Gagan Chinnappa: ಮಾರ್ಕೆಟಿಂಗ್ ಮ್ಯಾನೇಜರ್ ಟು ಸೀರಿಯಲ್ ಹೀರೋ, ರೀಲ್ ರಾಮನ ರಿಯಲ್ ಕಥೆ; ಗಗನ್ ಚಿನ್ನಪ್ಪ ಸಂದರ್ಶನ
Sep 26, 2023 04:07 PM IST
Gagan Chinnappa: ಮಾರ್ಕೆಟಿಂಗ್ ಮ್ಯಾನೇಜರ್ ಟು ಸೀರಿಯಲ್ ಹೀರೋ, ರೀಲ್ ರಾಮನ ರಿಯಲ್ ಕಥೆ; ಗಗನ್ ಚಿನ್ನಪ್ಪ ಸಂದರ್ಶನ
- ಎರಡು ದೋಣಿ ಮೇಲೆ ಕಾಲಿಡಬಾರದು ಅನ್ನೋ ಕಾರಣಕ್ಕೆ, ಅಬುಧಾಬಿಯಲ್ಲಿ ಮಾಡ್ತಿದ್ದ ಕೆಲಸ ಬಿಟ್ಟೆ, ಆಗ ನನ್ನ ಬಳಿ ಸೇವಿಂಗ್ಸ್ ಹಣವೂ ಇರಲಿಲ್ಲ. ನೇರವಾಗಿ ಬೆಂಗಳೂರಿಗೆ ಬಂದೇ ಬಿಟ್ಟೆ. ಆಫರ್ಸ್ ಸಿಗಬಹುದು ಅಂತ ಒಂದೂವರೆ ವರ್ಷ ಸಿಕ್ಕ ಸಿಕ್ಕ ಆಡಿಷನ್ ಕೊಟ್ಟೆ. ವರ್ಕೌಟ್ ಆಗಲಿಲ್ಲ. ಹೊಟ್ಟೆಪಾಡಿಗೆ ಮಾರ್ಕೆಂಟಿಂಗ್ ಮ್ಯಾನೇಜರ್ ಕೆಲಸವನ್ನೂ ಮಾಡಿದೆ ಎನ್ನುತ್ತಾರೆ ಗಗನ್.
Gagan Chinnappa Interview: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಧಾರಾವಾಹಿ (Seetha Rama Serial) ಟಿಆರ್‌ಪಿ ವಿಚಾರದಲ್ಲಿ ಟಾಪ್‌ನಲ್ಲಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ನೋಡುಗರನ್ನೂ ಈ ಸೀರಿಯಲ್ ಪಡೆದುಕೊಳ್ಳುತ್ತಿದೆ. ಈ ಧಾರಾವಾಹಿ ಮೂಲಕ ಕಿರು ಅವಧಿಯಲ್ಲಿಯೇ ಎಲ್ಲರ ಗಮನ ಸೆಳೆದವರು, ತಮ್ಮ ನಟನೆ ಮೂಲಕ ನಾಡಿನ ಮನೆ ಮಾತಾಗಿರುವ ಶ್ರೀರಾಮ ಅಲಿಯಾಸ್ ನಟ ಗಗನ್ ಚಿನ್ನಪ್ಪ. ಇದೀಗ ಇದೇ ನಟ ತಮ್ಮ ನಟನಾ ಜರ್ನಿ ಶುರುವಾದ ಬಗ್ಗೆ Hindustan Times Kannadaದ ಜತೆಗೆ ಮಾತನಾಡಿದ್ದಾರೆ. ಓವರ್ ಟು ಗಗನ್ ಚಿನ್ನಪ್ಪ.
- ಚಿಕ್ಕಂದಿನಲ್ಲೇ ನಟನೆ ಆಸಕ್ತಿ..
"ನನಗೆ ಚಿಕ್ಕನಿಂದಲೇ ನಟನೆಯಲ್ಲಿ ತುಂಬ ಆಸಕ್ತಿ ಇತ್ತು. ಶಾಲೆಯಲ್ಲಿ ನಡೆಯೋ ನಾಟಕಗಳಲ್ಲಿ ನಾನು ನಟಿಸುತ್ತಿದ್ದೆ. ಏರಿಯಾ ಗಣೇಶ ಕೂರಿಸಿದ್ದ ವೇಳೆ ನನ್ನ ಡಾನ್ಸ್ ಫರ್ಫಾಮನ್ಸ್ ಇದ್ದೇ ಇರುತ್ತಿತ್ತು. ಎಜುಕೇಶನ್ ವಿಚಾರದಲ್ಲಿ ನಾನು ಎವರೇಜ್ ವಿದ್ಯಾರ್ಥಿ ಆಗಿದ್ದರೂ, ಎಲ್ಲರಿಗೂ ಪ್ರಿಯ ಸ್ಟುಡೇಂಟ್ ಆಗಿದ್ದೆ. ನನ್ನ ಆಗಿನ ನಟನೆ, ಡಾನ್ಸ್ ನೋಡಿದ್ದ ನನ್ನ ಶಾಲೆಯ ಹಿಂದಿ ಟೀಚರ್, ಇವನು ಹೀರೋನೇ ಆಗೋದು ನೋಡ್ತಿರಿ.. ಎಂದು ನನ್ನ ಅಮ್ಮನಿಗೆ ಹೇಳಿದ್ದರು. ಆಗಿನಿಂದಲೇ ನನ್ನನ್ನು ಎಲ್ಲರೂ ಹೀರೋ ಅಂತಲೇ ಕರೆಯುತ್ತ ಬಂದರು. ಈಗ ಜೀ ಕನ್ನಡದ ಹೆಡ್ ರಾಘವೇಂದ್ರ ಹುಣಸೂರು ಎದುರಿಗೆ ಸಿಕ್ಕಾಗ ಸಹ ನನ್ನನ್ನು ಹೀರೋ ಅಂತಲೇ ಕರೆಯುತ್ತಾರೆ.
- ಇಂಡಿಪೆಂಡೆಂಟ್ ಹುಡುಗ, ವಿದೇಶದಲ್ಲಿ ಕೆಲಸ
ಬಾಲ್ಯದಿಂದಲೂ ಗಗನ್ ತುಂಬ ಇಂಡಿಪೆಂಡೆಂಟ್. ಅಪ್ಪ ಅಮ್ಮನ ಸಹಕಾರ ಪಡೆಯದೇ ತಮ್ಮ ಕೆಲಸಗಳನ್ನು ತಾವೇ ಮಾಡುತ್ತ, ಶಾಲೆ, ಕಾಲೇಜಿನ ಫೀಸ್ ತಾವೇ ಕಟ್ಟಿಕೊಳ್ಳುತ್ತ ಬಂದವರು. ಆ ಬಗ್ಗೆ ಹೇಳುವ ಗಗನ್, "ಹುಟ್ಟಿದ್ದು ಕೊಡಗಿನಲ್ಲಿ. ಶಾಲೆ, ಕಾಲೇಜು ಮುಗಿಸಿದ್ದು ಬೆಂಗಳೂರಿನಲ್ಲಿ. ಸೆಕೆಂಡ್ ಪಿಯುಸಿ ಆದ ಮೇಲೆ, ಮನೆಯಿಂದ ಆಚೆ ಬಂದೆ. ಇಂಡಿಪೆಂಡೆಂಟ್ ಆಗಿಯೇ ಇದ್ದೆ. ಕಾಲ್‌ಸೆಂಟರ್‌ನಲ್ಲಿ ಕೆಲಸ ಮಾಡಿಕೊಂಡು, ನಾನೇ ನನ್ನ ಕಾಲೇಜು ಫೀಸ್ ಕಟ್ಟಿಕೊಂಡು ಹೋಗ್ತಿದ್ದೆ. ಜತೆಗೆ ಬಿಕಾಂ ಡಿಗ್ರಿಯನ್ನೂ ಕಂಪ್ಲಿಟ್ ಮಾಡಿಕೊಂಡೆ" ಎನ್ನುತ್ತಾರೆ.
- ಆ ಫೋಟೋಶೂಟ್‌ನಿಂದ ಸಿಕ್ಕವು ಆಫರ್ಸ್
ಅದಾದ ಮೇಲೆ ಅವರ ಬದುಕಿಗೆ ಒಂದು ಟರ್ನ್ ಕೊಟ್ಟಿದ್ದು ಅಬುದಾಬಿಯಲ್ಲಿನ ಒಂದು ಫೋಟೋಶೂಟ್. ಆ ಬಗ್ಗೆ ಹೇಳುವ ಗಗನ್, "ಡಿಗ್ರಿ ಮುಗಿಯುತ್ತಿದ್ದಂತೆ, ಬೆಂಗಳೂರಿನಲ್ಲಿ ಡೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ನನ್ನ ಸ್ನೇಹಿತನೊಬ್ಬ ಓಮಾನ್‌ನಲ್ಲಿ ಎಚ್‌ಆರ್ ಆಗಿ ಕೆಲಸ ಮಾಡ್ತಿದ್ದ. ನಾನೂ ನನ್ನ ರೆಸ್ಯೂಮ್ ಕೊಟ್ಟೆ. ಸೆಲೆಕ್ಟ್ ಆಯ್ತು. ಎರಡು ವರ್ಷ ಓಮಾನ್‌ನಲ್ಲಿ ಕೆಲಸ ಮಾಡಿದೆ. ಅದಾದ ಬಳಿಕ ಒಂದು ವರ್ಷ ಅಬುದಾಬಿಯಲ್ಲಿ ಕೆಲಸ. ಹೀಗಿರುವಾಗಲೇ 2014ರಲ್ಲಿ ಸ್ನೇಹಿತನ ಕ್ಯಾಮರಾದಿಂದ ಫೋಟೋ ಶೂಟ್ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಆ ಫೋಟೋ ನೋಡಿ ಒಂದಷ್ಟು ಆಫರ್ ಬರಲು ಪ್ರಾರಂಭಿಸಿದವು" ಎನ್ನುತ್ತಾರೆ
- ಬೆಂಗಳೂರಿಗೆ ಬಂದ್ರೆ ಕೈ ಖಾಲಿ ಖಾಲಿ...
ಅವಕಾಶಗಳು ಸಿಗುತ್ತಿವೆ ಅನ್ನೋ ಕಾರಣಕ್ಕೆ ಕೈಯಲ್ಲಿ ಸೇವಿಂಗ್ಸ್ ಇಲ್ಲದೆ, ನೇರವಾಗಿ ಬೆಂಗಳೂರಿಗೆ ಬಂದಿಳಿದ ಗಗನ್‌ಗೆ ಅಚ್ಚರಿ ಕಾದಿತ್ತು. "ಎರಡು ದೋಣಿ ಮೇಲೆ ಕಾಲಿಡಬಾರದು ಅನ್ನೋ ಕಾರಣಕ್ಕೆ, ಕೈಯಲ್ಲಿ ಆಗ ನನ್ನ ಬಳಿ ಹಣವೂ ಇರಲಿಲ್ಲ. ನೇರವಾಗಿ ಕೆಲಸ ಬಿಟ್ಟು ಬೆಂಗಳೂರಿಗೆ ಬಂದೇ ಬಿಟ್ಟೆ. ಆಫರ್ಸ್ ಸಿಗಬಹುದು ಅಂತ ಒಂದೂವರೆ ವರ್ಷ ಸಿಕ್ಕ ಸಿಕ್ಕ ಆಡಿಷನ್ ಕೊಟ್ಟೆ. ಆಡಿಷನ್‌ನಲ್ಲಿ ಸೆಲೆಕ್ಟ್ ಆಗ್ತಿದ್ದೆ. ಆದರೆ, ನನ್ನ ಭಾಷೆ ಸರಿಯಿಲ್ಲ ಅನ್ನೋ ಕಾರಣಕ್ಕೆ ರಿಜೆಕ್ಟ್ ಮಾಡುತ್ತಿದ್ದರು. ಆಗಿನ ನನ್ನ ಕೋರ್ಗ್ ಭಾಷೆಯನ್ನು ಯಾರೂ ಸ್ವೀಕರಿಸುತ್ತಿರಲಿಲ್ಲ" ಎನ್ನುತ್ತಾರವರು.
- ಮಾರ್ಕೆಟಿಂಗ್ ಮ್ಯಾನೇಜರ್ ಕೆಲಸ ಆರಂಭ..
ಬೆಂಗಳೂರಿನಲ್ಲಿ ಸಿನಿಮಾ, ಸೀರಿಯಲ್ ಅವಕಾಶಗಳು ಇಲ್ಲದಿದ್ದಾಗ, ಕುಪೇಂದ್ರ ರೆಡ್ಡಿ ಎಂಬುವವರ ಬಳಿ ಕೆಲಸಕ್ಕೆ ಸೇರಿಕೊಂಡರು ಗಗನ್. "ಕುಪೇಂದ್ರ ಅವರ ಬಳಿಕ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿದೆ. ಅಲ್ಲಿ ಏಳು ತಿಂಗಳು ಕೆಲಸ ಮಾಡಿದ ಬಳಿಕ, ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾ ಅವಕಾಶ ಸಿಕ್ಕವು. ಮಾರ್ಕೆಟಿಂಗ್ ಮ್ಯಾನೇಜರ್ ಕೆಲಸಕ್ಕೆ ಗುಡ್ ಬೈ ಹೇಳಿ, ಸಿನಿಮಾದಲ್ಲಿ ನಟನೆ ಶುರು ಮಾಡಿದೆ. ಓಹ್.. ಲೈಫ್ ಚೆನ್ನಾಗಾಗ್ತಿದೆ. ಸಿನಿಮಾಗಳಲ್ಲಿ ಚಾನ್ಸ್ ಸಿಗ್ತಿದೆ. ಇನ್ನೇನು ಲೈಫ್ ಸೆಟಲ್ ಗುರು.. ಅನ್ನೋ ಕನಸು ಕಾಣುತ್ತಿದ್ದಾಗಲೇ, ಮತ್ತೊಂದು ಆಘಾತ ನನಗೆ ಎದುರಾಯಿತು"
- ನಟಿಸಿದ ಸಿನಿಮಾ ರಿಲೀಸ್ ಆಗಲಿಲ್ಲ..
"ಒಪ್ಪಿಕೊಂಡು, ಖುಷಿಯಲ್ಲಿಯೇ ನಟಿಸಿದ ಸಿನಿಮಾಗಳು ಆ ಸಮಯದಲ್ಲಿ ಬಿಡುಗಡೆ ಆಗಲೇ ಇಲ್ಲ. ಕಂಡ ಕನಸು ಒಮ್ಮೆ ರಪ್ ಅಂತ ಕೆಳಕ್ಕೆ ಬಿತ್ತು. ಮುಂದೇನು ಅನ್ನೋ ಪ್ರಶ್ನೆ ನನ್ನನ್ನು ಕಾಡಲು ಶುರು ಮಾಡಿತು. ಆಗ ರಾಮ್‌ಜಿ ಅವರ ಭೇಟಿಯಾಯ್ತು. ಮಂಗಳಗೌರಿ ಮದುವೆ ಸೀರಿಯಲ್‌ನಲ್ಲಿ ನಟಿಸುವ ಚಾನ್ಸ್ ನೀಡಿದರು. "ನೀವು ಹೀರೋ ಮೆಟಿರಿಯಲ್, ಇಂಡಸ್ಟ್ರಿಯಲ್ಲಿ ಗುರುತಿಸಿಕೊಳ್ಳಬೇಕು ಅಂದರೆ ಒಂದು ಫೇಮ್ ಬೇಕು. ಆ ಫೇಮ್ ನಾನು ನಿನಗೆ ಕೊಡ್ತೀನಿ. ನೀನು ಮಾಡಿ ನೋಡು. ನಿನ್ನ ಲೈಫೇ ಚೇಂಜ್ ಆಗಲಿದೆ ಅಂದ್ರು. ಮಂಗಳಗೌರಿ ಮದುವೆ ಸೀರಿಯಲ್ ಫೀಮೇಲ್ ಓರಿಯೆಂಟೆಡ್ ಆಗಿದ್ರಿಂದ ನನ್ನ ಪಾತ್ರಕ್ಕೆ ಹೆಚ್ಚು ಮಹತ್ವ ಇರದಿದ್ದರೂ, ಮನ್ನಣೆ ಸಿಕ್ಕಿತು. ಆ ವೇದಿಕೆ ಮೂಲಕ ರಾಮ್‌ಜಿ ಅವರು ಅವಕಾಶ ಕೊಟ್ಟರು. ಆ ಸೀರಿಯಲ್ ನಂಬರ್ ಒನ್ ಆಯ್ತು. ಅದಾದ ಮೇಲೆ ಬಿಗ್ ಬಾಸ್ ಮಿನಿಯಲ್ಲೂ ಕಾಣಿಸಿಕೊಂಡೆ" ಎನ್ನುತ್ತಾರೆ.
- ಸೀತಾ ರಾಮ ಕೈ ಬೀಸಿ ಕರೆಯಿತು..
"ಇಷ್ಟೆಲ್ಲ ಆದ ಮೇಲೆ ಎಂಟು ಕಥೆಗಳನ್ನು ರಿಜೆಕ್ಟ್ ಮಾಡಿದೆ. ಕಂಟೆಂಟ್ ಹುಡುಕಲು ಪ್ರಾರಂಭಿಸಿದೆ. ದುಡ್ಡು ಮಾಡುವುದರ ಬದಲು, ಕಥೆ ಕಡೆಗೆ ಗಮನ ಹರಿಸಿದೆ. ಹೀಗಿರುವಾಗ 2021ರಲ್ಲಿ ಜೀ ಕನ್ನಡದ ಹೆಡ್ ರಾಘವೇಂದ್ರ ಹುಣಸೂರು ಸಿಕ್ಕರು. ಅವರ ಬಳಿಯೂ ನನ್ನ ವಿಚಾರ ಹೇಳಿಕೊಂಡೆ. ಅದಾಗಿ ಒಂದು ವರ್ಷಕ್ಕೆ ಅಂದರೆ, 2022ರ ಅಕ್ಟೋಬರ್‌ನಲ್ಲಿ ಕಾಲ್ ಮಾಡಿ, ಹೀಗೊಂದು ಸೀರಿಯಲ್ ಇದೆ. ಬೇಗ ಬಂದು ಜಾಯಿನ್ ಆಗು ಅಂದ್ರು. ಆ ಧಾರಾವಾಹಿಯೇ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಸೀತಾ ರಾಮ. ಖುಷಿಯ ವಿಚಾರ ಏನೆಂದರೆ, ನಾನು ನಟಿಸಿರುವ ಮೂರೂ ಸೀರಿಯಲ್‌ಗಳು ಟಾಪ್ ಸ್ಥಾನದಲ್ಲಿದ್ದವು, ಈಗಲೂ ಇವೆ" ಎನ್ನುತ್ತಾರೆ ಗಗನ್.
- ನಾನು ಹೇಗಿದ್ದೀನೋ ಪಾತ್ರವೂ ಹಾಗೇ ಇದೆ..
ಸೀತಾ ರಾಮ ಸೀರಿಯಲ್‌ಗೆ ಎಲ್ಲ ಕಡೆಯಿಂದ ಮೆಚ್ಚುಗೆ ಸಿಗುತ್ತಿದೆ. ಒಂದೇ ಒಂದು ನೆಗೆಟಿವ್ ಕಾಮೆಂಟ್ ಸಹ ಬರುತ್ತಿಲ್ಲ. ಇದೆಲ್ಲ ನೋಡುತ್ತಿದ್ದರೆ ಖುಷಿಯಾಗುತ್ತದೆ. ಈ ಪಾತ್ರಕ್ಕೆ ನಾನು ಹೆಚ್ಚು ಹೋಮ್ ವರ್ಕ್ ಮಾಡಿಕೊಂಡಿಲ್ಲ. ಈ ಥರದ ಪಾತ್ರ ಸಿಕ್ಕಿದ್ದಕ್ಕೆ ನಾನು ಲಕ್ಕಿ. ನಾನು ರಿಯಲ್ ಲೈಫ್‌ನಲ್ಲಿ ಹೇಗಿದ್ದೆನೋ, ಹಾಗೆಯೇ ಇಲ್ಲಿಯೂ ಇದ್ದೇನೆ. ಇದರ ಜತೆಗೆ ಸಿನಿಮಾ ವಿಚಾರದಲ್ಲಿಯೂ ನಾನು ಹೆಚ್ಚು ಗಮನ ಹರಿಸಿದ್ದೇನೆ. ಏಕೆಂದರೆ, ನಾನು ಮೊದಲು ಬಂದಿದ್ದೇ ಸಿನಿಮಾಕ್ಕೆ. ಅದಾದ ಮೇಲೆ ಸೀರಿಯಲ್ ಕೈ ಹಿಡಿಯಿತು" ಎಂಬುದು ಅವರ ಮಾತು.
- ಫಿಟ್‌ನೆಟ್, ಡಯಟ್, ಫ್ಯಾಮಿಲಿ ಬಗ್ಗೆ..
"ಅಪ್ಪ ಸಿಬಿಐನಲ್ಲಿದ್ದರು. ಇದೀಗ ರಿಟೈರ್ಡ್ ಆಗಿದ್ದಾರೆ. ಕೂರ್ಗ್‌ನಲ್ಲಿ ನಮ್ಮದೇ ತೋಟ ಇದೆ. ಇದೀಗ ಅದರ ಸಂಪೂರ್ಣ ಜವಾಬ್ದಾರಿ ಅವರದ್ದೇ. ಅಕ್ಕ ಬಾಂಬೆನಲ್ಲಿದ್ದಾರೆ. ನಾನು ಬಿಕಾಂ ಮುಗಿಸಿಕೊಂಡೆ. ಎಂಬಿಎ ಮಾಡಿದರೂ ಅದು ಪೂರ್ಣ ಆಗಲಿಲ್ಲ. ಡಯಟ್ ವಿಚಾರದಲ್ಲಿ ನಾನು ಉಪ್ಪು ತಿನ್ನಲ್ಲ, ಸ್ವೀಟ್ ತಿನ್ನಲ್ಲ, ವೈಟ್ ರೈಸ್ ತಿನ್ನಲ್ಲ. ನಿತ್ಯ ಬೆಳಗ್ಗೆ ಎರಡು ಇಡ್ಲಿ, ಆರು ಮೊಟ್ಟೆ (ಬಿಳಿ ಭಾಗ), ಒಂದು ಗ್ಲಾಸ್ ರಾಗಿ ಗಂಜಿ ಕುಡಿತೀನಿ. ಮಧ್ಯಾಹ್ನ ಕುಚಲಕ್ಕಿ ರೈಸ್, ಉಪ್ಪು ಇಲ್ಲದ ಬೇಯಿಸಿದ ಚಿಕನ್, ಚೂರು ಬಾಯ್ಲಡ್ ರೈಡ್. ರಾತ್ರಿಗೆ ಮುದ್ದೆ, ಚಪಾತಿ ಇರುತ್ತೆ. ಜಿಮ್‌ನಲ್ಲಿ ವರ್ಕೌಟ್ ಮಾಡಿದ್ರೂ, ನಾನು ಬಿಲ್ಡಿಂಗ್ ಒಡೆಯೋಕೆ ಹೋಗುವ ರೀತಿ ಬಿಲ್ಡ್ ಆಗೋ ಪ್ಲಾನ್ ಇಲ್ಲ. ಸದ್ಯಕ್ಕೆ ಹೇಗಿದ್ದೆನೋ ಅಷ್ಟೇ ಮೆಂಟೆನ್ ಮಾಡಿಕೊಂಡು ಹೋಗುತ್ತಿದ್ದೇನೆ" ಎನ್ನುತ್ತಾರೆ ಗಗನ್.