Rahul Jain: ಬಿ ಟೌನ್‌ನಲ್ಲಿ ಮತ್ತೊಂದು ಅತ್ಯಾಚಾರ ಆರೋಪ...ಗಾಯಕನ ವಿರುದ್ಧ ಪ್ರಕರಣ ದಾಖಲು
Aug 16, 2022 05:14 PM IST
ರಾಹುಲ್ ಜೈನ್ ವಿರುದ್ಧ ಅತ್ಯಾಚಾರ ಆರೋಪ
- ''ನನ್ನನ್ನು ವೈಯಕ್ತಿಕ ವಸ್ತ್ರ ವಿನ್ಯಾಸಕಿಯಾಗಿ ನೇಮಿಸಿಕೊಳ್ಳುವಂತೆ ಭರವಸೆ ನೀಡಿದ್ದ ಆತ ಅಂಧೇರಿಯ ಉಪನಗರದಲ್ಲಿರುವ ತನ್ನ ಫ್ಲ್ಯಾಟ್‌ಗೆ ಒಮ್ಮೆ ಭೇಟಿ ನೀಡುವಂತೆ ಹೇಳಿದ್ದ. ಆತನನ್ನು ನಂಬಿ ಮನೆಗೆ ಹೋದಾಗ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ'' ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಸೆಲಬ್ರಿಟಿಗಳೇ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಿರುವುದು ನಿಜಕ್ಕೂ ವಿಪರ್ಯಾಸ. ಇದೀಗ ಬಾಲಿವುಡ್ ಗಾಯಕ ರಾಹುಲ್ ಜೈನ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಪೊಲೀಸರು ಗಾಯಕ ರಾಹುಲ್ ಜೈನ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಕಾಸ್ಟ್ಯೂಮ್ ಸ್ಟೈಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬರ ಮೇಲೆ ರಾಹುಲ್ ಜೈನ್ ಅತ್ಯಾಚಾರವೆಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಯುವತಿ ನೀಡಿದ ದೂರಿನ ಆಧಾರದ ಮೇರೆಗೆ ರಾಹುಲ್ ಜೈನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆದರೆ ಈ ಘಟನೆ ನಡೆದಿರುವುದು 2020 ರಲ್ಲಿ ಎಂದು ಆ ಯುವತಿ ಆರೋಪಿಸುತ್ತಿದ್ದಾರೆ. ಕಾಸ್ಟ್ಯೂಮ್ ಡಿಸೈನರ್, ಕೆಲಸವೊಂದರ ನಿಮಿತ್ತ ರಾಹುಲ್ ಜೈನ್ ಅವರ ಮನೆಗೆ ಹೋದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಓಶಿವಾರಾ ಪೊಲೀಸ್ ಠಾಣೆಯಲ್ಲಿ ಆಕೆ ದೂರು ನೀಡಿದ್ದು, ''ರಾಹುಲ್ ಜೈನ್ ನನಗೆ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿ ನನ್ನ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನನ್ನನ್ನು ವೈಯಕ್ತಿಕ ವಸ್ತ್ರ ವಿನ್ಯಾಸಕಿಯಾಗಿ ನೇಮಿಸಿಕೊಳ್ಳುವಂತೆ ಭರವಸೆ ನೀಡಿದ್ದ ಆತ ಅಂಧೇರಿಯ ಉಪನಗರದಲ್ಲಿರುವ ತನ್ನ ಫ್ಲ್ಯಾಟ್‌ಗೆ ಒಮ್ಮೆ ಭೇಟಿ ನೀಡುವಂತೆ ಹೇಳಿದ್ದ. ಆತನನ್ನು ನಂಬಿ ಮನೆಗೆ ಹೋದಾಗ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ'' ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ರಾಹುಲ್ ಜೈನ್ ವಿರುದ್ಧ ಸೆಕ್ಷನ್ 376, 323 ಮತ್ತು 506 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ರಾಹುಲ್ ಜೈನ್ ಅವರನ್ನು ಬಂಧಿಸಿಲ್ಲ. ಆದರೆ ತಮ್ಮ ಮೇಲಿನ ಆರೋಪವನ್ನು ರಾಹುಲ್ ಜೈನ್ ಅಲ್ಲಗಳೆದಿದ್ದಾರೆ. ಈ ಎಲ್ಲಾ ಆರೋಪಗಳು ಸುಳ್ಳು ಮತ್ತು ಆಧಾರರಹಿತವಾಗಿವೆ. ಆಕೆ ಯಾರು ಎಂಬುದೇ ನನಗೆ ತಿಳಿದಿಲ್ಲ. ಕೆಲವು ದಿನಗಳ ಹಿಂದೆ ಮಹಿಳೆಯೊಬ್ಬರು ನನ್ನ ವಿರುದ್ಧ ಇದೇ ರೀತಿ ಆರೋಪ ಮಾಡಿದ್ದರು. ಆಗ ನನ್ನ ಪರ ನ್ಯಾಯ ದೊರೆತಿತ್ತು. ಬಹುಶ: ಇದೇ ಕೋಪದಿಂದ ಆ ಮಹಿಳೆ ಈಕೆಯನ್ನು ಮುಂದಿರಿಸಿಕೊಂಡು ಮತ್ತೆ ನನ್ನ ಹೆಸರಿಗೆ ಮಸಿ ಬಳಿಯಲು ಪ್ರಯತ್ನಿಸುತ್ತಿರಬಹುದು ಎಂದು ರಾಹುಲ್ ಜೈನ್ ಪ್ರತಿಕ್ರಿಯಿಸಿದ್ದಾರೆ. ಸ್ವತ: ರಾಹುಲ್ ಜೈನ್ ಹೇಳಿದಂತೆ 2 ವರ್ಷಗಳ ಹಿಂದೆ ಮಹಿಳೆಯೊಬ್ಬರು ಆತನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ರಾಹುಲ್ ಜೈನ್ ನನ್ನ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ, ಗರ್ಭಪಾತ ಮಾಡುವಂತೆ ಒತ್ತಾಯಿಸಿದ್ದರು. ಮದುವೆಯಾಗುವುದಾಗಿ ನಂಬಿಸಿ ನನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದರು.
2014 ರಲ್ಲಿ ರಾಹುಲ್ ಎಂಟಿವಿಯ ಅಲೋಫ್ಟ್ ಸ್ಟಾರ್ ಶೋನಲ್ಲಿ ಕಾಣಿಸಿಕೊಂಡ ನಂತರ ಅವರಿಗೆ ಒಳ್ಳೆ ಜನಪ್ರಿಯತೆ ಬಂದಿತ್ತು. ನಂತರ ಅವರು ಸ್ಪಾಟ್ಲೈಟ್ ವೆಬ್ ಸರಣಿಗಾಗಿ 'ಚಲ್ ದಿಯಾ' 'ತೇರಿ ಯಾದ್' (ಫೀವರ್), 'ಆನೆ ವಾಲೆ ಕಲ್', 'ಘರ್ ಸೆ ನಿಕ್ಲಾ', 'ನಾ ತುಮ್ ರಹೇ ನಾ ಹಮ್' ಹಾಡುಗಳನ್ನು ಹಾಡಿದರು. ರಾಹುಲ್ ಅನೇಕ ಚಿತ್ರಗಳಿಗೆ ಸಂಗೀತ ಸಂಯೋಜಕರಾಗಿ ಕೂಡಾ ಕೆಲಸ ಮಾಡಿದ್ದಾರೆ. ಇದುವರೆಗೂ ಇಬ್ಬರು ಮಹಿಳೆಯರು ರಾಹುಲ್ ಜೈನ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು ತನಿಖೆ ನಂತರವಷ್ಟೇ ನಿಜ ವಿಚಾರ ಬಯಲಿಗೆ ಬರಲಿದೆ.