Dhruva Sarja: ಮಾರ್ಟಿನ್‌ ಸೋಲು, ನಿರ್ಮಾಪಕ ಉದಯ್‌ ಕೆ ಮೆಹ್ತಾ ಜತೆಗೆ ಧ್ರುವ ಸರ್ಜಾ ಇನ್ನೊಂದು ಸಿನಿಮಾ!
ಕನ್ನಡ ಸುದ್ದಿ  /  ಮನರಂಜನೆ  /  Dhruva Sarja: ಮಾರ್ಟಿನ್‌ ಸೋಲು, ನಿರ್ಮಾಪಕ ಉದಯ್‌ ಕೆ ಮೆಹ್ತಾ ಜತೆಗೆ ಧ್ರುವ ಸರ್ಜಾ ಇನ್ನೊಂದು ಸಿನಿಮಾ!

Dhruva Sarja: ಮಾರ್ಟಿನ್‌ ಸೋಲು, ನಿರ್ಮಾಪಕ ಉದಯ್‌ ಕೆ ಮೆಹ್ತಾ ಜತೆಗೆ ಧ್ರುವ ಸರ್ಜಾ ಇನ್ನೊಂದು ಸಿನಿಮಾ!

ಮಾರ್ಟಿನ್‌ ಸಿನಿಮಾ ಸೋಲಿನ ಬೆನ್ನಲ್ಲೇ, ಧ್ರುವ ಸರ್ಜಾ ಜತೆಗೆ ನಿರ್ಮಾಪಕ ಉದಯ್‌ ಕೆ ಮೆಹ್ತಾ ಮತ್ತೊಂದು ಸಿನಿಮಾ ಮಾಡಲಿದ್ದಾರೆ. ಈಗಾಗಲೇ ಈ ಸಿನಿಮಾ ಮೂರು ವರ್ಷಗಳ ಹಿಂದೆಯೇ ಘೋಷಣೆ ಆಗಿದೆ. ಅಷ್ಟಕ್ಕೂ ಆ ಚಿತ್ರವೇ ಮುಂದುವರಿಯಲಿದ್ಯಾ ಅಥವಾ ಹೊಸ ಕಥೆ ಜತೆ ಈ ಜೋಡಿ ಮತ್ತೆ ಬರಲಿದ್ಯಾ ಎಂಬುದು ಸದ್ಯದ ಕುತೂಹಲ.

ನಿರ್ಮಾಪಕ ಉದಯ್‌ ಕೆ ಮೆಹ್ತಾ ಜತೆಗೆ ಧ್ರುವ ಸರ್ಜಾ ಇನ್ನೊಂದು ಸಿನಿಮಾ!
ನಿರ್ಮಾಪಕ ಉದಯ್‌ ಕೆ ಮೆಹ್ತಾ ಜತೆಗೆ ಧ್ರುವ ಸರ್ಜಾ ಇನ್ನೊಂದು ಸಿನಿಮಾ!

Dhruva sarja Dubari:  ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್‍’ ಚಿತ್ರ ಬಿಡುಗಡೆಯಾಗಿ ಇತಿಹಾಸದ ಪುಟ ಸೇರಿದೆ. ಕನ್ನಡ ಚಿತ್ರರಂಗದ ದೊಡ್ಡ ಫ್ಲಾಪ್‍ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರೀಕರಣ ಮುಕ್ತಾಯದ ದಿನ ಚಿತ್ರತಂಡದವರೇ ಚಿತ್ರಕ್ಕೆ 80ರಿಂದ 100 ಕೋಟಿ ರೂ. ಖರ್ಚಾಗಿದೆ ಎಂದು ಹೇಳಿಕೊಂಡಿದ್ದರು. ಚಿತ್ರ ಬಿಡುಗಡೆಯಾದ ನಂತರ ಅದರ ಅರ್ಧದಷ್ಟೂ ಹಣ ವಾಪಸ್ಸು ಬಂದಿಲ್ಲ.

ಸಂಭಾವನೆ ಇಲ್ಲದೆ ನಟಿಸ್ತಾರಾ ಧ್ರುವ?

ಹೀಗಿರುವಾಗಲೇ, ಧ್ರುವ ಸರ್ಜಾ ಅಭಿನಯದಲ್ಲಿ ಉದಯ್‍ ಮೆಹ್ತಾ ನಿರ್ಮಿಸುತ್ತಿದ್ದಾರೆ ಎಂಬ ಸುದ್ದಿ ಬಂದಿದೆ. ಇನ್ನೊಂದು ಚಿತ್ರ ಎನ್ನುವುದಕ್ಕಿಂತ, ‘ಮಾರ್ಟಿನ್‍’ ಚಿತ್ರದ ನಷ್ಟವನ್ನು ತುಂಬಿಕೊಡುವುದಕ್ಕೆ ಧ್ರುವ ಸರ್ಜಾ ಇನ್ನೊಂದು ಚಿತ್ರ ಮಾಡುತ್ತಿದ್ದಾರೆ, ಈ ಚಿತ್ರಕ್ಕೆ ಅವರ ಸಂಭಾವನೆಯನ್ನೂ ಪಡೆಯದೆ ಉಚಿತವಾಗಿ ನಟಿಸುತ್ತಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆಯಾದರೂ, ಧ್ರುವ ಸರ್ಜಾ ಜೊತೆಗೆ ಎರಡು ಚಿತ್ರಗಳನ್ನು ಮಾಡುವ ಒಪ್ಪಂದವಾಗಿತ್ತು ಎಂದು ಉದಯ್‍ ಮೆಹ್ತಾ ಹೇಳಿಕೊಂಡಿದ್ದಾರೆ.

ಧ್ರುವ ಸರ್ಜಾ ಅಭಿನಯದಲ್ಲಿ ಉದಯ್‍ ಮೆಹ್ತಾ 2021ರಲ್ಲಿ ‘ದುಬಾರಿ’ ಎಂ ಚಿತ್ರ ಘೋಷಿಸಿದ್ದರು. ‘ಪೊಗರು’ ನಿರ್ದೇಶಿಸಿದ್ದ ನಂದಕಿಶೋರ್ ಈ ಚಿತ್ರವನ್ನು ನಿರ್ದೇಶಿಸಬೇಕಿತ್ತು. ಧ್ರುವ ಸರ್ಜಾ ಎದುರು ಶ್ರೀಲೀಲಾ ನಾಯಕಿಯಾಗಿಯೂ ಅಭಿನಯಿಸಬೇಕಿತ್ತು. ಚಿತ್ರದ ಮುಹೂರ್ತವೂ ಆಗಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರೀಕರಣ ಪ್ರಾರಂಭವಾಗಲಿಲ್ಲ. ಅದರ ಬದಲು ‘ಮಾರ್ಟಿನ್‍’ ಚಿತ್ರ ಶುರುವಾಯಿತು. ಈಗ ಅದೇ ‘ದುಬಾರಿ’ ಚಿತ್ರವನ್ನು ಮುಂದುವರೆಸುವುದಕ್ಕೆ ಉದಯ್ ಮೆಹ್ತಾ ಸಜ್ಜಾಗಿದ್ದಾರೆ. ಆದರೆ, ಯಾವಾಗ, ಏನು ಎಂಬುದನ್ನು ಮುಂಬರುವ ದಿನಗಳಲ್ಲಿ ತಿಳಿಸಲಾಗುವುದು ಎಂದು ಉದಯ್‍ ಮೆಹ್ತಾ ಹೇಳಿಕೊಂಡಿದ್ದಾರೆ.

ಕೆಡಿ ಮುಗಿದ ಬಳಿಕ ದುಬಾರಿ

‘ದುಬಾರಿ’ ಶುರುವಾಗುವ ಮೊದಲು, ಧ್ರುವ ಮೊದಲು ‘ಕೆಡಿ – ದಿ ಡೆವಿಲ್’ ಮುಗಿಸಬೇಕು. ಡಿಸೆಂಬರ್‌ನಲ್ಲಿ ಚಿತ್ರ ಬಿಡುಗಡೆ ಆಗುತ್ತದೆ ಎಂದು ನಿರ್ದೇಶಕ ‘ಜೋಗಿ’ ಪ್ರೇಮ್ ಸಹ ಕೆಲವು ತಿಂಗಳುಗಳ ಹಿಂದೆ ಘೋಷಿಸಿದ್ದರು. ಆದರೆ, ನಿರೀಕ್ಷೆಯಂತೆ ಚಿತ್ರ ಬಿಡುಗಡೆ ಆಗುತ್ತಿಲ್ಲ, ಚಿತ್ರೀಕರಣವೇ ಇನ್ನೂ ಮುಗಿದಿರುವ ಸುದ್ದಿ ಇಲ್ಲ. ಬಹುಶಃ ಏಪ್ರಿಲ್‍ನಲ್ಲಿ ಚಿತ್ರ ಬಿಡುಗಡೆ ಆಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ. ಆ ಚಿತ್ರದ ಬಿಡುಗಡೆಯ ನಂತರ ‘ದುಬಾರಿ’ ಶುರುವಾಗುವ ಸಾಧ್ಯತೆ ಇದೆ.

ಇದಲ್ಲದೆ, ರಾಘವೇಂದ್ರ ಹೆಗಡೆ ನಿರ್ದೇಶನದ ಚಿತ್ರ, ಕೆ.ವಿ.ಎನ್‍ ಪ್ರೊಡಕ್ಷನ್ಸ್ ಸಂಸ್ಥೆಯ ಇನ್ನೊಂದು ಚಿತ್ರವನ್ನೂ ಧ್ರುವ ಒಪ್ಪಿಕೊಂಡಿರುವ ಸುದ್ದಿ ಇದ್ದ, ಆ ಚಿತ್ರಗಳು ಇನ್ನಷ್ಟೇ ಪ್ರಾರಂಭವಾಗಬೇಕಿದೆ. ಆದರೆ, ಮೊದಲು ಯಾವುದು ಶುರುವಾಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಮಾರ್ಟಿನ್‌ ಮುಗೀತು, ಕೆಡಿ ಕಥೆ ಏನು?

ಎಪಿ ಅರ್ಜುನ್‌ ನಿರ್ದೇಶನದಲ್ಲಿ ಮೂಡಿಬಂದಿದ್ದ ಮಾರ್ಟಿನ್‌ ಸಿನಿಮಾ, ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿತ್ತು. ಚಿತ್ರತಂಡದ ಮಾಹಿತಿಯ ಪ್ರಕಾರ ನೂರು ಕೋಟಿ ಬಂಡವಾಳವನ್ನೂ ಈ ಸಿನಿಮಾ ಮೇಲೆ ಹೂಡಿದ್ದರು ನಿರ್ಮಾಪಕ ಉದಯ್‌ ಕೆ ಮೆಹ್ತಾ. ಆದರೆ, ಬಂದಿದ್ದು ಮಾತ್ರ ಬೊಗಸೆಯಷ್ಟು. ಕೋಟಿ ಕೋಟಿ ನಷ್ಟ ಅನುಭವಿಸಿದ ಈ ಸಿನಿಮಾ ಬಳಿಕ, ಸ್ಯಾಂಡಲ್‌ವುಡ್‌ ನಿರ್ದೇಶಕ ಜೋಗಿ ಪ್ರೇಮ್‌ ನಿರ್ದೇಶನದಲ್ಲಿ ಕೆಡಿ ಚಿತ್ರದ ಕೆಲಸಗಳಲ್ಲಿ ಧ್ರುವ ಸರ್ಜಾ ಬಿಜಿಯಾಗಿದ್ದಾರೆ.

ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇದೇ ಡಿಸೆಂಬರ್‌ನಲ್ಲಿ ಕೆಡಿ ಸಿನಿಮಾ ಬಿಡುಗಡೆ ಆಗಬೇಕಿತ್ತು. ಈ ಹಿಂದೆಯೇ ಪ್ರೇಮ್‌, ಈ ಸಿನಿಮಾವನ್ನು ಡಿಸೆಂಬರ್‌ನಲ್ಲಿ ತೆರೆಗೆ ತರುವ ಬಗ್ಗೆ ಘೋಷಣೆ ಮಾಡಿದ್ದರು. ಆದರೆ, ಅಂದುಕೊಂಡಂತೆ ಈ ಸಿನಿಮಾದ ಶೂಟಿಂಗ್‌ ಕೆಲಸಗಳು ಮುಕ್ತಾಯವಾಗಿಲ್ಲ. ಜತೆಗೆ ಮಾರ್ಟಿನ್‌ ಸೋಲಿನ ಹಿನ್ನೆಲೆಯಲ್ಲಿ ಒಂದಷ್ಟು ತಿಂಗಳ ಕಾಲ ಈ ಸಿನಿಮಾದ ಬಿಡುಗಡೆ  ಮುಂದೆ ಹೋಗುವ ಸಾಧ್ಯತೆ ಇದೆ. 2025ರ ಏಪ್ರಿಲ್‌ ಮೇ ಸಮಯದಲ್ಲಿ ಚಿತ್ರ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.

ವರದಿ: ಚೇತನ್‌ ನಾಡಿಗೇರ್

 

 

 

 

 

 

Whats_app_banner