Cm On Gandhada Gudi: ‘ಗಂಧದ ಗುಡಿ’ ಚಿತ್ರಕ್ಕೆ ತೆರಿಗೆ ವಿನಾಯ್ತಿ; ನ.1ಕ್ಕೆ ಅಪ್ಪುಗೆ ಕರ್ನಾಟಕ ರತ್ನ ಪ್ರದಾನ; ಸಿಎಂ ಬಸವರಾಜ ಬೊಮ್ಮಾಯಿ
Oct 21, 2022 10:02 PM IST
‘ಗಂಧದ ಗುಡಿ’ ಚಿತ್ರಕ್ಕೆ ತೆರಿಗೆ ವಿನಾಯ್ತಿ; ನ.1ಕ್ಕೆ ಅಪ್ಪುಗೆ ಕರ್ನಾಟಕ ರತ್ನ ಪ್ರದಾನ; ಸಿಎಂ ಬಸವರಾಜ ಬೊಮ್ಮಾಯಿ
- ಮುಂದಿನ ಪೀಳಿಗೆಗೆ ನಿಸರ್ಗದ ಬಗ್ಗೆ ಜಾಗೃತಿ ಮೂಡಿಸಲು, ಅದರ ಸಂರಕ್ಷಣೆ ಮಾಡಲು ಪ್ರೇರಣೆ ನೀಡುವ ‘ಗಂಧದ ಗುಡಿ’ ಚಲನಚಿತ್ರಕ್ಕೆ ಸರ್ಕಾರ ತೆರಿಗೆ ವಿನಾಯ್ತಿಯನ್ನು ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.
ಬೆಂಗಳೂರು: ಮುಂದಿನ ಪೀಳಿಗೆಗೆ ನಿಸರ್ಗದ ಬಗ್ಗೆ ಜಾಗೃತಿ ಮೂಡಿಸಲು, ಅದರ ಸಂರಕ್ಷಣೆ ಮಾಡಲು ಪ್ರೇರಣೆ ನೀಡುವ ‘ಗಂಧದ ಗುಡಿ’ ಚಲನಚಿತ್ರಕ್ಕೆ ಸರ್ಕಾರ ತೆರಿಗೆ ವಿನಾಯ್ತಿಯನ್ನು ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.
ಅವರು ಇಂದು ‘ಪುನೀತ ಪರ್ವ’, ‘ಗಂಧದ ಗುಡಿ’ ಪ್ರಿ ರಿಲೀಸ್ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಅವರು, ‘ಗಂಧದ ಗುಡಿ’ ಚಲನಚಿತ್ರ ನಿಸರ್ಗ ಮತ್ತು ಅದರ ರಕ್ಷಣೆ ಕುರಿತಾಗಿರುವ ಚಲನಚಿತ್ರವಾಗಿರುವುದರಿಂದ ಇಂದಿನ ಕಾಲದಲ್ಲಿ ನಿಸರ್ಗ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವುದು ಅತ್ಯಂತ ಅವಶ್ಯಕತೆ ಇದೆ ಎಂದರು.
ಅಪ್ಪು ಜನಮಾನಸದಲ್ಲಿ ಜೀವಂತವಾಗಿದ್ದಾರೆ
"ಅಪ್ಪುವನ್ನು ಕಳೆದುಕೊಂಡು ಒಂದು ವರ್ಷವಾಗಿದೆ. ಅಪ್ಪು ನಮ್ಮ ಜೊತೆಗೆ ಇದ್ದಾರೆ ಎಂಬ ಭಾವನೆ ನಮ್ಮಲ್ಲಿದೆ. ನಾನು ಕರ್ನಾಟಕದ ಉದ್ದಗಲಕ್ಕೂ ಕೊಳ್ಳೇಗಾಲದಿಂದ ಹಿಡಿದು ಬೀದರ್ ವರೆಗೂ ಪ್ರತಿಯೊಂದು ಗ್ರಾಮದಲ್ಲಿ ಅಪ್ಪುವಿನ ಛಾಯಾಚಿತ್ರ, ನಮನ, ಯುವಕರಲ್ಲಿ ಅಪ್ಪುವಿನ ಬಗ್ಗೆ ಪ್ರೀತಿ ವಿಶ್ವಾಸ ನೋಡಿದಾಗ, ಕೆಲವೊಮ್ಮೆ ವಿಸ್ಮಿತನಾಗುತ್ತೇನೆ. ಅಂತಹ ವ್ಯಕ್ತಿತ್ವಕ್ಕೆ ದೇವರ ಆಶೀರ್ವಾದವಿದೆ. ಅಪ್ಪುರವರು ಇನ್ನೂ ಬಹಳ ವರ್ಷ ಬಾಳಬೇಕಾಗಿದ್ದವರು. ಅತ್ಯಂತ ಸಣ್ಣ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಅಪ್ಪು ಬಗ್ಗೆ ಎರಡು ವಿಶೇಷತೆ ಇದೆ. ಅತ್ಯಂತ ಸಣ್ಣ ವಯಸ್ಸಿನಲ್ಲಿ ಬಾಲಕಲಾವಿದರಾಗಿ ಖ್ಯಾತಿಯಾಗಿದ್ದಾರೆ. ಆದರೂ ಅವರ ಕೆಲಸಗಳು, ಆದರ್ಶಗಳು ಮತ್ತು ಅವರ ನಟನೆ ಮಾಡಿದ ಚಿತ್ರಗಳ ಮೂಲಕ ಅಪ್ಪು ಜನಮಾನಸದಲ್ಲಿ ಇಂದಿಗೂ ಜೀವಂತವಾಗಿದ್ದಾರೆ ಎಂದರು.
ನವೆಂಬರ್ 1 ರಂದು ಅಪ್ಪುರವರಿಗೆ ಕರ್ನಾಟಕ ರತ್ನ ಪ್ರಶಸ್ತಿ
ನವೆಂಬರ್ 1 ರಂದು ಅಪ್ಪುರವರಿಗೆ ಕರ್ನಾಟಕ ಶ್ರೇಷ್ಟ ಪ್ರಶಸ್ತಿಯಾಗಿರುವ ‘ಕರ್ನಾಟಕ ಪ್ರಶಸ್ತಿಯನ್ನು’ ಸರ್ಕಾರ ನೀಡುತ್ತಿದೆ. ವಿಧಾನಸೌಧದ ಮುಖ್ಯದ್ವಾರ ಮೆಟ್ಟಿಲುಗಳ ಮೇಲೆ ಮರಣೋತ್ತರವಾಗಿ ಕರ್ನಾಟಕ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲಾಗುತ್ತಿದೆ. ಇದು ಎಲ್ಲ ಯುವಕರಿಗೂ ಪ್ರೇರಣೆಯಾಗುವಂತಹ ಒಂದು ಗೌರವ ಎಂದು ಭಾವಿಸುತ್ತೇನೆ. ಗಂಧದ ಗುಡಿ ಚಲನಚಿತ್ರ ಅತ್ಯಂತ ಯಶಸ್ವಿಯಾಗಲಿ. ಅದೇ ರೀತಿ ಪುನೀತ್ ಪರ್ವ ಕಾರ್ಯಕ್ರಮ ಕೂಡ ಯಶಸ್ವಿಯಾಗಲಿ. ಸುಮಾರು ಹತ್ತು ದಿನಗಳ ಕಾಲ ನಡೆಯುವ ಕರ್ನಾಟಕ ರತ್ನ ಸಮಾರಂಭದ ಸಂಭ್ರಮವೂ ಕೂಡ ಯಶಸ್ವಿಯಾಗಲಿ. ಈ ಕಾರ್ಯಕ್ರಮದ ಮೂಲಕ ಅಪ್ಪುವಿನ ಮೇಲಿನ ನಮ್ಮ ಪ್ರೀತಿ, ವಾತ್ಸಲ್ಯವನ್ನು ಸಮಸ್ತ ಕನ್ನಡ ನಾಡು ತೋರಿಸಿದಂತಾಗುತ್ತದೆ ಎನ್ನುವ ಆಶಾಭಾವನೆ ನನಗಿದೆ ಎಂದರು.