Lio Twitter Review: ಟೈಟಲ್ ವಿವಾದದ ನಡುವೆಯೂ ತೆರೆ ಕಂಡ ಲಿಯೋ; ವಿಜಯ ಸಾಧಿಸಲಿದ್ಯಾ ದಳಪತಿ ವಿಜಯ್ ಸಿನಿಮಾ
Oct 19, 2023 11:38 AM IST
ದಳಪತಿ ವಿಜಯ್ ಅಭಿನಯದ ಲಿಯೋ ಸಿನಿಮಾ ಟ್ವಿಟ್ಟರ್ ರಿವ್ಯೂ
Lio Twitter Review: ದಳಪತಿ ವಿಜಯ್ ಅಭಿನಯದ ಲಿಯೋ ಸಿನಿಮಾ ರಿಲೀಸ್ ಆಗಿದೆ. ಅಭಿಮಾನಿಗಳು 'ಲಿಯೋ' ಫಸ್ಟ್ ಡೇ ಫಸ್ಟ್ ಶೋ ನೋಡಿ ಸಂಭ್ರಮಿಸಿದ್ದಾರೆ. ಕೆಲವರು ಸಿನಿಮಾ ನೋಡಿ ಮೆಚ್ಚಿದರೆ ಇನ್ನೂ ಕೆಲವರು ಚಿತ್ರದಲ್ಲಿ ಹೊಸತನ ಏನಿಲ್ಲ ಎಂದಿದ್ದಾರೆ.
Lio Twitter Review: ಟೈಟಲ್ ವಿವಾದದ ನಡುವೆಯೂ ದಳಪತಿ ವಿಜಯ್ ಬಹುನಿರೀಕ್ಷಿತ 'ಲಿಯೋ' ಸಿನಿಮಾ ತೆರೆ ಕಂಡಿದೆ. ಲಿಯೋ ಸಿನಿಮಾ ಅನೌನ್ಸ್ ಆದಾಗಿನಿಂದ ಬಹಳ ಹೈಪ್ ಕ್ರಿಯೇಟ್ ಮಾಡಿತ್ತು. ಸಿನಿಮಾ ರಿಲೀಸ್ ಆಗಬೇಕಾದ ಸಮಯದಲ್ಲಿ ಸಿತಾರಾ ಎಂಟರ್‌ಟೈನ್ಮೆಂಟ್ ಮಾಲೀಕ ನಾಗವಂಶಿ ಚಿತ್ರದ ಟೈಟಲ್ ನನ್ನದು ಎಂದು ಕೋರ್ಟ್ ಮೆಟ್ಟಿಲೇರಿದ್ದರು. ಸಿನಿಮಾ ರಿಲೀಸ್ ಆಗುವುದೋ ಇಲ್ಲವೋ ಎಂದು ಆತಂಕ ಪಡುತ್ತಿದ್ದ ಅಭಿಮಾನಿಗಳು ಈಗ ನಿರಾಳವಾಗಿದ್ಧಾರೆ.
ಲಿಯೋ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ
ಅಭಿಮಾನಿಗಳು 'ಲಿಯೋ' ಫಸ್ಟ್ ಡೇ ಫಸ್ಟ್ ಶೋ ನೋಡಿ ಸಂಭ್ರಮಿಸಿದ್ದಾರೆ. ಕೆಲವರು ಸಿನಿಮಾ ನೋಡಿ ಮೆಚ್ಚಿದರೆ ಇನ್ನೂ ಕೆಲವರು ಚಿತ್ರದಲ್ಲಿ ಹೊಸತನ ಏನಿಲ್ಲ ಎಂದಿದ್ದಾರೆ. ಚಿತ್ರದ ನಾಯಕ ಪಾರ್ಥಿಬನ್ (ವಿಜಯ್) ಪತ್ನಿ ಸತ್ಯ ( ತ್ರಿಶಾ) ಹಾಗೂ ಇಬ್ಬರು ಮಕ್ಕಳೊಂದಿಗೆ ಹಿಮಾಚಲ ಪ್ರದೇಶದಲ್ಲಿ ನೆಲೆಸಿರುತ್ತಾನೆ. ಆದರೆ ಒಮ್ಮೆ ಆತ ಗ್ಯಾಂಗ್‌ಸ್ಟರ್‌ಳಿಂದ ಹಲ್ಲೆಗೆ ಒಳಗಾಗುತ್ತಾನೆ. ಪಾರ್ಥಿಬನ್ ನೋಡಲು ಲಿಯೋ ದಾಸ್‌ನಂತೆ ಇರುವುದೇ ಇದಕ್ಕೆ ಕಾರಣ. ಪಾರ್ಥಿಬನ್, ಲಿಯೋ ದಾಸ್ ಮಗ ಇರಬಹುದು ಎಂಬ ಕಾರಣಕ್ಕೆ ಆತನ ಮೇಲೆ ಅಟ್ಯಾಕ್ ಜರುಗುತ್ತದೆ. ಲಿಯೋ ದಾಸ್ ಹಾಗೂ ಪಾರ್ಥಿಬನ್ ಇಬ್ಬರೂ ಒಬ್ಬರೇನಾ? ಪಾರ್ಥಿಬನ್, ಲಿಯೋ ದಾಸ್ ಮಗನೇನಾ? ಅಟ್ಯಾಕ್ ಅದಾಗಿನಿಂದ ಆತ ಹಾಗೂ ಕುಟುಂಬ ಏನೆಲ್ಲಾ ಸಮಸ್ಯೆ ಎದುರಿಸುತ್ತದೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ.
ಸೆಕೆಂಡ್ ಹಾಫ್ ಬೋರ್ ಎಂದ ನೆಟಿಜನ್ಸ್
ಹಿಮಾಚಲ ಪ್ರದೇಶದ ದೃಶ್ಯಗಳು ಕಣ್ಣಿಗೆ ಮುದ ನೀಡುತ್ತದೆ. ಫೈಟ್ ಸೀನ್‌ಗಳು ಬಹಳ ಚೆನ್ನಾಗಿದೆ. ಕಥೆಯಲ್ಲಿ ಹೊಸತನ ಇಲ್ಲವಾದರೂ ಲೋಕೇಶ್ ಕನಕರಾಜು ವಿಭಿನ್ನ ಶೈಲಿಯ ಚಿತ್ರಕಥೆ ಮೂಲಕ ಸಿನಿಮಾ ತೋರಿಸಲು ಪ್ರಯತ್ನಿಸಿದ್ದಾರೆ. ಸಿನಿಮಾವನ್ನು ಒಮ್ಮೆ ನೋಡಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನೂ ಕೆಲವರು ಚಿತ್ರದ ಸೆಕೆಂಡ್ ಹಾಫ್ ಬಹಳ ಬೋರಿಂಗ್ ಎಂದಿದ್ದಾರೆ. ಸಿನಿಪ್ರಿಯರು ಫಸ್ಟ್ ಹಾಫ್ ನೋಡಿ ಸೆಕೆಂಡ್ ಹಾಫ್‌ನಲ್ಲಿ ನಿರೀಕ್ಷೆ ಮಾಡಿದ ಟ್ವಿಸ್ಟ್ ಇಲ್ಲ. ಅನಾವಶ್ಯಕ ಫೈಟ್‌ಗಳಿವೆ. ಸಂಜಯ್ ದತ್ ಹಾಗೂ ಅರ್ಜುನ್ ಸರ್ಜಾ ಪಾತ್ರಗಳನ್ನು ಹೈಲೈಟ್ ಮಾಡಿಲ್ಲ. ಅನಿರುದ್ಧ್ ಸಂಗೀತ ಕೂಡಾ ಚಿತ್ರದಲ್ಲಿ ಹೇಳಿಕೊಳ್ಳುವಂತ ಸದ್ದು ಮಾಡಿಲ್ಲ. ಒಟ್ಟಿನಲ್ಲಿ ಸಿನಿಮಾ ನಿರೀಕ್ಷಿಸಿದ ಮಟ್ಟಕ್ಕೆ ಇಲ್ಲ ಎನ್ನುತ್ತಿದ್ದಾರೆ. ವಿಜಯ್ ಅಭಿಮಾನಿಗಳಂತೂ ಇದುವರೆಗೂ ನಾವು ನೋಡಿರುವ ಸಿನಿಮಾಗಳಲ್ಲಿ ಲಿಯೋ ದಿ ಬೆಸ್ಟ್ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಚಿತ್ರಕ್ಕೆ ಪರ ವಿರೋಧ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಲೋಕೇಶ್ ಕನಕರಾಜು ನಿರ್ದೇಶನದ ಸಿನಿಮಾ
'ಲಿಯೋ' ಚಿತ್ರವನ್ನು ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಬ್ಯಾನರ್ ಅಡಿ ಎಸ್‌ಎಸ್ ಲಲಿತ್ ಕುಮಾರ್, ಜಗದೀಶ್ ಪಳನಿಸ್ವಾಮಿ ಜೊತೆ ಸೇರಿ ನಿರ್ಮಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅನಿರುದ್ಧ್ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಲೋಕೇಶ್ ಕನಕರಾಜು ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ವಿಜಯ್, ಸಂಜಯ್ ದತ್, ತ್ರಿಷಾ, ಅರ್ಜುನ್ ಸರ್ಜಾ, ಗೌತಮ್ ವಸುದೇವ್ ಮೆನನ್, ಪ್ರಿಯಾ ಆನಂದ್ ಹಾಗೂ ಇನ್ನಿತರರು ನಟಿಸಿದ್ದಾರೆ.