Ahoratra vs Darshan fans: ದರ್ಶನ್‌ಗೆ ರೌಡಿ ಬಾಸ್ ಎಂದ ಅಹೋರಾತ್ರ...ಆಧ್ಯಾತ್ಮ ಚಿಂತಕನ ವಿರುದ್ಧ ತಿರುಗಿಬಿದ್ದ ಡಿಬಾಸ್ ಫ್ಯಾನ್ಸ್
Dec 18, 2022 05:55 PM IST
ದರ್ಶನ್ ನಿಂದಿಸಿದ ಅಹೋರಾತ್ರ
- ದರ್ಶನ್ ಅವರ ಬಗ್ಗೆ ಮಾತನಾಡಿದ ದಿನದಿಂದ ಅಹೋರಾತ್ರಗೆ ಒಂದೇ ಸಮನೆ ಕಾಲ್ಸ್ ಬರುತ್ತಿದೆಯಂತೆ. ಎಷ್ಟರ ಮಟ್ಟಿಗೆ ಎಂದರೆ ಫೋನನ್ನು ಬೇರೆ ಯಾವುದಕ್ಕೂ ಬಳಸಲು ಸಾಧ್ಯವಾಗದಷ್ಟು ಕರೆಗಳು ಬರುತ್ತಿವೆಯಂತೆ. ಅದನ್ನೂ ಕೂಡಾ ಅಹೋರಾತ್ರ ಲೈವ್‌ಗೆ ಬಂದು ಹೇಳಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಅಹೋರಾತ್ರನ ಬಗ್ಗೆ ತಿಳಿದಿರುತ್ತದೆ. ಅಹೋರಾತ್ರ ಆಧ್ಯಾತ್ಮ ಚಿಂತಕ ಹಾಗೂ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಅನುಭವ ಇರುವವರು ಎನ್ನಲಾಗಿದೆ. ಜೊತೆಗೆ ವೃಕ್ಷರಕ್ಷ ಎಂಬ ತಂಡವನ್ನು ಕಟ್ಟಿಕೊಂಡು ಪ್ರಕೃತಿ ರಕ್ಷಣೆಯಲ್ಲೂ ತೊಡಗಿದ್ದಾರೆ. ಆದರೆ ಸ್ಯಾಂಡಲ್‌ವುಡ್ ಮಂದಿಯ ಬಗ್ಗೆ ಮಾತ್ರ ಅವರು ಅನೇಕ ವಿಡಿಯೊ ಮಾಡಿ ಅಸಮಾಧಾನ ವ್ಯಕ್ತಪಡಿಸುತ್ತಲೇ ಇರುತ್ತಾರೆ.
ಕೆಲವು ದಿನಗಳ ಹಿಂದಷ್ಟೇ ಸುದೀಪ್ ಅವರ ರಮ್ಮಿ ಜಾಹೀರಾತಿನ ಬಗ್ಗೆ ಮಾತನಾಡಿದ್ದ ಅಹೋರಾತ್ರ, ''ಸುದೀಪ್ ಅವರನ್ನು ಏಕವಚನದಲ್ಲಿ ನಿಂದಿಸಿದ್ದರು. ನಂತರ ಸುದೀಪ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ನಂತರ ಪಾರು ಧಾರಾವಾಹಿಯ ಮೋಕ್ಷಿತಾ ಪೈ ವಿರುದ್ಧ ಕೂಡಾ ವಾಗ್ದಾಳಿ ಮಾಡಿದ್ದರು. ರಮ್ಮಿ ಜಾಹೀರಾತಿನಲ್ಲಿ ನಟಿಸಿದ್ದ ಚಂದನ್ ಶೆಟ್ಟಿಯವರನ್ನು ಕೂಡಾ ತರಾಟೆಗೆ ತೆಗೆದುಕೊಂಡಿದ್ದರು. ಕೆಲವು ದಿನಗಳ ಹಿಂದೆ 'ಕ್ರಾಂತಿ' ಪ್ರಮೋಷನ್ ಸಮಯದಲ್ಲಿ ಅದೃಷ್ಟ ಲಕ್ಷ್ಮಿ ಬಗ್ಗೆ ಮಾತನಾಡಿದ್ದ ದರ್ಶನ್ ಬಗ್ಗೆ ಕೂಡಾ ಕಿಡಿ ಕಾರಿದ್ದರು. ವಿಡಿಯೋ ಮಾಡಿ ದರ್ಶನ್ ಅವರನ್ನು ಕೂಡಾ ಏಕವಚನದಲ್ಲಿ ನಿಂದಿಸಿದ್ದರು. ರೌಡಿ ಬಾಸ್ ಎಂದೆಲ್ಲಾ ಕರೆದಿದ್ದರು. ಇದೀಗ ಅಹೋರಾತ್ರನ ವಿರುದ್ಧ ದರ್ಶನ್ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ.
ದರ್ಶನ್ ಅವರ ಬಗ್ಗೆ ಮಾತನಾಡಿದ ದಿನದಿಂದ ಅಹೋರಾತ್ರಗೆ ಒಂದೇ ಸಮನೆ ಕಾಲ್ಸ್ ಬರುತ್ತಿದೆಯಂತೆ. ಎಷ್ಟರ ಮಟ್ಟಿಗೆ ಎಂದರೆ ಫೋನನ್ನು ಬೇರೆ ಯಾವುದಕ್ಕೂ ಬಳಸಲು ಸಾಧ್ಯವಾಗದಷ್ಟು ಕರೆಗಳು ಬರುತ್ತಿವೆಯಂತೆ. ಅದನ್ನೂ ಕೂಡಾ ಅಹೋರಾತ್ರ ಲೈವ್‌ಗೆ ಬಂದು ಹೇಳಿಕೊಂಡಿದ್ದಾರೆ. "ಒಂದೇ ಸಮ ಫೋನ್ ಕಾಲ್ ಬರುತ್ತಿವೆ. ನಾನು ಫೋಸ್ ರಿಸೀವ್ ಮಾಡದ ಈ ನಂಬರ್‌ಗಳೆಲ್ಲಾ ಸಮಾಜದಲ್ಲಿ ಇವರು ರೆಡಿ ಮಾಡಿರುವ ನೆಗೆಟಿವ್ ಪ್ರಾಡಕ್ಟ್‌ಗಳು. ಇವರೆಲ್ಲ ಹೆಣ್ಣು ನಿಂದಕರು. ಬಾಯಿ ಬಿಟ್ಟರೆ ಅಮ್ಮ ಅಕ್ಕ ಅಂತ ಮಾತಾಡುತ್ತಾರೆ." ಎಂದು ಅಹೋರಾತ್ರ ಸೆಲ್ಫಿ ವಿಡಿಯೋದಲ್ಲಿ ಹೇಳಿದ್ದಾರೆ.
'ಕ್ರಾಂತಿ' ಪ್ರಮೋಷನ್ ವೇಳೆ ದರ್ಶನ್ ಹೇಳಿದ್ದೇನು?
ದರ್ಶನ್ ಅಭಿನಯದ 'ಕ್ರಾಂತಿ' ಸಿನಿಮಾ ಮುಂದಿನ ವರ್ಷ ತೆರೆ ಕಾಣುತ್ತಿದೆ. ಈಗಾಗಲೇ ಚಿತ್ರತಂಡ ಪ್ರಮೋಷನ್ ಕೆಲಸಗಳನ್ನು ಶುರು ಮಾಡಿದೆ, ಇತ್ತೀಚೆಗೆ ಚಿತ್ರತಂಡ ಧರಣಿ.. ಎಂಬ ಹಾಡನ್ನು ಕೂಡಾ ಬಿಡುಗಡೆ ಮಾಡಿದೆ. ಅಭಿಮಾನಿಗಳನ್ನು ಸೆಲೆಬ್ರಿಟಿಗಳು ಎಂದು ಕರೆಯುವ ದರ್ಶನ್, ಮೈಸೂರಿನಲ್ಲಿ ನಡೆದ 'ಕ್ರಾಂತಿ' ಹಾಡು ರಿಲೀಸ್ ಕಾರ್ಯಕ್ರಮದಲ್ಲಿ ಸಾಮಾನ್ಯ ಮಹಿಳೆಯೊಬ್ಬರನ್ನು ವೇದಿಕೆ ಮೇಲೆ ಕರೆದು ಹಾಡನ್ನು ಬಿಡುಗಡೆಗೊಳಿಸಿದ್ದರು. ಇದರ ಬೆನ್ನಲ್ಲೇ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ಅವರು ನೀಡಿದ್ದ ಸಂದರ್ಶನದಲ್ಲಿ ಅದೃಷ್ಟ ದೇವತೆ ಬಗ್ಗೆ ಮಾತನಾಡಿದ್ದು, ಆ ಮಾತುಗಳು ವಿವಾದಕ್ಕೆ ಒಳಗಾಗಿದೆ.
''ಅದೃಷ್ಟದೇವತೆ ಯಾವಾಗಲೋ ಒಂದು ಬಾರಿ ಬಾಗಿಲು ತಟ್ಟುತ್ತಾಳಂತೆ, ಅವಳನ್ನು ಕರೆದುಕೊಂದು ಹೋಗಿ ಬಟ್ಟೆ ತೆಗೆಸಿ, ಬೆಡ್ ರೂಮ್‌ನಲ್ಲಿ ಕೂರಿಸಿಕೊಳ್ಳಬೇಕು. ಬಟ್ಟೆ ಕೊಟ್ಟರೆ ತಾನೇ ಇನ್ನೊಂದು ಮನೆಗೆ ಹೋಗ್ತಾಳೆ, ಅದೇ ರೀತಿ ನಿರ್ಮಾಪಕರು ದೊರೆಯುವುದೇ ಅಪರೂಪ, ಅವರು ಸಿಕ್ಕರೆ ಅದನ್ನು ಸದುಪಯೋಗಮಾಡಿಕೊಳ್ಳಬೇಕು'' ಎಂದು ಮಾತನಾಡಿದ್ದರು. ಈ ವಿಡಿಯೋ ಈಗ ವೈರಲ್ ಆಗುತ್ತಿದ್ದು ಕೆಲವರು ದರ್ಶನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಕ್ರಾಂತಿ' ಚಿತ್ರವನ್ನು ಬಹಿಷ್ಕಾರ ಮಾಡುವಂತೆ ಅಭಿಯಾನ ಆರಂಭಿಸಿದ್ದಾರೆ. ಆದರೆ ಈ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ಆರಂಭವಾಗಿದೆ. ದರ್ಶನ್ ಅದೃಷ್ಟ ದೇವತೆಯನ್ನು ಈ ರೀತಿ ಅವಮಾನ ಮಾಡಿರೋದು ತಪ್ಪು, ಹಿಂದೂ ದೇವತೆಗೆ ದರ್ಶನ್ ಅವಮಾನ ಮಾಡುವ ಮೂಲಕ ನಮ್ಮ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದರೆ ಇನ್ನೂ ಕೆಲವರು. ದರ್ಶನ್ ಮಾತುಗಳನ್ನು ಎಲ್ಲರೂ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಅವರು ನಿರ್ಮಾಪಕರನ್ನು ಅದೃಷ್ಟದೇವತೆಗೆ ಹೋಲಿಸಿದ್ದಾರೆ. ಇದರಲ್ಲಿ ತಪ್ಪು ಹುಡುಕುವ ಕೆಲಸ ಬೇಡ ಎನ್ನುತ್ತಿದ್ದಾರೆ.