Actress Ramya: ಗೌಡ್ರು ಹುಡುಗ ಹುಡುಕಿ, ಸ್ವಯಂವರ ಮಾಡಿ; ಮದುವೆ ಯಾವಾಗ ಎಂಬ ಪ್ರಶ್ನೆಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ ನಟಿ ರಮ್ಯಾ
May 03, 2023 07:19 AM IST
ಕಾಂಗ್ರೆಸ್ ಸ್ಟಾರ್ ಪ್ರಚಾರಕಿ ರಮ್ಯಾ
ನನಗೆ ಮೊದಲು ಹುಡುಗ ಹುಡುಕಿ, ಗೌಡ್ರು ಹುಡುಗ ಸಿಕ್ತಾರಾ ನೋಡಿ. ನನಗೆ ಒಬ್ಬರೂ ಗೌಡ್ರು ಹುಡುಗ ಕಾಣಿಸ್ತಿಲ್ಲ. ನನಗೂ ನೋಡಿ ನೋಡಿ ಸಾಕಾಯ್ತು, ನೀವು ಹುಡುಕಿಕೊಡಿ ಎಂದು ತಮಾಷೆ ಉತ್ತರ ನೀಡಿದರು
ರಾಜ್ಯದಲ್ಲಿ ಚುನಾವಣೆ ಪ್ರಚಾರ ಜೋರಾಗಿದೆ. ಚುನಾವಣೆಗೆ ಇನ್ನು ವಾರವಷ್ಟೇ ಬಾಕಿ ಉಳಿದಿದೆ. ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಎಲ್ಲಾ ಪಕ್ಷಗಳು ತಮ್ಮ ಸ್ಟಾರ್ ಪ್ರಚಾರಕರೊಂದಿಗೆ ಪ್ರತಿ ಜಿಲ್ಲೆ, ತಾಲೂಕು, ಊರುಗಳಿಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಈ ನಡುವೆ ಸ್ಯಾಂಡಲ್‌ವುಡ್ ನಟಿ ರಮ್ಯಾ ಕೂಡಾ ಕಾಂಗ್ರೆಸ್ ಪರ ಮತ ಯಾಚನೆ ಮಾಡುತ್ತಿದ್ಧಾರೆ. ಈ ವೇಳೆ ರಮ್ಯಾ ಮದುವೆ ಬಗ್ಗೆ ಪ್ರಸ್ತಾಪವಾಗಿದೆ.
ರಮ್ಯಾ 2013ರ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಸಿ.ಎಸ್. ಪುಟ್ಟರಾಜು ಅವರಿಗಿಂತ 67,611 ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ಸಂಸದೆ ಆಗಿದ್ದರು. ಆದರೆ ಮರುವರ್ಷ 2014 ರಲ್ಲಿ ನಡೆದ ಚುನಾವಣೆಯಲ್ಲಿ 5,518 ಮತಗಳ ಅಂತರದಿಂದ ರಮ್ಯಾ ಅದೇ ಸಿ.ಎಸ್. ಪುಟ್ಟರಾಜು ಮುಂದೆ ಸೋಲು ಅನುಭವಿಸಿದ್ದರು. ಇದಾದ ನಂತರ ಅವರು ಮಂಡ್ಯದಲ್ಲಿ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಇದೀಗ ಮತ್ತೆ ಬಹಳ ದಿನಗಳ ಬಳಿಕ ಮಂಡ್ಯಕ್ಕೆ ಬಂದಿದ್ದಾರೆ. ಮಂಗಳವಾರ ರಮ್ಯಾ, ಇತರ ಕಾಂಗ್ರೆಸ್ ನಾಯಕರೊಂದಿಗೆ ಮಂಡ್ಯಗೆ ತೆರಳಿ ಕಾಂಗ್ರೆಸ್ ಪರ ಪ್ರಚಾರ ನಡೆಸಿದ್ದಾರೆ. ಈ ನಡುವೆ ಕೆಲವು ಪತ್ರಕರ್ತರಿಂದ ಅವರಿಗೆ ಮದುವೆ ಪ್ರಶ್ನೆ ಎದುರಾಗಿದೆ.
ಗೌಡ್ರು ಹುಡುಗ ಹುಡುಕಿ ಎಂದ ಮೋಹಕ ತಾರೆ
ಸೋಷಿಯಲ್ ಮೀಡಿಯಾದಲ್ಲಿ ಎಲ್ಲರೂ ರಮ್ಯಾ ಮದುವೆ ಯಾವಾಗ ಎಂದು ಕೇಳುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಮೋಹಕ ತಾರೆ, ''ನನಗೆ ಮೊದಲು ಹುಡುಗ ಹುಡುಕಿ, ಗೌಡ್ರು ಹುಡುಗ ಸಿಕ್ತಾರಾ ನೋಡಿ. ನನಗೆ ಒಬ್ಬರೂ ಗೌಡ್ರು ಹುಡುಗ ಕಾಣಿಸ್ತಿಲ್ಲ. ನನಗೂ ನೋಡಿ ನೋಡಿ ಸಾಕಾಯ್ತು, ನೀವು ಹುಡುಕಿಕೊಡಿ'' ಎಂದು ತಮಾಷೆ ಉತ್ತರ ನೀಡಿದರು. ಒಂದು ವೇದಿಕೆಯನ್ನೇ ರೆಡಿ ಮಾಡೋಣ ಬಿಡಿ ಮೇಡಂ ಎಂದಾಗ ''ಆಯ್ತು ಸ್ವಯಂವರಾನೇ ಮಾಡಿ'' ಎಂದು ರಮ್ಯಾ ಪತ್ರಕರ್ತರಿಗೆ ನಗುತ್ತಾ ಉತ್ತರಿಸಿದರು.
ಚುನಾವಣೆ ಪ್ರಚಾರಕ್ಕೆ ರಮ್ಯಾ ನೀಲಿ ಕಾಟನ್ ಸೀರೆ, ಅದಕ್ಕೆ ಒಪ್ಪುವ ಕೆಂಪು ಕುಪ್ಪಸ ಧರಿಸಿ ಸರಳವಾಗಿ ಬಂದಿದ್ದರು. ಸರಳ ಸುಂದರಿ ರಮ್ಯಾ ಚೆಲುವಿಗೆ ನೆರೆದಿದ್ದವರು ಮಾರುಹೋಗಿದ್ದಂತೂ ನಿಜ. ರಮ್ಯಾ ಮಂಡ್ಯಕ್ಕೆ ಬರುತ್ತಿದ್ದಂತೆ ಹುಡುಗರು ಮಹಿಳೆಯರು ಎನ್ನದೆ ಎಲ್ಲರೂ ಆಕೆಯನ್ನು ನೋಡಲು ಕಾಯುತ್ತಿದ್ದರು. ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದಿದ್ದರು.
ರಮ್ಯಾ ಗೋ ಬ್ಯಾಕ್ ಅಭಿಯಾನ
ರೆಬೆಲ್ ಸ್ಟಾರ್ ಅಂಬರೀಶ್ ನಿಧನರಾದಾಗ ಅವರ ಅಂತಿಮ ದರ್ಶನಕ್ಕೆ ರಮ್ಯಾ ಬರಲಿಲ್ಲ ಎಂಬುದರ ಬಗ್ಗೆ ಕೆಲವರಿಗೆ ಬೇಸರ ಇದೆ. ಇದರ ಬಗ್ಗೆ ಪ್ರತಿಕ್ರಿಯಿಸಿದ್ದ ರಮ್ಯಾ, ''ನಾನು ಆಗಲೇ ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದೆ. ಆ ಸಮಯದಲ್ಲಿ ನನಗೆ ಟ್ಯೂಮರ್ ಇತ್ತು ಕಾಲಿಗೆ ಸರ್ಜರಿ ಮಾಡಿಸಿದ್ದೆ, ಜೊತೆಗೆ ಇನ್ನಿತರ ಆರೋಗ್ಯ ಸಮಸ್ಯೆಗಳು ಕಾಡುತ್ತಿತ್ತು. ಆದ್ದರಿಂದ ಬರಲಾಗಲಿಲ್ಲ. ನಾನು ವೈಯ್ತಕ್ತಿಕ ವಿಚಾರಗಳನ್ನು ಹೆಚ್ಚಾಗಿ ಸಾರ್ವಜನಿಕವಾಗಿ ಚರ್ಚಿಸಲು ಇಷ್ಟಪಡುವುದಿಲ್ಲ. ಎಲ್ಲವನ್ನೂ ಹೇಳಿಕೊಂಡು ಅನುಕಂಪ ಗಿಟ್ಟಿಸಿಕೊಳ್ಳಲು ನನಗೆ ಇಷ್ಟವಿಲ್ಲ. ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ನಿಜಕ್ಕೂ ಬೇಸರದ ವಿಚಾರ'' ಎಂದು ರಮ್ಯಾ ಅಂಬರೀಶ್ ಅಂತಿಮ ದರ್ಶನಕ್ಕೆ ಏಕೆ ಬರಲಿಲ್ಲ ಎಂಬ ಕಾರಣ ನೀಡಿದ್ದಾರೆ.