Kangana about Acid attackers: ಹತ್ತಿರ ಯಾರೇ ಬಂದ್ರೂ ನಾನೂ ಭಯದಿಂದ ಮುಖ ಮುಚ್ಚಿಕೊಳ್ತಿದ್ದೆ..ಅಕ್ಕನ ಮೇಲೆ ಆಸಿಡ್ ದಾಳಿ ನೆನೆದ ಕಂಗನಾ!
Dec 15, 2022 03:38 PM IST
ಅಕ್ಕ ರಂಗೋಲಿ ಜೊತೆ ನಟಿ ಕಂಗನಾ
- ನಾನು ಟೀನೇಜ್‌ನಲ್ಲಿರುವಾಗ ನನ್ನ ಸಹೋದರಿ ರಂಗೋಲಿ ಚಂದೇಲ್ ಮೇಲೆ ರೋಡ್ ರೋಮಿಯೋ ಒಬ್ಬ ಆಸಿಡ್ ದಾಳಿ ಮಾಡಿದ್ದ. ಆಗ ರಂಗೋಲಿಗೆ 52 ಬಾರಿ ಸರ್ಜರಿ ಮಾಡಿಸಲಾಯ್ತು. ಜೊತೆಗೆ ಆಕೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಹಳ ಕುಗ್ಗಿ ಹೋಗಿದ್ದಳು.
ಕಾಂಟ್ರವರ್ಸಿ ಕ್ವೀನ್ ಎಂದೇ ಹೆಸರಾಗಿರುವ ಬಾಲಿವುಡ್ ಕಂಗನಾ ರಣಾವತ್, ಅನೇಕ ವಿಚಾರಗಳಿಗೆ ಸಾಕಷ್ಟು ಸುದ್ದಿಯಾಗಿದ್ದಾರೆ, ನೆಟಿಜನ್‌ಗಳಿಂದ ಟ್ರೋಲ್‌ಗೆ ಕೂಡಾ ಒಳಗಾಗಿದ್ದಾರೆ. ಇಷ್ಟಿದ್ದರೂ ಕಂಗನಾಗೆ ಚಿತ್ರರಂಗದಲ್ಲಿ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಇರುವ ಕಂಗನಾ, ತಮ್ಮ ವೈಯಕ್ತಿಕ ಹಾಗೂ ಸಿನಿಮಾಗಳಿಗೆ ಸಂಬಂಧಿಸಿದ ಅನೇಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ.
ಕಂಗನಾ ಇದೇ ಮೊದಲ ಬಾರಿಗೆ ತಮ್ಮ ಸಹೋದರಿ ರಂಗೋಲಿ ಮೇಲೆ ನಡೆದ ಆಸಿಡ್ ದಾಳಿ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೊಂಡಿದ್ದಾರೆ. ಆ ಭಯಾನಕ ಘಟನೆಯನ್ನು ಕಂಗನಾ ಆಗ್ಗಾಗ್ಗೆ ನೆನಪಿಸಿಕೊಳ್ಳುತ್ತಲೇ ಇರುತ್ತಾರಂತೆ. ''ನಾನು ಟೀನೇಜ್‌ನಲ್ಲಿರುವಾಗ ನನ್ನ ಸಹೋದರಿ ರಂಗೋಲಿ ಚಂದೇಲ್ ಮೇಲೆ ರೋಡ್ ರೋಮಿಯೋ ಒಬ್ಬ ಆಸಿಡ್ ದಾಳಿ ಮಾಡಿದ್ದ. ಆಗ ರಂಗೋಲಿಗೆ 52 ಬಾರಿ ಸರ್ಜರಿ ಮಾಡಿಸಲಾಯ್ತು. ಜೊತೆಗೆ ಆಕೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಹಳ ಕುಗ್ಗಿ ಹೋಗಿದ್ದಳು. ನಮ್ಮ ಕುಟುಂಬದ ಎಲ್ಲಾ ಸದಸ್ಯರು ಬಹಳ ಆಘಾತಕ್ಕೆ ಒಳಗಾಗಿದ್ದೆವು.
ನಾವು ಈ ಘಟನೆ ಬಗ್ಗೆ ಎಷ್ಟು ಭಯಭೀತರಾಗಿದ್ದೆವು ಎಂದರೆ ನಾನೂ ಕೂಡಾ ಥೆರಪಿಗೆ ಒಳಗಾಗಿದ್ದೆ. ಏಕೆಂದರೆ ನಾನು ಹೊರಗೆ ಹೋಗುವಾಗ ನನ್ನ ಬಳಿ ಯಾರಾದರೂ ಬಂದರೆ, ನನ್ನ ಅಕ್ಕ ಪಕ್ಕ ಯಾರಾದರೂ ಬೈಕ್, ಕಾರಿನಲ್ಲಿ ಹಾದು ಹೋದರೆ ಎಲ್ಲಿ ಅವರು ನನಗೆ ಆಸಿಡ್ ದಾಳಿ ಮಾಡುವರೋ ಎಂಬ ಭಯದಿಂದ ನಾನು ಯಾವಾಗಲೂ ಮುಖ ಮುಚ್ಚಿಕೊಳ್ಳುತ್ತಿದ್ದೆ. ಈ ರೀತಿಯ ದೌರ್ಜನ್ಯ ಪ್ರಕರಣಗಳು ದೇಶದಲ್ಲಿ ಇಂದಿಗೂ ನಡೆಯುತ್ತಿದೆ. ಇಂತಹ ಕ್ರಿಮಿನಲ್‌ಗಳ ವಿರುದ್ಧ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳಬೇಕು. ಗೌತಮ್ ಗಂಭೀರ್ ನೀವು ಹೇಳಿದ ಮಾತುಗಳು ನಿಜ, ಆಸಿಡ್ ದಾಳಿ ಮಾಡುವವರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳಬೇಕು'' ಎಂದು ಕಂಗನಾ ಬರೆದುಕೊಂಡಿದ್ದಾರೆ.
ಗೌತಮ್ ಗಂಭೀರ್ ಹೇಳಿದ್ದೇನು..?
ಡಿಸೆಂಬರ್ 14, ಬುಧವಾರದಂದು ಪಶ್ಚಿಮ ದೆಹಲಿಯಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಶಾಲೆಗೆ ಹೋಗುತ್ತಿದ್ದ ಬಾಲಕಿ ಮೇಲೆ ಆಸಿಡ್ ದಾಳಿ ಮಾಡಿದ್ದರು. ಘಟನೆ ನಡೆದ ಕೆಲವು ಹೊತ್ತಿನಲ್ಲೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಈ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ಸಂಸದ ಗೌತಮ್ ಗಂಭೀರ್, ''ಸುಮ್ಮನೆ ಮಾತನಾಡಿದರೆ ನ್ಯಾಯ ಸಿಗುವುದಿಲ್ಲ. ಇಂತಹ ಪಾಪಿಗಳಲ್ಲಿ ನಾವು ಭಯ ಹುಟ್ಟುಹಾಕಬೇಕು. ದ್ವಾರಕಾದಲ್ಲಿ ಬಾಲಕಿಯ ಮೇಲೆ ಆಸಿಡ್ ಎರಚಿದ ಆರೋಪಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೆ ಏರಿಸಬೇಕು'' ಎಂದು ತಮ್ಮ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದರು. ಗೌತಮ್ ಗಂಭೀರ್ ಟ್ವೀಟ್ ಕುರಿತು, ಅವರನ್ನು ಬೆಂಬಲಿಸಿ, ತಮ್ಮ ಸಹೋದರಿ ರಂಗೋಲಿ ವಿಚಾರವನ್ನು ಹೇಳಿಕೊಂಡಿದ್ದಾರೆ.
ವಿವಿಧ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ ಇರುವ ಕಂಗನಾ ರಣಾವತ್
ಕಂಗನಾ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಇದೇ ವರ್ಷ ಮೇ ತಿಂಗಳಲ್ಲಿ ಅವರ 'ಧಾಕಡ್' ಸಿನಿಮಾ ತೆರೆ ಕಂಡಿತ್ತು. ಸದ್ಯಕ್ಕೆ ಅವರು ತೇಜಸ್, ಟೀಕು ವೆಡ್ಸ್ ಶೇರು, ಎಮರ್ಜೆನ್ಸಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಎಮರ್ಜೆನ್ಸಿ' ಚಿತ್ರದಲ್ಲಿ ಕಂಗನಾ ಮಾಜಿ ಪ್ರಧಾನಿ ಇಂದಿರಾಗಾಂಧಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಅವರೇ ನಿರ್ಮಿಸಿ ನಿರ್ದೇಶಿಸುತ್ತಿದ್ದಾರೆ. ತಮಿಳಿನ 'ಚಂದ್ರಮುಖಿ-2' ಚಿತ್ರದಲ್ಲಿ ಕೂಡಾ ಕಂಗನಾ ನಟಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರತಂಡ ಕಂಗನಾ ಪೋಸ್ಟರ್ ರಿಲೀಸ್ ಮಾಡಿ ಸ್ವಾಗತ ಕೋರಿತ್ತು. 'ಚಂದ್ರಮುಖಿ-2' ಚಿತ್ರದಲ್ಲಿ ರಾಘವ ಲಾರೆನ್ಸ್ ನಾಯಕನಾಗಿ ನಟಿಸುತ್ತಿದ್ದಾರೆ. ಪಿ. ವಾಸು ಚಿತ್ರವನ್ನು ನಿರ್ದೇಶಿಸುತ್ತಿದ್ದು ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದೆ.