ಹುಟ್ಟುಹಬ್ಬದಂದು ಟಾಲಿವುಡ್ ಚೊಚ್ಚಲ ಚಿತ್ರದ ಪೋಸ್ಟರ್ ಹಂಚಿಕೊಂಡ ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್. ಪೋಸ್ಟರ್‌ನಲ್ಲೇನಿತ್ತು?
Mar 06, 2023 03:53 PM IST
ಜಾಹ್ನವಿ ಕಪೂರ್
- ಇಂದು ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್ 26ನೇ ವರ್ಷದ ಹುಟ್ಟುಹಬ್ಬ. ಈ ಸಂದರ್ಭ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಟಾಲಿವುಡ್ ಚೊಚ್ಚಲ ಚಿತ್ರ ʼಎನ್‌ಟಿಆರ್30ʼ ಪೋಸ್ಟರ್ ಹಂಚಿಕೊಂಡಿದ್ದಾರೆ. ಈ ಪೋಸ್ಟರ್‌ನಲ್ಲಿನ ಜಾಹ್ನವಿ ಪೋಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಬಾಲಿವುಡ್ ಬೆಡಗಿ ನಟಿ ಜಾಹ್ನವಿ ಕಪೂರ್ ಟಾಲಿವುಡ್‌ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಟಾಲಿವುಡ್‌ನ ಯಂಗ್ ಟೈಗರ್ ಜ್ಯೂನಿಯರ್ ಎನ್‌ಟಿಆರ್ ಅವರ 30ನೇ ಸಿನಿಮಾದಲ್ಲಿ ಜಾಹ್ನವಿ ನಾಯಕಿ. ಕೊರಟಾಲ ಶಿವ ನಿರ್ದೇಶನದ ಈ ಚಿತ್ರಕ್ಕೆ ಇನ್ನೂ ಟೈಟಲ್ ಪಕ್ಕಾ ಆಗಿಲ್ಲ.
ಇಂದು ಜಾಹ್ನವಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಎನ್‌ಟಿಆರ್30 ಸಿನಿಮಾದ ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದಾರೆ. ಅಂದ ಹಾಗೆ ಇಂದು ಈ ಚೆಲುವೆ 26ನೇ ವಯಸ್ಸಿಗೆ ಕಾಲಿರಿಸಿದ್ದಾರೆ. ನೀರಿನ ಜಲಪಾತದ ತುದಿಯ ಬಂಡೆಯ ಮೇಲೆ ಕುಳಿತು ಹಿಂದಿರುಗಿ ನೋಡಿ ನಗುತ್ತಿರುವ ಈ ಫೋಟೊಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಗುಲಾಬಿ ಬಣ್ಣದ ರವಿಕೆಯೊಂದಿಗೆ ಕಪ್ಪು ಬಣ್ಣದ ದಾವಣಿ ಹೊದ್ದಿರುವ ಜಾಹ್ನವಿಯ ಮಾದಕ ನೋಟ ನೋಡುಗರ ಗಮನ ಸೆಳೆದಿರುವುದು ಸುಳ್ಳಲ್ಲ.
ಈ ಫೋಟೊದೊಂದಿಗೆ ʼಕೊನೆಗೂ ಇದು ಸಂಭವಿಸುತ್ತಿದೆ. ಇನ್ನು ಕಾಯಲು ಸಾಧ್ಯವಿಲ್ಲ. ನನ್ನ ನೆಚ್ಚಿನ ಎನ್‌ಟಿಆರ್ ಜೊತೆ ತೆರೆ ಹಂಚಿಕೊಳ್ಳಲು ಕಾತರಳಾಗಿದ್ದೇನೆ. ಎನ್‌ಟಿಆರ್30ʼ ಎಂದು ಚಿತ್ರ ಶೀರ್ಷಿಕೆ ಬರೆದುಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಕಮೆಂಟ್ ಹಾಗೂ ಲೈಕ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಲವರು ಈ ಫೋಟೊದಲ್ಲಿ ಜಾಹ್ನವಿಗೆ ಹುಟ್ಟಹಬ್ಬದ ಶುಭಾಶಯ ಹೇಳುವ ಜೊತೆಗೆ, ತೆಲುಗು ಸಿನಿರಂಗದಲ್ಲಿ ಪಯಣ ಆರಂಭಿಸುತ್ತಿರುವುದಕ್ಕೆ ಅಭಿನಂದನೆಯನ್ನೂ ಸಲ್ಲಿಸಿದ್ದಾರೆ.
ಮತ್ತೆ ಒಂದಾದ ಎನ್‌ಟಿಆರ್, ಕೊರಟಾಲ
ಜ್ಯೂನಿಯರ್ ಎನ್‌ಟಿಆರ್ ಹಾಗೂ ಕೊರಟಾಲ ಶಿವ ಜನತಾ ಗ್ಯಾರೆಜ್ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಈ ಸಿನಿಮಾ ಸಾಕಷ್ಟು ಹೆಸರು ಗಳಿಸಿತ್ತು. ಅದಾದ ಬಳಿ ಎನ್‌ಟಿಆರ್30 ಮೂಲಕ ಪುನಃ ತೆರೆ ಮೇಲೆ ಕಮಾಲ್ ಮಾಡಲು ಸಜ್ಜಾಗಿದೆ ಈ ಜೋಡಿ. ಈ ತಿಂಗಳ ಕೊನೆಯಲ್ಲಿ ಈ ಚಿತ್ರ ಅಧಿಕೃತವಾಗಿ ಷೋಷಣೆಯಾಗಲಿದ್ದು, ಏಪ್ರಿಲ್ ತಿಂಗಳಿನಿಂದ ಪ್ರಿ ಪ್ರೊಡಕ್ಷನ್ ಕೆಲಸಗಳು ಆರಂಭವಾಗಲಿವೆ.
ಎನ್‌ಟಿಆರ್ ಆರ್ಟ್ಸ್ ʼಭೀಕರ ಚಂಡಮಾರುತದ ಪ್ರಪಂಚದಲ್ಲಿ ಶಾಂತವಾಗಿ ಆಕೆ ಕುಳಿತಿದ್ದಾಳೆ, ಎನ್‌ಟಿಆರ್ 30. ಹುಟ್ಟುಹಬ್ಬದ ಶುಭಾಶಯಗಳು, ನಿಮಗೆ ಸ್ವಾಗತ #ಜಾಹ್ನವಿ ಕಪೂರ್ʼ ಎಂದು ಟ್ವೀಟ್ ಮಾಡುವ ಮೂಲಕ ಜಾಹ್ನವಿ ಕಪೂರ್‌ಗೆ ಶುಭಾಶಯ ತಿಳಿಸಿದೆ. ಆಕ್ಷನ್ ಕಥಾಹಿನ್ನೆಲೆ ಇರುವ ಈ ಸಿನಿಮಾಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಚಿತ್ರದ ಇನ್ನುಳಿದ ಪಾತ್ರವರ್ಗಗಳ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಈ ಸಿನಿಮಾದ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾದ ಕ್ಷಣದಿಂದಲೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಿನಿಮಾ ಕುರಿತಾದ ಅಪ್‌ಡೇಟ್‌ಗೆ ಬೇಡಿಕೆ ಇಡುತ್ತಿದ್ದಾರೆ.
ಪದೇ ಪದೇ ಅಪ್‌ಡೇಟ್ ಕೇಳಬೇಡಿ; ಎನ್‌ಟಿಆರ್ ಮನವಿ
ತಮ್ಮ ಸಹೋದರ ಕಲ್ಯಾಣ್ ರಾಮ್ ಅವರ ಇತ್ತೀಚಿಗೆ ಬಿಡುಗಡೆಯಾದ ಅಮಿಗೋಸ್‌ನ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಮಾತನಾಡಿದ ಎನ್‌ಟಿಆರ್, ʼಯಾವಾಗಲೂ ಈ ಸಿನಿಮಾದ ಅಪ್‌ಡೇಟ್ ಬಗ್ಗೆಯೇ ಕೇಳುತ್ತಿರಬೇಡಿ, ಇದರಿಂದ ಹಲವು ಜನರು ಒತ್ತಡ ಅನುಭವಿಸುತ್ತಾರೆʼ ಎಂದು ಅಭಿಮಾನಿಗಳಲ್ಲಿ ಬೇಡಿಕೆ ಇಟ್ಟಿದ್ದರು.
ʼಕೆಲವೊಮ್ಮೆ ನಾವು ಸಿನಿಮಾಕ್ಕೆ ಕೆಲಸ ಮಾಡುತ್ತಿರುತ್ತೇವೆ. ಆದರೆ ಸಿನಿಮಾದ ಕುರಿತಾಗಿ ಹಂಚಿಕೊಳ್ಳುವಷ್ಟು ವಿಷಯ ಇರುವುದಿಲ್ಲ. ಗಂಟೆಗಳಿಗೊಮ್ಮೆ, ದಿನಕ್ಕೊಮ್ಮೆ ಸಿನಿಮಾ ಕುರಿತು ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ. ನನಗೆ ನಿಮ್ಮ ಉತ್ಸುಕತೆ, ಕುತೂಹಲದ ಬಗ್ಗೆ ಅರಿವಾಗುತ್ತದೆ. ಆದರೆ ನಿಮ್ಮ ಈ ಕುತೂಹಲ ಕೆಲವೊಮ್ಮೆ ನಿರ್ಮಾಪಕರು ಹಾಗೂ ಸಿನಿಮಾ ತಂಡ ಮೇಲೆ ಸಾಕಷ್ಟು ಒತ್ತಡ ಬೀರಲು ಕಾರಣವಾಗಬಹುದು. ಅತಿ ಒತ್ತಡದ ಕಾರಣದಿಂದ ನಾವು ಕೆಲವೊಮ್ಮೆ ಅಪ್‌ಡೇಟ್ ಹಂಚಿಕೊಳ್ಳುವುದನ್ನು ನಿಲ್ಲಿಸಬೇಕಾಗಬಹುದು, ಇದರಿಂದ ಅಭಿಮಾನಿಗಳಿಗೆ ಇನ್ನಷ್ಟು ನಿರಾಸೆ ಉಂಟಾಗಬಹುದುʼ ಎಂದು ತಿಳಿ ಹೇಳಿದ್ದರು.
ಜಾಹ್ನವಿ ಹಿಂದಿಯ ʼಮಿಲಿʼ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿದ್ದು, ಈ ಚಿತ್ರಕ್ಕೆ ಮಾಥುಕುಟ್ಟಿ ಕ್ಸೇವಿಯರ್ ನಿರ್ದೇಶನ ಮಾಡಿದ್ದರು. ಸನ್ನಿ ಕೌಶಲ್ ಹಾಗೂ ಮನೋಜ್ ಪಹ್ವಾ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಸದ್ಯ ಜಾಹ್ನವಿ ಕೈಯಲ್ಲಿ ʼಬಾವಾಲ್ʼ, ʼಮಿಸ್ಟರ್ ಅಂಡ್ ಮಿಸೆಸ್ ಮಾಹಿʼ ಚಿತ್ರಗಳಿವೆ.
ವಿಭಾಗ