನ ದಿನಗಳಲ್ಲಿ ಎನ್‌ಟಿ ರಾಮರಾವ್ ಮತ್ತು ಅಕ್ಕಿನೇನಿ ನಾಗೇಶ್ವರ ರಾವ್ ಅವರೊಂದಿಗೆ ಸಾಕಷ್ಟು ಸಿನಿಮಾಗಳಲ್ಲಿಯೂ ನಟಿಸಿದರು. 70 ಮತ್ತು 80 ರ ದಶಕದಲ್ಲಿ ಸ್ಟಾರ್ ನಟರಾಗಿ ಗುರುತಿಸಿಕೊಂಡ ಕೃಷ್ಣಂ ರಾಜು, ಕೆರಿಯರ್‌ನಲ್ಲಿ ಸಾಕಷ್ಟು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ. 50 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ, ಸುಮಾರು 183 ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಭಾಸ್ ನಟನೆಯ "ರಾಧೆ ಶ್ಯಾಮ್" ಅವರ ಕೊನೆಯ ಸಿನಿಮಾ
ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಮಂತ್ರಿ
ಸಿನಿಮಾಗಳ ಹೊರತಾಗಿ ಕೃಷ್ಣಂ ರಾಜು ರಾಜಕೀಯದಲ್ಲೂ ಸಕ್ರಿಯರಾಗಿದ್ದರು. 1992ರಲ್ಲಿ ನರಸ್‌ಪುರಂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡರು. ಕೆಲವು ವರ್ಷಗಳ ನಂತರ ಬಿಜೆಪಿಗೆ ಸೇರಿ, 1998 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಕಿನಾಡ ಕ್ಷೇತ್ರದಿಂದ ಗೆದ್ದು ಸಂಸದರಾದರು. 1998 ರಿಂದ 2002 ರವರೆಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ರಾಜ್ಯ ಸಚಿವರಾಗಿಯೂ ಕೆಲಸ ಮಾಡಿದ್ದರು.