ತೆಲುಗು ಮಹಿಳೆಯರ ಬಗ್ಗೆ ಬಾಯಿ ಹರಿಬಿಟ್ಟಿದ್ದ ಜಾಣ ಸಿನಿಮಾ ಖ್ಯಾತಿಯ ತಮಿಳು ನಟಿ ಕಸ್ತೂರಿ ಶಂಕರ್ ಬಂಧನ
Kasthuri Shankar Arrest: ತಮ್ಮ ಹೇಳಿಕೆಗಳಿಂದಲೇ ವಿವಾದದ ಕೇಂದ್ರ ಬಿಂದುವಾಗಿದ್ದ ಬಹುಭಾಷಾ ನಟಿ ಕಸ್ತೂರಿ ಶಂಕರ್ ಈಗ ಪೊಲೀಸರ ಅತಿಥಿಯಾಗಿದ್ದಾರೆ. ತೆಲುಗು ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಸ್ತೂರಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ.
Kasturi Shankar Arrest: ತೆಲುಗು ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಹುಭಾಷಾ ನಟಿ ಕಸ್ತೂರಿ ಶಂಕರ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ನವೆಂಬರ್ 3 ರಿಂದ ಪರಾರಿಯಾಗಿದ್ದ ಕಸ್ತೂರಿ ಅವರನ್ನು ಚೆನ್ನೈ ಪೊಲೀಸರು ಹೈದರಾಬಾದ್‌ನ ಗಚಿಬೌಲಿಯಲ್ಲಿ ಬಂಧಿಸಿದ್ದಾರೆ. ಬಳಿಕ ಅವರನು ವಿಶೇಷ ವಾಹನದಲ್ಲಿ ಚೆನ್ನೈಗೆ ಕರೆದೊಯ್ಯಲಾಗಿದೆ. ಇದೇ ತಿಂಗಳ 3ರಂದು ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಸ್ತೂರಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ತಮಿಳು ರಾಜರ ಸೇವೆ ಮಾಡಲು ತೆಲುಗು ಮಹಿಳೆಯರು ತಮಿಳುನಾಡಿಗೆ ಬಂದು, ತಮಿಳಿಗರಾದರು ಎಂದು ಕಾಮೆಂಟ್ ಮಾಡಿ ಪೇಚಿಗೆ ಸಿಲುಕಿದ್ದರು.
ತೆಲುಗು ಮಹಿಳೆಯರ ಬಗ್ಗೆ ಮಾತು
ನವೆಂಬರ್ 4ರಂದು ಬ್ರಾಹ್ಮಣರ ರಕ್ಷಣೆಗಾಗಿ ವಿಶೇಷ ಕಾನೂನಿಗೆ ಒತ್ತಾಯಿಸಿ ಚೆನ್ನೈನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಆ ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ನಟಿ ಕಸ್ತೂರಿ ಶಂಕರ್ ಸಹ ಭಾಗವಹಿಸಿ, ನೆರೆದಿದ್ದ ಸಭಿಕರ ಎದುರಿಗೆ ತೆಲುಗು ಭಾಷೆ ಮತ್ತು ತೆಲುಗು ಜನರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹಾಗೆ ಆಡಿದ ಆ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಆಂಧ್ರ ಮತ್ತು ತೆಲಂಗಾಣದಲ್ಲಿ ನಟಿಯ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ಆರಂಭದಲ್ಲಿ ತಾವಾಡಿದ ಮಾತುಗಳನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಟೀಕೆಗಳ ಸುರಿಮಳೆ ಹರಿದುಬಂದಿತು.
ಕಿಚ್ಚು ಹಚ್ಚಿದ್ದ ನಟಿಯವ ಹೇಳಿಕೆ
ಬ್ರಾಹ್ಮಣರ ರಕ್ಷಣೆಗಾಗಿ ವಿಶೇಷ ಕಾನೂನಿಗೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಕಸ್ತೂರಿ, ಮಾತಿನ ಭರದಲ್ಲಿ, "300 ವರ್ಷಗಳ ಹಿಂದೆ ತಮಿಳು ರಾಜರ ಸೇವೆ ಮಾಡಲು ತೆಲುಗು ಮಹಿಳೆಯರು ತಮಿಳುನಾಡಿಗೆ ಬಂದು, ತಮಿಳಿಗರಾದರು. ಅದಾದ ಬಳಿಕ ತಮಿಳಿಗರು ಎಂದು ತಮ್ಮ ಐಡೆಂಟಿಟಿಯನ್ನು ಬಲಪಡಿಸಿಕೊಂಡರು" ಎಂದು ಕಸ್ತೂರಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ತೆಲುಗು ಮಂದಿಯ ಅಸ್ಮಿತೆಗೆ ಕಿಚ್ಚು ಹಚ್ಚಿತು. ವ್ಯಾಪಕ ಟೀಕೆಗಳು ಕೇಳಿಬಂದವು. ಹೀಗೆ ನಟಿಯ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ, ಇದೇ ಘಟನೆಗೆ ರಾಜಕೀಯ ಅಂಟಿಕೊಂಡಿತು. "ಇಲ್ಲ ನಾನು ಹಾಗೇ ಹೇಳಿಲ್ಲ. ನನ್ನ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಿರುಚಲಾಗಿದೆ" ಎಂದೂ ಸಮಜಾಯಿಷಿ ಕೊಟ್ಟಿದ್ದರು ಕಸ್ತೂರಿ.
ಕೋರ್ಟ್ ಹೇಳಿದ್ದೇನು?
ಕೇಸ್ ದಾಖಲಾದ ನಂತರ ತಲೆಮರೆಸಿಕೊಂಡಿರುವ ಕಸ್ತೂರಿ ಶಂಕರ್, ನವೆಂಬರ್ 11ರಂದು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಕೋರ್ಟ್‌ನಲ್ಲೂ ಕಸ್ತೂರಿಗೆ ಹಿನ್ನೆಡೆಯಾಯ್ತು. ನವೆಂಬರ್ 15ರಂದು ವಿಚಾರಣೆ ನಡೆಸಿದ ಮದ್ರಾಸ್ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಕಸ್ತೂರಿಯವರ ಹೇಳಿಕೆಗಳು ದ್ವೇಷವನ್ನು ಹುಟ್ಟುಹಾಕುತ್ತಿವೆ ಎಂದಿತ್ತು. ತೆಲುಗರನ್ನು ತಮಿಳುನಾಡಿಗೆ ವಲಸೆ ಬಂದವರು ಎಂದು ಹೇಗೆ ಕರೆಯುತ್ತಾರೆ ಎಂದು ಹೈಕೋರ್ಟ್ ಪ್ರಶ್ನಿಸಿದೆ. ತೆಲುಗರು ವಲಸಿಗರಲ್ಲ, ತಮಿಳುನಾಡಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾಲುದಾರರು ಎಂದು ಹೇಳಲಾಗುತ್ತದೆ. ತಮಿಳುನಾಡಿನಲ್ಲಿ ತೆಲುಗರು ಮತ್ತು ತಮಿಳರನ್ನು ಪ್ರತ್ಯೇಕವಾಗಿ ಕಾಣುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.