HanuMan Review: ಅಂಜನಾದ್ರಿ ಎಂಬ ಕಾಲ್ಪನಿಕ ಊರಲ್ಲಿ ಸೂಪರ್‌ಹೀರೋ ಸಾಹಸ, ಹನುಮಾನ್ ಸಿನಿಮಾ ವಿಮರ್ಶೆ
HanuMan Movie review: ತೆಲುಗು ನಟ ತೇಜ ಸಜ್ಜ ನಾಯಕನಟನಾಗಿರುವ ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಇಂದು ಬಿಡುಗಡೆಯಾಗಿರುವ ಹನುಮಾನ್ ಸಿನಿಮಾದ ವಿಮರ್ಶೆ ಇಲ್ಲಿದೆ. ವಿಮರ್ಶಕರು: ನಿತೀಶಾ ನ್ಯಾಯಪತಿ (ಹಿಂದೂಸ್ತಾನ್ ಟೈಮ್ಸ್- ಎಂಟರ್‌ಟೇನ್‌ಮೆಂಟ್)
HanuMan Cinema review: ಹನುಮಾನ್ ಸಿನಿಮಾಕ್ಕಿಂತ ಮೊದಲು ನಿರ್ದೇಶಕ ಪ್ರಶಾಂತ್ ವರ್ಮಾ ಕೇವಲ ಮೂರು ಸಿನಿಮಾ ಮಾಡಿದ್ದರು. ಪ್ರತಿಬಾರಿಯೂ ಭಿನ್ನವಾದ ಸಿನಿಮಾ ಮಾಡಿರುವುದು ಗಮನಿಸಬೇಕಾದ ಸಂಗತಿ. ತೇಜ ಸಜ್ಜಾ, ವರಲಕ್ಷ್ಮಿ ಶರತ್ ಕುಮಾರ್, ಅಮೃತಾ ಅಯ್ಯರ್ ಮತ್ತು ವಿನಯ್ ರೈ ನಟನೆಯ ಹನುಮಾನ್ ಸಿನಿಮಾವು ಹೊಸ ಬಗೆಯ ಸಿನಿಮಾ ಅನುಭವ ನೀಡುತ್ತದೆ. ಸಂಕ್ರಾಂತಿ ಹಬ್ಬದ ಸಮಯದಲ್ಲಿ ಬಿಡುಗಡೆಯಾದ ಈ ಸಿನಿಮಾ ಗಮನ ಸೆಳೆಯುವಂತೆ ಇದೆ.
ಹನುಮಾನ್ ಸಿನಿಮಾದ ಕಥೆಯೇನು?
ಅಂಜನಾದ್ರಿ ಎಂಬ ಕಾಲ್ಪನಿಕ ಹಳ್ಳಿಯಲ್ಲಿ ತನ್ನ ಸಹೋದರಿ ಅಂಜಮ್ಮ (ವರಲಕ್ಷ್ಮಿ) ಜತೆ ಜೀವನ ನಡೆಸುತ್ತಿರುವ ಮತ್ತು ಸಣ್ಣಪುಟ್ಟ ಕಳ್ಳತನ ಮಾಡಿಕೊಂಡು ಇರುವ ವ್ಯಕ್ತಿಯೇ ಈ ಹನುಮಂತು (ತೇಜ). ಈ ಹಳ್ಳಿ ಅಭಿವೃದ್ಧಿಯಿಂದ ದೂರ. ಕಣ್ಮನ ಸೆಳೆಯುವ ಪ್ರಕೃತಿ ಸೌಂದರ್ಯ ಮತ್ತು ದೊಡ್ಡ ಹನುಮಂತನ ಪ್ರತಿಮೆ ಪ್ರಮುಖ ಆಕರ್ಷಣೆ. ಹನುಮಂತುಗೆ ತನ್ನ ಜೀವನದಲ್ಲಿ ಅಗಾಧ ಸಾಧನೆ ಮಾಡುವಂತಹ ಒಂದು ಸಂದರ್ಭ ಎದುರಾಗುತ್ತದೆ. ಅದು ಮೈಕಲ್ ಮತ್ತು ಆತನ ಸ್ನೇಹಿತ ಸಿರಿಯನ್ನು ಸೆಳೆಯುತ್ತದೆ. ಇದಾದ ಬಳಿಕ ಹಲವು ಘಟನೆಗೂ ನಡೆಯುತ್ತವೆ. ಇದು ಅಂಜನಾದ್ರಿ ಮತ್ತು ಜಗತ್ತನ್ನು ತೊಂದರೆಗೆ ಸಿಲುಕಿಸುತ್ತದೆ. ಈ ಸವಾಲನ್ನು ಎದುರಿಸುವ ಕಥೆಯೇ ಹನುಮಂತು ಸಿನಿಮಾದ ಜೀವಾಳ.
ಹನುಮಾನ್ ಸಿನಿಮಾ ವಿಮರ್ಶೆ
ಇದರ ಕಥೆ ಕೇಳಿದರೆ ಇದ್ಯಾವುದೋ ಸೂಪರ್ ಹೀರೋ ಕಥೆಯಂತೆ ಭಾಸವಾಗಬಹುದು. ಒಬ್ಬ ಸಾಮಾನ್ಯ ವ್ಯಕ್ತಿ ಇರುತ್ತಾನೆ. ಮಹಾಶಕ್ತಿಯನ್ನು ಆತ ಪಡೆಯುವ ತನಕ ಯಾರೂ ಆತನನ್ನು ಕ್ಯಾರೇ ಮಾಡುವುದಿಲ್ಲ. ಅವನಿಗೆ ಮಹಾಶಕ್ತಿ ಇರುವ ಸಂಗತಿ ಗೊತ್ತಾದಗ ಸಿನಿಮಾವೇ ಬದಲಾಗುತ್ತದೆ. ಒಟ್ಟಾರೆ ಇದು ಮನರಂಜನೆಗೆ ಅಡ್ಡಿಯಿಲ್ಲದ ಸಿನಿಮಾ. ಎಂಜಾಯ್ ಮಾಡಬಹುದಾದ ಶಕ್ತಿ ಪ್ರದರ್ಶನ.
ಹನುಮಾನ್ ಸಿನಿಮಾದಲ್ಲಿ ಇಷ್ಟವಾಗುವ ಸಂಗತಿಗಳು
ಹನುಮಾನ್ ಸಿನಿಮಾದ ಕೆಲವೊಂದು ಕ್ಷಣಗಳು ಇಷ್ಟವಾಗುತ್ತದೆ. ಚಿತ್ರದಲ್ಲಿ ಶ್ರೀನು, ಸತ್ಯ , ಕೋಟಿ ಮುಂತಾದವರು ಉಲ್ಲಾಸದ ಕ್ಷಣಗಳನ್ನು ಸೃಷ್ಟಿಸುತ್ತಾರೆ. ಹನುಮಂತುವಿಗೆ ಮಹಾಶಕ್ತಿ ದೊರಕಿದ ಬಳಿಕ ಚಿತ್ರ ವೇಗವನ್ನು ಪಡೆಯುತ್ತದೆ. ತೆಲುಗಿನಲ್ಲಿ ಈಗಾಗಲೇ ಮಹೇಶ್ ಬಾಬು, ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಮತ್ತು ಬಾಲಕೃಷ್ಣ ಅವರಂತಹ ನಟರೇ ಮಹಾಶಕ್ತಿ ಹೊಂದಿರುವರಂತೆ ಇದ್ದಾರೆ. ಇಂತಹ ಸಂದರ್ಭದಲ್ಲಿ ಸೂಪರ್‌ಹೀರೋ ಚಿತ್ರ ಸಿದ್ಧಪಡಿಸುವುದು ಕಷ್ಟ ಎಂದು ಹನುಮಾನ್‌ನಿಂದ ಕಂಡುಕೊಳ್ಳಬಹುದು.
ಭಗವಾನ್ ಹನುಮಾನ್‌ನಂತೆ ತನ್ನ ಸ್ವಂತ ಶಕ್ತಿಯನ್ನು ಅರಿತುಕೊಳ್ಳದ ದುರ್ಬಲನ ಕಥೆಯೇ ಈ ಹನುಮಾನ್ ಸಿನಿಮಾ. ತನ್ನ ಸಹೋದರಿ ಜತೆಗಿನ ಬಾಂಧವ್ಯ, ಆಕೆಯ ಪರವಾಗಿ ಹೋರಾಟಕ್ಕೆ ನಿಂತಾಗ ಸಿನಿಪ್ರೇಕ್ಷಕರು ಸಿಳ್ಳೆ ಹೊಡೆಯಲು ಹಿಂಜರಿಯುವುದಿಲ್ಲ.
ಸಿನಿಮಾದಲ್ಲಿ ವರ್ಕ್ ಆಗದ ಸಂಗತಿಗಳು
ಮೈಕಲ್ ಎಂಬ ಅಪಾಯಕಾರಿ ವಿಲನ್‌ನನ್ನು ಆರಂಭದಲ್ಲಿ ತೋರಿಸಿದ ಬಳಿಕ ಸಿನಿಮಾವು ಮೀನಾಕ್ಷಿ (ಅಮೃತ) ಜತೆಗಿನ ಪ್ರೇಮಕಥೆಯತ್ತ ವಾಲುತ್ತದೆ. ಇದೇ ಸಮಯದಲ್ಲಿ ಇನ್ನೊಬ್ಬ ವಿಲನ್ (ರಾಜ್ ದೀಪಕ್ ಶೆಟ್ಟಿ) ಬರುತ್ತಾನೆ. ಮೈಕಲ್‌ಗೆ ಹೆಚ್ಚಿನ ಸಮಯ ನೀಡಬೇಕಿತ್ತು ಅನಿಸುತ್ತದೆ. ಆದರೆ, ಹಾಗೆ ಆಗುವುದಿಲ್ಲ. ಅಂಜನಾದ್ರಿಯನ್ನು ಪರಿಚಯಿಸುವ ಸಂದರ್ಭದಲ್ಲಿ ಡ್ರೋನ್‌ನಂತಹ ಉನ್ನತ ಶಾಟ್‌ಗಳು ಗಮನ ಸೆಳೆಯುತ್ತದೆ. ಆದರೆ, ಇಂತಹ ಉತ್ತಮ ವಿಎಫ್‌ಎಕ್ಸ್‌ಗಳ ನಡುವೆ ಕೆಲವೊಂದು ಸೀನ್‌ಗಳು ದುರ್ಬಲ, ಪೇಲವವಾಗಿ ಕಾಣಿಸುತ್ತದೆ.
ಪ್ರಶಾಂತ್ ಅವರು ಅಂಜನಾದ್ರಿ ಎಂಬ ಕಾಲ್ಪನಿಕ ಜಗತ್ತಿಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ದಾಶರಧಿ ಶಿವೇಂದ್ರ ಅವರ ಛಾಯಾಗ್ರಹಣ ಮಾತ್ರವಲ್ಲದೆ ಅನುದೀಪ್ ದೇವ್, ಗೌರ ಹರಿ ಮತ್ತು ಕೃಷ್ಣ ಸೌರಭ್ ಅವರ ಸಂಗೀತವೂ ಇದಕ್ಕೆ ನೆರವಾಗಿದೆ. ಸಂಕ್ರಾಂತಿ ಹಬ್ಬದ ಸಮಯದಲ್ಲಿ ಕುಟುಂಬ ಸಮೇತ ವಿಶೇಷವಾಗಿ ಮಕ್ಕಳ ಖುಷಿಗಾಗಿ ಚಿತ್ರಮಂದಿರಕ್ಕೆ ಹೋಗುವವರಿಗೆ ಹನುಮಾನ್ ಸಿನಿಮಾ ಉತ್ತಮ ಆಯ್ಕೆಯಾಗಬಹುದು. ಜೈ ಹನುಮಾನ್ ಮತ್ತು ಅಧೀರ ಸೀಕ್ವೆಲ್‌ನೊಂದಿಗೆ ಈ ಸಿನಿಮಾದ ಮುಂದಿನ ಭಾಗ ಹೇಗೆ ಇರುತ್ತದೆ ಎಂದು ಕಾದುನೋಡಬೇಕಿದೆ.
ಕನ್ನಡದಲ್ಲಿ ಬಿಗ್‌ಬಾಸ್, ಸೀರಿಯಲ್, ಸಿನಿಮಾ, ಒಟಿಟಿ ಸುದ್ದಿ ಲೇಖನಗಳನ್ನು ಓದಲು ಇಲ್ಲಿ ಎಚ್‌ಟಿ ಕನ್ನಡ ಮನರಂಜನೆ ವಿಭಾಗಕ್ಕೆ ಭೇಟಿ ನೀಡಿ.