ಭೀಕರ ರಸ್ತೆ ಅಪಘಾತ, ಕಾಟೇರ ಸಿನಿಮಾದ ಬಾಲ ನಟ ಮಾಸ್ಟರ್ ರೋಹಿತ್ ಆಸ್ಪತ್ರೆಗೆ ದಾಖಲು
Nov 17, 2024 07:36 AM IST
ಭೀಕರ ರಸ್ತೆ ಅಪಘಾತ, ಕಾಟೇರ ಸಿನಿಮಾದ ಬಾಲ ನಟ ಮಾಸ್ಟರ್ ರೋಹಿತ್ ಆಸ್ಪತ್ರೆಗೆ ದಾಖಲು
- ಕಾಟೇರ ಸಿನಿಮಾದಲ್ಲಿ ಅಭಿನಯಿಸಿದ ಬಾಲ ನಟ ಮಾಸ್ಟರ್ ರೋಹಿತ್ ಪ್ರಯಾಣಿಸುತ್ತಿದ್ದ ಕಾರ್ಗೆ ಅಪಘಾತವಾಗಿದೆ. ಕಾರಿನಲ್ಲಿದ್ದ ಮಾಸ್ಟರ್ ರೋಹಿತ್ ಹಾಗೂ ಅವರ ತಾಯಿಗೆ ಗಂಭೀರ ಗಾಯಗಳಾಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶ್ರೀರಂಗಪಟ್ಟಣದ ಪಾಲಹಳ್ಳಿ ಬಳಿ ಕಾರಿನಲ್ಲಿ ಪ್ರಯಾಣ ಮಾಡುತ್ತಿರುವ ವೇಳೆ ಅಪಘಾತ ಸಂಭವಿಸಿದ್ದು ಕಾಟೇರ ಸಿನಿಮಾದಲ್ಲಿ ಅಭಿನಯಿಸಿದ್ದ ಮಾಸ್ಟರ್ ರೋಹಿತ್ಗೆ ಗಂಭೀರ ಗಾಯಗಳಾಗಿದೆ. ಮಾಸ್ಟರ್ ರೋಹಿತ್ ಜೊತೆ ಇನ್ನೂ ಹಲವರು ಕಾರಿನಲ್ಲಿ ಪ್ರಯಾಣ ಮಾಡುತ್ತಿರುವುದು ತಿಳಿದು ಬಂದಿದೆ. ಇನ್ನಿತರರಿಗೂ ಗಂಭೀರ ಗಾಯಗಳಾಗಿದೆ. ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಕಾರು ನಜ್ಜುಗುಜ್ಜಾಗಿದೆ. ಕಾರಿನ ಸ್ಥಿತಿ ನೋಡಿದರೆ ಅಪಾಯ ಯಾವ ಮಟ್ಟಕ್ಕೆ ಆಗಿರಬಹುದು ಎಂದು ಊಹಿಸಲು ಸಾಧ್ಯವಾಗುವಂತಿದೆ.
ಮಾಸ್ಟರ್ ರೋಹಿತ್ ಜೊತೆ ಅವರ ತಾಯಿ ಕೂಡ ಪ್ರಯಾಣ ಮಾಡುತ್ತಿದ್ದರು ಎನ್ನುವುದು ತಿಳಿದು ಬಂದಿದೆ. ಮಾಸ್ಟರ್ ರೋಹಿತ್ ಅವರ ವಸಡು ಒಡೆದು ಹೋಗಿದ್ದು ತಲೆಯ ಭಾಗಕ್ಕೆ ಗಂಭೀರ ಪೆಟ್ಟು ಬಿದ್ದಿರುವುದು ತಿಳಿದು ಬಂದಿದೆ. ಮೈಸೂರಿನ ಮಣಿಪಾಲ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಅಪಘಾತದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿಸಿದ್ದಾರೆ. ಯಾವುದೋ ಕಾರ್ಯಕ್ರಮಕ್ಕೆ ತೆರಳಿದ್ದ ಇವರು ಮತ್ತೆ ತಮ್ಮ ಮನೆಗೆ ವಾಪಸ್ ಬರುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. KA11 N 4173 ನಂಬರಿನ ಕಾರಿನಲ್ಲಿ ಇವರು ಬರುತ್ತಿರುವಾಗ ಟೂರಿಸ್ಟ್ ಬಸ್ ಒಂದು ಇವರ ಕಾರಿಗೆ ಡಿಕ್ಕಿಯಾಗಿದೆ.
ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಬಾಲನಟ ಇವರಾಗಿದ್ದಾರೆ. 'ಒಂದಲ್ಲಾ ಎರಡಲ್ಲಾ' ಎಂಬ ಚಿತ್ರದಲ್ಲಿ ನಟಿಸಿ ತಮ್ಮ ಅತ್ಯುತ್ತಮ ಅಭಿನಯಕ್ಕಾಗಿ 66ನೇ ರಾಷ್ಟ್ರಪ್ರಶಸ್ತಿಯನ್ನು ಇವರು ಪಡೆದುಕೊಂಡಿದ್ದಾರೆ. ಅದಾದ ನಂತರದಲ್ಲಿ ಕಾಟೇರ ಚಿತ್ರದಲ್ಲೂ ಇವರ ಅಭಿನಯ ಹಲವರ ಮನ ಗೆದ್ದಿದೆ. ಪ್ರಶಸ್ತಿ ಪಡೆದ ನಂತರದ ದಿನಗಳಲ್ಲಿ ಅವರಿಗಾಗಿ ಹಲವು ಅವಕಾಶಗಳು ಹುಡುಕಿ ಬಂದಿದ್ದವು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾದಲ್ಲಿ ಇವರ ರೋಲ್ ಎಲ್ಲರ ಮನ ಗೆದ್ದಿದೆ.
ಮಾಸ್ಟರ್ ರೋಹಿತ್ ಅವರ ಮುಖ ನೋಡಿದ ತಕ್ಷಣ ಇವರನ್ನು ಗುರುತು ಹಿಡಿಯುವ ಅನೇಕರಿದ್ದಾರೆ.