Independence Day 2022: ತ್ರಿವರ್ಣ ಧ್ವಜದ ಅಶೋಕ ಚಕ್ರದಲ್ಲಿರುವ 24 ಗೆರೆಗಳಿಗೂ ಇದೆ ಒಂದೊಂದು ಅರ್ಥ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Independence Day 2022: ತ್ರಿವರ್ಣ ಧ್ವಜದ ಅಶೋಕ ಚಕ್ರದಲ್ಲಿರುವ 24 ಗೆರೆಗಳಿಗೂ ಇದೆ ಒಂದೊಂದು ಅರ್ಥ

Independence Day 2022: ತ್ರಿವರ್ಣ ಧ್ವಜದ ಅಶೋಕ ಚಕ್ರದಲ್ಲಿರುವ 24 ಗೆರೆಗಳಿಗೂ ಇದೆ ಒಂದೊಂದು ಅರ್ಥ

ಅಶೋಕ ಚಕ್ರದಲ್ಲಿರುವ ಪ್ರತಿಯೊಂದು ಗೆರೆಗಳಿಗೂ ಒಂದೊಂದು ಅರ್ಥವಿದೆ. ಈ ಬಗ್ಗೆ ವಿಸ್ತೃತ ಮಾಹಿತಿ ಇಲ್ಲಿದೆ ನೋಡಿ.

<p>ತ್ರಿವರ್ಣ ಧ್ವಜ</p>
ತ್ರಿವರ್ಣ ಧ್ವಜ (PTI)

ಈ ವರ್ಷ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಪೂರ್ಣಗೊಳ್ಳುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರ ಕರೆಯಂತೆ 'ಮನೆ ಮನೆಯಲ್ಲೂ ತ್ರಿವರ್ಣ' ಹಾರಿಸಲಾಗುತ್ತಿದೆ. ಭಾರತದ ರಾಷ್ಟ್ರ ಧ್ವಜದಲ್ಲಿರುವ ಮೂರು ಬಣ್ಣಗಳ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಆದರೆ ಮಧ್ಯದ ಬಿಳಿಭಾಗದೊಂದಿಗಿರುವ ಅಶೋಕ ಚಕ್ರದ ಬಗ್ಗೆ ಹಲವರಿಗೆ ಮಾಹಿತಿ ಇಲ್ಲ. ಈ ಶಾಂತಿಚಕ್ರದ ಬಗ್ಗೆ ವಿಸ್ತೃತ ಮಾಹಿತಿ ಇಲ್ಲಿದೆ ನೋಡಿ.

ಏನಿದು ಅಶೋಕ ಚಕ್ರ?

ಅಶೋಕ ಚಕ್ರವು 24 ಗೆರೆಗಳೊಂದಿಗೆ ಪ್ರತಿನಿಧಿಸುವ ‘ಧರ್ಮಚಕ್ರ’ದ ಸಂಕೇತವಾಗಿದೆ. ಇದನ್ನು ಕರ್ತವ್ಯದ ಚಕ್ರ ಮತ್ತು ಶಾಂತಿಚಕ್ರ ಎಂದೂ ಕರೆಯುತ್ತಾರೆ. ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಈ ವಿಶೇಷ ಸಂದರ್ಭದಲ್ಲಿ ಅಶೋಕ ಚಕ್ರದಲ್ಲಿರುವ 24 ಗೆರೆ ಅಥವಾ ಕಡ್ಡಿಗಳ ಅರ್ಥವನ್ನು ನೀವು ತಿಳಿಯಲೇ ಬೇಕು. ಇಲ್ಲಿರುವ ಪ್ರತಿಯೊಂದು ಗೆರೆಗಳಿಗೂ ಒಂದೊಂದು ವಿಶೇಷ ಅರ್ಥವಿದೆ.

ಅಶೋಕ ಚಕ್ರದಲ್ಲಿ ಇರುವ 24 ಗೆರೆಗಳಿಗೆ ಮನುಷ್ಯನ 24 ಗುಣಗಳನ್ನು ಪ್ರತಿನಿಧಿಸುವ ಅರ್ಥವಿದೆ. ಈ ಗೆರೆಗಳನ್ನು ಮಾನವರಿಗಾಗಿ ಮಾಡಿದ 24 ಧಾರ್ಮಿಕ ಮಾರ್ಗಗಳು ಎಂದು ಹೇಳಬಹುದು. ಅಶೋಕ ಚಕ್ರದಲ್ಲಿ ಉಲ್ಲೇಖಿಸಲಾದ ಎಲ್ಲಾ ಮಾರ್ಗಗಳು ದೇಶವನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸುತ್ತವೆ. ಬಹುಶಃ ಇದೇ ಕಾರಣಕ್ಕಾಗಿಯೇ ನಮ್ಮ ರಾಷ್ಟ್ರಧ್ವಜದ ವಿನ್ಯಾಸಕರು ಅದರಲ್ಲಿದ್ದ ಚರಕವನ್ನು ತೆಗೆದು ಧ್ವಜದ ಮಧ್ಯದಲ್ಲಿ ಅಶೋಕ ಚಕ್ರವನ್ನು ವಿನ್ಯಾಸ ಮಾಡಿದ್ದಾರೆ.

ಅಶೋಕ ಚಕ್ರದಲ್ಲಿರುವ ಪ್ರತಿಯೊಂದು ಗೆರೆಗಳ ಅರ್ಥ ಹೀಗಿದೆ…

1. ಮೊದಲ ಗೆರೆ : ಪರಿಶುದ್ಧತೆ (Chastity), ಇದು ಸರಳ ಮತ್ತು ಪರಿಶುದ್ಧ ಜೀವನ ನಡೆಸಲು ಪ್ರೇರೇಪಿಸುತ್ತದೆ.

2. ಎರಡನೇ ಗೆರೆ : ಆರೋಗ್ಯ (Health), ಇದು ದೇಹ ಮತ್ತು ಮನಸ್ಸು ಆರೋಗ್ಯವಾಗಿರಲು ಪ್ರೇರೇಪಿಸುತ್ತದೆ.

3. ಮೂರನೇ ಗೆರೆ : ಶಾಂತಿ, ದೇಶದಾದ್ಯಂತ ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಕರೆ ನೀಡುವ ಗೆರೆ ಇದಾಗಿದೆ.

4. ನಾಲ್ಕನೇ ಗೆರೆ : ತ್ಯಾಗ, ಇದು ದೇಶ ಮತ್ತು ಸಮಾಜಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಿರಬೇಕು ಎಂದು ಸಾರುತ್ತದೆ.

5. ಐದನೇ ಗೆರೆ : ನೈತಿಕತೆ (Morality), ಇದು ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಉನ್ನತ ನೈತಿಕತೆಯನ್ನು ಕಾಪಾಡಿಕೊಳ್ಳುವಂತೆ ಸಂದೇಶ ನೀಡುತ್ತದೆ.

6. ಆರನೇ ಗೆರೆ : ಸೇವೆ, ಅಗತ್ಯವಿದ್ದಾಗ ದೇಶ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ಸಿದ್ಧರಾಗಿರಿ ಎಂಬ ಸಂದೇಶ ನೀಡುತ್ತದೆ.

7. ಏಳನೇ ಗೆರೆ : ಕ್ಷಮೆ, ಮನುಷ್ಯರು ಮತ್ತು ಇತರ ಜೀವಿಗಳೊಂದಿಗೆ ಕ್ಷಮೆಯ ಭಾವನೆ ಬೆಳೆಸುವಂತೆ ಪ್ರೇರೇಪಿಸುತ್ತದೆ.

8. ಎಂಟನೇ ಗೆರೆ : ಪ್ರೀತಿ, ದೇಶ ಮತ್ತು ಸೃಷ್ಟಿಯ ಎಲ್ಲಾ ಜೀವಿಗಳಿಗೂ ಪ್ರೀತಿ ತೋರುವುದೇ ಈ ರೇಖೆಯ ಸಂದೇಶ.

9. ಒಂಬತ್ತನೇ ಗೆರೆ : ಸ್ನೇಹ, ಎಲ್ಲಾ ಪ್ರಜೆಗಳೊಂದಿಗೆ ಸ್ನೇಹ ಮತ್ತು ಸೌಹಾರ್ದಯುತ ಸಂಬಂಧ ಬೆಳೆಸಲು ಈ ಗೆರೆ ಕರೆ ನೀಡುತ್ತದೆ.

10. ಹತ್ತನೇ ಗೆರೆ: ಭ್ರಾತೃತ್ವ(Fraternity), ದೇಶದಲ್ಲಿ ಸಹೋದರತ್ವ ಭಾವನೆಯನ್ನು ಬೆಳೆಸಲು ಇದು ಪ್ರೇರಣೆ ನೀಡುತ್ತದೆ.

11. ಹನ್ನೊಂದನೇ ಗೆರೆ : ಸಂಘಟನೆ, ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಒಟ್ಟಾಗಿ ಬಲಪಡಿಸಲು ಕರೆ ನೀಡುತ್ತದೆ.

12. ಹನ್ನೆರಡನೆಯ ಗೆರೆ : ಕಲ್ಯಾಣ (Welfare), ದೇಶ ಮತ್ತು ಸಮಾಜಕ್ಕೆ ಸಂಬಂಧಿಸಿದ ಕಲ್ಯಾಣ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಯನ್ನು ಇದು ತಿಳಿಸುತ್ತದೆ.

13. ಹದಿಮೂರನೆಯ ಗೆರೆ : ಸಮೃದ್ಧಿ (Prosperity), ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಎಂಬ ಸಂದೇಶ ನೀಡುತ್ತದೆ.

14. ಹದಿನಾಲ್ಕನೆಯ ಗೆರೆ : ಕೈಗಾರಿಕೆ, ದೇಶದ ಕೈಗಾರಿಕಾ ಪ್ರಗತಿಯಲ್ಲಿ ನೆರವಾಗಲು ಕರೆ ನೀಡುತ್ತದೆ.

15. ಹದಿನೈದನೇ ಗೆರೆ : ಸುರಕ್ಷತೆ (Safety), ದೇಶದ ರಕ್ಷಣೆಗೆ ಸದಾ ಸಿದ್ಧವಾಗಿರಲು ಕರೆ ನೀಡುತ್ತದೆ.

16. ಹದಿನಾರನೇ ಗೆರೆ : ಅರಿವು ಅಥವಾ ಜಾಗೃತಿ (Awareness), ಸತ್ಯದ ಬಗ್ಗೆ ಸದಾ ಜಾಗೃತರಾಗಿರಿ ಮತ್ತು ವದಂತಿಗಳನ್ನು ನಂಬಬೇಡಿ ಎಂದು ತಿಳಿಸುತ್ತದೆ.

17. ಹದಿನೇಳನೇ ಗೆರೆ : ಸಮಾನತೆ, ಸಮಾನತೆಯ ಆಧಾರದ ಮೇಲೆ ಸಮಾಜದ ಸ್ಥಾಪನೆ.

18. ಹದಿನೆಂಟನೇ ಗೆರೆ : ಅರ್ಥ (ಹಣದ ಸರಿಯಾದ ಬಳಕೆ. ಇದು ಅರ್ಥ ವ್ಯವಸ್ಥೆಯ ಬಗ್ಗೆ ಇರುವ ಗೆರೆಯಾಗಿದೆ.)

19. ಹತ್ತೊಂಬತ್ತನೇ ಗೆರೆ : ನೀತಿ (Policy) ದೇಶದ ನೀತಿಯಲ್ಲಿ ನಂಬಿಕೆ ಇಡುವುದು.

20. ಇಪ್ಪತ್ತನೇ ಗೆರೆ : ನ್ಯಾಯ, ಎಲ್ಲರಿಗೂ ನ್ಯಾಯ ಒದಗಿಸುವ ಬಗ್ಗೆ ಮಾತನಾಡುವುದು ಮತ್ತು ಪಾಲಿಸುವುದು.

21. ಇಪ್ಪತ್ತೊಂದನೇ ಗೆರೆ : ಸಹಕಾರ (Co-operation), ಜೊತೆಗೆ ಕೆಲಸ ಮಾಡುವುದು.

22. ಇಪ್ಪತ್ತೆರಡನೆಯ ಗೆರೆ : ಕರ್ತವ್ಯಗಳು, ನಿಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಪಾಲಿಸುವುದು.

23. ಇಪ್ಪತ್ತಮೂರನೆಯ ಗೆರೆ : ಹಕ್ಕುಗಳು, ನಿಮ್ಮ ಹಕ್ಕುಗಳನ್ನು ದುರುಪಯೋಗಪಡಿಸಿಕೊಳ್ಳಬೇಡಿ.

24. ಇಪ್ಪತ್ತನಾಲ್ಕನೆಯ ಗೆರೆ : ಬುದ್ಧಿವಂತಿಕೆ, ಪುಸ್ತಕಗಳನ್ನು ಓದಲು ಇದು ಪ್ರೇರೇಪಿಸುತ್ತದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.