logo
ಕನ್ನಡ ಸುದ್ದಿ  /  ಮನರಂಜನೆ  /  ಭಾಗ್ಯಾ ಯಾವತ್ತಿದ್ರೂ ದಡ್ಡಿ ಅವಳನ್ನು ನಂಬಿಸೋದು ಸುಲಭ, ಪೊಲೀಸರಿಗೆ ಸಿಕ್ಕಿಬಿದ್ರೂ ಕಡಿಮೆಯಾಗದ ತಾಂಡವ್‌ ದುರಹಂಕಾರ; ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಗ್ಯಾ ಯಾವತ್ತಿದ್ರೂ ದಡ್ಡಿ ಅವಳನ್ನು ನಂಬಿಸೋದು ಸುಲಭ, ಪೊಲೀಸರಿಗೆ ಸಿಕ್ಕಿಬಿದ್ರೂ ಕಡಿಮೆಯಾಗದ ತಾಂಡವ್‌ ದುರಹಂಕಾರ; ಭಾಗ್ಯಲಕ್ಷ್ಮೀ ಧಾರಾವಾಹಿ

Rakshitha Sowmya HT Kannada

Nov 25, 2024 09:26 AM IST

google News

ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 24ರ ಎಪಿಸೋಡ್‌

  • Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 24ರ ಎಪಿಸೋಡ್‌ನಲ್ಲಿ ಪೊಲೀಸ್‌ ಸ್ಟೇಷನ್‌ ಹೋಗುವುದನ್ನು ತಪ್ಪಿಸಲು ತಾಂಡವ್‌ ಭಾಗ್ಯಾಗೆ ಕರೆ ಮಾಡಿ ಬರಲು ಹೇಳುತ್ತಾಳೆ. ಎಲ್ಲಾ ಗೊತ್ತಿದ್ದರೂ ಭಾಗ್ಯಾ ಹೊರಡಲು ಮುಂದಾಗುತ್ತಾಳೆ. ಬಹುಶಃ ತಾಂಡವ್‌ ಮನಸ್ಸು ಭಾಗ್ಯಾ ಕಡೆ ವಾಲುತ್ತಿದೆ ಎಂದು ಕುಸುಮಾ ಖುಷಿಯಾಗುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 24ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 24ರ ಎಪಿಸೋಡ್‌ (PC: Jio Cinema)

Bhagyalakshmi Kannada Serial: ದಂಪತಿಗಾಗಿ ಆಯೋಜಿಸಿದ್ದ ಕಪಲ್‌ ಟ್ರಿಪ್‌ಗೆ ತಾಂಡವ್‌-ಶ್ರೇಷ್ಠಾ ಬಂದಿರುವುದು ಹೋಟೆಲ್‌ನವರಿಗೆ ಗೊತ್ತಾಗಿದೆ. ಅವರಿಬ್ಬರೂ ಗಂಡ ಹೆಂಡತಿ ಅಲ್ಲ ಎಂದು ಗೊತ್ತಾಗಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸ್‌ ಸ್ಟೇಷನ್‌ಗೆ ಹೋಗಬಾರದು ಎಂದಾದರೆ ನಿಮ್ಮ ಪತ್ನಿಗೆ ಕಾಲ್‌ ಮಾಡಿ, ಅವರು ಬಿಡು ಎಂದರೆ ನಿಮ್ಮನ್ನು ಬಿಡುತ್ತೇವೆ ಎಂದು ಹೋಟೆಲ್‌ನವರು ತಾಂಡವ್‌ಗೆ ಆಯ್ಕೆ ಕೊಟ್ಟಿದ್ದಾರೆ.

ಭಾಗ್ಯಾಗೆ ಕರೆ ಮಾಡಿ ರೆಸಾರ್ಟ್‌ ಬಳಿ ಬರಲು ಹೇಳಿದ ತಾಂಡವ್‌

ಭಾಗ್ಯಾಗೆ ಕಾಲ್‌ ಮಾಡಿದರೆ ಸಮಸ್ಯೆ ದೊಡ್ಡದಾಗುತ್ತದೆ ಎಂದು ತಾಂಡವ್‌ ಅವಳಿಗೆ ಕರೆ ಮಾಡಲು ಹಿಂದೇಟು ಹಾಕುತ್ತಾನೆ. ಅದರೆ ಶ್ರೇಷ್ಠಾ ಮಾತ್ರ ಭಾಗ್ಯಾಗೆ ಕರೆ ಮಾಡಿ ಇಲ್ಲಿಗೆ ಬರಹೇಳು, ನನಗಾದರೂ ಏನು ಸಮಸ್ಯೆ ಇಲ್ಲ, ನನ್ನ ಅಪ್ಪ ಅಮ್ಮ ನನಗೂ ಅವರಿಗೂ ಸಂಬಂಧ ಇಲ್ಲ ಎಂದು ಸುಮ್ಮನಾಗಿದ್ದಾರೆ. ಆದರೆ ನಿನಗೆ ಮನೆ, ಕುಟುಂಬ ಇದೆ, ಆಫೀಸ್‌ ಎಲ್ಲದರ ಬಗ್ಗೆಯೂ ಯೋಚಿಸಬೇಕು. ಒಂದು ವೇಳೆ ಪೊಲೀಸ್‌ ಸ್ಟೇಷನ್‌ಗೆ ಹೋಗಿ ಎಲ್ಲರಿಗೂ ವಿಚಾರ ಗೊತ್ತಾದರೆ ಖಂಡಿತ ಮಾನ ಮರ್ಯಾದೆ ಹೋಗುತ್ತದೆ ಎಂದು ಶ್ರೇಷ್ಠಾ ತಾಂಡವ್‌ಗೆ ಹೇಳುತ್ತಾಳೆ. ಅದನ್ನು ಕೇಳಿ ತಾಂಡವ್‌ ಗಾಬರಿಯಾಗುತ್ತಾನೆ.

ಇತ್ತ ಮನೆಗೆ ಬಂದ ಭಾಗ್ಯಾ, ತನಗಾದ ಅನ್ಯಾಯ ನೆನೆಯುತ್ತಾ ಅಳುತ್ತಾಳೆ. ಭಾಗ್ಯಾ ಏಕೆ ವಿಚಿತ್ರವಾಗಿ ವರ್ತಿಸುತ್ತಿದ್ದಾಳೆ, ಅವಳಿಗೆ ಏನಾಯ್ತು ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಂತೆ ಭಾಗ್ಯಾ ಅಲ್ಲಿಗೆ ಬರುತ್ತಾಳೆ. ತಿಂಡಿ ಬಡಿಸಿಕೊಂಡು ತಿನ್ನುತ್ತಾಳೆ. ಭಾಗ್ಯಾ ತನ್ನ ಪಾಡಿಗೆ ತಾನು ತಿಂಡಿ ತಿನ್ನುವುದನ್ನು ನೋಡಿದ ಕುಸುಮಾ ಏನಾಯ್ತು ನಿನಗೆ ಈ ರೀತಿ ಏಕೆ ವರ್ತಿಸುತ್ತಿದ್ದೀಯ? ತಿಂಡಿ ತಿಂದು ಬಹಳ ಬಹಳ ವರ್ಷಗಳಾದವಳಂತೆ ತಿನ್ನುತ್ತಿದ್ದೀಯ ಎನ್ನುತ್ತಾಳೆ. ಕುಸುಮಾ ಮಾತುಗಳನ್ನು ಕೇಳಿ ಧರ್ಮರಾಜ್‌, ಅವಳು ತಿಂಡಿ ತಿನ್ನುವುದನ್ನು ಏಕೆ ಪ್ರಶ್ನಿಸುತ್ತಿದ್ದೀಯ ಎಂದು ಕೇಳುತ್ತಾನೆ. ಅವಳು ಎಂದಿಗೂ ನಮಗೆ ಬಡಿಸದೆ ತಿಂದಿಲ್ಲ, ಅದಕ್ಕೆ ನನಗೆ ಆಶ್ಚರ್ಯವಾಗುತ್ತಿದೆ ಎನ್ನುತ್ತಾಳೆ.

ಸಮಸ್ಯೆಗೆ ಸಿಲುಕಿದ್ದರೂ ಕಡಿಮೆಯಾಗದ ತಾಂಡವ್‌ ದುರಹಂಕಾರ

ಇತ್ತ ಪೊಲೀಸರಿಂದ ಬಚಾವ್‌ ಆಗಲು ಶ್ರೇಷ್ಠಾ, ತಾಂಡವ್‌ ಕೈಯಿಂದ ಮೊಬೈಲ್‌ ಕಿತ್ತುಕೊಂಡು ಭಾಗ್ಯಾಗೆ ಕರೆ ಮಾಡುತ್ತಾಳೆ. ಆದರೆ ಭಾಗ್ಯಾ ಮೊಬೈಲ್‌ ಸ್ವಿಚ್‌ ಆಫ್‌ ಆಗಿರುತ್ತದೆ. ನಂತರ ಕುಸುಮಾಗೆ ಕರೆ ಮಾಡಿ ತಾಂಡವ್‌ಗೆ ಮಾತನಾಡಲು ಹೇಳುತ್ತಾಳೆ. ಭಾಗ್ಯಾ ಜೊತೆ ಮಾತನಾಡಬೇಕು ಎಂದಾಗ ಕುಸುಮಾ ಖುಷಿಯಾಗಿ ಭಾಗ್ಯಾಗೆ ಮಾತನಾಡುವಂತೆ ಹೇಳುತ್ತಾಳೆ. ನಾನು ಒಂದು ಸಣ್ಣ ಸಮಸ್ಯೆಗೆ ಸಿಲುಕಿದ್ದೇನೆ ಬೇಗ ಇಲ್ಲಿಗೆ ಬಾ ಎಂದು ಮನವಿ ಮಾಡುತ್ತಾನೆ. ಭಾಗ್ಯಾಗೆ ಎಲ್ಲಾ ವಿಚಾರ ಗೊತ್ತಿದ್ದರೂ ಏನೂ ಮಾತನಾಡದೆ ಅಲ್ಲಿಂದ ಹೊರಡುತ್ತಾಳೆ. ನಾಳೆ ಭಾಗ್ಯಾ, ತಾಂಡವ್‌ ಮದುವೆ ವಾರ್ಷಿಕೋತ್ಸವ ಅದಕ್ಕೆ ತಾಂಡವ್‌ ಹೊರಗೆ ಕರೆದಿದ್ದಾನೆ ಎಂದು ಕುಸುಮಾ ಹೇಳಿದಾಗ ಎಲ್ಲರೂ ಖುಷಿಯಾಗುತ್ತಾರೆ.

ಭಾಗ್ಯಾಗೆ ಇಲ್ಲಿ ಬರಲು ಹೇಳಬಾರದಿತ್ತು. ಅವಳು ಇಲ್ಲಿ ಬಂದು ಕಥೆ ಬದಲಿಸಿದರೆ ಏನು ಮಾಡುವುದು ಅಂತ ಶ್ರೇಷ್ಠಾ, ತಾಂಡವ್‌ಗೆ ಕೇಳುತ್ತಾಳೆ. ಭಾಗ್ಯಾ ಎಂದೆಂದಿಗೂ ದಡ್ಡಿ, ಅವಳನ್ನು ಹೇಗೆ ನಂಬಿಸಬೇಕೆಂದು ನನಗೆ ಗೊತ್ತು, ಮೊದಲೆಲ್ಲಾ ನಾವಿಬ್ರೂ ಒಟ್ಟಿಗೆ ಸಿಕ್ಕಿಹಾಕಿಕೊಂಡಾಗ ಕಥೆ ಹೇಳಿ ಬಚಾವ್‌ ಆದಂತೆ ಈಗಲೂ ತಪ್ಪಿಸಿಕೊಳ್ಳೋಣ. ಅವಳು ನನ್ನ ಮುಂದೆ ತುಟಿ ಬಿಚ್ಚುವುದಿಲ್ಲ ನೋಡ್ತಿರು ಎಂದು ತಾಂಡವ್‌ ಭಾಗ್ಯಾ ಬಗ್ಗೆ ಕೊಂಕು ಮಾತುಗಳನ್ನಾಡುತ್ತಾನೆ.

ಭಾಗ್ಯಾ ಬಂದು ತಾಂಡವ್‌, ಶ್ರೇಷ್ಠಾಳನ್ನು ಪೊಲೀಸರಿಂದ ಬಿಡಿಸುತ್ತಾಳಾ? ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ