logo
ಕನ್ನಡ ಸುದ್ದಿ  /  ಮನರಂಜನೆ  /  Amaran Movie: ಮುಂದಿನ ರಜೆಗೆ ಅಪ್ಪಾ ಬರ್ತಾರಲ್ವಾ? ಒಮ್ಮೆ, ಮಗದೊಮ್ಮೆ ತಪ್ಪದೇ ನೋಡಬೇಕಾದ ಸಿನಿಮಾ ́ಅಮರನ್‌- ರಾಜೀವ ಹೆಗಡೆ ಬರಹ

Amaran Movie: ಮುಂದಿನ ರಜೆಗೆ ಅಪ್ಪಾ ಬರ್ತಾರಲ್ವಾ? ಒಮ್ಮೆ, ಮಗದೊಮ್ಮೆ ತಪ್ಪದೇ ನೋಡಬೇಕಾದ ಸಿನಿಮಾ ́ಅಮರನ್‌- ರಾಜೀವ ಹೆಗಡೆ ಬರಹ

Praveen Chandra B HT Kannada

Nov 19, 2024 04:15 PM IST

google News

Amaran Movie: ಒಮ್ಮೆ, ಮಗದೊಮ್ಮೆ ತಪ್ಪದೇ ನೋಡಬೇಕಾದ ಸಿನಿಮಾ ́ಅಮರನ್‌- ರಾಜೀವ ಹೆಗಡೆ ಬರಹ

    • Amaran Movie: ಶಿವ ಕಾರ್ತಿಕೇಯನ್‌ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅಮರನ್‌ ಸಿನಿಮಾದ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ರಾಜೀವ ಹೆಗಡೆ ಮಾಡಿರುವ ವಿಮರ್ಶೆ ಇಲ್ಲಿದೆ. ಒಮ್ಮೆ, ಮಗದೊಮ್ಮೆ ತಪ್ಪದೇ ನೋಡಬೇಕಾದ ಸಿನೆಮಾ ʼಅಮರನ್‌ʼ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Amaran Movie: ಒಮ್ಮೆ, ಮಗದೊಮ್ಮೆ ತಪ್ಪದೇ ನೋಡಬೇಕಾದ ಸಿನಿಮಾ ́ಅಮರನ್‌- ರಾಜೀವ ಹೆಗಡೆ ಬರಹ
Amaran Movie: ಒಮ್ಮೆ, ಮಗದೊಮ್ಮೆ ತಪ್ಪದೇ ನೋಡಬೇಕಾದ ಸಿನಿಮಾ ́ಅಮರನ್‌- ರಾಜೀವ ಹೆಗಡೆ ಬರಹ

Amaran Movie: ದಿವಂಗತ ಮೇಜರ್‌ ಮುಕುಂದ್‌ ಬದುಕಿನ ಕಥೆ ಅಮರನ್‌ ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಶಿವ ಕಾರ್ತಿಕೇಯನ್‌ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರ ಬಿಡುಗಡೆಯಾದ ದಿನದಿಂದ ಎಲ್ಲೆಡೆ ಅಮರನ್‌ ಕುರಿತು ಪಾಸಿಟಿವ್‌ ಟಾಕ್‌ ಕೇಳಿಬರುತ್ತಿದೆ. ಇದೇ ಸಂದರ್ಭದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ರಾಜೀವ ಹೆಗಡೆ ಈ ಚಿತ್ರದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನೈಜ ಕಥೆಯಾಗಿರುವ ʼಅಮರನ್‌ʼ ಸಿನೆಮಾವನ್ನು ಅತ್ಯದ್ಭುತವಾಗಿ ನಿರ್ಮಿಸಲಾಗಿದೆ. ಒಬ್ಬ ಸೈನಿಕ ಹಾಗೂ ಸೈನ್ಯದ ಗೌರವಕ್ಕೆ ಕಿಂಚಿತ್‌ ಧಕ್ಕೆ ಬರೆದಂತೆ ತಮಿಳು ಚಿತ್ರರಂಗದಿಂದ ಸಿನೆಮಾ ಬಂದಿರುವುದು ಅವರ್ಣನೀಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹೇಗಿದೆ ಅಮರನ್‌ ಸಿನಿಮಾ?

"ರಜೆಯ ದಿನದಂದು ಮನೆಯಲ್ಲಿ ಐದಾರು ಸಿನಿಮಾ ನೋಡುವ ಖಯಾಲಿಯಿದೆ. ಆದರೆ ಒಂದೇ ದಿನ ಚಿತ್ರಮಂದಿರದಲ್ಲಿ ಎರಡು ಸಿನಿಮಾ ನೋಡಿದ್ದು ಕಡಿಮೆ. ಅದರಲ್ಲೂ ಒಬ್ಬನ್ನೇ ಇಂತಹ ದುಸ್ಸಾಹಸ ಮಾಡಿಯೇ ಇರಲಿಲ್ಲ. ಆದರೆ ʼಅಮರನ್‌ʼ ಚಿತ್ರಕ್ಕಾಗಿ ಕಾಯಲು ನಾನು ತಯಾರಿರಲಿಲ್ಲ.

ಕೆಲ ವರ್ಷಗಳ ಹಿಂದೆ ಮೇಜರ್‌ ಮುಕುಂದ್‌ ವರದರಾಜನ್‌ ಬಗ್ಗೆ ನಾನು ಓದಿದ್ದೆ. ಅವರ ಪತ್ನಿ ಇಂದು ಅವರು ಅಂದಿನ ರಾಷ್ಟ್ರಪತಿ ಪ್ರಣವ್‌ ಮುಖರ್ಜಿಯಿಂದ ʼಅಶೋಕ ಚಕ್ರʼವನ್ನು ಪಡೆಯುತ್ತಿದ್ದಾಗ, ನಿರೂಪಕರು ನೀಡಿದ್ದ ವಿವರಣೆ ಕೇಳಿ ಮೈ ಜುಮ್‌ ಎಂದಿತ್ತು. ಬಳಿಕ ಅವರ ಕಾರ್ಯಾಚರಣೆಗಳ ಬಗ್ಗೆ ಒಂದಿಷ್ಟು ಓದಿದ್ದೆ. ಮೇಜರ್‌ ಮುಕುಂದ್‌ ಪತ್ನಿಯನ್ನು ನೋಡಿ ಕಣ್ಣು ಒಮ್ಮೆ ತೇವಗೊಂಡಿತ್ತು. ನಮ್ಮನ್ನು ಸುರಕ್ಷಿತವಾಗಿಡುವರ ಕುಟುಂಬದ ಕಷ್ಟ ನೆನೆಸಿಕೊಂಡು, ನಾವೆಷ್ಟು ಸುಖವಾಗಿದ್ದೇವೆ ಎನಿಸಿತ್ತು.

ಇವೆಲ್ಲದರ ಮಧ್ಯೆ ಕೆಲ ದಿನಗಳ ಹಿಂದೆ ಮಾಜಿ ಐಪಿಎಸ್‌ ಅಧಿಕಾರಿ ಮಣಿವಣ್ಣನ್‌ ಅವರು ʼಅಮರನ್‌ʼ ಸಿನಿಮಾ ಬಗ್ಗೆ ಪೋಸ್ಟ್‌ ಹಾಕಿದ್ದರು. ಮೇಜರ್‌ ಮುಕುಂದ್‌ ಕುರಿತ ಸಿನೆಮಾ ಎಂದಾಕ್ಷಣ ಎಲ್ಲೋ ಕೇಳಿದ ಹೆಸರು ಎನಿಸಿತ್ತು. ಆದರೆ ಚಿತ್ರದ ನಾನು ಬಿಡುಗಡೆ ದಿನಾಂಕವನ್ನು ಮರೆತಿದ್ದೆ. ಯಾವಾಗ ನನ್ನ ಸಹೋದ್ಯೋಗಿ ಕಾರ್ತಿಕ್‌ ಈ ಸಿನೆಮಾ ನೋಡಿ ಅದ್ಭುತವಾಗಿದೆ ಎಂದರೋ, ಅಂದಿನಿಂದ ಸಿನಿಮಾ ನೋಡಬೇಕೆನ್ನುವ ಚಡಪಡಿಕೆ ಮತ್ತಷ್ಟು ಹೆಚ್ಚಿತು.

ಕೊನೆಗೂ ನಿನ್ನೆ ರಾತ್ರಿ ́ಅಮರನ್‌ ಸಿನಿಮಾ ನೋಡಲು ಹೋಗಿ ಕುಳಿತಾಗಲೇ ಒಂದು ಖುಷಿಯಾಯಿತು. ವಾರದ ಆರಂಭದ ದಿನ ಹಾಗೂ ರಾತ್ರಿ ಶೋ ಆಗಿದ್ದರೂ ಚಿತ್ರಮಂದಿರ ತುಂಬಿತ್ತು. ಉತ್ತಮ ಸಿನೆಮಾ, ವಿಷಯ ಕೊಟ್ಟರೇ ಜನರಿಗೆ ಯಾವುದೂ ಸಮಸ್ಯೆಯಾಗದು ಎನ್ನುವುದು ಮತ್ತೊಮ್ಮೆ ಖಾತ್ರಿಯಾಯಿತು. ಸಿನೆಮಾ ಮುಗಿಸಿ ಹೊರಬಂದಾಗ ಮಧ್ಯರಾತ್ರಿ ಒಂದೂವರೆ ಗಂಟೆಯಾಗಿತ್ತು. ಕ್ಲೈಮ್ಯಾಕ್ಸ್‌ ಮುಗಿಸಿ ನೇಮ್‌ಪ್ಲಟ್‌ ತೋರಿಸುತ್ತಿದ್ದಾಗ ನನ್ನ ಕಣ್ಣಿಗೆ ಬಿದ್ದಂತೆ ಹತ್ತು ಜನರಾದರೂ ಬಿಕ್ಕಿಬಿಕ್ಕಿ ಅಳುತ್ತಿದ್ದರು. ಸಿನಿಮಾ ಮುಗಿದಿದ್ದರೂ ಕುರ್ಚಿಯಿದ ಎದ್ದುಬರಲು ತಯಾರಿರಲಿಲ್ಲ. ಆ ಮೇಜರ್‌ ಮುಕುಂದ್‌ ಹೆಂಡತಿಯ ಮುಖದಲ್ಲಿನ ಸಾವಿರಾರು ಪ್ರಶ್ನೆ ಹಾಗೂ ಆ ಮುಗ್ದ ಮಗುವಿನ ಒಂದು ಪ್ರಶ್ನೆ ಪ್ರತಿಯೊಬ್ಬರನ್ನು ಎಲ್ಲಿಲ್ಲದಂತೆ ಕಾಡುತ್ತಿತ್ತು ಎನಿಸುತ್ತದೆ. ನಾವು ಎಷ್ಟು ಸುಲಭವಾಗಿ ಈ ದೇಶದ ಬಗ್ಗೆ ಮನಸ್ಸಿಗೆ ಬಂದಂತೆ ಕಾಮೆಂಟ್‌ ಮಾಡುತ್ತೇವೆ. ಒಂದಿಷ್ಟು ಜನರು ಸೈನ್ಯ, ಸೈನಿಕಕರನ್ನೂ ಬಿಡದೇ ಟೀಕಿಸುತ್ತಾರೆ. ಆದರೆ ಮೇಜರ್‌ ಮುಕುಂದ್‌ ರೀತಿಯ ಲಕ್ಷಾಂತರ ಜನರಿಗೆ ಭಾರತ ಹಾಗೂ ತ್ರಿವರ್ಣ ಧವಜ ಬಿಟ್ಟು ಬೇರೆನೂ ಇರುವುದಿಲ್ಲ. ಅವರು ಪ್ರತಿ ದಿನ ಸೆಲ್ಯೂಟ್‌ ಹೊಡೆಯುವ ಧ್ವಜವೇ ಅವರ ಶರೀರದ ಮೇಲೆ ಯಾವ ಕ್ಷಣದಲ್ಲಿಯದರೂ ಬರಬಹುದು.

ನಾನೊಬ್ಬ ದೇಶಭಕ್ತ ಎಂದು ತೋರಿಸಿಕೊಳ್ಳಲು ಈ ಸಿನಿಮಾ ನೋಡಬೇಕು ಎನ್ನುವುದಿಲ್ಲ. ಆದರೆ ನಾವಿಲ್ಲಿ ಮನಸ್ಸಿಗೆ ತೋಚಿದಂತೆ ಖುಷಿಯಿಂದ ಬದುಕುವಂತೆ ನೋಡಿಕೊಳ್ಳಲು ಅಲ್ಲೊಂದು ಸೈನ್ಯ ಕೆಲಸ ಮಾಡುತ್ತಿರುತ್ತದೆ. ಆ ಸೈನಿಕರ ಕುಟುಂಬವು ನಮಗಾಗಿ ಅದೆಷ್ಟು ತ್ಯಾಗ ಮಾಡುತ್ತದೆ ಎನ್ನುವ ಪ್ರತಿ ಸೂಕ್ಷ್ಮವನ್ನು ಅರಿಯಲು ಈ ಸಿನಿಮಾವನ್ನು ಕಡ್ಡಾಯವಾಗಿ ನೋಡಲೇಬೇಕು. ಮೇಜರ್‌ ಮುಕುಂದ್‌ ಒಬ್ಬ ಸೈನಿಕನಾಗಿ ವೀರ ಮರಣದಲ್ಲಿ ಗೆಲುವು ಸಾಧಿಸಿದ್ದ. ಆತನ ಪತ್ನಿ, ಮಗು ಹಾಗೂ ಅಪ್ಪ-ಅಮ್ಮ ಸೋತರೂ ವೀರಪುತ್ರ ಎನ್ನುವ ಹೆಮ್ಮೆಯಲ್ಲಿದ್ದರು. ಆದರೆ ಎಷ್ಟಾದರೂ ಒಂದು ದಶಕಗ ಕಾಲ ಪ್ರೀತಿಸಿದ್ದ ಇಂದುಗೆ ʼಚೆಟಾʼ ಸಿಗಲ್ಲ. ಆಕೆಗೆ ಪ್ರತಿದಿನ ʼಮಮ್ಮೂಟಿʼ ಎಂದು ಕರೆದು ಮಲಗಿಸುತ್ತಿದ್ದ ಧ್ವನಿ ಇರದು. ರಜೆಯಲ್ಲಿ ಅಪರೂಪಕ್ಕೆ ಬರುತ್ತಿದ್ದ ಅಪ್ಪನು ಮಗಳಿಗೆ ಕಾಯಂ ರಜೆ ತೆಗೆದುಕೊಂಡಿದ್ದ.

ಕೊನೆಯದಾಗಿ: ನೈಜ ಕಥೆಯಾಗಿರುವ ʼಅಮರನ್‌ʼ ಸಿನಿಮಾವನ್ನು ಅತ್ಯದ್ಭುತವಾಗಿ ನಿರ್ಮಿಸಲಾಗಿದೆ. ಒಬ್ಬ ಸೈನಿಕ ಹಾಗೂ ಸೈನ್ಯದ ಗೌರವಕ್ಕೆ ಕಿಂಚಿತ್‌ ಧಕ್ಕೆ ಬರೆದಂತೆ ತಮಿಳು ಚಿತ್ರರಂಗದಿಂದ ಸಿನಿಮಾ ಬಂದಿರುವುದು ಅವರ್ಣನೀಯ. ಚಿತ್ರದಲ್ಲಿ ಸತ್ಯ ಕಥೆಯಿದೆ, ಎಲ್ಲಿಯೂ ನಾಯಕನಿಗಾಗಿ ಸೇರಿಸಿದ ಮಸಾಲೆಗಳಿಲ್ಲ. ಏಕೆಂದರೆ ಈ ಯಾವುದ ದೇಶಕ್ಕೆ ಸೈನಿಕನಿಗಿತ ದೊಡ್ಡ ನಾಯಕನಿರಲ ಸಾಧ್ಯವಿಲ್ಲ. ಸಾಯಿ ಪಲ್ಲವಿ ನಟನೆಯನ್ನು ನೋಡುತ್ತಿದ್ದರೆ ಗಂಟಲು ಕಟ್ಟಿಹೋಗಿ, ಉಸಿರು ಬಿಗಿಯುತ್ತದೆ, ಗೊತ್ತಿಲ್ಲದೇ ಕಣ್ಣೀರು ಸುರಿಯುತ್ತದೆ. ಸಿನೆಮಾದ ಕೊನೆಯಲ್ಲಿ ಮೇಜರ್‌ ಮುಕುಂದ್‌ ಪುತ್ರಿಯು ಅಪ್ಪನ ಪ್ರತಿಮೆ ಮುಂದೆ ಕುಳಿತು ಒಂದು ಪ್ರಶ್ನೆ ಕೇಳುತ್ತಾಳೆ, ʼಅಮ್ಮಾ....ಮುಂದಿನ ರಜೆಗೆ ಅಪ್ಪಾ ಬರ್ತಾರಲ್ವಾ....ʼ. ಅದಕ್ಕೆ ಉತ್ತರ ಕೊಡಲಾಗದೇ ನಮ್ಮತ್ತ ನಟಿ ಸಾಯಿ ಪಲ್ಲವಿ ಅರ್ಥಾತ್‌ ʼಇಂದುʼ ನೋಡುವ ನೋಟದಲ್ಲಿ ಸಾವಿರಾರು ಪ್ರಶ್ನೆ, ಉತ್ತರಗಳಿವೆ. ಅದೇ ಕಾರಣದಿಂದ ಸಿನಿಮಾ ಮುಗಿದಿದ್ದರೂ ಕುರ್ಚಿಯಿಂದ ಏಳಲು ಆಗುವುದಿಲ್ಲ"

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ