logo
ಕನ್ನಡ ಸುದ್ದಿ  /  ಮನರಂಜನೆ  /  Dr Rajkumar Movies: ಸದಾ ಭರವಸೆ ಕೊಡುವ ಹೊಸಬೆಳಕು, ಕವಿರತ್ನ ಕಾಳಿದಾಸ ನನ್ನ ನೆಚ್ಚಿನ ಸಿನಿಮಾಗಳು; ಶರಣ್

Dr Rajkumar Movies: ಸದಾ ಭರವಸೆ ಕೊಡುವ ಹೊಸಬೆಳಕು, ಕವಿರತ್ನ ಕಾಳಿದಾಸ ನನ್ನ ನೆಚ್ಚಿನ ಸಿನಿಮಾಗಳು; ಶರಣ್

Apr 17, 2023 08:33 AM IST

ಕವಿರತ್ನ ಕಾಳಿದಾಸ ಚಿತ್ರದಲ್ಲಿ ಡಾ ರಾಜ್‌ಕುಮಾರ್ (ಎಡಚಿತ್ರ), ಚಿತ್ರನಟ ಶರಣ್ (ಮಧ್ಯದ ಚಿತ್ರ), ಹೊಸ ಬೆಳಕು ಚಿತ್ರದಲ್ಲಿ ಡಾ ರಾಜ್‌ಕುಮಾರ್ (ಬಲಚಿತ್ರ)

    • ಇದು 'ನನ್ನಿಷ್ಟದ ರಾಜ್ ಸಿನಿಮಾ' ವಿಶೇಷ ಸರಣಿ (Dr Rajkumar Movies). ಡಾ ರಾಜ್‌ಕುಮಾರ್ ಅವರ 94ನೇ ಜಯಂತಿ ಪ್ರಯುಕ್ತ (Dr Rajkumar Birth Anniversary) 'ಎಚ್‌ಟಿ ಕನ್ನಡ' ಈ ಸರಣಿಯನ್ನು ಪ್ರಸ್ತುತಪಡಿಸುತ್ತಿದೆ. ಮುಂದಿನ ದಿನಗಳಲ್ಲಿ ನೀವಿಷ್ಟಪಡುವ ಮತ್ತಷ್ಟು ಜನರು 'ಅಣ್ಣಾವ್ರು' ಅಭಿನಯದ ತಮ್ಮಿಷ್ಟದ ಚಿತ್ರಗಳನ್ನು ನೆನಪಿಸಿಕೊಳ್ಳಲಿದ್ದಾರೆ.
ಕವಿರತ್ನ ಕಾಳಿದಾಸ ಚಿತ್ರದಲ್ಲಿ ಡಾ ರಾಜ್‌ಕುಮಾರ್ (ಎಡಚಿತ್ರ), ಚಿತ್ರನಟ ಶರಣ್ (ಮಧ್ಯದ ಚಿತ್ರ), ಹೊಸ ಬೆಳಕು ಚಿತ್ರದಲ್ಲಿ ಡಾ ರಾಜ್‌ಕುಮಾರ್ (ಬಲಚಿತ್ರ)
ಕವಿರತ್ನ ಕಾಳಿದಾಸ ಚಿತ್ರದಲ್ಲಿ ಡಾ ರಾಜ್‌ಕುಮಾರ್ (ಎಡಚಿತ್ರ), ಚಿತ್ರನಟ ಶರಣ್ (ಮಧ್ಯದ ಚಿತ್ರ), ಹೊಸ ಬೆಳಕು ಚಿತ್ರದಲ್ಲಿ ಡಾ ರಾಜ್‌ಕುಮಾರ್ (ಬಲಚಿತ್ರ) (Dr Rajkumar Movies)

ಕರುನಾಡಿನ ಹೆಮ್ಮೆ ಡಾ. ರಾಜ್‌ಕುಮಾರ್ (Kannada Film Actor Dr Rajkumar) ಅವರನ್ನು ಕನ್ನಡಿಗರು ಎಂದಿಗೂ ಮರೆಯಲಾರರು. ಇದೀಗ ಅವರ ನೆನಪು ನೇವರಿಸಲು ಕಾರಣವಿದೆ. ಇದೇ ಏ 24ರಂದು ಡಾ ರಾಜ್‌ಕುಮಾರ್ ಅವರ 94ನೇ ಜಯಂತಿ (Dr Rajkumar Birth Anniversary). ಕನ್ನಡ ಮನಸ್ಸುಗಳು ಇಷ್ಟಪಡುವ ಹಲವು ಸಹೃದಯರು ‘ನನ್ನ ನೆಚ್ಚಿನ ರಾಜ್‌ ಸಿನಿಮಾ’ ಸರಣಿಯಲ್ಲಿ ಅಣ್ಣಾವ್ರ ಚಿತ್ರಗಳನ್ನು ನೆನಪಿಸಿಕೊಂಡಿದ್ದಾರೆ. 'ಅಧ್ಯಕ್ಷ', 'ಅವತಾರ ಪುರುಷ', 'ಗುರು ಶಿಷ್ಯರು' ಸೇರಿದಂತೆ ಹಲವು ಚಿತ್ರಗಳ ಮೂಲಕ ಮನೆಮಾತಾದ ನಟ ಶರಣ್ (Sharan) ಈ ಬರಹದಲ್ಲಿ ಡಾ.ರಾಜ್‌ಕುಮಾರ್ ಅಭಿನಯದ 'ಹೊಸಬೆಳಕು' (Hosa Belaku) ಮತ್ತು 'ಕವಿರತ್ನ ಕಾಳಿದಾಸ' (Kaviratna Kalidasa) ಚಿತ್ರಗಳು ತಮಗೇಕೆ ಇಷ್ಟ ಎಂದು ವಿವರಿಸಿದ್ದಾರೆ. ಇಲ್ಲಿಂದಾಚೆಗಿರುವುದು ಶರಣ್ ಅವರದೇ ಮಾತು..

ಟ್ರೆಂಡಿಂಗ್​ ಸುದ್ದಿ

Thug Life: ಥಗ್‌ ಲೈಫ್‌ ಚಿತ್ರಕ್ಕೆ ಎಂಟ್ರಿ ಕೊಟ್ಟ ಸಿಲಂಬರಸನ್‌; ಇದು ಮಣಿರತ್ನಂ -ಕಮಲ್‌ ಹಾಸನ್‌ ಕಾಂಬಿನೇಷನ್‌ ಸಿನಿಮಾ

ಪೂಜಾ ಹೆಗ್ಡೆ ತುಳು ಹುಡುಗನ ಮದುವೆಯಾಗ್ತಾರ, ಕನ್ನಡ ಸಿನಿಮಾದಲ್ಲಿ ನಟಿಸ್ತಾರ? ಕಣಜಾರು ದೇಗುಲಕ್ಕೆ ಭೇಟಿ ನೀಡಿದ ತುಳುನಾಡಿನ ನಟಿ ಹೀಗಂದ್ರು

ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಆವೇಶಂ ಬಿಡುಗಡೆ; ಫಹಾದ್‌ ಫಾಸಿಲ್‌ ನಟನೆಗೆ ಉಘೇ ಉಘೇ ಅಂದ ಒಟಿಟಿ ಪ್ರೇಕ್ಷಕರು

ಈ ವಾರ ಚಿತ್ರಮಂದಿರಗಳಲ್ಲಿ 20+ ಸಿನಿಮಾಗಳು ರಿಲೀಸ್‌; ಕನ್ನಡದಲ್ಲಿ 4 ಚಿತ್ರಗಳು ಬಿಡುಗಡೆ, ವಿಜಯ ರಾಘವೇಂದ್ರರ ಹೊಸ ಆಟ ಶುರು

ಹೊಸ ಬೆಳಕು, ಕವಿರತ್ನ ಕಾಳಿದಾಸ: ನನ್ನಿಷ್ಟದ ಸಿನಿಮಾಗಳು

ಥಟ್‌ ಅಂತ ಹೇಳುವುದಾದರೆ ನನಗೆ ಡಾ. ರಾಜ್‌ಕುಮಾರ್‌ ನಟಿಸಿರೋ ‘ಹೊಸ ಬೆಳಕು’ ಮತ್ತು ‘ಕವಿರತ್ನ ಕಾಳಿದಾಸ’ ಸಿನಿಮಾಗಳು ತುಂಬ ಇಷ್ಟ. ಅವರ ಪ್ರತಿ ಸಿನಿಮಾದಲ್ಲೂ ಬದುಕಿನ ಪಾಠಗಳ ಹೂರಣವೇ ಇರುತ್ತೆ. ನೋಡುವುದಷ್ಟೇ ಅಲ್ಲ ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಾದ ಸಿನಿಮಾಗಳನ್ನೇ ಅವರು ಮಾಡಿದ್ದಾರೆ. ನನಗೆ ತಿಳಿವಳಿಕೆ ಬರುವುದಕ್ಕೂ ಮೊದಲೇ ನಾನು ರಾಜ್‌ ಅವರ ಸಾಕಷ್ಟು ಸಿನಿಮಾಗಳನ್ನು ನೋಡಿದ್ದೆ. ಹೊಸಬೆಳಕು ಮತ್ತು ಕವಿರತ್ನ ಕಾಳಿದಾಸ ನನಗೆ ಚೂರು ತಿಳಿವಳಿಕೆ ಬಂದ ಮೇಲೆ ನೋಡಿದ್ದು.

ಆಗಿನ್ನು ನನಗೆ 10 ವರ್ಷ. ತುಂಬಾ ಚಿಕ್ಕವನು. ರಾಜ್‌ಕುಮಾರ್‌ ಅಂದರೆ ಅದೊಂದು ಅಚ್ಚರಿ. ಅವರ ಸಿನಿಮಾ ಬರ್ತಿದೆ ಎಂದರೆ ಬೆರಗುಗಣ್ಣಿಂದ ನೋಡುತ್ತಿದ್ದೆ. ಇನ್ನೇನು ಸಿನಿಮಾ ರಿಲೀಸ್‌ ಆಗ್ತಿದೆ, ಅಪ್ಪ ಕರೆದುಕೊಂಡು ಹೋಗ್ತಾರೆ ಅಂದಾಗ ಆ ಖುಷಿಯೇ ಬೇರೆ. ಆ ಸಿನಿಮಾಕ್ಕಾಗಿ ಕಾದು, ಇನ್ನೇನು ಮೂರು ದಿನ, ಎರಡು ದಿನ ಅಂತ ಲೆಕ್ಕ ಹಾಕಿ, ಕೊನೆಗೆ ಲೈನ್‌ನಲ್ಲಿ ನಿಂತು, ಟಿಕೆಟ್‌ ತೆಗೊಂಡು ಚಿತ್ರಮಂದಿರದೊಳಕ್ಕೆ ಹೋದಾಗಲೇ ಅದೊಂದು ಸಮಾಧಾನ. ಹಾಗೆ ಬೆರಗುಗಣ್ಣಿಂದ ನೋಡಿದ ಸಿನಿಮಾಗಳೇ ಹೊಸಬೆಳಕು ಮತ್ತು ಕವಿರತ್ನ ಕಾಳಿದಾಸ.

ಹೊಸಬೆಳಕು ಸಿನಿಮಾ ನಾನು ನೋಡಿದ್ದು ನನ್ನ 10ನೇ ವಯಸ್ಸಿಗೆ. ಆ ವಯಸ್ಸಿಗೆ ಅದೆಷ್ಟರ ಮಟ್ಟಿಗೆ ಆ ಸಿನಿಮಾ ಅರ್ಥ ಆಯಿತೋ ಅದು ನನಗೆ ಗೊತ್ತಿಲ್ಲ. ಆದರೆ, ದಿನಗಳೆದಂತೆ, ಮತ್ತೊಮ್ಮೆ ಮಗದೊಮ್ಮೆ ಆ ಸಿನಿಮಾ ನೋಡಿದಾಗ ಅದರಲ್ಲಿ ಅಣ್ಣಾವ್ರು ಜೀವಿಸಿದ ಪಾತ್ರದ ವಿಶೇಷತೆ ಗೊತ್ತಾಯ್ತು. ಏನೂ ಇಲ್ಲದಿದ್ದಾಗ, ಎಲ್ಲವನ್ನೂ ಕಳೆದುಕೊಂಡಾಗ, ಭರವಸೆ ಅನ್ನೋ ಬೆಳಕು ಹೇಗೆ ಕೈ ಹಿಡಿಯುತ್ತದೆ ಎಂಬ ಅಂಶ ಆ ಸಿನಿಮಾದಲ್ಲಿದೆ.

ಅದೇ ರೀತಿ ಐತಿಹಾಸಿಕ, ಪೌರಾಣಿಕ ಹಿನ್ನೆಲೆಯ 'ಕವಿರತ್ನ ಕಾಳಿದಾಸ' ಸಿನಿಮಾದಲ್ಲಿ ರಾಜ್‌ ಅವರ ಎರಡು ಶೇಡ್‌ಗಳನ್ನು ನೋಡುವುದೇ ಚೆಂದ. ಮುಗ್ಧ ಕುರುಬ ಪಾತ್ರ ಒಂದೆಡೆ ಸಾಗಿದರೆ, ಮತ್ತೊಂದು ಬದಿಯಲ್ಲಿ ಎಲ್ಲವನ್ನೂ ಬಲ್ಲ ಮಹಾಜ್ಞಾನಿಯ ಅವತಾರವೂ ಅಷ್ಟೇ ರೋಮಾಂಚಕ ಅನ್ನಿಸಿತ್ತು. ಈಗಲೂ ಟಿವಿಯಲ್ಲಿ ಆ ದೃಶ್ಯ ಬಂದರೆ ನನಗೆ ಹಾಗೇ ಅನಿಸುತ್ತದೆ. ಈ ಕಾರಣಕ್ಕೆ ನನಗೆ ಈ ಎರಡು ಸಿನಿಮಾಗಳು ಇಷ್ಟ.

ಅವರ ಸಿನಿಮಾಗಳು ನನಗೆ ಇಷ್ಟ ಎಂದು ಹೇಳುವುದಕ್ಕೆ ನೂರಾರು ಉತ್ತರಗಳಿವೆ. ರಾಜಕುಮಾರ್‌ ಅವರ ಸಿನಿಮಾಗಳೇ ಒಂದು ಪಠ್ಯ ಪುಸ್ತಕದ ರೀತಿ. ಪ್ರತಿಯೊಂದು ಸಿನಿಮಾನೂ ಪುಸ್ತಕವೇ. ಅಲ್ಲಿ ಕಲಿಯುವುದಕ್ಕೆ ಬೆಟ್ಟದಷ್ಟು ಸಿಗುತ್ತದೆ. ಬದುಕಿಗೆ ಬೇಕಾಗಿರುವ ಎಷ್ಟೋ ವಿಚಾರಗಳು ಕಣ್ಣಿಗೆ ಬೀಳುತ್ತವೆ. ಸುಳ್ಳಿಗಿರುವ ಸ್ಥಾನವೇನು? ಸತ್ಯಕ್ಕಿರುವ ಶಕ್ತಿ ಎಂಥದ್ದು? ಕೊನೆಗೆ ಸತ್ಯವೇ ಗೆಲ್ಲುತ್ತೆ, ಗೆಲ್ಲಬೇಕು ಎಂಬುದನ್ನು ಅವರ ಪ್ರತಿ ಸಿನಿಮಾದಲ್ಲಿಯೂ ಹೇಳ್ತಾರೆ.

ನಾನು ನಟನಾದ ಬಳಿಕ ಆ ಸಿನಿಮಾ ನಂಟು ಶುರುವಾದ ಮೇಲೆ ರಾಜ್‌ಕುಮಾರ್‌ ಅವರು ಬೀರಿದ ಪ್ರಭಾವ ಸಣ್ಣದೇನಲ್ಲ. ಅದು ಮನದುಂಬಿಕೊಳ್ಳವಂಥದ್ದು. ಕಣ್ಣಿಗೆ, ಮನಸ್ಸಿಗೆ, ತಲೆಗೆ ತೃಪ್ತಿ ಆಗುವಂಥದ್ದು. ಒಂದರ್ಥದಲ್ಲಿ ಮೃಷ್ಟಾನ್ನ ಸಿಕ್ಕಂತೆ! ಕೇವಲ ಎರಡೇ ಸಿನಿಮಾಗಳ ಮೂಲಕ ಅವರನ್ನು ವರ್ಣಿಸಲು ಅಸಾಧ್ಯ. ಅದರಲ್ಲೂ ಅಣ್ಣಾವ್ರ ಪೌರಾಣಿಕ ಸಿನಿಮಾಗಳೆಂದರೆ ಅದನ್ನು ಕಣ್ತುಂಬಿಕೊಳ್ಳುವುದೇ ಒಂದು ಹಬ್ಬ. ಆ ಪಾತ್ರಗಳ ಖದರ್ ಬೇರೆಯೇ. ಒಂದು ಪಾತ್ರದ ಮೂಲಕ ಆ ಕಾಲಘಟ್ಟಕ್ಕೆ ಕರೆದೊಯ್ಯುವುದು ಅದು ಅಷ್ಟು ಸುಲಭವಲ್ಲ. ಅದು ಅವರಲ್ಲಿನ ಶಕ್ತಿ. ಅದನ್ನು ನೋಡಿ ಅವರ ಅಭಿಮಾನಿಯಾಗಿಯೂ ಹೆಮ್ಮೆ.

ಪ್ರಸ್ತುತ ಸಮಾಜಕ್ಕೂ ರಾಜ್‌ಕುಮಾರ್‌ ಸಿನಿಮಾಗಳೂ ಪೂರಕ. ಅವರ ಸಿನಿಮಾಗಳು ಕನ್ನಡ ಸಂಸ್ಕೃತಿಯ ಆತ್ಮವಿದ್ದಂತೆ. ಅದು ಎಂದಿಗೂ ಬದಲಾಗುವುದಿಲ್ಲ. ಕಾಲಕಾಲಕ್ಕೆ ಬದುಕುವ ರೀತಿನೀತಿ ಬದಲಾಗಬಹುದು. ಆದರೆ ಬದುಕನ್ನು ಮುನ್ನಡೆಸುವ ಧ್ಯೇಯಗಳು ಅವೇ ಆಗಿರುತ್ತವೆ. ಆ ಸಾರವನ್ನು ಸಾರಿದವರು ಅಣ್ಣಾವ್ರು. ಅವರ ಎಲ್ಲ ಸಿನಿಮಾಗಳು ಇವತ್ತಿಗೆ, ನಾಳೆಗೆ, ನಾಡಿದ್ದಕ್ಕೆ, ಯಾವತ್ತಿಗಿದ್ದರೂ ಪಠ್ಯಪುಸ್ತಕಗಳೇ. ಯಾವಾಗ ಬೇಕಾದರೂ ಆ ಪುಟ ತೆರೆದು ನೋಡಿದರೆ, ಅಲ್ಲಿ ಕಲಿಯುವುದಕ್ಕೆ ಸಿಕ್ಕೇ ಸಿಗುತ್ತದೆ. ಅವರ ಸಿನಿಮಾಗಳೇ ಅಜರಾಮರ.

90ರ ದಶಕದ ಸಮಯದಲ್ಲಿ ದಿನವೂ ಅವರ ಮನೆಗೆ ಹೋಗುವ ಭಾಗ್ಯ ನನ್ನದಾಗಿತ್ತು. ಸಿನಿಮಾದಲ್ಲಿ ನೋಡಿದಂತೆ ಅದೇ ವ್ಯಕ್ತಿತ್ವ. ಅದೇ ತೇಜಸ್ಸು. ಅವರನ್ನು ಹತ್ತಿರದಿಂದ ನೋಡಿದ್ದೇ ಈ ಜನ್ಮಕ್ಕೆ ನನಗೆ ಸಿಕ್ಕ ಪುಣ್ಯ. ಅವರ ಜತೆ ಒಟ್ಟಿಗೆ ಕುಳಿತು ಊಟ ಮಾಡಿದ್ದು, ಅವರ ಮನೆಯಲ್ಲಿ ಕಾಲ ಕಳೆದಿದ್ದು.. ಒಟ್ಟಿನಲ್ಲಿ ಅವರೊಂದಿಗೆ ನನ್ನದೂ ನಂಟಿತ್ತು, ಅವರ ಸಹವಾಸ ನಮಗೆ ದಕ್ಕಿತ್ತು ಎಂಬುದೇ ದೊಡ್ಡ ಖುಷಿ. ಅವರೇ ಒಂದು ಅದ್ಬುತವಾದ ಶಕ್ತಿ.. ಎಲ್ಲವನ್ನೂ ಒಳಗೊಂಡ ಒಂದು ವ್ಯಕ್ತಿತ್ವ. ಆ ಸರಳತೆ, ಆ ಜ್ಞಾನ, ಮುಂದಿನ ಪೀಳಿಗೆಗೆ ಮಾರ್ಗದರ್ಶನ ಆಗುವಂತ ಬದುಕಿನ ಶೈಲಿಯದು. ಅವರು ಬದುಕೇ ಒಂದು ಹಾದಿ, ಆ ಹಾದಿಯೇ ಒಂದು ಪಾಠ.

ಎಚ್‌ಟಿ ಕನ್ನಡ ವಾಟ್ಸಾಪ್ ಕಮ್ಯುನಿಟಿ ಸೇರಿ. ಫೇಸ್‌ಬುಕ್ ಪೇಜ್ ಲೈಕ್ ಮಾಡಿ, ಟ್ವಿಟರ್‌ನಲ್ಲಿ ಫಾಲೊ ಮಾಡಿ. ಯುಟ್ಯೂಬ್ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು