Meiyazhagan Review: ಕಟ್ಟಿ ಹಿಡಿದಿಟ್ಟ ಗಟ್ಟಿ ಭಾವನೆಗಳ ಗಂಟು ಬಿಚ್ಚುವ ಸಿನಿಮಾ ಮೇಯಳಗನ್; ಕ್ಯಾಮೆರಾಗೂ ಇಲ್ಲಿ ಸಂಭಾಷಣೆಯಿದೆ
Meiyazhagan Review: ತಮಿಳಿನ 96 ಚಿತ್ರದಲ್ಲಿ ರಾಮ್ ಮತ್ತು ಜಾನುವಿನ ಪ್ರೀತಿಯನ್ನು ನಾಸ್ಟಾಲ್ಜಿಕ್ ರುಚಿಯೊಂದಿಗೆ ನೀಡಿದ ನಿರ್ದೇಶಕ ಪ್ರೇಮಕುಮಾರ್, ಈಗ ಅದೇ ಟೆಂಪ್ಲೇಟ್‌ನಲ್ಲಿ ಮೇಯಳಗನ್ ಚಿತ್ರವನ್ನು ಪ್ರೇಕ್ಷಕನ ಮುಂದಿರಿಸಿದ್ದಾರೆ. ಭಾವನೆಗಳನ್ನೇ ಭರ್ತಿಯಾಗಿಯೇ ಬೆರೆಸಿ ನೋಡುಗರ ತಟ್ಟಿಗೆ ಬಡಿಸಿದ್ದಾರೆ. ಇಲ್ಲಿದೆ ಈ ಚಿತ್ರದ ವಿಮರ್ಶೆ.
Meiyazhagan Movie Review: ಈ ಹಿಂದೆ ತಮಿಳಿನಲ್ಲಿ 96 ಹೆಸರಿನ ಸಿನಿಮಾ ಬಂದಿತ್ತು. ವಿಜಯ್ ಸೇತುಪತಿ ಮತ್ತು ತ್ರಿಷಾ ಕೃಷ್ಣನ್ ಆ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದರು. ಅಪೇಕ್ಷಿಸದ ಪ್ರೀತಿಯ ಹಿಂದಿನ ಸೆಳೆತ, ಕೌತುಕದ ಸುತ್ತ ಆ ಸಿನಿಮಾ ಸುತ್ತಾಡಿತ್ತು. ಬಾಲ್ಯದ ಜತೆಗೆ ಮೊದಲ ಪ್ರೀತಿಯ ತುಡಿತವೂ ಅಲ್ಲಿ ಎದೆಗಪ್ಪಳಿಸಿತ್ತು. ನೋಡುಗರನ್ನು ಅವರವರ ಬಾಲ್ಯಕ್ಕೂ ಕರೆದೊಯ್ದಿತ್ತು 96 ಅನ್ನೋ ನವಿರು ಕಥೆ. ಸಿ ಪ್ರೇಮ್‌ಕುಮಾರ್ ನಿರ್ದೇಶನದ ಚೊಚ್ಚಲ ಚಿತ್ರವದು. ಈಗ ಇದೇ ನಿರ್ದೇಶಕ ಮತ್ತೊಂದು ಕಥೆಯ ಜತೆಗೆ ಆಗಮಿಸಿದ್ದಾರೆ. ಅದೇ ಮೇಯಳಗನ್. ಈ ಸಿನಿಮಾ ಕಳೆದ ತಿಂಗಳೇ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಮೆಚ್ಚುಗೆ ಪಡೆದಿದೆ. ಈಗ ಒಟಿಟಿಗೂ ಬಂದಿದೆ. ಹಾಗಾದರೆ ಈ ಮೇಯಳಗನ್ ಸಿನಿಮಾ ಹೇಗಿದೆ?
ಮನಸನ್ನು ತಿಳಿಗೊಳಿಸುತ್ತ, ಮುಖದಲ್ಲಿ ಕಿರು ನಗು ಉಕ್ಕಿಸುತ್ತ, ಹಳೇ ನೆನಪುಗಳಿಗೆ ಜಾರಿಸುತ್ತ ಬಿಟ್ಟು ಬಿಡದಂತೆ ತದೇಕ ಚಿತ್ತದಿಂದ ನೋಡಿಸಿಕೊಂಡು ಹೋಗುವ ತಾಕತ್ತು, ಗಟ್ಟಿತನ ತಮಿಳಿನ ಮೇಯಳಗನ್ ಸಿನಿಮಾದಲ್ಲಿದೆ. ಮೇಯಳಗನ್ ಒಂದು ಸಿನಿಮಾ ರೂಪದಲ್ಲಿ ಮಾತ್ರ ಹೊರಬಂದಿಲ್ಲ. ಒಂದಷ್ಟು ಭಾವನೆಗಳನ್ನು ಹೊತ್ತು, ನೋಡುಗರ ಎದೆಗಿಳಿಸುವ ಕೆಲಸವೂ ಈ ಮೇಯಳಗನ್ ಚಿತ್ರದಿಂದ ಆಗಿದೆ. ಜೀವನದಲ್ಲಿ ಏಳುಬೀಳುಗಳನ್ನು ಅನುಭವಿಸುವುದು ಸಹಜ. ಅವುಗಳನ್ನು ಬದಿಗಿಟ್ಟು, ನಾಲ್ಕು ಜನ ಒಳ್ಳೆಯವರ ನಡುವೆ ಇರುವುದರಲ್ಲಿಯೇ ನಿಜವಾದ ಸುಖವಿದೆ ಎಂಬುದನ್ನು ನಿರ್ದೇಶಕರು ಈ ಸಿನಿಮಾದಲ್ಲಿ ತೋರಿಸಿದ್ದಾರೆ.
ಏನಿದು ಕಥೆ
ಆಸ್ತಿ ವಿವಾದದಿಂದ ನೀಡಮಂಗಲಂ ಊರು ಬಿಟ್ಟ ಅರುಳ್ (ಅರವಿಂದ ಸ್ವಾಮಿ) ಕುಟುಂಬ, ಮತ್ಯಾವತ್ತೂ ಅತ್ತ ಕಡೆ ತಿರುಗಿಯೂ ನೋಡಬಾರದು ಎಂದು ನಿರ್ಧರಿಸುತ್ತೆ. ಹೀಗಿರುವಾಗಲೇ, ಚಿಕ್ಕಪ್ಪನ ಮಗಳ ಮದುವೆಯ ಆಮಂತ್ರಣ ಅರುಳ್ ಕುಟುಂಬದ ಕೈ ಸೇರುತ್ತೆ. ಒಲ್ಲದ ಮನಸ್ಸಿನಿಂದಲೇ 22 ವರ್ಷಗಳ ಬಳಿಕ ತಂಜಾವೂರಿನ ನೀಡಮಂಗಲಂನತ್ತ ಪ್ರಯಾಣ ಬೆಳೆಸುತ್ತಾನೆ ಅರುಳ್. ಮದುವೆ ಹಿಂದಿನ ದಿನ ಹೋಗಿ ಎಲ್ಲರನ್ನು ಭೇಟಿ ಮಾಡುತ್ತಾನೆ. ಆವತ್ತೇ ಮರಳಿ ಊರಿಗೆ ಬರುವ ನಿರ್ಧಾರ ಆತನದ್ದು. ಹೀಗಿರುವಾಗಲೇ ತರ್ಲೆ ವ್ಯಕ್ತಿತ್ವದ ಕಾರ್ತಿಯೂ ಮದುವೆ ಮನೆಯಲ್ಲಿ ಆತನ ಎದುರಾಗುತ್ತಾನೆ. ಅಲ್ಲಿಂದ ಒಂದು ಹೊಸ ಪುಟ ತೆರೆದುಕೊಳ್ಳುತ್ತದೆ. ಅರುಳ್ ಮನಸ್ಥಿತಿಯೂ ಬದಲಾಗುತ್ತದೆ. ಆ ಅಚ್ಚರಿಯನ್ನು ಸಿನಿಮಾ ನೋಡಿಯೇ ಸವಿಯಬೇಕು.
ತಮಿಳಿನ 96 ಚಿತ್ರದಲ್ಲಿ ರಾಮ್ ಮತ್ತು ಜಾನುವಿನ ಪ್ರೀತಿಯನ್ನು ನಾಸ್ಟಾಲ್ಜಿಕ್ ರುಚಿಯೊಂದಿಗೆ ನೀಡಿದ ನಿರ್ದೇಶಕ ಪ್ರೇಮಕುಮಾರ್, ಈಗ ಅದೇ ಟೆಂಪ್ಲೇಟ್‌ನಲ್ಲಿ ಮೇಯಳಗನ್ ಚಿತ್ರವನ್ನು ಪ್ರೇಕ್ಷಕನ ಮುಂದಿರಿಸಿದ್ದಾರೆ. ಭಾವನೆಗಳನ್ನೇ ಭರ್ತಿಯಾಗಿಯೇ ಬೆರೆಸಿ ನೋಡುಗರ ತಟ್ಟಿಗೆ ಬಡಿಸಿದ್ದಾರೆ. ನಮ್ಮೊಳಗಿನ ಕಥೆಯನ್ನೇ ತೆರೆಮೇಲೆ ಇಟ್ಟಿದ್ದಾರಾ? ಎನ್ನುವಷ್ಟರ ಮಟ್ಟಿಗೆ ನೈಜತೆಯನ್ನು ಟಚ್ ಮಾಡಿದ್ದಾರೆ. ಹಾಗಾಗಿ ಈ ಮೇಯಳಗನ್ ಕೇವಲ ಎರಡೂವರೆ ಗಂಟೆಗಳ ಕಾಲ ಮಾತ್ರವಲ್ಲ, ಒಂದಷ್ಟು ದಿನಗಳ ವರೆಗೂ ಕಾಡುತ್ತದೆ. ನೆನಪಿನಲ್ಲಿ ಉಳಿಯುತ್ತದೆ.
ಮೇಯಳಗನ್ ಸಿನಿಮಾ ಕೇವಲ ಒಂದು ರಾತ್ರಿಯಲ್ಲಿ ನಡೆಯುವ ಕಥೆ. ಆ ಒಂದೇ ದಿನದ ಕಥೆಗೆ ನಿರ್ದೇಶಕ ಪ್ರೇಮಕುಮಾರ್, ಇಲ್ಲಿ ಅಚ್ಚುಕಟ್ಟಾದ ಫ್ಲ್ಯಾಷ್‌ಬ್ಯಾಕ್ ನೆನಪುಗಳನ್ನು ಸಿನಿಮಾ ಆರಂಭವಾದಾಗಿನಿಂದಲೂ ಭರ್ತಿಯಾಗಿ ತುಂಬಿಸಿದ್ದಾರೆ. ಆ ನೆನಪುಗಳು ಕಥೆಯ ಜೊತೆಗೆ ನಮ್ಮನ್ನು ಪಯಣಿಗನಂತೆ ಕರೆದೊಯ್ಯುತ್ತವೆ. ಹುಟ್ಟೂರು ಮತ್ತು ಸಂಬಂಧದಿಂದ ದೂರ ಉಳಿದು ಮನೆಗೆ ಮರಳುವ ವ್ಯಕ್ತಿಯ ಭಾವನೆಗಳನ್ನು ಆಳವಾಗಿ ತುಂಬಿ, ನಮ್ಮನ್ನು ನೀಡಮಂಗಲಂ ಬಸ್‌ನಲ್ಲಿ ಪ್ರಯಾಣಿಕರಂತೆ ಕರೆದೊಯ್ದಿದ್ದಾರೆ ನಿರ್ದೇಶಕರು.
ನೆನಪುಗಳತ್ತ ಹಿಂತಿರುಗಿ ನೋಡುವವನಾಗಿ ಕಣ್ಣಲ್ಲಿಯೇ ಹೆಚ್ಚು ನಟನೆಯನ್ನು ಒಪ್ಪಿಸಿದ್ದಾರೆ ಅರವಿಂದ್ ಸ್ವಾಮಿ. ಈ ಇಡೀ ಮೇಯಳಗನ್ ಕಥೆಯ ಆತ್ಮವಾಗಿ ಅವರು ಇಲ್ಲಿ ಕಾಣಿಸುತ್ತಾರೆ. ಆ ಆತ್ಮಕ್ಕೆ ಜೀವ ತುಂಬಲು ನಿಶ್ಕಲ್ಮಷ ಮನಸ್ಸಿನ ಕಾರ್ತಿ ಹೆಗಲು ಕೊಟ್ಟಿದ್ದಾರೆ. ಅಪ್ಪಟ ಹಳ್ಳಿಯ ಹುಡುಗನ ಆಂಗಿಕ ಭಾಷೆ ಅವರಿಂದ ಇಲ್ಲಿ ಸಂದಾಯವಾಗಿದೆ. ಪ್ರಬುದ್ಧ ಅಭಿನಯ ನೀಡುವ ಜಯಪ್ರಕಾಶ್ ಮತ್ತು ರಾಜ್ ಕಿರಣ್ ನಮ್ಮ ಮನೆಯಲ್ಲಿನ ಹಿರಿಯರನ್ನು ನೆನಪಿಸುತ್ತಾರೆ. ಕೆಲವು ಪಾತ್ರಗಳಿಗೆ ಹೆಚ್ಚು ಸ್ಕ್ರೀನ್ ಸ್ಪೇಸ್ ಇಲ್ಲದಿದ್ದರೂ, ಮನಸ್ಸಿನಲ್ಲಿ ಉಳಿಯುತ್ತವೆ.
ಛಾಯಾಗ್ರಾಹಕ ಮಹೇಂದ್ರನ್ ಜಯರಾಜು ಒಂದು ಆಹ್ಲಾದಕರ ಅನುಭವವನ್ನು ಕ್ಯಾಮರಾ ಮೂಲಕ ತೋರಿಸಿದ್ದಾರೆ. ತಂಜಾವೂರಿನ ಮತ್ತೊಂದು ಮುಖದ ಅನಾವರಣ ಅವರ ಕ್ಯಾಮರಾದಿಂದ ಆಗಿದೆ. ಜಲ್ಲಿಕಟ್ಟು ಗೂಳಿಯ ಕೋಪ ತಾಪ ಮತ್ತು ರಾತ್ರಿಯ ಅಣೆಕಟ್ಟಿನ ಮೌನವೂ ಅವರ ಕ್ಯಾಮರಾ ಕಣ್ಣಲ್ಲಿ ಗೋಚರವಾಗುತ್ತದೆ. ಗೋವಿಂದ್ ವಸಂತ ಅವರ ಹಿನ್ನೆಲೆ ಸಂಗೀತ ಚಿತ್ರದ ಕಥೆಗೆ ಪೂರಕವಾಗಿದೆ. ಒಟ್ಟಾರೆಯಾಗಿ, ಗಟ್ಟಿ ಕಥೆಯೊಂದನ್ನು ಕಟ್ಟುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.
ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.