Sai Pallavi: ನಟಿ ಸಾಯಿ ಪಲ್ಲವಿ ಸಿನಿಮಾ ಒಪ್ಪಿಕೊಂಡರೆ ಅದು ದೇವಿಯ ಅನುಗ್ರಹ ಸಿಕ್ಕಂತೆ; ಅಮರನ್ ನಿರ್ದೇಶಕರ ಕಾಮೆಂಟ್
Nov 06, 2024 03:52 PM IST
Sai Pallavi: ನಟಿ ಸಾಯಿ ಪಲ್ಲವಿ ಸಿನಿಮಾ ಒಪ್ಪಿಕೊಂಡರೆ ಅದು ದೇವಿಯ ಅನುಗ್ರಹ ಸಿಕ್ಕಂತೆ ಎಂದು ಅಮರನ್ ನಿರ್ದೇಶಕ ರಾಜ್ಕುಮಾರ್ ಪೆರಿಯಸಾಮಿ ಹೇಳಿದ್ದಾರೆ.
- Sai Pallavi Anugraham: ಬಹುಭಾಷಾ ನಟಿ ಸಾಯಿ ಪಲ್ಲವಿ ಸಿಕ್ಕಸಿಕ್ಕ ಸಿನಿಮಾಗಳಿಗೆ ಒಪ್ಪಿಗೆ ನೀಡುವುದಿಲ್ಲ. ಒಂದು ಪ್ರಾಜೆಕ್ಟ್ ನಡೆಸುತ್ತಿರುವಾಗ ಇನ್ನೊಂದು ಸಿನಿಮಾದಲ್ಲಿ ನಟಿಸುವುದಿಲ್ಲ. ಇವರ ಕುರಿತು ಅಮರನ್ ನಿರ್ದೇಶಕ ರಾಜ್ಕುಮಾರ್ ಪೆರಿಯಸಾಮಿ ಅವರು "ಸಾಯಿ ಪಲ್ಲವಿ ಸಿನಿಮಾ ಒಪ್ಪಿಕೊಂಡರೆ ಅದು ದೇವಿಯ ಅನುಗ್ರಹ ಸಿಕ್ಕಂತೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
Sai Pallavi Anugraham: ಸಹಜ ಸುಂದರಿ ಸಾಯಿ ಪಲ್ಲವಿ ಬಹುಬೇಡಿಕೆಯ ನಟಿ. ಹೀಗಿದ್ದರೂ ಇವರು ಹಲವು ಪ್ರಾಜೆಕ್ಟ್ಗಳಿಗೆ ಒಮ್ಮೆಗೆ ಒಪ್ಪಿಗೆ ಸೂಚಿಸುವವರಲ್ಲ. ಒಂದು ಸಿನಿಮಾ ಮಾಡುತ್ತಿರುವಾಗ ಇನ್ನೊಂದು ಸಿನಿಮಾದ ಶೂಟಿಂಗ್ನಲ್ಲಿ ಭಾಗಿಯಾಗುವುದಿಲ್ಲ. ಅಳೆದು ತೂಗಿ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅವಕಾಶ ಇದೆ ಎಂದು ಸಿಕ್ಕಸಿಕ್ಕ ಪ್ರಾಜೆಕ್ಟ್ಗಳಿಗೆ ಸಹಿ ಹಾಕುವುದಿಲ್ಲ. ಸಾಯಿ ಪಲ್ಲವಿ ಗ್ಲಾಮರ್ ಉಡುಗೆ ತೊಡದೆಯೂ ಅಪಾರ ಅಭಿಮಾನಿಗಳನ್ನು ಗಳಿಸಬಹುದು ಎಂದು ಸಾಬೀತುಪಡಿಸಿದ್ದಾರೆ. ತೆಲುಗಿನಲ್ಲಿ ತಾಂಡೇಲ್ ಚಿತ್ರದ ಮೂಲಕ ಮನರಂಜಿಸಲು ಸಜ್ಜಾಗಿರುವ ಸಾಯಿ ಪಲ್ಲವಿ ಇತ್ತೀಚೆಗೆ ಅಮರನ್ ಚಿತ್ರದಲ್ಲಿ ನಟಿಸಿದ್ದಾರೆ.
ಕಮಲ್ ಹಾಸನ್ ನಿರ್ಮಾಣದ ಸಿನಿಮಾ
ಆರ್ಮಿ ಮೇಜರ್ ಮುಕುಂದ್ ವರದರಾಜನ್ ಅವರ ಜೀವನ ಕಥೆಯನ್ನು ಆಧರಿಸಿದ ಅಮರನ್ನಲ್ಲಿ ಸಾಯಿ ಪಲ್ಲವಿ ರೆಬೆಕಾ ವರ್ಗೀಸ್ ಪಾತ್ರದಲ್ಲಿ ನಟಿಸಿದ್ದಾರೆ. ತಮಿಳಿನ ಹೀರೋ ಶಿವ ಕಾರ್ತಿಕೇಯನ್ ಈ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ. ವಿಶ್ವ ನಾಯಕ ಕಮಲ್ ಹಾಸನ್ ನಿರ್ಮಾಣದ ಅಮರನ್ ಚಿತ್ರವನ್ನು ರಾಜ್ ಕುಮಾರ್ ಪೆರಿಯಸಾಮಿ ನಿರ್ದೇಶಿಸಿದ್ದಾರೆ. ಈ ಚಿತ್ರವು ಈಗ ಬಾಕ್ಸ್ ಆಫೀಸ್ನಲ್ಲಿ ಉತ್ತಮವಾಗಿ ಗಳಿಕೆ ಮಾಡುತ್ತಿದೆ. ದೀಪಾವಳಿಯ ಉಡುಗೊರೆಯಾಗಿ ಅಕ್ಟೋಬರ್ 31 ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾದ ಅಮರನ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿನ ಸಾಹಸ ದೃಶ್ಯಗಳು ಮತ್ತು ಭಾವನಾತ್ಮಕ ಅಂಶಗಳನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ಅಮರನ್ ಎಮೋಷನಲ್ ಫೀಲ್ ಗುಡ್ ಸಿನಿಮಾ ಎಂದು ಪ್ರಶಂಸೆ ವ್ಯಕ್ತವಾಗುತ್ತಿದೆ.
ಅಮರನ್ ಸಿನಿಮಾ ಬಿಡುಗಡೆಗೂ ಮುನ್ನ ನಿರ್ದೇಶಕ ರಾಜ್ಕುಮಾರ್ ಪೆರಿಯಾಸಾಮಿ ನೀಡಿರುವ ಹೇಳಿಕೆ ವೈರಲ್ ಆಗಿದೆ. ತಮಿಳುನಾಡು, ಕೇರಳ ಸೇರಿದಂತೆ ವಿವಿಧೆಡೆ ಅಮರನ್ ಸಿನಿಮಾದ ಪ್ರಚಾರ ಮಾಡಲಾಗಿದೆ. ಅಮರನ್ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಹೈದರಾಬಾದ್ನಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಾಯಿ ಪಲ್ಲವಿ ಕುರಿತು ನಿರ್ದೇಶಕ ರಾಜ್ಕುಮಾರ್ ಪೆರಿಯಸಾಮಿ ಮಾಡಿರುವ ಕಾಮೆಂಟ್ಗಳು ನೆಟ್ನಲ್ಲಿ ವೈರಲ್ ಆಗುತ್ತಿವೆ.
ಸಾಯಿ ಪಲ್ಲವಿ ಅನುಗ್ರಹ
ಆ ಕಾರ್ಯಕ್ರಮದಲ್ಲಿ ರಾಜ್ಕುಮಾರ್ ಪೆರಿಯಸಾಮಿ ಮೊದಲು ಸಾಯಿ ಪಲ್ಲವಿಯ ಕುರಿತೇ ಮಾತನಾಡಿದರು. ಆಗ ಇಡೀ ಸಭಾಂಗಣದಲ್ಲಿ ಕೇಕೆ, ಶಿಳ್ಳೆ ಕೇಳಿಸಿತು. ಸಾಯಿ ಪಲ್ಲವಿಗೆ ಅಭಿಮಾನಿಗಳು ಸ್ಟಾರ್ ಹೀರೋ ರೇಂಜ್ನಲ್ಲಿ ಪ್ರೀತಿ ತೋರುತ್ತಿದ್ದಾರೆ.
"ನಾನು ಸಾಯಿ ಪಲ್ಲವಿ ಬಗ್ಗೆ ಏನು ಹೇಳುವುದು. ತಮಿಳಿನಲ್ಲಿ ಆದರೆ ಒಂದು ಪದವಿದೆ. ಅದನ್ನು ಯಾರಾದರೂ ತೆಲುಗಿನಲ್ಲೂ ಅನುವಾದಿಸಬಹುದು. ಅದು ಸಂಸ್ಕೃತ ಪದ. ಸಾಯಿ ಪಲ್ಲವಿ ಸಿನಿಮಾಕ್ಕೆ ಒಪ್ಪಿದರೆ ಅದು ಆ ಸಿನಿಮಾಕ್ಕೆ ಅನುಗ್ರಹ ಸಿಕ್ಕಂತೆ. ಅವರು ಸಿನಿಮಾಕ್ಕೆ ಸಾಕಷ್ಟು ಮೌಲ್ಯ ತರುತ್ತಾರೆ. ಅವರು ಸಿನಿಮಾಕ್ಕೆ ಒಂದು ವ್ಯಾಲ್ಯೂ ನೀಡುತ್ತಾರೆ. ಅವರು ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳು ಆ ರೀತಿಯಾಗಿರುತ್ತವೆ. ಅವರು ಒಂದು ಪ್ರಾಜೆಕ್ಟ್ ಒಪ್ಪಿಕೊಂಡರೆ ಆ ಪ್ರಾಜೆಕ್ಟ್ಗೆ ದೈವಿಕ ಕಲೆ ಬರುತ್ತದೆ. ಆಕೆ ಒಪ್ಪಿಕೊಳ್ಳುವುದು ದೇವಿಯ ಆಶೀರ್ವಾದದಂತೆ" ಎಂದು ರಾಜ್ಕುಮಾರ್ ಪೆರಿಯಾಸಾಮಿ ಹೇಳಿದಾಗ ಸಾಯಿ ಪಲ್ಲವಿ ಅಚ್ಚರಿಯ ಮುಖದಲ್ಲಿ ಥ್ಯಾಂಕ್ಸ್ ಎಂದು ಹೇಳಿದರು.
"ಸಾಯಿ ಪಲ್ಲವಿ ಅವರು ಡ್ಯಾನ್ಸರ್ ಆಗಿದ್ದಾಗ ಮತ್ತು ಟಿವಿ ಶೋಗಳನ್ನು ಮಾಡುವಾಗ ನನಗೆ ಪರಿಚಯವಿದೆ. ಅವರು ತುಂಬಾ ಅಸಲಿ, ನನಗೆ ಜನರ ಫೋನ್ ನಂಬರ್ಗಳನ್ನು ಅಡ್ಡಹೆಸರುಗಳಾಗಿ ಉಳಿಸುವ ವಿಚಿತ್ರ ಅಭ್ಯಾಸವಿದೆ. ಯಾರಾದರೂ ನನಗೆ ನಂಬರ್ ನೀಡಿದಾಗ ಅವರ ನಂಬರ್ ಸೇವ್ ಮಾಡುವುದಿಲ್ಲ. ಅವರ ಅಡ್ಡಹೆಸರು ಬರೆಯುವೆ. ಆದರೆ, ಸಾಯಿ ಪಲ್ಲವಿ ನಂಬರ್ ದೊರಕಿದಾಗ ನಾನು ಅವರನ್ನು ಹೀರೋಯಿನ್ ಎಂದು ಸೇವ್ ಮಾಡಿಕೊಂಡೆ. ಅದು ಯಾಕೆ ಎಂದು ಗೊತ್ತಿಲ್ಲ" ಎಂದು ರಾಜ್ಕುಮಾರ್ ಪೆರಿಯಾಸಾಮಿ ಹೇಳಿದ್ದಾರೆ.