Vikrant Massey: ಉಲ್ಟಾ ಹೊಡೆದ ವಿಕ್ರಾಂತ್ ಮಾಸ್ಸಿ; ನಾನು ಹಾಗೆ ಹೇಳಲೇ ಇಲ್ಲ ಎಂದ ಬಾಲಿವುಡ್ ನಟ
Dec 04, 2024 11:22 AM IST
ಉಲ್ಟಾ ಹೊಡೆದ ವಿಕ್ರಾಂತ್ ಮಾಸ್ಸಿ
- ಹಿಟ್ ಸಿನಿಮಾಗಳನ್ನು ಕೊಟ್ಟ ವಿಕ್ರಾಂತ್ ಮಾಸ್ಸಿ ಒಂದೇ ಬಾರಿ ಚಿತ್ರರಂಗಕ್ಕೆ ವಿದಾಗ ಘೋಷಣೆ ಮಾಡಿದ್ದನ್ನು ಕೇಳಿ ಎಲ್ಲರೂ ಆಶ್ವರ್ಯಪಟ್ಟಿದ್ದರು. ಆದರೆ ಇದೀಗ ಅವರು ಮತ್ತೆ ಯೂ ಟರ್ನ್ ತೆಗೆದುಕೊಂಡಿದ್ದಾರೆ. ನಾನು ಹಾಗೆ ಹೇಳಲೇ ಇಲ್ಲ ಎಂದಿದ್ದಾರೆ.
'ಟ್ವೆಲ್ತ್ ಫೇಲ್' ಚಿತ್ರದ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದ್ದ ಬಾಲಿವುಡ್ ನಟ ವಿಕ್ರಾಂತ್ ಮಾಸ್ಸಿ, ಇತ್ತೀಚೆಗಷ್ಟೇ ಚಿತ್ರರಂಗಕ್ಕೆ ವಿದಾಯ ಹೇಳುವ ಮೂಲಕ ಸುದ್ದಿಯಲ್ಲಿದ್ದರು. ಇದೀಗ ಉಲ್ಟಾ ಹೊಡೆದಿರುವ ವಿಕ್ರಾಂತ್, ತಾವು ಹಾಗೆ ಹೇಳಿಯೇ ಇಲ್ಲ, ತಮ್ಮ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
2013ರಲ್ಲಿ ‘ಲುಟೇರಾ’ ಚಿತ್ರದ ಮೂಲಕ ಬಾಲಿವುಡ್‍ಗೆ ಬಂದ ವಿಕ್ರಾಂತ್ ಇದುವರೆಗೂ 25 ಚಿತ್ರಗಳಲ್ಲಿ ನಟಿಸಿದ್ದಾರೆ. ವಿಕ್ರಾಂತ್ ಅಭಿನಯದ ಎರಡು ಸಿನಿಮಾಗಳು 2025ರಲ್ಲಿ ಬಿಡುಗಡೆಯಾಗಬೇಕಿವೆ. ವೃತ್ತಿಜೀವನ ಉತ್ತುಂಗದಲ್ಲಿರುವಾಗಲೇ, ವಿಕ್ರಾಂತ ಇತ್ತೀಚೆಗೆ ನಿವೃತ್ತಿ ಘೋಷಿಸಿದ್ದರು. ಆ ಎರಡು ಚಿತ್ರಗಳ ಬಳಿಕ ಚಿತ್ರರಂಗದಿಂದ ದೂರ ಉಳಿಯುವುದಾಗಿ ಹೇಳಿದ್ದರು.
ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದ ಅವರು, ‘ಕಳೆದ ಕೆಲವು ವರ್ಷಗಳು ಅದ್ಭುತವಾಗಿದ್ದವು. ನನಗೆ ಪ್ರೀತಿ ತೋರಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು. ನನ್ನ ಕುಟುಂಬಕ್ಕೆ ಸಮಯ ಮೀಸಲಿಡುವ ಸಮಯ ಇದೀಗ ಬಂದಿದೆ. 2025ರಲ್ಲಿ ಬಿಡುಗಡೆಯಾಗುವ ಚಿತ್ರಗಳ ನಂತರ ಇನ್ನು ನಟಿಸುವುಲ್ಲ’ ಎಂಬರ್ಥದಲ್ಲಿ ಹೇಳಿಕೊಂಡಿದ್ದರು.
ವಿಕ್ರಾಂತ್ ಯೂ ಟರ್ನ್ ತೆಗೆದುಕೊಂಡಿದ್ದಾರೆ
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹಲವರು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದರು. ಆತರುದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಎಂದು ಎಚ್ಚರಿಸಿದ್ದರು. ಹೀಗಿರುವಾಗಲೇ, ವಿಕ್ರಾಂತ್ ಯೂ ಟರ್ನ್ ತೆಗೆದುಕೊಂಡಿದ್ದಾರೆ. ತಾನು ಆ ರೀತಿ ಹೇಳಲಿಲ್ಲ ಎಂದು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ದೊಡ್ಡದೊಂದು ಬ್ರೇಕ್ ಬೇಕಾಗಿದೆ ಅಷ್ಟೇ
ಈ ಕುರಿತು ಮಾತನಾಡಿರುವ ಅವರು, ‘ನಾನು ಚಿತ್ರರಂಗದಿಂದ ನಿವೃತ್ತಿಯಾಗಿಲ್ಲ. ನಾನು ಸುಸ್ತಾಗಿದ್ದೇನೆ. ನನಗೆ ದೊಡ್ಡದೊಂದು ಬ್ರೇಕ್ ಬೇಕಾಗಿದೆ. ಕುಟುಂಬವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಹಾಗಾಗಿ, ಚಿತ್ರರಂಗದಿಂದ ಒಂದಿಷ್ಟು ಸಮಯ ಬ್ರೇಕ್ ತೆಗೆದುಕೊಳ್ಳುವ ಬಗ್ಗೆ ಬರೆದಿದ್ದೆ. ಆದರೆ, ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ನನಗೆ ನಟನೆ ಬಿಟ್ಟು ಬೇರೇನೂ ಗೊತ್ತಿಲ್ಲ. ನಟನೆ ನನಗೆ ಜೀವನದಲ್ಲಿ ಎಲ್ಲವನ್ನೂ ಕೊಟ್ಟಿದೆ. ಆದರೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ಸ್ವಲ್ಪ ಸುಸ್ತಾಗಿದ್ದೇನೆ. ನನಗೊಂದು ಬ್ರೇಕ್ ಬೇಕು.
ನನ್ನ ಕಲೆಯನ್ನು ಇನ್ನಷ್ಟು ಉತ್ತಮಗೊಳಿಸುವುದಕ್ಕೆ ಒಂದಿಷ್ಟು ಕಾಲಾವಕಾಶ ಬೇಕು. ಸದ್ಯಕ್ಕೆ ಏಕತಾನತೆ ಕಾಡುತ್ತಿದೆ. ಹಾಗಾಗಿ, ಒಂದಿಷ್ಟು ಸಮಯ ಚಿತ್ರರಂಗದಿಂದ ದೂರವಿರುವುದಕ್ಕೆ ಯೋಚಿಸಿದ್ದೆ. ಆದರೆ, ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಚಿತ್ರರಂಗದಿಂದ ದೂರವಾಗುತ್ತಿದ್ದೇನೆ ಎಂದು ಅರ್ಥ ಮಾಡಿಕೊಳ್ಳಲಾಗಿದೆ. ಅದು ತಪ್ಪು. ನಾನು ಒಂದಿಷ್ಟು ಸಮಯ ನನ್ನ ಆರೋಗ್ಯ ಮತ್ತು ಕುಟುಂಬದ ಕುರಿತು ಗಮನಹರಿಸವ ಅವಶ್ಯಕತೆ ಇದೆ. ಎಲ್ಲಾವೂ ಸರಿ ಹೋದ ಮೇಲೆ ಪುನಃ ಬರುತ್ತೇನೆ’ ಎಂದು ವಿಕ್ರಾಂತ್ ಹೇಳಿಕೊಂಡಿದ್ದಾರೆ.
ಇನ್ನು, ವಿಕ್ರಾಂತ್ ಮಸ್ಸೆ ಅಭಿನಯದ ‘ದಿ ಸಾಬರ್ಮತಿ ರಿಪೋರ್ಟ್’ ಚಿತ್ರವು ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಧೀರಜ್ ಶರ್ಮಾ ನಿರ್ದೇಶನದ ಈ ಚಿತ್ರವನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಸಹ ವೀಕ್ಷಣೆ ಮಾಡಿದ್ದರು.
ವರದಿ: ಚೇತನ್ ನಾಡಿಗೇರ್
ಇದನ್ನೂ ಓದಿ: Dhruva Sarja: ಮಾರ್ಟಿನ್ ಸೋಲು, ನಿರ್ಮಾಪಕ ಉದಯ್ ಕೆ ಮೆಹ್ತಾ ಜತೆಗೆ ಧ್ರುವ ಸರ್ಜಾ ಇನ್ನೊಂದು ಸಿನಿಮಾ!