Googled Indian film of 2022: ಗೂಗಲ್‌ನ ಈ ವರ್ಷದ ಟಾಪ್ ಐದು ಭಾರತೀಯ ಸಿನಿಮಾಗಳಲ್ಲಿ ಕನ್ನಡದ ‘ಕೆಜಿಎಫ್ 2’ ಮತ್ತು ‘ಕಾಂತಾರ’
Dec 08, 2022 01:06 PM IST
ಗೂಗಲ್‌ನ ಈ ವರ್ಷದ ಟಾಪ್ ಐದು ಭಾರತೀಯ ಸಿನಿಮಾಗಳಲ್ಲಿ ಕನ್ನಡದ ‘ಕೆಜಿಎಫ್ 2’ ಮತ್ತು ‘ಕಾಂತಾರ’
- ಉತ್ತರದಲ್ಲಿ ಸೋಲು ಬೇತಾಳನಂತೆ ಬೆನ್ನು ಬಿದ್ದರೆ, ದಕ್ಷಿಣದಿಂದ ಗೆಲುವಿನ ಕಹಳೆ ಮೇಳೈಸಿದೆ. ಅದರಲ್ಲೂ ಕನ್ನಡದ ಕೀರ್ತಿ ಪತಾಕೆ ಇಡೀ ದೇಶದ ಗಮನ ಸೆಳೆದಿದೆ.
Google Year in Search 2022: ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ 2022 ತುಂಬ ಮಹತ್ವದ್ದು. ಅನಿರೀಕ್ಷಿತ ಬೆಳವಣಿಗೆಗಳ ನಡುವೆ, ಮಹತ್ತರ ಮೈಲಿಗಲ್ಲುಗಳು ಸೃಷ್ಟಿಯಾಗಿವೆ. ಉತ್ತರದಲ್ಲಿ ಸೋಲು ಬೇತಾಳನಂತೆ ಬೆನ್ನು ಬಿದ್ದರೆ, ದಕ್ಷಿಣದಿಂದ ಗೆಲುವಿನ ಕಹಳೆ ಮೇಳೈಸಿದೆ. ಅದರಲ್ಲೂ ಕನ್ನಡದ ಕೀರ್ತಿ ಪತಾಕೆ ಇಡೀ ದೇಶದ ಗಮನ ಸೆಳೆದಿದೆ. ಕನ್ನಡದ ಎರಡು ಸಿನಿಮಾಗಳು ಈ ವರ್ಷದ ಗೂಗಲ್‌ನಲ್ಲಿ ಸ್ಥಾನ ಪಡೆದಿವೆ. ಹಾಗಾದರೆ ಗೂಗಲ್ ತಿಳಿಸಿರುವಂತೆ ಈ ವರ್ಷದ 5 ಟಾಪ್ ಸಿನಿಮಾಗಳ ಪಟ್ಟಿ ಮತ್ತು ವಿವರ ಇಲ್ಲಿದೆ..
‘ಬ್ರಹ್ಮಾಸ್ತ್ರ’ (Bramhastra)
ಅಯಾನ್ ಮುಖರ್ಜಿ ನಿರ್ದೇಶನದ ‘ಬ್ರಹ್ಮಾಸ್ತ್ರ’ ಸಿನಿಮಾ ಸೋತ ಬಾಲಿವುಡ್‌ಗೆ ನೀರುಣಿಸಿದ ಸಿನಿಮಾ ಎಂದೇ ಹೇಳಬಹುದು. ಸಾಲು ಸಾಲು ಸಿನಿಮಾಗಳ ಹೀನಾಯ ಸೋಲಿನಲ್ಲಿಯೇ ಬೆಂದಿದ್ದ ಬಾಲಿವುಡ್ ಅನ್ನು ಗೆಲುವಿನ ಲಯಕ್ಕೆ ತಂದ ಚಿತ್ರವಿದು. ಬರೋಬ್ಬರಿ 375 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ 431 ಕೋಟಿ ರೂ. ಗಳಿಕೆ ಕಂಡಿತ್ತು. ರಣಬೀರ್ ಕಪೂರ್, ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿದ್ದರು. ಈ ಸಿನಿಮಾ ಗೂಗಲ್ ಬಿಡುಗಡೆ ಮಾಡಿದ ಟಾಪ್ 5ರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಕೆಜಿಎಫ್ ಚಾಪ್ಟರ್ 2 (K.G.F: Chapter 2)
ಪ್ರಶಾಂತ್ ನೀಲ್ ನಿರ್ದೇಶನದ, ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾ ಈ ವರ್ಷದ ಮೋಸ್ಟ್ ಸಕ್ಸಸ್‌ಫುಲ್ ಸಿನಿಮಾಗಳಲ್ಲೊಂದು. ಭಾರತೀಯ ಸಿನಿಮಾ ಇಂಡಸ್ಟ್ರಿಯೇ ತಿರುಗಿ ನೋಡುವಂತೆ ಮಾಡಿದ ಕನ್ನಡದ ಸಿನಿಮಾ. ಬಾಕ್ಸ್‌ಆಫೀಸ್‌ನಲ್ಲಿ 1200 ಪ್ಲಸ್ ಕೋಟಿ ಗಳಿಕೆ ಮಾಡಿರುವ ಈ ಚಿತ್ರ ಸ್ಯಾಂಡಲ್‌ವುಡ್ ಪಾಲಿಗೆ ಹೊಸ ಮೈಲಿಗಲ್ಲು ನಿರ್ಮಿಸಿದ ಸಿನಿಮಾ. ಇದೀಗ ಗೂಗಲ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ದಿ ಕಾಶ್ಮೀರ್ ಫೈಲ್ಸ್ (The Kashmir Files)
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಎಂಬ ಸಿನಿಮಾ ಇಡೀ ದೇಶವ್ಯಾಪಿ ದೊಡ್ಡ ಮೋಡಿಗೆ ಕಾರಣವಾಯಿತು. ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ ಗಳಿಕೆಯಲ್ಲಿ 260 ಕೋಟಿ ರೂ.ಗೂ ಅಧಿಕ ಬಾಚಿಕೊಂಡಿತು. ಬೇರೆ ಬೇರೆ ಭಾಷೆಗೂ ಡಬ್ ಆಗಿ ತೆರೆಕಂಡಿತು. ಈಗ ಗೂಗಲ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಈ ಸಿನಿಮಾಕ್ಕೆ ಮೂರನೇ ಸ್ಥಾನ ಸಿಕ್ಕಿದೆ.
‘ಆರ್‌ಆರ್‌ಆರ್’ (RRR)
ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದ ‘ಆರ್‌ಆರ್‌ಆರ್’ ಸಿನಿಮಾ ಭಾರತೀಯ ಮಾತ್ರವಲ್ಲದೆ ಜಾಗತಿಕ ಪ್ರೇಕ್ಷಕರಿಗೂ ಇಷ್ಟವಾದ ಸಿನಿಮಾ. ಜೂ. ಎನ್‌ಟಿಆರ್ ಮತ್ತು ರಾಮ್‌ಚರಣ್ ತೇಜ ನಟಿಸಿದ ಈ ಸಿನಿಮಾ 1000 ಕೋಟಿಗೂ ಅಧಿಕ ಕಮಾಯಿ ಮಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿ ಪಡೆದುಕೊಂಡಿದೆ. ಗೂಗಲ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಕಾಂತಾರ (Kantara)
ರಿಷಬ್ ಶೆಟ್ಟಿ ನಾಯಕನಾಗಿ ನಟಿಸಿ, ನಿರ್ದೇಶಿಸಿದ ‘ಕಾಂತಾರ’ ಸಿನಿಮಾ ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ತೆರೆಕಂಡಿತ್ತು. ಕರ್ನಾಟಕದಲ್ಲಿ ಸಿಕ್ಕ ಪ್ರತಿಕ್ರಿಯೆ ಬೇರೆ ಬೇರೆ ಭಾಷೆಗೆ ಡಬ್ ಆಗಿ ದೊಡ್ಡ ಮಟ್ಟದ ಯಶಸ್ಸು ಪಡೆದುಕೊಂಡಿತು. 16-17 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ 400 ಕೋಟಿಗೂ ಅಧಿಕ ಗಳಿಕೆ ಕಂಡಿತು. ಈ ವರ್ಷದ ಗೂಗಲ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಕಾಂತಾರಕ್ಕೆ 5ನೇ ಸ್ಥಾನ ಸಿಕ್ಕಿದೆ.
5ರ ನಂತರದ ಸ್ಥಾನದಲ್ಲಿರುವ ಸಿನಿಮಾಗಳು..
ಟಾಪ್ ಐದರಲ್ಲಿ ಕನ್ನಡದ ಎರಡು ಸಿನಿಮಾಗಳು ಸ್ಥಾನ ಪಡೆದರೆ, ಇನ್ನು ಅಲ್ಲು ಅರ್ಜುನ್ ನಟನೆಯ ಪುಷ್ಪಾ, ಕಮಲ್ ಹಾಸನ್ ವಿಕ್ರಂ, ಆಮೀರ್ ಖಾನ್ ನಟಿಸಿದ್ದ ಲಾಲ್ ಸಿಂಗ್ ಚಡ್ಡಾ, ಮಲಯಾಳಂನ ದೃಶ್ಯಂ 2, ಥಾರ್: ಲವ್ ಅಂಡ್ ಥಂಡರ್ ಸಿನಿಮಾಗಳು ಸರಣಿಯಾಗಿ 6ರಿಂದ 10ನೇ ಸ್ಥಾನದಲ್ಲಿವೆ.