ಭೈರತಿ ರಣಗಲ್ ಸಿನಿಮಾ ನೋಡುವ ಮುನ್ನ ಮಫ್ತಿ ಸಿನಿಮಾದ ಈ ಕಥೆ ಓದಿಕೊಳ್ಳಿ; ರೋಣಾಪುರ ಎಂಬ ಊರು… ಪೂರ್ತಿ ಸಿನಿಮಾನೇ ಇಲ್ಲಿದೆ ನೋಡಿ
Nov 14, 2024 06:22 PM IST
ಭೈರತಿ ರಣಗಲ್ ಸಿನಿಮಾ ನೋಡುವ ಮುನ್ನ ಮಫ್ತಿ ಸಿನಿಮಾದ ಈ ಕಥೆ ಓದಿ
- Mufti Movie Story: ಶಿವರಾಜ್ ಕುಮಾರ್ ನಟನೆಯ ಭೈರತಿ ರಣಗಲ್ (Shivarajkumar Bhairathi Ranagal Movie) ಸಿನಿಮಾ ನವೆಂಬರ್ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಆ ಸಿನಿಮಾಕ್ಕೆ ಕಾರಣವಾದ ಮಫ್ತಿ ಸಿನಿಮಾದ ಕಥೆ ನೆನಪಿಸಿಕೊಂಡರೆ ಭೈರತಿ ರಣಗಲ್ ಉತ್ತಮವಾಗಿ ಅರ್ಥವಾಗಬಹುದು. ಇಲ್ಲಿ ಮಫ್ತಿ ಸಿನಿಮಾದ ಕಥೆ ನೀಡಲಾಗಿದೆ.
Mufti Movie Story: ಶಿವರಾಜ್ ಕುಮಾರ್ ನಟನೆಯ ಭೈರತಿ ರಣಗಲ್ ಸಿನಿಮಾ ನವೆಂಬರ್ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಆ ಸಿನಿಮಾಕ್ಕೆ ಕಾರಣವಾದ ಮಫ್ತಿ ಸಿನಿಮಾದ ಕಥೆ ನೆನಪಿಸಿಕೊಂಡರೆ ಭೈರತಿ ರಣಗಲ್ ಉತ್ತಮವಾಗಿ ಅರ್ಥವಾಗಬಹುದು. ಇಲ್ಲಿ ಮಫ್ತಿ ಸಿನಿಮಾದ ಕಥೆ ನೀಡಲಾಗಿದೆ.
ಮಫ್ತಿ ಸಿನಿಮಾದ ಕಥೆ: ಮಂಗಳೂರಿನಲ್ಲಿ ಅಪರಾಧಿಗಳನ್ನು ಮಟ್ಟ ಹಾಕುತ್ತಿದ್ದ ಗಣ ಎಂಬ ಅಂಡರ್‌ಕವರ್ ಪೊಲೀಸ್‌ನನ್ನು ರೋಣಾಪುರ ಎಂಬ ಊರಿಗೆ ಕಳುಹಿಸಲಾಗುತ್ತದೆ. ರೋಣಾಪುರ ಎಂಬ ಊರಲ್ಲಿ ನಡೆಯುವ ಎಲ್ಲಾ ಅಪರಾಧಗಳಿಗೆ ಅಲ್ಲಿರುವ ಭೈರವ ರಣಗಲ್ ಕಾರಣ ಎಂಬ ಗುಮಾನಿಯ ಮೇರೆಗೆ ಈ ಪೊಲೀಸ್‌ನನ್ನು ಮಾರುವೇಷದಲ್ಲಿ ಅಲ್ಲಿಗೆ ಕಮಿಷನರ್ ಕಳುಹಿಸುತ್ತಾರೆ. ಈತ ಪೊಲೀಸ್ ಎನ್ನುವುದು ಯಾರಿಗೂ ತಿಳಿಯಬಾರದು ಎಂದು ಮೊದಲೇ ತಿಳಿಸಲಾಗಿರುತ್ತದೆ. ರೋಣಾಪುರಕ್ಕೆ ಬಂದ ಗಣನನ್ನು ಅಲ್ಲಿ ವಿಷ್ಣು ಸ್ವಾಗತಿಸಿ ಕಾಶಿಯನ್ನು ಭೇಟಿ ಮಾಡಿಸುತ್ತಾನೆ. ಅಲ್ಲಿಂದ ಭೈರತಿ ರಣಗಲ್‌ನ ಸಿಮೆಂಟ್ ಫ್ಯಾಕ್ಟರಿಗೆ ಪ್ರಯಾಣ ಬೆಳೆಸುತ್ತಾರೆ.
ಇನ್ನೊಂದೆಡೆ ಗುರುಕಾಂತ್ ಭಂಡ್ರಿ ಕರ್ನಾಟಕದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಗೆ ರೋಣಾಪುರವನ್ನು ಆಯ್ಕೆ ಮಾಡಿದ್ದಾರೆ. ಆದರೆ, ಅವರ ಪಕ್ಷದ ಸದಸ್ಯ ಎಂಪಿ ಏಕನಾಥ ನಿಂಬಾಳ್ಕರ್ ಅವರು ಭೈರತಿ ಮಾಡಿಸಿದ ಅಪಘಾತದಿಂದ ಸಾಯುತ್ತಾರೆ. ಈ ಕಾರಣದಿಂದ ಇವರು ಸಾಮಾಜಿಕ ಕಾರ್ಯಕರ್ತ ಮತ್ತು ಪರಿಸರವಾದಿ ಅಶ್ವಥ್ ಕುದರಿ ಅವರನ್ನು ಭೇಟಿ ಮಾಡುತ್ತಾರೆ. ತಮ್ಮ ಪಕ್ಷದ ಅಭ್ಯರ್ಥಯಾಗುವಂತೆ ತಿಳಿಸುತ್ತಾರೆ. ಆದರೆ, ಅಶ್ವಥ್ ಅದಕ್ಕೆ ಒಪ್ಪೋದಿಲ್ಲ.
ಭೈರತಿಯ ನಂಬಿಕೆ ಗಳಿಸಲು ಗಣ ಪ್ರಯತ್ನ
ಗೂಡ್ಸ್ ರೈಲಿನಿಂದ ಸ್ಟಾಕ್ ಕಪ್ಪು ಹಣವನ್ನು ಇಳಿಸಲು ಗ್ಯಾಂಗ್‌ಗೆ ಸಹಾಯ ಮಾಡುವ ಮೂಲಕ ಗಣ ಭೈರತಿಯ ಎಡಗೈ ಬಂಟ ಸಿಂಗ ಮತ್ತು ಬಲಗೈ ಬಂಟ ಶಬರಿಯ ನಂಬಿಕೆಯನ್ನು ಗಳಿಸುತ್ತಾನೆ. ಶಬರಿ ಮತ್ತು ಸಿಂಗನಿಂದ ಕಾರ್ಯಾಚರಣೆಗೆ ಸೇರಿಸುವಂತೆ ತಿಳಿಸುತ್ತಾನೆ. ಗಣನ ಬಗ್ಗೆ ಕಾಶಿಗೆ ಅಸೂಯೆಯೂ ಉಂಟಾಗುತ್ತದೆ. ಭೈರತಿ ನಡೆಸುವ ಗಣಿಗಾರಿಕೆಯಿಂದ ಪರಿಸರಕ್ಕೆ ಆಗುವ ತೊಂದರೆ ವಿರುದ್ಧ ಕುದರಿ ಹೋರಾಟ, ರಾಲಿ ನಡೆಸುತ್ತಾರೆ. ಈ ಸಮಯದಲ್ಲಿ ಭೈರತಿ ತನ್ನ ಗರಾಮದಲ್ಲಿ ಗಲಭೆ ನಡೆಸಿ ರಾಲಿಯನ್ನು ಬೆಂಬಲಿಸುವವರು ಮನೆಗಳನ್ನು ಸುಟ್ಟು ಹಾಕುತ್ತಾನೆ. ಇದಾದ ಬಳಿಕ ಕುದರಿ ಅನಿವಾರ್ಯವಾಗಿ ಗುರುಕಾಂತ್ ಭಂಡ್ರಿಯ ಪಕ್ಷದ ಪ್ರಚಾರಕ್ಕೆ ಜತೆಯಾಗುತ್ತಾರೆ.
ಭೈರತಿಯ ಮನೆಗೆ ಭೇಟಿ
ಈ ನಡುವೆ ಗೂಡ್ಸ್ ರೈಲಿನಲ್ಲಿ ಲೆಕ್ಕವಿಲ್ಲದ ಹಣದ ಮಾಹಿತಿಯನ್ನು ಸೋರಿಕೆ ಮಾಡಿದ ಪೋಲೀಸರನ್ನು (ಅವರು ರಹಸ್ಯ ಕಾರ್ಯಾಚರಣೆಯಲ್ಲಿ ಗಣಗೆ ಸಹಾಯ ಮಾಡಿದವರಾಗಿದ್ದಾರೆ. ಅವರಿಗೆ ಗಣನ ಗುರುತು ತಿಳಿದಿಲ್ಲ) ಕಾಶೀ ಕರೆತರುತ್ತಾನೆ. ಇವರೆಲ್ಲರನ್ನು ಗುಂಡು ಹಾರಿಸಿ ಸಾಯಿಸುವಂತೆ ಗಣನಿಗೆ ಕಾಶಿ ತಿಳಿಸುತ್ತಾನೆ. ಇಷ್ಟವಿಲ್ಲದೆ ಇದ್ದರೂ ಪೊಲೀಸರನ್ನು ಗಣ ಗುಂಡಿಟ್ಟು ಸಾಯಿಸುತ್ತಾನೆ. ಇದಾದ ಬಳಿಕ ಆತನಿಗೆ ತಪ್ಪಿತಸ್ಥ ಭಾವನೆ ಮೂಡುತ್ತದೆ. ಭೈರತಿ ರಣಗಲ್‌ನನ್ನು ಬಂಧಿಸಲೇಬೇಕು ಎಂದು ತೀರ್ಮಾನಿಸುತ್ತಾನೆ. ಆತ ಭೈರತಿಯ ಗಣಿಗೆ ಬರುತ್ತಾನೆ. ನಿಂಬಾಳ್ಕರ್‌ನನ್ನು ಕೊಂದವ ಭೈರತಿ ಅಲ್ಲ ಎಂದು ಗಣನಿಗೆ ತಿಳಿಯುತ್ತದೆ. ಸಂಸದನಾಗಲು ಪ್ರಯತ್ನಿಸುತ್ತಿರುವ ಪಶುಪತಿಯು ದೇವಾಲಯದ ಮೇಲೆ ನಡೆಸುವ ದಾಳಿಯ ಸಂದರ್ಭದಲ್ಲಿ ಗಣನನ್ನು ಭೈರತಿ ರಕ್ಷಿಸುತ್ತಾನೆ. ಭೈರತಿ ಪಶುಪತಿಯ ಮೇಲೆ ದಾಳಿ ನಡೆಸಿ ಎಚ್ಚರಿಸುತ್ತಾನೆ. ಭೈರತಿಯು ಗಣನನ್ನು ತನ್ನ ಮನೆಗೆ ಊಟಕ್ಕೆ ಆಹ್ವಾನಿಸುತ್ತಾನೆ. ಅಲ್ಲಿ ಭೈರತಿಯ ಸಹೋದರಿ ವೇದಾವತಿ ಮತ್ತು ಮಗಳು ಅವ್ನಿಯನ್ನು ಗಣ ಭೇಟಿಯಾಗುತ್ತಾನೆ.
ಬ್ಯಾಂಕ್ ಖಾತೆ ವಿವರ ಸಂಗ್ರಹಿಸಿದ ಗಣ
ಭೈರತಿ ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ಭೈರತಿಯ ಮನೆಗೆ ಗಣ ಪ್ರವೇಶಿಸಿ ಶ್ರೀ ರಾಮಾಯಣ ದರ್ಶನಂ ಎಂಬ ಪುಸ್ತಕದಲ್ಲಿ ವಿವಿಧ ಬ್ಯಾಂಕ್ ಖಾತೆ ಸಂಖ್ಯೆಗಳನ್ನು ಸಂಗ್ರಹಿಸಿ ಹೊರಕ್ಕೆ ಬರುತ್ತಾನೆ. ಇದೇ ಸಂದರ್ಭದಲ್ಲಿ ಭೈರತಿಯನ್ನು ಮುಗಿಸಲು ಕಾಶಿಯು ಪಶುಪತಿ ಜತೆ ಕೈ ಜೋಡಿಸಿದ್ದಾನೆ ಎಂದು ಸಿಂಗ ಮಾಹಿತಿ ನೀಡುತ್ತಾನೆ. ಸಿಂಗನು ಭೈರತಿಗೆ ಕಾಶಿಯನ್ನು ಕೊಲ್ಲುವಂತೆ ತಿಳಿಸುತ್ತಾನೆ. ಕಾಶಿಯನ್ನು ಗಣ ಕೊಲ್ಲುತ್ತಾನೆ. ಆತನ ಬ್ಯಾಂಕ್ ಖಾತೆ ಪರಿಶೀಲಿಸುತ್ತಾನೆ. ಈತನ ಖಾತೆಯಿಂದ ಹಣವನ್ನು ಅನಾಥಾಶ್ರಮಗಳು, ವೃದ್ಧಾಶ್ರಮಗಳು ಮತ್ತು ಸಾರ್ವಜನಿಕ ಶಾಲೆಗಳಿಗೆ ವರ್ಗಾಯಿಸಿರುವುದು ತಿಳಿದುಬರುತ್ತದೆ. ಭೈರತಿ ಒಳ್ಳೆಯವನು ಎಂದು ಗಣನಿಗೆ ಅರ್ಥವಾಗುತ್ತದೆ. ಗ್ರಾಮದ ಜನರು ಭೈರತಿಯನ್ನು ತಮ್ಮ ದೇವರಂತೆ ನೋಡುತ್ತಿದ್ದಾರೆ ಎಂದು ತಿಳಿಯುತ್ತಾನೆ.
ಕುದರಿ ಎಂಬ ಸಮಾಜಸೇವಕನಿಗೆ ಭೈರತಿ ಅಪರಾಧಿ ಅಲ್ಲ ಎಂದು ತಿಳಿಯುತ್ತದೆ.. ಭೈರತಿಯು ಕುದರಿಗೆ ಹೂವು, ಸಸ್ಯಗಳನ್ನು ಉಡುಗೊರೆಯಾಗಿ ನೀಡುತ್ತಾನೆ. ಸ್ವತಂತ್ರವಾಗಿ ಚುನಾವಣೆಗೆ ನಿಲ್ಲುವಂತೆ ಕೇಳಿಕೊಳ್ಳುತ್ತಾನೆ. ಚುನಾವಣಾ ಕಚೇರಿಗೆ ಹೋಗುವ ಸಮಯದಲ್ಲಿ ಭೈರತಿ ಮತ್ತು ಗಣ ಪ್ರಯಾಣಿಸುತ್ತಿದ್ದ ಕಾರು ಸ್ಪೋಟಗೊಳ್ಳುತ್ತದೆ. ಶಬರಿಯು ಚುನಾವಣಾ ಕಚೇರಿ ತಲುಪುವ ಸಮಯದಲ್ಲಿ ದಾಳಿಯಿಂದ ಬದುಕಿ ಉಳಿದ ಗಣ ಮತ್ತು ಭೈರತಿ ಅಲ್ಲಿ ತಲುಪುತ್ತಾರೆ. ಶಬರಿ ವಿರುದ್ಧ ಹೋರಾಡುತ್ತಾರೆ. ಭೈರತಿಯು ಶಬರಿಯನ್ನು ಕೊಂದು ದೀಪಸ್ತಂಭದಲ್ಲಿ ನೇಣು ಹಾಕುತ್ತಾನೆ.
ತನ್ನ ಪತಿಯನ್ನು ಕೊಂದ ಭೈರತಿಯನ್ನು ವೇದಾವತಿ ದ್ವೇಷಿಸುತ್ತಾಳೆ. ಆಕೆ ಸಿಂಗ ಮತ್ತು ಗಣನ ಮಾತು ಕೇಳಿಸಿಕೊಳ್ಳುತ್ತಾಳೆ. ಲಕ್ಷಾಂತರ ಗ್ರಾಮಸ್ಥರನ್ನು ಕೊಂದ ವೈದ್ಯಕೀಯ ಹಗರಣದಲ್ಲಿ ತನ್ನ ಪತಿ ಭಾಗಿಯಾಗಿರುವ ಸತ್ಯ ಆಕೆಗೆ ತಿಳಿಯುತ್ತದೆ. ಇದೇ ಕಾರಣಕ್ಕೆ ಭೈರತಿಯು ತನ್ನ ಗಂಡನನ್ನು ಸಾಯಿಸಿದ್ದಾನೆ ಎಂದು ತಿಳಿಯುತ್ತಾಳೆ. ಭೈರತಿ ವಿರುದ್ಧ ಸಾಕಷ್ಟು ಸಾಕ್ಷ್ಯ ಸಂಗ್ರಹಿಸಿದ ಬಳಿಕ ಕಮಿಷನರ್ ಅಣತಿಯಂತೆ ಗಣ ಅಲ್ಲಿಂದ ಹೋಗುತ್ತಾನೆ. ಈ ಸಮಯದಲ್ಲಿ ರಘುವೀರ್ ಜತೆ ಫೈಟಿಂಗ್‌ಆಗುತ್ತದೆ. ದಾಳಿಯಿಂದ ಬದುಕುಳಿದ ಗಣನ ಜತೆ ಬಳಿಕ ಭೈರತಿಯೂ ಸೇರುತ್ತಾನೆ. ರಘುವೀರ್ ಭಂಡಾರಿಯನ್ನು ಸಾಯಿಸುತ್ತಾರೆ.
ಮಫ್ತಿ ಫುಲ್ ಮೂವಿ ಇಲ್ಲಿದೆ ನೋಡಿ
ಇಲ್ಲಿಗೆ ಮಫ್ತಿ ಸಿನಿಮಾ ನಿಂತಿದೆ. ಹಾಗಾದರೆ, ಮುಂದಿನ ಕಥೆ ಏನು? ಭೈರತಿ ರಣಗಲ್‌ನ ಭೈರತಿಯು ತನ್ನ ಊರಿನವರ ಒಳಿತಿಗಾಗಿ ಲಾಯರ್ ಕೋಟು ಧರಿಸಿ ನ್ಯಾಯ ಕೇಳಲಿದ್ದಾರೆ. ಇದರ ಜತೆ ಇನ್ನೇನು ಇರಲಿದೆ? ಭೈರತಿ ರಣಗಲ್ ಸಿನಿಮಾ ನೋಡಿದಾಗ ತಿಳಿಯಲಿದೆ.