Deepfake: ನನ್ನ ಡೀಪ್‌ಫೇಕ್ ವಿಕೃತ ಚಿತ್ರವನ್ನು ಅಮ್ಮ ನೋಡಿದ್ರು; ರಶ್ಮಿಕಾರಂತೆ ಎಐ ತಂತ್ರಜ್ಞಾನಕ್ಕೆ ಬಲಿಪಶುವಾದ ಘಟನೆ ನೆನಪಿಸಿಕೊಂಡ ನಟಿ
Nov 08, 2023 02:30 PM IST
Deepfake: ರಶ್ಮಿಕಾರಂತೆ ಎಐ ತಂತ್ರಜ್ಞಾನಕ್ಕೆ ಬಲಿಪಶುವಾದ ಘಟನೆ ನೆನಪಿಸಿಕೊಂಡ ಸೊನ್ನಾಳ್ಳಿ ಸೇಗಲ್
Sonnalli Seygall: ರಶ್ಮಿಕಾ ಮಂದಣ್ಣರ ಡೀಪ್‌ಫೇಕ್ ವಿಡಿಯೋ ವೈರಲ್ ಆದ ಬಳಿಕ ಇದೇ ರೀತಿಯ ಘಟನೆಯನ್ನು ನಟಿ ಸೊನ್ನಾಳ್ಳಿ ಸೇಗಲ್ ನೆನಪಿಸಿಕೊಂಡಿದ್ದಾರೆ. ಇವರ ಫೋಟೋವನ್ನು ಇದೇ ರೀತಿಯ ತಂತ್ರಜ್ಞಾನದಿಂದ ಕೆಟ್ಟ ಉದ್ದೇಶಕ್ಕೆ ಬಳಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿ ಮತ್ತೊಬ್ಬ ಮಹಿಳೆಯ ದೇಹಕ್ಕೆ ರಶ್ಮಿಕಾ ಮಂದಣ್ಣರ ತಲೆಯ ವಿಡಿಯೋ ಜೋಡಿಸಿ ಸೃಷ್ಟಿಸಲಾದ ಡೀಪ್‌ಫೇಕ್ ವಿಡಿಯೋ ಸಾಕಷ್ಟು ಸಂಚಲನ ಉಂಟು ಮಾಡಿದೆ. ರಶ್ಮಿಕಾ ಮಂದಣ್ಣರ ಘಟನೆ ಬಹಿರಂಗವಾದ ಬಳಿಕ ಸಾಕಷ್ಟು ನಟರು, ನಟಿಯರು ಈ ಕುರಿತು ಧ್ವನಿ ಎತ್ತುತ್ತಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಎಲ್ಲರಿಗಿಂತ ಮೊದಲು ಇದನ್ನು ಖಂಡಿಸಿ, ಈ ಕುರಿತು ಕಾನೂನು ಕ್ರಮ ಕೈಗೊಳ್ಳಬೇಕು ಎಂದಿದ್ದರು. ರಶ್ಮಿಕಾ ಮಂದಣ್ಣರ ಡೀಪ್‌ಫೇಕ್ ಅಶ್ಲೀಲ ವಿಡಿಯೋ ವೈರಲ್ ಆದ ಬಳಿಕ ಈ ತಂತ್ರಜ್ಞಾನದ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ. ಈಗ ಹಲವು ನಟಿಯರು ತಮಗಾದ ಡೀಪ್‌ಫೇಕ್ ಅನುಭವವನ್ನೂ ಹಂಚಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಟಿ ಸೊನ್ನಾಳ್ಳಿ ಸೇಗಲ್ ಕೂಡ ತಮಗೂ ಇಂತಹದ್ದೇ ಅನುಭವವಾಗಿತ್ತು ಎಂದು ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
ಸೊನ್ನಾಳ್ಳಿ ಸೇಗಲ್ ಡೀಪ್‌ಫೇಕ್ ಫೋಟೋ
ರಶ್ಮಿಕಾ ಮಂದಣ್ಣರ ಡೀಪ್‌ಫೇಕ್ ವಿಡಿಯೋ ಕುರಿತು ಮಾತನಾಡುತ್ತಿರುವ ಸಂದರ್ಭದಲ್ಲಿ ಸೊನ್ನಾಳ್ಳಿ ಸೇಗಲ್ ಕೂಡ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. "ನನಗೂ ಇದೇ ರೀತಿಯ ಅನುಭವವಾಗಿತ್ತು. ಆದರೆ, ಅದು ವಿಡಿಯೋ ಆಗಿರಲಿಲ್ಲ. ನನ್ನ ಡೀಪ್‌ಫೇಕ್ ಫೋಟೋಗಳನ್ನು ಹಂಚಿಕೊಳ್ಳಲಾಗಿತ್ತು. ಆ ಚಿತ್ರಗಳು ಹೇಗಿದ್ದವು ಎಂದು ಹೇಳಲು ಹೋಗುವುದಿಲ್ಲ. ತುಂಬಾ ಭಯ ಹುಟ್ಟಿಸುವಂತೆ ಇತ್ತು. ನಿಜ ಹೇಳಬೇಕೆಂದರೆ ಈ ರೀತಿ ನನ್ನ ಫೋಟೋಗಳು ಹರಿದಾಡುತ್ತಿರುವುದನ್ನು ಮೊದಲಿಗೆ ಗಮನಿಸಿದ್ದು ನನ್ನ ಅಮ್ಮ. ನನ್ನಂತೆ ಆಕೆಗೂ ಇದು ಹೊಸ ತಂತ್ರಜ್ಞಾನ. ಈ ರೀತಿ ಎಲ್ಲಾ ಮಾಡಲು ಸಾಧ್ಯವಾಗುತ್ತದೆ ಎಂದು ಆಕೆಗೂ ತಿಳಿದಿರಲಿಲ್ಲ. ಅಮ್ಮನಿಗೆ ಇದರ ಕುರಿತು ಏನೂ ಅರ್ಥ ಆಗಿರಲಿಲ್ಲ. ಈ ಫೋಟೋಗಳಲ್ಲಿ ಇರೋದು ನೀನಾ ಎಂದು ಆತಂಕದಿಂದ ಅಮ್ಮ ಪ್ರಶ್ನಿಸಿದ್ದಳು. ಇಲ್ಲಮ್ಮ ಅದು ನಾನಲ್ಲ, ಅದು ಮಾರ್ಪ್ ಮಾಡಲಾದ ಫೋಟೋ ಎಂದು ಅಮ್ಮನಿಗೆ ಅರ್ಥ ಮಾಡಿಸಲು ಪ್ರಯತ್ನಿಸಿದೆ. ಇದು ನಿಜಕ್ಕೂ ಬೇಸರದ ಸಂಗತಿ. ನನಗೆ ಎಷ್ಟು ಭಯ, ಕೋಪ, ಆತಂಕ, ಅಳು ಬಂದಿತ್ತು. ಈಗಲೂ ಆ ಫೋಟೋಗಳನ್ನು ನೆನಪಿಸಿಕೊಂಡರೆ ಭಯವಾಗುತ್ತದೆ. ಇದು ಸಂಪೂರ್ಣವಾಗಿ ಕಾನೂನು ಬಾಹಿರ. ಯಾವುದೇ ಒಳ್ಳೆಯತನ ಇಲ್ಲದೆ ಈ ಮುಖವಿಲ್ಲದ ಜನರು ಇಂತಹ ಫೋಟೋ, ವಿಡಿಯೋಗಳನ್ನು ಸೃಷ್ಟಿಸುತ್ತಾರೆ" ಎಂದು ಸೊನ್ನಾಳ್ಳಿ ಸೇಗಲ್ ಹೇಳಿದ್ದಾರೆ.
ರಶ್ಮಿಕಾ ವೈರಲ್ ವಿಡಿಯೋಗೆ ಸೊನ್ನಾಳ್ಳಿ ಪ್ರತಿಕ್ರಿಯೆ
ರಶ್ಮಿಕಾ ಮಂದಣ್ಣರ ಡೀಪ್‌ಫೇಕ್ ವಿಡಿಯೋ ಕುರಿತು ಸೊನ್ನಾಳ್ಳಿ ಮಾತನಾಡಿದ್ದು, ಇದರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. "ಓ ಮೈ ಗಾಡ್, ಇದು ನಿಜಕ್ಕೂ ಭಯಾನಕ. ನಾವೆಲ್ಲ ಈ ಹಿಂದೆ ಫೋಟೋಗಳಲ್ಲಿ ಇಂತಹ ಘಟನೆಗಳನ್ನು ಅನುಭವಿಸಿದ್ದೇವೆ. ಈಗ ಈ ಹಂತಕ್ಕೆ ತುಪಿದೆ. ಇದು ನಿಜಕ್ಕೂ ಚರ್ಚೆಯಾಗಬೇಕಾದ ವಿಷಯ. ಈ ರೀತಿ ಮಾಡುವುದು ಕಾನೂನು ಬಾಹಿರ. ಈ ರೀತಿ ಮಾಡಿರುವವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು. ಹೆಣ್ಣಾಗಿ, ಮನುಷ್ಯರಾಗಿ ಇದು ಸುರಕ್ಷಿತ ಎಂದು ನನಗೆ ಅನಿಸದು. ಆನ್‌ಲೈನ್‌ನಲ್ಲಿ ಏನು ಬೇಕಾದರೂ ಮಾಡಬಹುದು ಎಂಬ ಮನಸ್ಥಿತಿ ಬದಲಾಗಬೇಕು. ನಮ್ಮ ಜೀವನವನ್ನು ಇಂಟರ್‌ನೆಟ್‌ನಲ್ಲಿ, ಸೋಷಿಯಲ್ ಮೀಡಿಯಾದಲ್ಲಿ, ಗೂಗಲ್‌ನಲ್ಲಿ, ನಮ್ಮ ಫೋನ್‌ಗಳಲ್ಲಿ ಪಣಕ್ಕೆ ಇಡಲಾಗಿದೆ" ಎಂದು ಸೊನ್ನಾಳ್ಳಿ ಪ್ರತಿಕ್ರಿಯೆ ನೀಡಿದ್ದಾರೆ.
ಕತ್ರಿನಾ ಕೈಫ್ ನಕಲಿ ಫೋಟೋ ವೈರಲ್
ಸೊನ್ನಾಳ್ಳಿ, ರಶ್ಮಿಕಾರಂತೆ ಕತ್ರಿನಾ ಕೈಫ್ ಡೀಪ್‌ಫೇಕ್ ವಿಡಿಯೋ ಕೂಡ ಇದೀಗ ವೈರಲ್ ಆಗಿದೆ. ಬಾಲಿವುಡ್ ತಾರೆ ಕತ್ರಿನಾ ಕೈಫ್ ಅವರ ಮುಂಬರುವ ಚಿತ್ರ 'ಟೈಗರ್ 3' ನಿಂದ ವೈರಲ್ ಫೈಟಿಂಗ್ ಸೀಕ್ವೆನ್ಸ್‌ನಿಂದ ಮೂಲ ಚಿತ್ರವನ್ನು ಸೆರೆಹಿಡಿಯಲಾಗಿದೆ. ಅದರಲ್ಲಿ ಕತ್ರಿನಾ ಕೈಫ್ ಟವೆಲ್ ಧರಿಸಿ ಹಾಲಿವುಡ್ ಸ್ಟಂಟ್ ವುಮನ್ ಜೊತೆ ಹೋರಾಡುತ್ತಿರುವುದನ್ನು ದೃಶ್ಯವಿತ್ತು. ಇದನ್ನು ಡೀಪ್‌ಫೇಕ್ ತಂತ್ರಜ್ಞಾನದ ಮೂಲಕ ಬೇರೆ ರೀತಿ ತೋರಿಸಲಾಗಿತ್ತು.