Amit Shah: ದಿ ಸಬರಮತಿ ರಿಪೋರ್ಟ್‌ಗೆ ಸಚಿವ ಅಮಿತ್ ಶಾ ಶ್ಲಾಘನೆ; ಸಿನಿಮಾ ತಂಡದ ಧೈರ್ಯ ಮೆಚ್ಚಿದ ಗೃಹ ಸಚಿವ
Nov 23, 2024 12:05 PM IST
ದಿ ಸಬರಮತಿ ರಿಪೋರ್ಟ್‌ಗೆ ಸಚಿವ ಅಮಿತ್ ಶಾ ಶ್ಲಾಘನೆ
- ದಿ ಸಬರಮತಿ ರಿಪೋರ್ಟ್ ಸಿನಿಮಾ ತಂಡವನ್ನು ಭೇಟಿ ಮಾಡಿದ ಅಮಿತ್ ಶಾ, ಅವರೆಲ್ಲರ ಜತೆ ಮಾತನಾಡಿದ್ಧಾರೆ. ಸತ್ಯವನ್ನು ನಿರೂಪಿಸಲು ಧೈರ್ಯ ಮಾಡಿದ್ದಕ್ಕಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿ 27, 2002 ರಂದು ಗುಜರಾತ್‌ನ ಗೋಧ್ರಾ ನಿಲ್ದಾಣದ ಬಳಿ ಸಬರಮತಿ ಎಕ್ಸ್‌ಪ್ರೆಸ್‌ನ ಎಸ್-6 ಕೋಚ್‌ಗೆ ಬೆಂಕಿ ಹಚ್ಚಿ ಪ್ರಯಾಣಿಕರು ಮೃತಪಟ್ಟ ಘಟನೆಯನ್ನು ಆಧರಿಸಿದ ದಿ ಸಬರಮತಿ ರಿಪೋರ್ಟ್ ಚಿತ್ರ ಬಿಡುಗಡೆಯಾಗಿದೆ. ಇಡೀ ದೇಶದ ರಾಜಕೀಯದಲ್ಲಿ ಸಂಚಲನವನ್ನೇ ಉಂಟುಮಾಡಿದ್ದ ಈ ಘಟನೆಯನ್ನು ಆಧರಿಸಿ ತೆರೆಕಂಡ ಸಿನಿಮಾದ ತಾರಾ ಬಳಗವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶಂಸಿದ್ದಾರೆ. ಸಚಿವ ಅಮಿತ್ ಶಾ ದಿ ಸಬರಮತಿ ರಿಪೋರ್ಟ್ ಸಿನಿಮಾದ ತಾರಾಗಣವಾದ ಏಕ್ತಾ ಆರ್ ಕಪೂರ್, ವಿಕ್ರಾಂತ್ ಮಾಸ್ಸೆ, ರಿಧಿ ಡೋಗ್ರಾ ಮುಂತಾದವರ ಜೊತೆ ಸಂವಾದ ನಡೆಸಿದ್ದಾರೆ.
ದಿ ಸಬರಮತಿ ರಿಪೋರ್ಟ್ ಸಿನಿಮಾ ತಂಡವನ್ನು ಭೇಟಿ ಮಾಡಿದ ಅಮಿತ್ ಶಾ, ಅವರೆಲ್ಲರ ಜತೆ ಮಾತನಾಡಿದ್ಧಾರೆ. ಸತ್ಯವನ್ನು ನಿರೂಪಿಸಲು ಧೈರ್ಯ ಮಾಡಿದ್ದಕ್ಕಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ದೀರ್ಘಕಾಲದಿಂದ ಮುಚ್ಚಿಹೋಗಿದ್ದ ಸತ್ಯವನ್ನು ಅನಾವರಣಗೊಳಿಸಿದ್ದರ ಬಗ್ಗೆ ಸಿನಿಮಾ ತಂಡವನ್ನು ಹೊಗಳಿರುವ ಅವರು, ಈ ಚಿತ್ರ ಸತ್ಯ ಹಾಗೂ ಸುಳ್ಳು ಯಾವುದು ಎಂಬುದನ್ನು ತೋರಿಸಿಕೊಟ್ಟಿದೆ ಎಂದು ವ್ಯಾಖ್ಯಾನಿಸಿದ್ದಲ್ಲದೇ ಸಿನಿಮಾ ನಿರ್ಮಿಸಿದ ಧೈರ್ಯಕ್ಕಾಗಿ ಮೆಚ್ಚಿಗೆ ಸೂಚಿಸಿದ್ದಾರೆ.
'ಸತ್ಯ ಹೊರಬರಲೇಬೇಕು': ಪ್ರಧಾನಿ ಮೋದಿ
ದಿ ಸಬರಮತಿ ರಿಪೋರ್ಟ್ ಸಿನಿಮಾದ ಕುರಿತು ಸ್ವತಃ ಪ್ರಧಾನಿ ನರೇಂದ್ರ ಮೋದಿ ಸಹ ಶ್ಲಾಘಿಸಿದ್ದಾರೆ. ಈ ಕುರಿತು ತಮ್ಮ X (ಹಿಂದಿನ ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, "ಈ ಸಿನಿಮಾದ ಮೂಲಕ ಹೊರಬಂದಿರುವ ಸತ್ಯವನ್ನು ಜನಸಾಮಾನ್ಯರು ತಿಳಿಯಬಹುದಾಗಿದೆ'. ಸುಳ್ಳು ಮಾಹಿತಿಗಳು, ತಿರುಚಿದ ವರದಿಗಳು ಕೆಲವೆ ಕೆಲವು ಕಾಲ ಮಾತ್ರ ಬದುಕುಳಿಯುತ್ತವೆ. ಆದರೆ ಸತ್ಯ ಎಂದಾದರೊಂದು ದಿನ ಹೊರಬೀಳುವುದು ಖಂಡಿತ" ಎಂದು ಟ್ವೀಟ್ ಮಾಡಿದ್ದಾರೆ.
ಪ್ರಶಂಸೆ ವ್ಯಕ್ತಪಡಿಸಿದ ಗೋವಾ ಸಿಎಂ
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಇತ್ತೀಚೆಗೆ ಗೋವಾದಲ್ಲಿ ನಡೆಯುತ್ತಿರುವ 55 ನೇ ಆವೃತ್ತಿಯ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI) ನಲ್ಲಿ ಚಿತ್ರದ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಗುರುವಾರ ಚಲನಚಿತ್ರವನ್ನು ವೀಕ್ಷಿಸಿದ ನಂತರ, ಅವರು ಏಕತಾ ಆರ್ ಕಪೂರ್ ಮತ್ತು ದಿ ಸಬರಮತಿ ವರದಿಯ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ನಿರ್ಮಾಪಕ ಮಹಾವೀರ್ ಜೈನ್ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ.
“ನಾನು ಚಲನಚಿತ್ರವನ್ನು ನಿಜವಾಗಿಯೂ ಇಷ್ಟಪಟ್ಟೆ ... ಇದು ತುಂಬಾ ಚೆನ್ನಾಗಿದೆ. ನೀವು ಚಿತ್ರವನ್ನು ಸರಿಯಾದ ರೀತಿಯಲ್ಲಿ ಪ್ರಸ್ತುತಪಡಿಸಿದ್ದೀರಿ ಅಭಿನಂದನೆಗಳು” ಎಂದು ಚಿತ್ರತಂಡಕ್ಕೆ ಮೆಚ್ಚುಗೆ ಸೂಚಿಸಿದ್ದರು.