Deepfake: ರಶ್ಮಿಕಾ ಮಂದಣ್ಣ ನಕಲಿ ಅರೆಬೆತ್ತಲೆ ವಿಡಿಯೋ; ನಟಿಗೆ ಬೆಂಬಲ ಸೂಚಿಸಿದ ಮೃಣಾಲ್, ಚಿನ್ಮಯಿ ನಾಗ ಚೈತನ್ಯ
Rashmika Mandanna deepfake video: ರಶ್ಮಿಕಾ ಮಂದಣ್ಣರನ್ನು ಡೀಪ್‌ಫೇಕ್ ವಿಡಿಯೋ ತಂತ್ರಜ್ಞಾನದ ಮೂಲಕ ಅರೆಬೆತ್ತಲೆಯಾಗಿ ತೋರಿಸಲು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿರುವುದಕ್ಕೆ ಸಾಕಷ್ಟು ಸಿನಿಮಾ ನಟನಟಿಯರು ಆಕ್ರೋಶ ವ್ಯಕ್ತಪಡಿಸಿದ್ದು, ನಟಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.
ರಶ್ಮಿಕಾ ಮಂದಣ್ಣರನ್ನು ಡೀಪ್‌ಫೇಕ್ ವಿಡಿಯೋ ತಂತ್ರಜ್ಞಾನದ ಮೂಲಕ ಅರೆಬೆತ್ತಲೆಯಾಗಿ ತೋರಿಸಲು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿರುವುದಕ್ಕೆ ಸಾಕಷ್ಟು ಸಿನಿಮಾ ನಟನಟಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ನೋಡಿದ ತಕ್ಷಣ ಬಾಲಿವುಡ್ ಬಿಗ್‌ಬಿ ಅಮಿತಾಬ್ ಬಚ್ಚನ್ ಅವರು "ಇದಕ್ಕೆ ಕಾನೂನು ಹೋರಾಟ ನಡೆಸಬೇಕು" ಎಂದಿದ್ದರು. ಅಮಿತಾಬ್ ಬಚ್ಚನ್ ಮಾತ್ರವಲ್ಲದೆ ರಶ್ಮಿಕಾ ಮಂದಣ್ಣರ ಸ್ನೇಹಿತರು, ಸ್ನೇಹಿತೆಯರು, ಸಹೋದ್ಯೋಗಿಗಳು ಕಾನೂನು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ಮುಖವನ್ನು ಜೋಡಿಸಿ ತಯಾರಿಸಲಾದ ಡೀಪ್‌ಫೇಕ್‌ವಿಡಿಯೋಗೆ ಸೆಲೆಬ್ರಿಟಿಗಳಾದ ಮೃಣಾಲ್ ಠಾಕೂರ್, ನಾಗ ಚೈತನ್ಯ, ಚಿನ್ಮಯಿ ಶ್ರೀಪಾದ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅನ್ನು ಈ ರೀತಿ ಬಳಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಬೆಂಬಲವನ್ನು ರಶ್ಮಿಕಾ ಮಂದಣ್ಣರಿಗೆ ಸೂಚಿಸಿದ್ದಾರೆ.
ಮೌನವಾಗಿರಬೇಡಿ- ಮೃಣಾಲ್ ಠಾಕೂರ್ ಅಭಿಪ್ರಾಯ
ಇಂತಹ ಕೆಲಸ ಮಾಡುವ ಜನರಿಗೆ ನಾಚಿಕೆಯಾಗಬೇಕು. ಈ ರೀತಿ ಮಾಡುವವರಿಗೆ ಆತ್ಮಸಾಕ್ಷಿಯೇ ಇಲ್ಲ ಎನ್ನುವುದನ್ನು ಇದನ್ನು ತೋರಿಸುತ್ತದೆ. ಈ ಕುರಿತು ಮಾತನಾಡಿದ್ದಕ್ಕೆ ರಶ್ಮಿಕಾ ಮಂದಣ್ಣಗೆ ಧನ್ಯವಾದಗಳು. ನಮ್ಮಲ್ಲಿ ಬಹಳಷ್ಟು ಜನರು ಮೌನವಾಗಿದ್ದಾರೆ. ಇಂಟರ್‌ನೆಟ್‌ನಲ್ಲಿ ಅನುಚಿತವಾಗಿ ಮಹಿಳೆಯರ ದೇಹದ ಭಾಗವನ್ನು ಝೂಮ್ ಮಾಡಿ ತೋರಿಸುವುದನ್ನು ಇಲ್ಲಿಯವರೆಗೆ ನೋಡಿದ್ದೇವೆ. ಈ ರೀತಿ ಮಾರ್ಫ್ ಮಾಡಿದ, ಎಡಿಟ್ ಮಾಡಿದ ವಿಡಿಯೋಗಳು ಸಾಕಷ್ಟು ಇವೆ. ನಾವು ಒಂದು ಸಮುದಾಯವಾಗಿ, ಸಮಾಜವಾಗಿ ಎತ್ತ ಸಾಗುತ್ತಿದ್ದೇವೆ. ನಾವು ವೃತ್ತಿಯಲ್ಲಿ ನಟಿಯಾಗಿರಬಹುದು. ದಿನದ ಕೊನೆಗೆ ನಾವು ಕೂಡ ಮನುಷ್ಯರೇ, ಮೌನವಾಗಿರಲು ಇದು ಸಮಯವಲ್ಲ" ಎಂದು ಮೃಣಾಲ್ ಠಾಕೂರ್ ಹೇಳಿದ್ದಾರೆ.
ಕಾನೂನು ಕ್ರಮಕ್ಕೆ ನಾಗ ಚೈತನ್ಯ ಆಗ್ರಹ
ರಶ್ಮಿಕಾ ಮಂದಣ್ಣರ ಟ್ವೀಟ್‌ಗೆ ನಾಗ ಚೈತನ್ಯ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. "ತಂತ್ರಜ್ಞಾನವನ್ನು ಹೇಗೆಲ್ಲ ದುರುಪಯೋಗ ಮಾಡಬಹುದು ಎನ್ನುವುದನ್ನು ನೋಡುವಾಗ ಬೇಸರವಾಗುತ್ತದೆ. ಭವಿಷ್ಯದಲ್ಲಿ ಇದರಿಂದ ಏನಾಗಬಹುದು ಎಂದು ಯೋಚಿಸುವಾಗ ಭಯವಾಗುತ್ತದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದಕ್ಕೆ ಸಂಬಂಧಪಟ್ಟಂತೆ ಕಾನೂನುಗಳನ್ನು ಜಾರಿಗೆ ತರಬೇಕು. ಇದಕ್ಕೆ ಬಲಿಯಾಗುವ ಜನರನ್ನು ರಕ್ಷಿಸಲು ಕ್ರಮಕೈಗೊಳ್ಳಬೇಕು" ಎಂದು ನಾಗ ಚೈತನ್ಯ ಹೇಳಿದ್ದಾರೆ. ನಾಗ ಚೈತನ್ಯರ ಬೆಂಬಲಕ್ಕೆ ರಶ್ಮಿಕಾ ಮಂದಣ್ಣ ಧನ್ಯವಾದಗಳನ್ನು ತಿಳಿಸಿದ್ದಾರೆ.
ಗಾಯಕಿ ಚಿನ್ಮಯಿ ಶ್ರೀಪಾದ ಪ್ರತಿಕ್ರಿಯೆ
ಕೆಲವು ತಿಂಗಳ ಹಿಂದೆ ಜೈಲರ್ ಸಿನಿಮಾದ ಕಾವಾಲ ಹಾಡಿನ ಎಐ ವಿಡಿಯೋ ವೈರಲ್ ಆಗಿತ್ತು. ಆದರೆ, ಆ ವಿಡಿಯದಲ್ಲಿ ನಟಿ ಇರಲಿಲ್ಲ. ಅದು ಡೀಪ್‌ಫೇಕ್ ಆಗಿತ್ತು. ಸಿಮ್ರಾನ್ ಈ ರೀತಿಯ ಎಐ ಅವತಾರದಲ್ಲಿ ಕಾಣಿಸಿಕೊಳ್ಳಲು ಅನುಮತಿ ನೀಡಿದ್ದಾರೆಯೇ ತಿಳಿದಿಲ್ಲ. ಈಗ ಡಿಫ್‌ಫೇಕ್ ರಶ್ಮಿಕಾ ವಿಡಿಯೋ ಕುರಿತು ಚರ್ಚೆಯಾಗುತ್ತಿದೆ. ನಾನು ಅವರ ಇನ್‌ಸ್ಟಾಗ್ರಾಂ ಸ್ಟೋರಿ ನೋಡಿರುವೆ. ನಿಜಕ್ಕೂ ರಶ್ಮಿಕಾ ತೊಂದರೆಯಲ್ಲಿದ್ದಾರೆ. ಈ ತಂತ್ರಜ್ಞಾನವು ಕಿರುಕುಳ ಮತ್ತು ಬ್ಲ್ಯಾಕ್‌ಮೇಲ್‌ಗೆ ಮುಂದಿನ ಅಸ್ತ್ರವಾಗಲಿದೆ. ಹುಡುಗಿಯರನ್ನು ಸುಲಿಗೆ ಮಾಡಲು, ಬ್ಲ್ಯಾಕ್‌ಮಾಡಲು, ಅತ್ಯಾಚಾರ ಮಾಡಲು ಈ ತಂತ್ರಜ್ಞಾನ ಅಸ್ತ್ರವಾಗಲಿದೆ. ಇಂತಹ ವಿಡಿಯೋ ಒಂದು ಸಣ್ಣ ಹಳ್ಳಿ, ಪಟ್ಟಣದ ಹೆಣ್ಣು ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು? ಇಂತಹ ಘಟನೆಗಳು ನಡೆದಾಗ ಪ್ರತಿಭಟಿಸುವಷ್ಟು ಧೈರ್ಯ ಹೆಚ್ಚಿನ ಜನರಲ್ಲಿ ಇರುವುದಿಲ್ಲ. ಇಂತಹ ತಂತ್ರಜ್ಞಾನದ ಕುರಿತು ದೇಶಾದ್ಯಂತ ಜಾಗೃತಿ ಅಭಿಯಾನ ನಡೆಯಬೇಕಿದೆ. ಇದು ಈಗಿನ ತುರ್ತು. ಯುವತಿಯರಿಗೆ ಡೀಪ್‌ಫೇಕ್ ಅಪಾಯಕಗಳ ಕುರಿತು ತಿಳಿಯಬೇಕು" ಎಂದು ಗಾಯಕಿ ಚಿನ್ಮಯಿ ಶ್ರೀಪಾದ ಅಭಿಪ್ರಾಯಪಟ್ಟಿದ್ದಾರೆ.
ಚಿನ್ಮಯಿ ಟ್ವೀಟ್‌ಗೆ ರಶ್ಮಿಕಾ ಮಂದಣ್ಣ ಮಾರುತ್ತರ ನೀಡಿದ್ದಾರೆ. "ಧನ್ಯವಾದ ಚಿನ್ಮಯಿ. ಈ ಕುರಿತು ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಆಶಿಸುತ್ತೇನೆ. ಇದಕ್ಕೆ ಸಂಬಂಧಪಟ್ಟ ಮಾರ್ಗಸೂಚಿಗಳನ್ನು ಸರಕಾರ ಬಿಡುಗಡೆ ಮಾಡಬೇಕಿದೆ" ಎಂದು ಹೇಳಿದ್ದಾರೆ.