logo
ಕನ್ನಡ ಸುದ್ದಿ  /  ಮನರಂಜನೆ  /  Ajaneesh Loknath Kidnapped: 'ಕಾಂತಾರ' ಮ್ಯೂಸಿಕ್‌ ಡೈರೆಕ್ಟರ್‌ ಕಿಡ್ನಾಪ್‌...ನಿಮ್ಮ ಹಾವಳಿ ಅತಿಯಾಯ್ತು ಎಂದು ಕಿಡಿ ಕಾರಿದ ನೆಟಿಜನ್ಸ್‌

Ajaneesh Loknath Kidnapped: 'ಕಾಂತಾರ' ಮ್ಯೂಸಿಕ್‌ ಡೈರೆಕ್ಟರ್‌ ಕಿಡ್ನಾಪ್‌...ನಿಮ್ಮ ಹಾವಳಿ ಅತಿಯಾಯ್ತು ಎಂದು ಕಿಡಿ ಕಾರಿದ ನೆಟಿಜನ್ಸ್‌

HT Kannada Desk HT Kannada

Nov 22, 2022 02:56 PM IST

google News

ಅಜನೀಶ್‌ ಲೋಕನಾಥ್‌

    • ಅಜನೀಶ್‌ ಲೋಕನಾಥ್‌ ಹೆಸರು ಮಾಡೋದನ್ನು ನೋಡಿ ಅವರನ್ನು ಯಾರೋ ಕಿಡ್ನಾಪ್‌ ಮಾಡಿದ್ದಾರೆ ಎಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು, ಅಜನೀಶ್‌ ಅವರನ್ನು ಹಾಸ್ಟೆಲ್‌ ಹುಡುಗರ ತಂಡವೊಂದು ಕಿಡ್ನಾಪ್‌ ಮಾಡಿದ್ದಾರಂತೆ.
ಅಜನೀಶ್‌ ಲೋಕನಾಥ್‌
ಅಜನೀಶ್‌ ಲೋಕನಾಥ್‌ (PC: Ajaneesh Loknath Facebook)

ಸದ್ಯಕ್ಕೆ ಸ್ಯಾಂಡಲ್‌ವುಡ್‌ನಲ್ಲಿ 'ಕಾಂತಾರ' ಚಿತ್ರದ ಹವಾ ಜೋರಾಗಿದೆ. ಚಿತ್ರದ ಕಥೆ, ಕಂಟೆಂಟ್‌, ಕಲಾವಿದರು, ಮೇಕಿಂಗ್‌ ಜೊತೆಗೆ ಆ ಸಿನಿಮಾದ ಮ್ಯೂಸಿಕ್‌ ಕೂಡಾ ಕೇಳುವವರಿಗೆ ಗೂಸ್‌ ಬಂಪ್ಸ್‌ ತರುವಂತಿದೆ. ಅಷ್ಟರ ಮಟ್ಟಿಗೆ ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಸುಂದರವಾದ ಸಂಗೀತ ನೀಡಿದ್ದರು. ಈ ಚಿತ್ರದ ಮೂಲಕ ಅಜನೀಶ್‌ ಖ್ಯಾತಿ ಮತ್ತಷ್ಟು ಹೆಚ್ಚಿತು. ಆದರೆ ಇದೀಗ ಅವರು ಕಿಡ್ನಾಪ್‌ ಆಗಿದ್ದಾರಂತೆ.

ಅಜನೀಶ್‌ ಲೋಕನಾಥ್‌ ಹೆಸರು ಮಾಡೋದನ್ನು ನೋಡಿ ಅವರನ್ನು ಯಾರೋ ಕಿಡ್ನಾಪ್‌ ಮಾಡಿದ್ದಾರೆ ಎಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು, ಅಜನೀಶ್‌ ಅವರನ್ನು ಹಾಸ್ಟೆಲ್‌ ಹುಡುಗರ ತಂಡವೊಂದು ಕಿಡ್ನಾಪ್‌ ಮಾಡಿದ್ದಾರಂತೆ. ಅಷ್ಟಕ್ಕೂ ಇದೆಲ್ಲಾ ಖಂಡಿತ ನಿಜವಲ್ಲ, 'ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ' ಚಿತ್ರತಂಡ, ತಮ್ಮ ಚಿತ್ರದ ಪ್ರಚಾರಕ್ಕಾಗಿ ಇಷ್ಟೆಲ್ಲಾ ಗಿಮಿಕ್‌ ಮಾಡುತ್ತಿದೆ. ಸಿನಿಮಾ ಅನೌನ್ಸ್‌ ಮಾಡಿದಾಗಿನಿಂದ ಇಲ್ಲಿವರೆಗೂ, ಈ ಹೊಸಬರ ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ತಂಡವು, ಚಿತ್ರದ ಬಗ್ಗೆ ವಿಭಿನ್ನವಾಗಿ ಪ್ರಚಾರ ಮಾಡುತ್ತಲೇ ಬಂದಿದೆ. ಇದೀಗ ಅಜನೀಶ್‌ ಕಿಡ್ನಾಪ್‌ ಕೂಡಾ ಚಿತ್ರದ ಪಬ್ಲಿಸಿಟಿಗಾಗಿ.

''ಅಜನೀಶ್ ಲೋಕನಾಥ್ ಅಪಹರಣಗೊಂಡಿದ್ದಾರೆ, ಹುಟ್ಟುಹಬ್ಬದ ದಿನವೇ ಬೆಂಗಳೂರಿನ ಜೆಪಿ ನಗರದ ಅವರ ಮ್ಯೂಸಿಕ್‌ ಸ್ಟುಡಿಯೋನಿಂದ ಅಜನೀಶ್‌ ಅವರನ್ನು ಅಪಹರಿಸಲಾಗಿದೆ. ಸಿಸಿ ಟಿವಿ ಫೂಟೇಜ್‌ ಪರಿಶೀಲಿಸಿದಾಗ ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ರೌಡಿಗಳ ತಂಡವೇ ಕಿಡ್ನಾಪ್‌ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ'' ಎಂದು ಬರೆಯಲಾಗಿದೆ. ಚಿತ್ರತಂಡದ ಕ್ರಿಯೇಟಿವಿಟಿ ಕೆಲವರಿಗೆ ಇಷ್ಟವಾದರೆ ಇನ್ನೂ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮ ಚಿತ್ರದ ಪ್ರಚಾರಕ್ಕಾಗಿ ಹೀಗೆಲ್ಲಾ ಮಾಡುವ ಅವಶ್ಯಕತೆ ಇಲ್ಲ. ಹೀಗೆಲ್ಲಾ ಪೋಸ್ಟರ್‌ ಹಾಕಿದರೆ, ಅಜನೀಶ್‌ ನಿಜವಾಗಿಯೂ ಕಿಡ್ನಾಪ್‌ ಆಗಿದ್ದಾರೆ ಎಂದು ತಪ್ಪು ತಿಳಿಯುತ್ತಾರೆ. ಪ್ರಚಾರಕ್ಕಾಗಿ ಬೇರೆ ದಾರಿ ಹುಡುಕಿ'' ಎಂದು ಕೋಪದಿಂದ ಕಮೆಂಟ್‌ ಮಾಡುತ್ತಿದ್ದಾರೆ.

ಪೋಸ್ಟರ್‌ ನೋಡಿ ಪ್ರತಿಕ್ರಿಯಿಸಿರುವ ನೆಟಿಜನ್ಸ್

'ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ' ಸಿನಿಮಾ ತಂಡ ಮೊದಲ ದಿನದಿಂದಲೇ ಬಹಳ ವಿಭಿನ್ನವಾಗಿ ಚಿತ್ರವನ್ನು ಪ್ರಚಾರ ಮಾಡುತ್ತಲೇ ಬಂದಿದೆ. ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಟೈಟಲ್​​​​​ಗಳನ್ನು ಇಟ್ಟುಕೊಂಡು ಬರುತ್ತಿರುವ ಸಿನಿಮಾಗಳಲ್ಲಿ ಇದೂ ಕೂಡಾ ಒಂದು. ಈ ಟ್ರೆಂಡಿ ಟೈಟಲನ್ನು ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಬಿಡುಗಡೆ ಮಾಡಿದ್ದರು. ಅಷ್ಟೇ ಅಲ್ಲ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಬೈದು ಬಂದಿದ್ದರು. ಹಾಗಂತ ಪುನೀತ್‌ ರಾಜ್‌ಕುಮಾರ್‌, ನಿಜವಾಗಿ ಬೈದಿರಲಿಲ್ಲ. ಇದು ಚಿತ್ರತಂಡದ ಗಿಮಿಕ್‌ ಅಷ್ಟೇ.

ಚಿತ್ರತಂಡ ತಮ್ಮ ಸಿನಿಮಾ ಟೈಟಲನ್ನು ಬಹಳ ಡಿಫರೆಂಟ್ ಆಗಿ ಪುನೀತ್ ಕೈಯ್ಯಲ್ಲಿ ಬಿಡುಗಡೆ ಮಾಡಿಸಿತ್ತು. ಗ್ರೀನ್ ಮ್ಯಾಟ್ ಮೂಲಕ, ಎತ್ತರದ ಹಿಮಾಲಯದಲ್ಲಿ ಪೋಸ್ಟರ್ ಬಿಡುಗಡೆ ಮಾಡುತ್ತಿರುವಂತೆ ತೋರಿಸಲಾಗಿತ್ತು. ಪೋಸ್ಟರ್ ಲಾಂಚ್ ಮಾಡಿದ್ದ ಪುನೀತ್, ಟೈಟಲ್ ನೋಡಿ, ''ಇದೇನು ಹೆಸರು ಹೀಗಿದೆ…? ನೋಡಲು ಮೆಮೋರಿ ಕಾರ್ಡ್ ರೀತಿ ಇದೆ…ಈ ಟೈಟಲ್ ಬಿಡುಗಡೆ ಮಾಡಿಸಲು ಇಷ್ಟೆಲ್ಲಾ ಬಿಲ್ಡಪ್ ಬೇಕಿತ್ತಾ..? ನೋಡುತ್ತಿದ್ದರೆ ಇದೊಂದು ವರ್ಸ್ಸ್ಟ್​​ ಸಿನಿಮಾದಂತೆ ಕಾಣುತ್ತದೆ''. ಎಂದು ಬೈಯ್ಯುತ್ತಾರೆ. ಸರ್ ಇನ್ನೂ ರೆಕಾರ್ಡ್ ಆಗುತ್ತಿದೆ ಎಂದು ನಿರ್ದೇಶಕ ನಿತಿನ್ ಪುನೀತ್​​ಗೆ ಹೇಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪುನೀತ್ 'ಇದನ್ನು ಎಡಿಟ್ ಮಾಡಿ' ಎನ್ನುತ್ತಾರೆ. ವಿಡಿಯೋ ಕೊನೆಯಲ್ಲಿ ನಿರ್ದೇಶಕ ನಿತಿನ್, ಮತ್ತೆ ಪುನೀತ್ ಮುಂದೆ ಬಂದು ನಿಮ್ಮ ಡೇಟ್ಸ್ ಬೇಕು ಎಂದು ಕೇಳುತ್ತಾರೆ.

ಆಗ ಪುನೀತ್, ನಿತಿನ್​​ಗೆ ಚಾಕೊಲೇಟ್​​​​​​​​​​ ಕೊಟ್ಟು, 'ತಿನ್ಕೊಂಡು ಹೋಗ್ತಿರು'ಎಂದು ಗದರುತ್ತಾರೆ. ಆದರೆ ಚಿತ್ರತಂಡಕ್ಕೆ ಪುನೀತ್ ಬೈದಿರುವುದು ಸೀರಿಯಸ್ ಆಗಿ ಅಲ್ಲ. ಚಿತ್ರತಂಡವೇ ಪ್ರೀ ಪ್ಲ್ಯಾನ್ ಮಾಡಿ ಪುನೀತ್ ಅವರಿಂದ ಹೀಗೆ ಹೇಳಿಸಿದೆ. ತೆರೆ ಹಿಂದೆ ಪುನೀತ್ ರಾಜ್​ಕುಮಾರ್, ಚಿತ್ರತಂಡದ ಶ್ರಮ ಹಾಗೂ ಕ್ರಿಯೇಟಿವಿಟಿಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಕೋರಿದ್ದರು. ನಮ್ಮ ಚಿತ್ರದ ಟೀಸರನ್ನು ಸುದೀಪ್‌, ಬುರ್ಜ್‌ ಖಲೀಫಾಕಿಂತಲೂ ಎತ್ತರದಲ್ಲಿ ಬಿಡುಗಡೆ ಮಾಡಲಿದ್ದಾರೆ ಎಂದು ಚಿತ್ರತಂಡ ಪೋಸ್ಟರ್‌ ಹಂಚಿಕೊಂಡಿತ್ತು. ಜೊತೆಗೆ ರಕ್ಷಿತ್‌ ಶೆಟ್ಟಿ ಹಾಗೂ ಇತ್ತೀಚೆಗೆ ರಮ್ಯಾ ಅವರನ್ನು ಕೂಡಾ ಕರೆಸಿ ತಮ್ಮ ಚಿತ್ರವನ್ನು ಪ್ರಚಾರ ಮಾಡುತ್ತಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ