logo
ಕನ್ನಡ ಸುದ್ದಿ  /  ಮನರಂಜನೆ  /  ಕರ್ನಾಟಕದಲ್ಲಿ ನಿಲ್ಲುತ್ತಿಲ್ಲ ಮೇಯಳಗನ್ ಮೆಲುಕು: ಗಂಟಲುಬ್ಬಿ, ಕಣ್ಣೊರೆಸಿಕೊಂಡರೂ ಮನಸ್ಸು ಹಗುರವಾಯಿತು -ಸಂತೋಷ್ ಕುಮಾರ್ ಎಲ್‌ಎಂ ಬರಹ

ಕರ್ನಾಟಕದಲ್ಲಿ ನಿಲ್ಲುತ್ತಿಲ್ಲ ಮೇಯಳಗನ್ ಮೆಲುಕು: ಗಂಟಲುಬ್ಬಿ, ಕಣ್ಣೊರೆಸಿಕೊಂಡರೂ ಮನಸ್ಸು ಹಗುರವಾಯಿತು -ಸಂತೋಷ್ ಕುಮಾರ್ ಎಲ್‌ಎಂ ಬರಹ

Praveen Chandra B HT Kannada

Nov 10, 2024 09:18 AM IST

google News

ಮೇಯಳಗನ್ ಸಿನಿಮಾ ವಿಮರ್ಶೆ

    • Meiyazhagan Movie Review:ಕರ್ನಾಟಕದ ಒಟಿಟಿ ಸಿನಿಮಾ ಪ್ರೇಕ್ಷಕರು ಮೇಯಳಗನ್ ಸಿನಿಮಾದ ಗುಂಗಿನಿಂದ ಇನ್ನೂ ಹೊರಬಂದಿಲ್ಲ. ಇದೀಗ ಈ ಸಿನಿಮಾದ ಕುರಿತು ಸಂತೋಷ್ ಕುಮಾರ್ ಎಲ್‌ಎಂ ಮಾಡಿರುವ ವಿಮರ್ಶೆ ಇಲ್ಲಿದೆ. ಇದು ನಿರ್ದೇಶಕ ಪ್ರೇಮ್‌ಕುಮಾರ್ ನಿರ್ದೇಶನದ, ಕಾರ್ತಿ, ಅರವಿಂದ್‌ ಸ್ವಾಮಿ ಅಭಿನಯದ ಸಿನಿಮಾವಾಗಿದೆ.
ಮೇಯಳಗನ್ ಸಿನಿಮಾ ವಿಮರ್ಶೆ
ಮೇಯಳಗನ್ ಸಿನಿಮಾ ವಿಮರ್ಶೆ

Meiyazhagan Movie Review: ಕಳೆದ ಹಲವು ದಿನಗಳಲ್ಲಿ ಫೇಸ್‌ಬುಕ್‌ ಸೇರಿದಂತೆ ಸೋಷಿಯಲ್‌ ಮೀಡಿಯಾದಲ್ಲಿ ಒಟಿಟಿ ಸಿನಿಮಾ ಪ್ರೇಕ್ಷಕರು ಒಂದು ಸಿನಿಮಾದ ಕುರಿತು ನಿರಂತರವಾಗಿ ಅಭಿಪ್ರಾಯ ಹಂಚಿಕೊಳ್ಳುತ್ತಿರುವುದನ್ನು ನೀವು ಗಮನಿಸಿರಬಹುದು. ಆ ಸಿನಿಮಾದ ಹೆಸರು ಮೇಯಳಗನ್. ಊರು ಬಿಟ್ಟು ಪರವೂರಿಗೆ ಹೋದ ವ್ಯಕ್ತಿಯೊಬ್ಬರು ವಾಪಸ್‌ ಊರಿಗೆ ವಾಪಸ್‌ ಬರುವಂತಹ ಚಿತ್ರಣ ಇರುವ ಈ ಸಿನಿಮಾ ಹಲವು ಕಾರಣಗಳಿಂದ ಜನರಿಗೆ ಇಷ್ಟವಾಗಿದೆ. ಈಗಾಗಲೇ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಮೇಯಳಗನ್‌ ಸಿನಿಮಾದ ಹಲವು ವಿಮರ್ಶೆಗಳನ್ನು, ವೈವಿಧ್ಯಮಯ ಅಭಿಪ್ರಾಯಗಳನ್ನು ಓದಿದ್ದೀರಿ. ಇಂದು ಮೇಯಳಗನ್‌ ಸಿನಿಮಾದ ಕುರಿತು ಸಂತೋಷ್ ಕುಮಾರ್ ಎಲ್‌ಎಂ ಫೇಸ್‌ಬುಕ್‌ನಲ್ಲಿ ಬರೆದ ವಿಮರ್ಶೆಯನ್ನು ಇಲ್ಲಿ ನೀಡಲಾಗಿದೆ.

ಮೇಯಳಗನ್‌ ಸಿನಿಮಾ ವಿಮರ್ಶೆ: ಗಂಟಲುಬ್ಬಿ, ಕಣ್ಣೊರೆಸಿಕೊಂಡರೂ ಮನಸ್ಸು ಹಗುರವಾಯಿತು

"ಮನೆಯಲ್ಲಿಯೇ ಕೂತು ಓಟಿಟಿಯಲ್ಲಿ ನೋಡುತ್ತಿದ್ದರೂ ನಗುತ್ತಾ, ಗಂಟಲುಬ್ಬಿ ಕಣ್ಣೀರು ತುಂಬಿಕೊಳ್ಳುತ್ತಾ, ಅಳುತ್ತಾ, ಕಣ್ಣೊರೆಸಿಕೊಳ್ಳುತ್ತಾ ನೋಡಿ ಒಂದು ರೀತಿಯಲ್ಲಿ ಮನಸ್ಸನ್ನು ಹಗುರ ಮಾಡಿದ ಚಿತ್ರ. ನೋಡಿ ಮುಗಿಸಿದ ಮೇಲೆ ಅನ್ನಿಸಿದ್ದು, ಇದನ್ನು ಥಿಯೇಟರಿನಲ್ಲೇ ನೋಡಿರಬೇಕಿತ್ತು ಅಂತ!

ಈ ವಿಷಯವನ್ನು 96 ಸಿನಿಮಾ ಬಿಡುಗಡೆಯಾದಾಗಲೂ ಹೇಳಿದ್ದೆ. ಕೆಲವು ಸಿನಿಮಾಗಳಿಗೆ ಸಬ್‌ಟೈಟಲ್ಸ್ ಇದ್ದರೂ ಕೂಡ ಕೇವಲ ಭಾಷಾ ತರ್ಜುಮೆಯೊಂದೇ ಆ ಭಾವವನ್ನು ನಮಗೆ ನೇರವಾಗಿ ದಾಟಿಸುವುದಿಲ್ಲ. ತಮಿಳು ಭಾಷೆ ಗೊತ್ತಿದ್ದು, ಕೊಂಚವಾದರೂ ಆ ಸಿನಿಮಾದ ಕಥೆ ನಡೆಯುವ ಸ್ಥಳಗಳ ಜನಜೀವನ, ಸಂಸ್ಕೃತಿಯ ಅರಿವಿರಬೇಕು. ಆಗ ಆ ಸಿನಿಮಾ ಬರೀ ಕಥೆ ಇಷ್ಟವಾಗುವುದಕ್ಕಿಂತ ಹೆಚ್ಚಾಗಿ ನಮ್ಮ ಮನಸ್ಸನ್ನು ತಾಕುತ್ತದೆ. ಮೇಯಳಗನ್‌ ವಿಚಾರದಲ್ಲೂ ಅಷ್ಟೇ. ತಮಿಳು ಗೊತ್ತಿದ್ದು ಆ ಕಥೆ ನಡೆಯುವ ಸ್ಥಳದ ಪರಿಚಯವಿದ್ದರಂತೂ ಇದು ನಮಗೆ ಕನೆಕ್ಟ್ ಆಗುವ ರೀತಿಯೇ ಬೇರೆ. ಖಂಡಿತವಾಗಿ ಇದು ಟಿವಿಯಲ್ಲಿ ಸಿನಿಮಾ ಹಾಕಿ ಏನೋ ಕೆಲಸ ಮಾಡುತ್ತಲೋ, ಯಾರೊಂದಿಗೋ ಮಾತನಾಡುತ್ತಲೋ ಮಧ್ಯ ಮಧ್ಯ ಸ್ಕ್ರೀನ್ ನೋಡುತ್ತಾ ನೋಡುವ ಸಿನಿಮಾ ಅಲ್ಲ. ಓಟಿಟಿಯಲ್ಲಿ ನೋಡಿದರೂ ಇದು ನಮ್ಮೊಳಕ್ಕೆ ಇಳಿಯಬೇಕೆಂದರೆ ಗದ್ದಲವಿಲ್ಲದೆ ಯಾವುದೇ ಅಡಚಣೆ ಇಲ್ಲದೆ ಒಂದೇ ಗುಕ್ಕಿನಲ್ಲಿ ನೋಡಬೇಕು.

96 ಬಗ್ಗೆ ಆಲೋಚಿಸುವಾಗಲೂ ಅದೊಂದು ಸಂದೇಹವಿತ್ತು. ಸಿನಿಮಾದ ಕಥೆಯಲ್ಲಿ ಭಗ್ನಪ್ರೇಮದ ಎಳೆಯುವುದರಿಂದ ನಮಗೆ ಆ ಸೆಂಟಿಮೆಂಟ್ ಕನೆಕ್ಟ್ ಆಗುತ್ತಿದೆಯಾ ಅಂತ. ಅದನ್ನು ಪೂರ್ತಿಯಾಗಿ ನಿರ್ದೇಶಕ ಪ್ರೇಮ್‌ಕುಮಾರ್ ಅವರು "ಮೇಯಳಗನ್‌" ಸಿನಿಮಾದಲ್ಲಿ ಅಲ್ಲಗೆಳೆದಿದ್ದಾರೆ. ಏಕೆಂದರೆ ಪ್ರೇಮಕುಮಾರ್ ಅವರು ಕಥೆ ಹೇಳುವ ಧಾಟಿಯೇ ಭಿನ್ನವಿದೆ. ಅಲ್ಲೊಂದು ಸಾವಧಾನವಿದೆ. ಮುಂದೆ ನಮಗೆ ಆ ಸಿನಿಮಾ ದಾಟಿಸಬೇಕಾದ ಫೀಲ್‌ನ ಸಂಪೂರ್ಣ ಅನುಭವಬೇಕೆಂದರೆ ಆ ಕಥೆ ಸಾಗುವ ಗತಿಯೊಂದಿಗೆ ಹೊಂದಿಕೊಳ್ಳಬೇಕು. ಅದಕ್ಕೆ ಒಂದು ಸಂಯಮ ಬೇಕು. ಏಕೆಂದರೆ ಇಲ್ಲಿ ನಿರ್ದೇಶಕರಿಗೆ ಒಂದೇ ಗುಕ್ಕಿನಲ್ಲಿ ಎಲ್ಲ ಪಾತ್ರಗಳನ್ನು ಪರಿಚಯಿಸಿಬಿಡುವ ಹಪಾಹಪಿ ಇರುವುದಿಲ್ಲ. ಕಥೆ ಕೂಡ ಅಷ್ಟೇ. ಮೊದಲನೇ ದೃಶ್ಯದಲ್ಲೇ ಇಡೀ ಸಿನಿಮಾ ಯಾವುದರ ಬಗ್ಗೆ ಇದೆ ಅಂತ ಏಕಾಏಕಿ ಹೇಳಿಬಿಡುವ ತರಾತುರಿಯಿಲ್ಲ.

96 ಸಿನಿಮಾದಲ್ಲಿ ಎಷ್ಟೋ ವರ್ಷಗಳಾದ ನಂತರ ಒಂದೇ ಕ್ಲಾಸಿನಲ್ಲಿ ಓದುತ್ತಿದ್ದ ಹುಡುಗ ಹುಡುಗಿ ಇಬ್ಬರು ಭೇಟಿಯಾಗುತ್ತಾರೆ. ಆರಂಭದಲ್ಲೇ ಅವರಿಬ್ಬರ ಮಧ್ಯೆ ಯಾವುದೋ ಪ್ರೀತಿ ಇರಬಹುದು ಅನ್ನುವ ವಿಷಯವನ್ನಷ್ಟೇ ನಿರ್ದೇಶಕರು ಹೇಳುತ್ತಾರೆ. ಕಥೆ ಸಾಗುತ್ತಾ ಹೋದಂತೆ ಅವರಿಬ್ಬರೂ ಬಾಲ್ಯದಲ್ಲಿ ಹೇಗಿದ್ದರು? ನಂತರ ಹೇಗೆ ಬೇರೆಬೇರೆಯಾದರು? ಇಬ್ಬರು ಪರಸ್ಪರ ಭೇಟಿಯಾಗಲು ಪ್ರಯತ್ನಿಸಿದರಾ? ನಂತರ ಏನಾಯ್ತು? ಸದ್ಯದ ಪರಿಸ್ಥಿತಿಯಲ್ಲಿ ಆ ಹುಡುಗಿಗೆ ಮದುವೆಯಾಗಿದೆಯಾ? ಅನ್ನುವ ವಿಷಯಗಳನ್ನು ಹೇಳಲು ಇಡೀ ಸಿನಿಮಾವನ್ನು ಬಳಸಿಕೊಂಡಿದ್ದಾರೆ. ಹೀಗಿರುವಾಗ ಅವರಿಬ್ಬರು ಮತ್ತೆ ಒಂದಾಗಬಹುದು ಅನ್ನುವ ಪ್ರಶ್ನೆ ತಲೆಯಲ್ಲಿ ಕೊರೆಯುತ್ತಿರುವಾಗಲೇ ಈ ಹಿಂದೆ ಹೇಳಿದ ಎಲ್ಲಾ ವಿವರಗಳನ್ನು ಪ್ರೇಕ್ಷಕ ಕುತೂಹಲದಿಂದ ನೋಡುತ್ತಾ ಎಂಜಾಯ್ ಮಾಡುತ್ತಾನೆ. ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು ಅನ್ನುವಷ್ಟರಲ್ಲಿ ಸಿನಿಮಾ ಅಂತ್ಯಕ್ಕೆ ಬಂದಿರುತ್ತದೆ.

"ಮೇಯಳಗನ್‌" ಸಿನಿಮಾದಲ್ಲಿ ಕೂಡ ಅಷ್ಟೇ. "ಜೊತೆಗೆ ಬಂದಾತ ಯಾರು?" ಅನ್ನುವ ಪ್ರಶ್ನೆ ಸಿನಿಮಾದ ಪಾತ್ರಧಾರಿಗೂ, ಜೊತೆಗೆ ಪ್ರೇಕ್ಷಕ ಇಬ್ಬರಿಗೂ ತಲೆಯಲ್ಲಿ ಕೊರೆಯುತ್ತಿರುವಾಗಲೇ ಇಡೀ ಕಥೆ ನಮ್ಮನ್ನು ತನ್ನಲ್ಲಿ ಸೆಳೆದುಕೊಂಡು ಮುಂದೆ ಸಾಗುತ್ತದೆ. ಇದು ನಿರ್ದೇಶಕ ಪ್ರೇಮ್‌ಕುಮಾರ್ ಅವರು ಕಥೆ ಹೇಳುವ ತಂತ್ರವೆಂದೇ ಪರಿಗಣಿಸಬಹುದು.

ಅಲ್ಲೇ ಹಿಂದೆ ಉಳಿದು ಹೋದ ಗೆಳೆಯರು ಮತ್ತು ಸಂಬಂಧಗಳನ್ನು ಬಿಟ್ಟು ಬಹುತೇಕರು ತಮ್ಮ ಹುಟ್ಟೂರುಗಳಿಂದ ಇನ್ನೊಂದು ಊರಿಗೆ ಬಂದಾಗಿದೆ. ಅದು ಕೆಲಸಕ್ಕಾಗಿರಬಹುದು ಅಥವಾ ಬೇರೊಂದು ಕಾರಣಕ್ಕಾಗಿರಬಹುದು. ಊರು ಬಿಟ್ಟು ಬಂದು ದಶಕಗಳಾದ ಮೇಲೆ ಒಮ್ಮೆ ಬಾಲ್ಯವನ್ನು ನೆನಪಿಸಿಕೊಂಡರೆ ಚಿಕ್ಕಂದಿನಲ್ಲಿ ನಮ್ಮೊಡನೆ ಒಡನಾಡಿದ್ದ ಅನೇಕರ ಹೆಸರುಗಳೇ ನೆನಪಾಗುತ್ತಿಲ್ಲ. ನಾವು ಬೆಳೆದ ವಾತಾವರಣದ ಹಸು, ಎಮ್ಮೆ, ಕರು, ಕೋಳಿ, ಹೊಲ, ಗದ್ದೆ, ಮನೆ, ಕೆರೆ, ಹಳ್ಳ, ಬೆಟ್ಟ, ಗುಡ್ಡ, ದೇವಸ್ಥಾನ ಇವೆಲ್ಲವೂ ನಮ್ಮ ನೆನಪಿನಲ್ಲಿ ಕೊಂಚಕೊಂಚವೇ ಮಸುಕಾಗುತ್ತಿವೆ. ಈ ಸಿನಿಮಾ ನೋಡುವಾಗ ಇದ್ದಕ್ಕಿದ್ದಂತೆ ಅವೆಲ್ಲವೂ ನೆನಪಾಗಿ ಕಣ್ಣಂಚು ಒದ್ದೆಯಾಗುವುದು ಸಹಜ. ಈ ಕ್ಷಣ ಅವುಗಳೆಲ್ಲ ನೆನಪಾದರೆ ತಕ್ಷಣವೇ ಓಡಿ ಹೋಗಿ ಅವು ಈಗ ಹೇಗಿರಬಹುದೆಂದು ನೋಡುವ ತನಕವಾಗುತ್ತದೆ. ಆ ಕಥೆಯನ್ನು ಹೇಳುವುದೇ "ಮೇಯ್ಯಳಗನ್". ಮುಖ್ಯವಾಗಿ ಈ ಸಿನಿಮಾ ಯಾರನ್ನೂ ಕೆಟ್ಟವರು, ಒಳ್ಳೆಯವರು ಎಂದು ನೇರವಾಗಿ ಅಥವಾ ಪರೋಕ್ಷವಾಗಿ ಹೇಳುವುದಿಲ್ಲ. ಒಂದು ಘಟ್ಟದಲ್ಲಂತೂ ಒಂದು ಪಾತ್ರ "ಯಾರಿಗೂ ಕೇಡು ಬಯಸಬಾರದು. ಎಲ್ಲರನ್ನೂ ಕ್ಷಮಿಸಿ ಮುಂದೆ ಹೋಗಬೇಕು" ಅಂತ ದೊಡ್ಡ ಮನಸಿನಿಂದ ಹೇಳುತ್ತದೆ.

ಅದಕ್ಕಿಂತಲೂ ಮುಖ್ಯವಾಗಿ ಹತ್ತಿರದ ಸಂಬಂಧಗಳಲ್ಲೇ ಯಾವುದೋ ಒಂದು ವಿಚಾರಕ್ಕೆ ಮನಸ್ತಾಪವಾಗಿ ಆ ಕ್ಷಣದ ಕೋಪಕ್ಕೆ ಬೇಸರಗೊಂಡು ಊರು ಬಿಟ್ಟು ಹೊರಗೆ ಬಂದಿದ್ದರೆ "ಆ ಅಹಮ್ಮುಗಳನ್ನೆಲ್ಲ ಬಿಟ್ಟು ಎಲ್ಲವನ್ನೂ ಮರೆತು ಮತ್ತೊಮ್ಮೆ ಅಲ್ಲಿಗೆ ಭೇಟಿ ಕೊಡಿ" ಅನ್ನುತ್ತ ಆ ಆಸೆಯನ್ನು ಈ ಸಿನಿಮಾ ಮನಸ್ಸಿನೊಳಗೆ ಚಿಗುರಿಸುತ್ತದೆ. ನಾವು ಸಾಕಿದ್ದ ಎಮ್ಮೆ, ಕರು, ಹಸುಗಳಿಗೆ ಒಂದೊಂದು ಹೆಸರಿಟ್ಟಿದ್ದೆವು ಅನ್ನುವುದನ್ನು ಹೇಳಿದರೂ ಈಗಿನ ಮಕ್ಕಳು ನಗಬಹುದು. ಈ ಸಿನಿಮಾದಲ್ಲಂತೂ ಯಾವುದನ್ನೂ ಕೇವಲ ವಸ್ತುವಾಗಿ, ಬರೀ ಪ್ರಾಣಿಯಾಗಿ, ಬರಿಯ ವ್ಯಕ್ತಿಗಳಾಗಿ ನೋಡದೆ ಅವುಗಳೊಡನೆ ಏರ್ಪಡುವ ನಂಟನ್ನು ಮನೋಜ್ಞವಾಗಿ ತೋರಿಸಿದ್ದಾರೆ. ಇವೆಲ್ಲವನ್ನೂ ನೋಡುವಾಗ ಮತ್ತೊಮ್ಮೆ ನಮ್ಮ ನೆನಪುಗಳಿಗೆ ಜಾರುವುದು 100% ಗ್ಯಾರಂಟಿ.

ಕಾರ್ತಿಯ ಪಾತ್ರದ ಬಗ್ಗೆ ವಿವರವಾಗಿ ಹೇಳುವುದಕ್ಕಿಂತ ಸಿನಿಮಾ ನೋಡುತ್ತಲೇ ಅದನ್ನು ಎಂಜಾಯ್ ಮಾಡಬೇಕು. ಕಾರ್ತಿಯ ಪಾತ್ರದಷ್ಟು ಸಂಪೂರ್ಣವಾಗಿ ಇಲ್ಲದಿದ್ದರೂ ಹೆಚ್ಚು ಕಡಿಮೆ ಅದನ್ನೇ ಹೋಲುವ ಸಹೃದಯಿಗಳನ್ನು ನಾನು ಊರಿನಲ್ಲಿ ಕಣ್ಣಾರೆ ಕಂಡಿದ್ದೇನೆ. ಹಾಗಾಗಿ ಈ ಸಿನಿಮಾ ನೋಡುವಾಗ ಅವರೇ ನೆನಪಾಗುತ್ತಿದ್ದರು! ಅರವಿಂದ್ ಸ್ವಾಮಿಯ ಪಾತ್ರವಂತೂ ಊರನ್ನು ಬಿಟ್ಟು ಮತ್ತೊಂದೂರಿಗೆ ಬಂದಿರುವ ನಮ್ಮೆಲ್ಲರ ಮನಸ್ಥಿತಿಗೆ ಹಿಡಿದ ಕನ್ನಡಿ!

ಒಂದೇ ಕ್ಷಣದಲ್ಲಿ ಪ್ರೇಕ್ಷಕನನ್ನು ಅಳಿಸಿಬಿಡುವ ಈ ಇಬ್ಬರ ಪಾತ್ರಗಳು ಇಡೀ ಸಿನಿಮಾದಲ್ಲಿ ಒಂದಕ್ಕೊಂದು ಸವಾಲೆಸೆಯುತ್ತವೆ. ಒಂದು ಸಿನಿಮಾದಲ್ಲಿ ಪ್ರತಿಯೊಬ್ಬ ಕಲಾವಿದರಿಗೂ ನಟನೆಯ ಸವಾಲು ಹೀಗಿದ್ದರೆ ಚಂದ ಅಂತ ಈ ಸಿನಿಮಾ ನೋಡಿದಾಗ ಅನ್ನಿಸಿದ್ದು ಸುಳ್ಳಲ್ಲ.ಈ ಸಿನಿಮಾದ ಉಳಿದ ಬಹುತೇಕ ವಿವರಗಳ ಬಗ್ಗೆ ಗೆಳೆಯರೆಲ್ಲ ಸಿಕ್ಕಾಪಟ್ಟೆ ಬರೆದಿದ್ದಾರೆ. ಬಹಳ ದಿನಗಳಾದ ನಂತರ ತಡವಾಗಿ ಈ ಸಿನಿಮಾ ನೋಡಿದ್ದರಿಂದ ಅನ್ನಿಸಿದ್ದನ್ನು ಬರೆದೆ. ಮುಂದೆ ಪ್ರೇಮ್‌ಕುಮಾರ್ ಅವರ ಯಾವುದೇ ಸಿನಿಮಾ ಬಂದರೆ ಖಂಡಿತವಾಗಿ ಅದನ್ನು ಥಿಯೇಟರಿನಲ್ಲೇ ನೋಡಿ ಅನುಭವಿಸಬೇಕು ಅಂದುಕೊಂಡಿದ್ದಂತೂ ಸತ್ಯ.

ಬೇರೆ ಬೇರೆ ಥರದ ಸಿನಿಮಾಗಳು ಬರುತ್ತಿರುವ ಈ ಹೊತ್ತಿನಲ್ಲಿ, ಯಾಂತ್ರಿಕವಾಗಿ ಯೋಚಿಸುತ್ತ ಜಂಜಾಟಗಳಲ್ಲಿ ಮುಳುಗಿ ಹೋದ ನಮ್ಮನ್ನು ನಿಧಾನವಾಗಿ ತನ್ನೊಳಗೆ ಸೆಳೆದುಕೊಳ್ಳುತ್ತ, ನಮ್ಮೊಳಗೆ ಹುದುಗಿಹೋದ ನೆನಪುಗಳನ್ನು ಬಡಿದೆಬ್ಬಿಸುತ್ತ ಮತ್ತೆ ಆಲೋಚಿಸುವಂತೆ ಮಾಡುವ ಈ ಥರದ ಸಿನಿಮಾಗಳು ಎಲ್ಲ ಭಾಷೆಗಳಲ್ಲೂ ಬರಬೇಕು.

  • ಬರಹ: ಸಂತೋಷ್ ಕುಮಾರ್ ಎಲ್‌ಎಂ

ತ್ರಿವೇಣಿಯವರ ಸಣ್ಣ ಕತೆ " ಹೆಂಡತಿಯ ಹೆಸರು" ನೆನಪಾಯ್ತು

ಈ ವಿಮರ್ಶೆಗೆ ಫೇಸ್‌ಬುಕ್‌ನಲ್ಲಿ ಓದುಗರು ನಾನಾ ಪ್ರತಿಕ್ರಿಯೆ ನೀಡಿದ್ದಾರೆ. ಕುಮುದವಳ್ಳಿ ಅರುಣ್‌ ಮೂರ್ತಿ ಎಂಬವರು ""ಸಾವಧಾನ" - ಇದು ಇಂದು ಮರೆತಿರುವ ಪದ! ಹಾಗಾಗಿಯೇ ಬದುಕೇ ಒಂದು ಕ್ಲೀಷೆ. ಸಾವಧಾನವಾಗಿ ಕಥೆ ಹೇಳುವ ಅದನ್ನು ತಾಳ್ಮೆಯಿಂದ ಕೇಳುವ ಮನಸ್ಥಿತಿ ಇದ್ದರೆ ಮಾತ್ರ ಇವು ನಮಗೆ ಕನೆಕ್ಟ್ ಆಗೋದು. ಅಪ್ಪನ ತೊಳಲಾಟ ಅರ್ಥ ಮಾಡಿಕೊಂಡು ಕಾರ್ತಿ ನಂಬರ್ ಗೆ ಕಾಲ್ ಮಾಡಿಕೊಡುವ ಮಗಳು! ಇವತ್ತಿನ ಯಂಗ್ ಜನರೇಷನ್ನಿಗೆ ಅಷ್ಟು ಮಾತ್ರ ಭಾವನಾತ್ಮಕ ನಂಟಿದ್ದರೆ ನಿಜಕ್ಕೂ ಮುಂದಿನ ದಿನಗಳಲ್ಲಿ ಸಂಬಂಧಗಳನ್ನು ಸಂಭಾಳಿಸಿಕೊಳ್ಳುವ ಆಶಯವಿಟ್ಟುಕೊಳ್ಳಬಹುದು. ನನಗೂ ಬಹಳ ಇಷ್ಟವಾಯಿತು ಸಿನಿಮಾ ನೋಡುತ್ತಾ... ನನಗೆ ತ್ರಿವೇಣಿಯವರ ಸಣ್ಣ ಕತೆ " ಹೆಂಡತಿಯ ಹೆಸರು" ನೆನಪಾಯ್ತು" ಎಂದು ಬರೆದಿದ್ದಾರೆ.

ಏಕಾಂತದಲ್ಲಿ ನದಿಯ ದಡದಲ್ಲಿ ಕವಿತೆ ಓದಿದ ಹಾಗಾಯ್ತು

ಪ್ರಕಾಶ್‌ ಶ್ರೀನಿವಾಸ್‌ ಅವರ ಪ್ರತಿಕ್ರಿಯೆ ಹೀಗಿದೆ. "ನನಗೆ ಆಗಿದ್ದು ಎಲ್ಲರಿಗೂ ಆಗಬೇಕು ಅಂತ ಏನಿಲ್ಲಾ ಈ ಫಿಲಂ ನೋಡುವಾಗ ಒಂದು ಸೀನ್ ಕಾರ್ತಿ ಹೇಳ್ತಾನೆ ನನ್ನ ತಮ್ಮನ್ನ ಸೈಕಲ್ ನಲ್ಲಿ ಕೂರಿಸಿಕೊಂಡು ಹೋಗಿ ಸ್ಕೂಲ್ ಬಿಟ್ಟು ಕರ್ಕೊಂಡು ಬಂದೆ..ಅವತ್ತಿನಿಂದ ನಮ್ಮ ತಂದೆ ನನ್ನ ಹೆಸರಿಟ್ಟು ಕರೆಯೋದು ಬಿಟ್ಟು ದೊಡ್ಡವನು ಬಂದ್ನ ಅನ್ನೋರು ಅಂತ .. ಆ ಒಂದು ಸೀನ್ ನನ್ನ ಎಮೋಷನಲ್ ಆಗಿಸಿ ಬಿಡ್ತು.. ಒಂದು ನಾವ್ ಹಿರಿಯಣ್ಣ ಆಗಿರಬೇಕು ಅಥವಾ ಹಿರಿಯಣ್ಣನೊಂದಿಗೆ ಹುಟ್ಟಿರಬೇಕು ಆಗಷ್ಟೇ ಆ ದೃಶ್ಯದ ಅನುಭವ ಸಿಗೋದು .. ಮನೆಯಲ್ಲಿ ಹಿರಿಯಣ್ಣ ಅಂದ್ರೆ ಅವನು ಒಬ್ಬ ತಂದೆಯ ಸ್ಥಾನದಲ್ಲಿ ಇರ್ತಾನೆ ಅವನಿಗೆ ತಮ್ಮನ ಮೇಲಿನ ಆ ಜವಾಬ್ದಾರಿ .. ಇನ್ನು ನನ್ನ ಮಗ ಈ ಮನೆಗೆ ಆಧಾರದ ಆದ ಅಂತ ಅವರ ತಂದೆ ಫೀಲ್ ಮಾಡಿ ಅವತ್ತಿನಿಂದ ಅವನ್ನ ದೊಡ್ಡವನೇ ಅನ್ನೋದು .. ಇದೆಲ್ಲಾ ಸಕ್ಕತ್ ಎಮೋಷನಲ್ .. ಫಿಲಂ ಏಕಾಂತದಲ್ಲಿ ನದಿಯ ದಡದಲ್ಲಿ ಕವಿತೆ ಓದುವ ಹಾಗಿತ್ತು" ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಆತ್ಮೀಯ ದೀಪು ಪ್ರತಿಕ್ರಿಯೆ: "ಅರವಿಂದ್ ಸ್ವಾಮಿ ಅವ್ರ ಅಭಿನಯ ತುಂಬಾನೇ ಇಷ್ಟ ಆಯ್ತು.. ಇವತ್ತಿನ ಜನರೇಶನ್ನವರು ಸಂಬಂಧಿಕರನ್ನ ಶತ್ರುಗಳಂತೆ ನೋಡುವಾಗ ಅದ್ಯಾಕೋ ನನ್ಗ್ ಮಾತ್ರ ಬಂಧು ಬಳಗ ಸಂಬಂದಿಕರು ಅಂದ್ರೆ ತುಂಬಾ ಇಷ್ಟ.. ಹಾಗಾಗಿ ಈ ಸಿನಿಮಾ ತುಂಬಾನೇ ಕನೆಕ್ಟ್ ಆಯ್ತು" ಎಂದು ಬರೆದಿದ್ದಾರೆ. "ಅರವಿಂದ್ ಸ್ವಾಮಿ ಹೇಳ್ದೆ ಕೇಳ್ದೆ ಮನೆ ಇಂದ ಹೋಗುವಾಗ,ಸರ್ ಕಮಲಹಾಸನ್ ಹಾಡು ಹಾಡಿರೋ ರೀತಿ ಅಂತೂ ಗಂಟಲು ಇನ್ನೂ ಹುಬ್ಬೋ ಹಾಗೆ ಮಾಡುತ್ತೆ" ಎಂದು ಕೃಷ್ಣ ಮೂರ್ತಿ ಎಂಬವರು ಪ್ರತಿಕ್ರಿಯೆ ನೀಡಿದ್ದಾರೆ. "ನಂಗಂತೂ ಬಾಳ ಇಷ್ಟವಾಯ್ತು.ಸ್ವಲ್ಪ ಸ್ಲೋ ಅನ್ನಿಸಿದ್ದು ಹೌದು. ಆದ್ರೆ ನಾ ಬಿಟ್ಟು ಬಂದ ಊರು ಕೇರಿ ಜನ ಇವಲ್ಲಾ ನೆನಪುಗಳ ಗಂಟು ಕಟ್ಟಿಟ್ಟುಕೊಂಡು ಯಾಕೋ ನೆನಪಾದಾಗ ನಮ್ ಮುಖದಲ್ಲಿ ಮೂಡುವ ಮುಗುಳುನಗೆ ...ಚೆಂದಿದೆ ಮೂವಿ" ಎಂದು ತನುಜಾ ದೊಡ್ಡಮನಿ ಪ್ರತಿಕ್ರಿಯೆ ನೀಡಿದ್ದಾರೆ.

"ನಾನು ನೆನ್ನೆ ನೋಡ್ದೆ, ತುಂಬಾ ಚೆನ್ನಾಗಿದೆ ಅನ್ನೋದಕ್ಕಿಂತ ನಮ್ಮ ಬಾಲ್ಯ ನಾವು ಹೆಚ್ಚು ಇಷ್ಟಪಡುತ್ತಿದ ಮನೆ ಊರು, ಏರಿಯಾ ಅಲ್ಲಿಯ ಸ್ನೇಹಿತರು ಎಲ್ಲವು ಒಮ್ಮೆ ಕಣ್ಣಮುಂದೆ ಸಾಗಿ ಬಂತು..." ಎಂದು ಮಂಜುಳಾ ಅಜಯ್‌ ಭಾರಧ್ವಾಜ್‌ ಪ್ರತಿಕ್ರಿಯೆ ನೀಡಿದ್ದಾರೆ. "ನಾನು ನೋಡುವ ಕೆಲವು ನಾಯಕರ ಸಿನಿಮಾಗಳಲ್ಲಿ ಕಾರ್ತಿ ಸಿನಿಮಾಗಳು ವಿಭಿನ್ನವಾಗಿರುತ್ತವೆ. ಆಡಂಬರಗಳಿಲ್ಲದ ಮತ್ತು ಹೆಚ್ಚು ಬಿಲ್ಡಪ್ಗಳಿಲ್ಲದ ಹಾಗೆಯೆ ಸಹಜ ಅಭಿನಯ. ಈ ಸಿನಿಮಾ ಅಂತೂ ಇನ್ನೊಂದು ಲೆವೆಲ್ಲಿಗೆ ಅವರ ಮೇಲಿನ ಪ್ರೀತಿ ಹೆಚ್ಚಾಯಿತು" ಯೋಗೇಶ್‌ ಪ್ರತಿಕ್ರಿಯೆ ನೀಡಿದ್ದಾರೆ. ಹೀಗೆ ಸಂತೋಷ್ ಕುಮಾರ್ ಎಲ್‌ಎಂ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ