Suvarna Super Star: 800 ಸಂಚಿಕೆಗಳ ಸಂಭ್ರಮದಲ್ಲಿ ಸುವರ್ಣ ಸೂಪರ್ ಸ್ಟಾರ್ ರಿಯಾಲಿಟಿ ಶೋ
Jun 22, 2023 03:30 PM IST
800 ಸಂಚಿಕೆಗಳ ಸಂಭ್ರಮದಲ್ಲಿ ಸುವರ್ಣ ಸೂಪರ್ ಸ್ಟಾರ್ ರಿಯಾಲಿಟಿ ಶೋ
- ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುವರ್ಣ ಸೂಪರ್ ಸ್ಟಾರ್ ರಿಯಾಲಿಟಿ ಶೋ, ಇದೀಗ 800 ಸಂಚಿಕೆಗಳನ್ನು ಪೂರೈಸಿದೆ.
Suvarna Super Star: ಕನ್ನಡದ ಮನರಂಜನಾ ವಾಹಿನಿ ಸ್ಟಾರ್ ಸುವರ್ಣದಲ್ಲಿ ಮೂಡಿ ಬರುತ್ತಿರುವ ಮಹಿಳೆಯರ ಅಚ್ಚು ಮೆಚ್ಚಿನ ರಿಯಾಲಿಟಿ ಶೋ "ಸುವರ್ಣ ಸೂಪರ್ ಸ್ಟಾರ್" ಗೆ ಇದೀಗ 800 ಸಂಚಿಕೆಗಳ ಸಂಭ್ರಮದಲ್ಲಿದೆ. ಕರ್ನಾಟಕದ ಮೂಲೆ ಮೂಲೆಯ ಮಹಿಳೆಯರ ಬದುಕನ್ನು ಸಂಭ್ರಮಿಸಲು ಶುರುವಾದ ಮಹಾವೇದಿಕೆ ಈ ಸುವರ್ಣ ಸೂಪರ್ ಸ್ಟಾರ್. ಈ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದು ಖ್ಯಾತ ನಟಿ, ನಿರೂಪಕಿ ಶಾಲಿನಿ.
ವರ್ಷಗಳ ಬಳಿಕ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿ ಮೂಲಕ ಶಾಲಿನಿ, ಸುವರ್ಣ ಸೂಪರ್ ಸ್ಟಾರ್‌ನಲ್ಲಿ ಕಾಣಿಸಿಕೊಂಡಾಗ ಪ್ರೇಕ್ಷಕರು ಖುಷಿಪಟ್ಟಿದ್ದರು. ಈ ಕಾರ್ಯಕ್ರಮದ ಮತ್ತೊಂದು ಜನಪ್ರಿಯ ಆಕರ್ಷಣೆ ಪ್ರತಿ ದಿನವೂ ಶಾಲಿನಿ ಧರಿಸುವ ವಿಶಿಷ್ಟವಾಗಿ ವಿಭಿನ್ನವಾಗಿ ಡಿಸೈನ್ ಮಾಡಿದ ಬ್ಲೌಸ್‌ಗಳು. ಕನ್ನಡ ಕಿರುತೆರೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಿಯಾಲಿಟಿ ಶೋವೊಂದು ನಿರಂತರವಾಗಿ ಪ್ರೇಕ್ಷಕರನ್ನು ರಂಜಿಸುತ್ತಾ 800 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿರುವುದು.
ಮಹಿಳೆಯರಿಗಾಗಿ ಮಾತ್ರ ಸೃಷ್ಟಿಸಿದ ಮಹಾವೇದಿಕೆ ಸುವರ್ಣ ಸೂಪರ್ ಸ್ಟಾರ್‌ಗೆ 2400ಕ್ಕೂ ಹೆಚ್ಚು ಮಹಿಳೆಯರು ಆಗಮಿಸಿದ್ದಾರೆ. ಯಾವುದೇ ಪ್ರತಿಭೆಗೆ ಮಾತ್ರ ವೇದಿಕೆಯಾಗದೆ, ಪ್ರತಿ ಮನೆಯ ಸಾಮಾನ್ಯ ಹೆಣ್ಣು ಮಕ್ಕಳ ಅಸಾಮಾನ್ಯ ಶಕ್ತಿಯನ್ನು ಕರ್ನಾಟಕಕ್ಕೆ ಪರಿಚಯಿಸುವ ಮಹಾವೇದಿಕೆ ಈ ಶೋ ಆಗಿದೆ. ಈ ವೇದಿಕೆಯಲ್ಲಿ ಪ್ರತಿ ಹೆಣ್ಣನ್ನು ಸೂಪರ್ ಸ್ಟಾರ್ ಎಂದು ಮೆರೆಸುತ್ತ, ಅವರ ಬದುಕಿನ ಕಥೆಗಳನ್ನು ಹಂಚಿಕೊಂಡು, ತಮ್ಮಲ್ಲಿರುವ ನೋವು ನಲಿವುಗಳನ್ನು ಹಂಚಿಕೊಂಡು ತಮ್ಮ ಬದುಕನ್ನ ಸಂಭ್ರಮಿಸಿದ್ದಾರೆ.
ಸೂಪರ್ ಸ್ಟಾರ್‌ಗಳಿಗೆ ವಿಶೇಷವಾಗಿ LED ಟಿವಿ, ವಾಷಿಂಗ್ ಮಷೀನ್, ಫ್ರಿಡ್ಜ್, ಓವೆನ್, ಮಿಕ್ಸರ್ ಗ್ರೈಂಡರ್, ರೇಷ್ಮೆ ಸೀರೆ ಹೀಗೆ ಎಲ್ಲ ಗೃಹೋಪಯೋಗಿ ವಸ್ತುಗಳನ್ನು ಬಹುಮಾನವಾಗಿ ನೀಡುವುದರ ಜೊತೆಗೆ ಸೂಪರ್ ಮಾರ್ಕೆಟನ್ನೇ ಲೂಟಿ ಮಾಡಲು ಬಿಡುವುದು ಕಾರ್ಯಕ್ರಮದ ವೈಶಿಷ್ಟ್ಯ. ಕರ್ನಾಟಕದಿಂದಷ್ಟೇ ಅಲ್ಲದೆ ಹೊರ ರಾಜ್ಯಗಳಿಂದ, ಅಮೇರಿಕಾ ಹಾಗೂ ಆಸ್ಟ್ರೇಲಿಯಾದಿಂದ ಕೂಡ ಮಹಿಳೆಯರು ಆಗಮಿಸಿರುವುದು ಸುವರ್ಣ ಸೂಪರ್ ಸ್ಟಾರ್ ಖ್ಯಾತಿಗೆ ಸಾಕ್ಷಿ. ಕಿರುತೆರೆ ಕಲಾವಿದರು, ಬೆಳ್ಳಿತೆರೆ ಕಲಾವಿದರು ಆಗಮಿಸಿ ವೇದಿಕೆಯಲ್ಲಿ ಮನರಂಜಿಸಿದ್ದಾರೆ. ಈ ರಿಯಾಲಿಟಿ ಶೋ ಸೋಮವಾರದಿಂದ ಶನಿವಾರದ ವರೆಗೂ ಸಂಜೆ 5 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.