ಕ್ಯಾಪ್ಟನ್ ಮಿಲ್ಲರ್ ವಿಮರ್ಶೆ: ಕ್ರಾಂತಿಕಾರಿ ಕಥೆಗೆ ಜೀವ ತುಂಬಿದ ಧನುಷ್; ಅತಿಥಿ ಪಾತ್ರದಲ್ಲಿ ಅಬ್ಬರಿಸಿದ ಶಿವಣ್ಣ
Jan 12, 2024 05:27 PM IST
ಕ್ಯಾಪ್ಟನ್ ಮಿಲ್ಲರ್ ವಿಮರ್ಶೆ
- Captain Miller review: ಅರುಣ್ ಮಾಥೇಶ್ವರನ್ ನಿರ್ದೇಶನದ ಇತಿಹಾಸ ಆಧರಿತ ಕಾಲ್ಪನಿಕ ಸಿನಿಮಾಕ್ಕೆ ಧನುಷ್ ಕ್ರಾಂತಿಕಾರ ನಾಯಕನಾಗಿ ಜೀವತುಂಬಿದ್ದಾರೆ. ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಶಿವರಾಜ್ ಕುಮಾರ್ ಅಬ್ಬರಿಸಿದ್ದಾರೆ.
Captain Miller Movie review: ಧನುಷ್ ತನ್ನ ಅಭಿನಯದ ಮೂಲಕ ಮಾತ್ರವಲ್ಲದೆ ತಾನು ಆಯ್ಕೆ ಮಾಡಿಕೊಳ್ಳುವ ಕಥೆಯ ವಿಷಯದಲ್ಲೂ ಧನುಷ್ ನಮ್ಮನ್ನು ಆಶ್ಚರ್ಯಕ್ಕೆ ದೂಡುತ್ತಾರೆ. ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲೂ ಇಂತಹದ್ದೇ ವಿಭಿನ್ನ ಆಯ್ಕೆಯನ್ನು ಗಮನಿಸಬಹುದು. ಅರುಣ್ ಮಾಥೇಶ್ವರನ್ ಎಂಬ ನಿರ್ದೇಶಕರ ಇದು ಧನುಷ್‌ಗೆ ಮೂರನೇ ಚಿತ್ರ.
ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಕಥೆಯೇನು?
ಇದು ಬ್ರಿಟಿಷ್ ಆಳ್ವಿಕೆಯ ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ನಡೆಯುವ ಕಥೆ. ಅಯ್ಯನಾರ್ ಕೊರಾನಾರ್ ಪ್ರತಿಮೆಯನ್ನು ರಹಸ್ಯವಾಗಿ ಸಮಾದಿ ಮಾಡಿದ, 600 ವರ್ಷಗಳಷ್ಟು ಹಳೆಯ ಸ್ಥಳೀಯ ಶಿವ ದೇವಾಲಯದ ಕಥೆಯನ್ನು ಅನಲೀಸನ್ ಅಕಾ ಈಸ ಅಕಾ ಕ್ಯಾಪ್ಟನ್ ಮಿಲ್ಲರ್ (ಧನುಷ್)ಗೆ ತಾಯಿ ವಿವರಿಸುತ್ತಾರೆ. ದೇಗುಲ ನಿರ್ಮಾಣದ ಸಮಯದಲ್ಲಿ ಸುತ್ತಲು ಇದ್ದ ಸ್ಥಳೀಯ ಬುಡಕಟ್ಟು ಜನರಿಗೆ ಸುತ್ತಲಿನ ಭೂಮಿಯನ್ನು ಹೇಗೆ ಉಡುಗೊರೆ ನೀಡಲಾಯಿತು. ಆದರೆ, ಜಾತಿ ಮತ್ತು ಸಾಮಾಜಿಕ ತಾರತಮ್ಯದಿಂದಾಗಿ ಆ ಕಾಲದ ರಾಜರು ಈ ಜನರಿಗೆ ದೇಗುಲಕ್ಕೆ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂಬ ಕಥೆ ಹೇಳುತ್ತಾರೆ.
ಈಸನ (ಧನುಷ್) ಅಣ್ಣ ಸೆಂಗೊಲ (ಶಿವರಾಜ್ ಕುಮಾರ್) ಸ್ವಾತಂತ್ರ ಚಳವಳಿಯಲ್ಲಿ ತೊಡಗಿರುತ್ತಾರೆ. ಅಮ್ಮ ತೀರಿಕೊಂಡ ಬಳಿಕ ಈಸ ತನ್ನ ಹಳ್ಳಿಯಲ್ಲಿ ಸುಮ್ಮನೆ ಇರುತ್ತಾನೆ. ಹಳ್ಳಿ ಜನರ ಜತೆ ಸಂಘರ್ಷವಾದ ಸಂದರ್ಭದಲ್ಲಿ ಹಳ್ಳಿಯಲ್ಲಿ ಕಳೆದುಕೊಂಡ "ಮರ್ಯಾದೆ" ಪಡೆಯಲು ಈಸ ಬ್ರಿಟಿಷ್-ಭಾರತದ ಸೇನೆಗೆ ಸೇರಲು ನಿರ್ಧರಿಸುತ್ತಾನೆ.
ಬ್ರಿಟಿಷ್ ಸೇನೆಗೆ ಸೇರುವ ಈತನ ನಿರ್ಧಾರವನ್ನು ಅಣ್ಣ ಸೆಂಗೋಲಾ (ಶಿವಣ್ಣ) ನಿರಾಕರಿಸಿದರೂ ಈಸ ಸೇನೆ ಸೇರುತ್ತಾನೆ. ಆತನ ಭವಿಷ್ಯ ಬದಲಾಗುತ್ತದೆ. ಬ್ರಿಟಿಷ್ ಸೇನೆಯ ಮಿಲ್ಲರ್ ಇಸ್ಸಾನು ಸ್ಥಳೀಯ ಹೋರಾಟಗಾರರ ವಿರುದ್ಧ ಭೀಕರ ದಾಳಿಯಲ್ಲಿ ತೊಡಗಿರುವ ಬೆಟಾಲಿಯನ್ ಭಾಗವಾಗುತ್ತಾನೆ. ಇದರಿಂದ ಆಘಾತಕ್ಕೆ ಒಳಗಾದ ಇಸ್ಸಾ ಬ್ರಿಟಿಷ್ ಸೈನ್ಯವನ್ನು ತೊರೆದು ಕ್ರಾಂತಿಕಾರಿ ಕ್ಯಾಪ್ಟನ್ ಮಿಲ್ಲರ್ ಆಗಿ ಬದಲಾಗುತ್ತಾನೆ. ಮುಂದೆ ಆತ ಏನೆಲ್ಲ ಮಾಡುತ್ತಾನೆ ಎನ್ನುವುದನ್ನು ತಿಳಿಯಲು ಸಿನಿಮಾ ನೋಡಬಹುದು.
ಕ್ಯಾಪ್ಟನ್ ಮಿಲ್ಲರ್ ಸಿನಿಮಾ ಹೇಗಿದೆ?
ನಿರ್ದೇಶಕ ಅರುಣ್ ಮಾಥೇಶ್ವರನ್ ನಿರ್ದೇಶನದ ಚಿತ್ರಗಳಲ್ಲಿ ಹಿಂಸಾಚಾರಕ್ಕೆ ಎಲ್ಲಿಲ್ಲದ ಆದ್ಯತೆ. ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲೂ ಸ್ವಾತಂತ್ರ್ಯ ಪೂರ್ವ ಭಾರತ ಮತ್ತು ಸಾಮಾಜಿಕ ಅನ್ಯಾಯ ಹಾಗೂ ಸ್ವಾತಂತ್ರ್ಯ ಹೋರಾಟದ ವಿಷಯಗಳನ್ನು ಇಟ್ಟುಕೊಂಡು ಹತ್ಯೆಗಳು ಢಾಳಾಗಿವೆ. ಚಿತ್ರದ ಉದ್ದಕ್ಕೂ ರಕ್ತಪಾತ ಸಾಮಾನ್ಯ ಸಂಗತಿಯಾಗಿದೆ. ಚಲನಚಿತ್ರವನ್ನು ಎರಡು ಅಧ್ಯಾಯವಾಗಿ ಮಾಡಲಾಗಿದೆ. ಇಸ್ಸಾನ ಪಾತ್ರದಲ್ಲಿ ಧನುಷ್ ನಟನೆ ಅಮೋಘ. ಹಳ್ಳಿಯ ಬುಡಕಟ್ಟು ವ್ಯಕ್ತಿಯಾಗಿದ್ದ ಈತ ಕ್ರಾಂತಿಕಾರಿಯಾಗಿ ಬದಲಾಗುವ ಚಿತ್ರಣವನ್ನು ನಿರ್ದೇಶಕರು ರೋಚಕವಾಗಿ ಕಟ್ಟಿಕೊಟ್ಟಿದ್ದಾರೆ.
ಧನುಷ್ ಮತ್ತು ಶಿವಣ್ಣ
ಇದು ನಿಜಾರ್ಥದಲ್ಲಿ ಧನುಷ್ ಸಿನಿಮಾ. ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತೆ ಧನುಷ್ ಅಭಿನಯಿಸಿದ್ದಾರೆ. ಈಸ ಅಕಾ ಕ್ಯಾಪ್ಟನ್ ಮಿಲ್ಲರ್ ನಮ್ಮನ್ನು ನಿರಾಶೆಗೊಳಿಸುವುದಿಲ್ಲ. ಇವರು ಈ ಪಾತ್ರದಲ್ಲಿಯೇ ಜೀವಿಸಿದ್ದಾರೆ ಎಂದರೆ ತಪ್ಪಾಗದು. ಶಿವ ರಾಜ್‌ಕುಮಾರ್ ಅವರದ್ದು ಅತಿಥಿ ಪಾತ್ರವಾಗಿದ್ದರೂ ಅವರ ಪಾತ್ರಕ್ಕೆ ಸಾಕಷ್ಟು ತೂಕವಿದೆ. ಇರುವಷ್ಟು ಹೊತ್ತು ನಟನೆಯಿಂದ ಶಿವರಾಜ್ ಕುಮಾರ್ ನಮ್ಮನ್ನು ಬೆರಗುಗೊಳಿಸುತ್ತಾರೆ. ಪ್ರಿಯಾಂಕ ಮೋಹನ್ ಅವರದ್ದು ಪ್ರಮುಖ ಪಾತ್ರವಲ್ಲ. ಆದರೆ, ಕಥೆ ಮುಂದುವರೆಯಲು ಇವರ ಪಾತ್ರ ಅಗತ್ಯ.
ತಾಂತ್ರಿಕ ವಿಷಯಗಳಲ್ಲೂ ಚಿತ್ರ ಗಮನ ಸೆಳೆಯುತ್ತದೆ. ನಿರ್ದೇಶಕ ಜಿವಿ ಪ್ರಕಾಶ್ ಕುಮಾರ್ ಹಿನ್ನೆಲೆ ಸಂಗೀತ (ಬಿಜಿಎಂ), ಕಿಲ್ಲರ್ ಹಾಡು ನಿಜವಾಗಿಯೂ ಪ್ಲಸ್ ಪಾಯಿಂಟ್. ಇದು ಚಿತ್ರದ ಹೈಲೈಟ್‌ಗಳಲ್ಲಿ ಒಂದು ಎಂದರೆ ತಪ್ಪಾಗದು. ಸಿದ್ಧಾರ್ಥ ನುನಿ ಛಾಯಾಗ್ರಹಣ ಗಮನ ಸೆಳೆಯುವ ಇನ್ನೊಂದು ಅಂಶ.