ಸಿಟಿ ನಡುವೆ 38 ಎಕರೆ ಜಮೀನು, ಎಕರೆಗಟ್ಟಲೇ ಜಾಗದಲ್ಲಿ ಮನೆ! ಬಿಗ್ ಬಾಸ್ ಮಾಜಿ ಸ್ಪರ್ಧಿ ವರ್ತೂರ್ ಸಂತೋಷ್ ಹೋಮ್ ಟೂರ್
Dec 22, 2024 01:00 PM IST
ಬಿಗ್ ಬಾಸ್ ಮಾಜಿ ಸ್ಪರ್ಧಿ ವರ್ತೂರ್ ಸಂತೋಷ್ ಹೋಮ್ ಟೂರ್
- ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ನಾಲ್ಕನೇ ರನ್ನರ್ ಅಪ್ ಆದ ವರ್ತೂರ್ ಸಂತೋಷ್, ಆ ಶೋ ಮೂಲಕ ನಾಡಿನ ಜನಕ್ಕೆ ಹೆಚ್ಚು ಪರಿಚಿತರಾದರು. ಹಳ್ಳಿಕಾರ್ ಒಡೆಯ ಎಂದೇ ಖ್ಯಾತಿ ಪಡೆದ ಸಂತೋಷ್ ಅವರ ವರ್ತೂರಿನ ಮನೆ ಹೇಗಿದೆ? ಎಷ್ಟು ಎಕರೆ ವ್ಯಾಪ್ತಿಯಲ್ಲಿ ಅವರ ಮನೆಗಳಿವೆ? ಹೀಗಿದೆ ಮಾಹಿತಿ.
Varthur Santhosh Home Tour: ಬಿಗ್ ಬಾಸ್ ಸೀಸನ್ 10ರ ಮೂಲಕ ಕರುನಾಡ ಮಂದಿಗೆ ಹೆಚ್ಚು ಪರಿಚಿತವಾದ ಮುಖ ಮತ್ತು ಇಷ್ಟವಾದ ವ್ಯಕ್ತಿ. ಕೋಟಿ ಕೋಟಿ ಆಸ್ತಿ ಇದ್ದರೂ, ಎಲ್ಲರೊಂದಿಗೆ ಅಷ್ಟೇ ಆತ್ಮಿಯನಾಗುವ ಸಂತೋಷ್, ಹಳ್ಳಿಕಾರ್ ಒಡೆಯ ಎಂದೇ ಫೇಮಸ್. ಬಿಗ್ ಬಾಸ್ ಕನ್ನಡ 10ನೇ ಸೀಸನ್‌ನಲ್ಲಿ ಮಾತುಗಾರಿಕೆ ಮೂಲಕವೇ ನಾಲ್ಕನೇ ರನ್ನರ್ ಅಪ್ ಆಗಿದ್ದ ಇದೇ ವರ್ತೂರ್ ಸಂತೋಷ್, ಬಿಗ್ ಬಾಸ್ ಬಳಿಕ ತಮ್ಮ ಅಭಿಮಾನಿ ಬಳಗವನ್ನು ಮತ್ತಷ್ಟು ಹಿರಿದಾಗಿಸಿಕೊಂಡಿದ್ದರು. ಸಿನಿಮಾ ಸೀರಿಯಲ್ ಕ್ಷೇತ್ರದ ಆಪ್ತರೂ ಸ್ನೇಹಿತರಾಗಿದ್ದರು.
ಇಂತಿಪ್ಪ ವರ್ತೂರು ಸಂತೋಷ್ ಅವರ ಮನೆ ಎಲ್ಲಿದೆ, ಹೇಗಿದೆ? ಅವರ ಆಸ್ತಿ ಎಷ್ಟು ಎಂಬಿತ್ಯಾದಿ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದವು. ಕೋಟಿ ಕುಳ, ಅಪ್ಪ ಮಾಡಿದ ದುಡ್ಡಲ್ಲೇ ಶೋಕಿ ಮಾಡ್ತಾನೆ ಎಂಬ ಮಾತುಗಳೂ ಕೇಳಬಂದಿದ್ದವು. ಆ ಬಗ್ಗೆಯೂ ಮೌನ ಮುರಿದಿದ್ದ ವರ್ತೂರು ಸಂತೋಷ್, ಸಾಕಷ್ಟು ಯೂಟ್ಯೂಬ್‌ಗಳಲ್ಲಿ ತಮ್ಮ ಆಸ್ತಿ ಮತ್ತು ದುಡಿಮೆ ಬಗ್ಗೆಯೂ ಮಾಹಿತಿ ನೀಡಿದ್ದರು. ಇದೀಗ ವರ್ತೂರು ಸಂತೋಷ್ ಮನೆ ಹೇಗಿದೆ. ಅವರ ತುಂಬು ಕುಟುಂಬದಲ್ಲಿ ಯಾರೆಲ್ಲ ಇದ್ದಾರೆ ಎಂಬ ಕುತೂಲಹವಿತ್ತು. ಆ ಕುತೂಹಲಕ್ಕೀಗ ವಿಡಿಯೋ ಮೂಲಕ ಉತ್ತರ ಸಿಕ್ಕಿದೆ.
ಕುಟುಂಬದ ಬಗ್ಗೆ ವರ್ತೂರು ಸಂತೋಷ್ ಹೇಳಿದ್ದೇನು?
ವರ್ತೂರು ಸಂತೋಷ್ ಅವರ ಮನೆಯಲ್ಲಿ ಆಗಿನ ಕಾಲದಲ್ಲಿ ನಿತ್ಯ ಅನ್ನದಾಸೋಹವೇ ನಡೆಯುತ್ತಿತ್ತು. ಲಕ್ಷಾಂತರ ಮಂದಿಗೆ ಹಿಟ್ಟು ರುಬ್ಬಿ ಹಾಕಿದ್ದ ಒರಳು ಕಲ್ಲನ್ನೂ ಇಂದಿಗೂ ಅವರು ಹಾಗೆಯೇ ಇರಿಸಿಕೊಂಡಿದ್ದಾರೆ. ದೇವರಂತೇ ಅದನ್ನು ಕಾಣುತ್ತಾರೆ. ಎಕರೆಗಟ್ಟಲೇ ಜಾಗದಲ್ಲಿ ಇವರು ಆಡಿದ ಮನೆಗಳಿವೆ. ಅಜ್ಜಿ ಕನಸಲ್ಲಿ ಮಾರಿಯಮ್ಮ ಬಂದ ಹಿನ್ನೆಲೆಯಲ್ಲಿ, ಆಗಿನ ಕಾಲದಲ್ಲಿಯೇ ತಮ್ಮ ಜಾಗದಲ್ಲಿಯೇ ಮಾರಿಯಮ್ಮನ ದೇವಸ್ಥಾನ ಕಟ್ಟಿದ್ದಾರೆ. ಪ್ರತಿ ವರ್ಷ ಮರಿ ಹೊಡೆದು ಕುಟುಂಬಸ್ಥರೆಲ್ಲ ಸೇರಿ ಹಬ್ಬ ಮಾಡುವ ಸಂಪ್ರದಾಯವೂ ಇದೆ.
“ಜಮೀನು ಸಾಗುವಳಿ ಮಾಡುವ ಕುಟುಂಬವಾದ್ದರಿಂದ ಆಗಿನ ಕಾಲದಲ್ಲಿಯೇ ನಿತ್ಯ 300ಕ್ಕೂ ಅಧಿಕ ಮಂದಿಗೆ ನಮ್ಮ ಮನೆಯಲ್ಲಿ ಊಟದ ವ್ಯವಸ್ಥೆ ನಡೆಯುತ್ತಿತ್ತು. ದಿನದ 24 ಗಂಟೆ ಒಲೆ ಉರಿದ ಉದಾಹರಣೆಗಳೂ ಇವೆ. 60 ಜನ ಬರೀ ಕೆಲಸಗಾರರು ಇರುತ್ತಿದ್ದರು. ಇದನ್ನು ಬಿಟ್ಟರೆ ದುಡಿಮೆಗೆಂದೇ ನೂರಾರು ಜನ ಬರ್ತಿದ್ದರು. ಎಲ್ಲರಿಗೂ ಏನು ಅಡುಗೆ ಮಾಡ್ತಿದ್ರೋ ಅದೇ ಊಟ ನಮಗೂ. ಯಾವತ್ತೂ ಬೇರೆ ಬೇರೆ ಆಗ್ತಿರಲಿಲ್ಲ. ಮನೆ ಆವರಣದಲ್ಲಿಯೇ ಇಟ್ಟಿಗೆ ಫ್ಯಾಕ್ಟರಿ ಇತ್ತು. ಐದಾರು ಲಾರಿಗಳೂ ಇದ್ದವು”.
ಕಾಲಕ್ರಮೇಣ ಆಳುಗಳು ಸಿಗ್ತಿಲ್ಲ ಅನ್ನೋ ಕಾರಣಕ್ಕೆ ಅದನ್ನ ಸ್ಟಾಪ್ ಮಾಡಿದ್ವಿ. ಒಟ್ಟು ಕುಟುಂಬದಲ್ಲಿ ಇದ್ದಾಗಲೇ ಇದೆಲ್ಲವನ್ನು ಸಂಪಾದಿಸಿದ್ದು. ಕೂಡು ಕುಟುಂಬದಲ್ಲಿದ್ದಾಗಲೇ 400ಕ್ಕೂ ಅಧಿಕ ಮೇಕೆಗಳಿದ್ದವು. ಈಗ ಕೋಲಾರ ಬಳಿಯ ಮುಳಬಾಗಿಲು ಜಮೀನಿನಲ್ಲಿ ದೊಡ್ಡ ಪ್ರಮಾಣದಲ್ಲಿ ಕುರಿ ಸಾಕಾಣಿಕೆ ಮಾಡುವ ಪ್ಲಾನ್ ಇದೆ ಎಂದಿದ್ದಾರೆ. ಈ ಮೂಲಕ ತಮ್ಮ ಹಿಂದಿನ ಹಿರಿಯರ ವ್ಯವಸಾಯ ಹೇಗಿತ್ತು, ಅದ್ಯಾವ ಮಟ್ಟಿಗೆ ದೊಡ್ಡದಿತ್ತು ಎಂಬುದನ್ನು ಹೇಳಿಕೊಂಡಿದ್ದಾರೆ.
ಸಿಟಿ ನಡುವೆ 38 ಎಕರೆ ಜಮೀನು
ವರ್ತೂರು ಸಂತೋಷ್ ಅವರ ವರ್ತೂರಿನಲ್ಲಿನ ಮನೆಯೇ ಎರಡ್ಮೂರು ಎಕರೆಯಲ್ಲಿದೆ. ಅದರಲ್ಲಿ ತಮ್ಮ ಮನೆ ಮಾತ್ರವಲ್ಲದೆ, ಅವರದ್ದೇ ಆದ ಅಪಾರ್ಟ್‌ಮೆಂಟ್‌ಗಳೂ ಇವೆ. ಮನೆಯಿಂದ ನಿಂತು ನೋಡಿದರೆ 38 ಎಕರೆ ಜಮೀನು ಕಾಣಿಸುತ್ತೆ. ಆ ಮನೆಯ ಹೋಮ್ ಟೂರ್ ಹೇಗಿದೆ ಎಂಬುದನ್ನು ಆಯ್ರಾ ಟಿವಿ ತನ್ನ ಯೂಟ್ಯೂಬ್‌ನಲ್ಲಿ ಹೋಮ್ ಟೂರ್ ಮಾಡಿದೆ.