Jailer: ಜೈಲರ್ ಚಿತ್ರದಲ್ಲಿ ಶಿವಣ್ಣನ ಕೈಗೆ ಸಿಗರೇಟು ಯಾಕ್ರಿ, ಕ್ರೌರ್ಯವೂ ಅತಿಯಾಯ್ತು, ರಜನಿಕಾಂತ್ ಸಿನಿಮಾಕ್ಕೆ ಸೆನ್ಸಾರ್ ಕತ್ತರಿ
Jul 31, 2023 11:08 AM IST
ತಮಿಳು ಜೈಲರ್ ಸಿನಿಮಾ
- Jailer Censor: ರಜನಿಕಾಂತ್ ನಟನೆಯ ಜೈಲರ್ ಚಿತ್ರವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿದ್ದು, ಹಲವು ಕಡೆ ಕತ್ತರಿ ಪ್ರಯೋಗಕ್ಕೆ ಸೂಚಿಸಿದೆ ಎನ್ನಲಾಗಿದೆ. ಈ ಚಿತ್ರದಲ್ಲಿ ಡಾ. ಶಿವರಾಜ್ ಕುಮಾರ್ ಮತ್ತು ಮೋಹನ್‌ಲಾಲ್ ಕೂಡ ನಟಿಸಿದ್ದು, ಬಹುನಿರೀಕ್ಷೆ ಮೂಡಿಸಿದೆ.
ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಈ ವರ್ಷ ಬಹುನಿರೀಕ್ಷಿತ ಚಿತ್ರ. ಈ ಚಿತ್ರವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿದ್ದು, ಅಲ್ಲಲ್ಲಿ ಕತ್ತರಿ ಪ್ರಯೋಗಕ್ಕೆ ಸೂಚಿಸಿದೆ. ಈ ಸಿನಿಮಾದಲ್ಲಿ ಕನ್ನಡ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕೂಡ ನಟಿಸಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ರಜನಿಕಾಂತ್ ಮತ್ತು ಶಿವರಾಜ್ ಕುಮಾರ್ ಸಿಗರೇಟು ಸೇದುವ ದೃಶ್ಯವಿದೆ ಎಂದು ಹೇಳಲಾಗಿದೆ. ಈ ದೃಶ್ಯದ ಕುರಿತು ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದ್ದು, ಕ್ಲೋಸ್‌ಅಪ್‌ನಲ್ಲಿ ದೃಶ್ಯ ತೋರಿಸಬಾರದೆಂದು ಸೂಚಿಸಿದೆ ಎನ್ನಲಾಗಿದೆ.
ಸೆನ್ಸಾರ್ ಮಂಡಳಿಯು ಈ ಸಿನಿಮಾಕ್ಕೆ U (A) ಸರ್ಟಿಫಿಕೇಟ್ ನೀಡಿದೆ. ಸಿನಿಮಾ ಅವಧಿಯು 2 ಗಂಟೆ 48 ನಿಮಿಷ 46 ಸೆಕೆಂಡ್ ಇರಲಿದೆ. ಸೆನ್ಸಾರ್ ಮಂಡಳಿಯು ಸುಮಾರು 11 ಸೀನ್‌ಗಳನ್ನು ಬದಲಾಯಿಸಲು ಸೂಚಿಸಿದೆ ಎನ್ನಲಾಗಿದೆ. ಕೆಲವೊಂದು ಋಶ್ಯಗಳ ಉದ್ದವನ್ನು ಕಡಿಮೆ ಮಾಡುವಂತೆ ಮತ್ತು ಸಿನಿಮಾದಲ್ಲಿರುವ ಕ್ರೌರ್ಯವನ್ನು ಕಡಿಮೆ ಮಾಡುವಂತೆ ಸೆನ್ಸಾರ್ ಮಂಡಳಿ ಸಲಹೆ ನೀಡಿದೆ ಎಂದು ವರದಿಗಳು ತಿಳಿಸಿವೆ. ಈ ಸಿನಿಮಾದಲ್ಲಿ ಮೋಹನ್‌ಲಾಲ್ ಕೂಡ ನಟಿಸಿದ್ದು, ಅವರ ಡೈಲಾಗ್‌ನ ಮಲೆಯಾಳಂ ಪದವೊಂದನ್ನು ಮ್ಯೂಟ್ ಮಾಡಲು ಕೂಡ ತಿಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ರಜನಿಕಾಂತ್ ಈ ಸಿನಿಮಾದಲ್ಲಿ ಮುತ್ತುವೇಲ್ ಪಾಂಡಿಯನ್ ಪಾತ್ರವನ್ನು ನಿರ್ವಹಿಸಿದ್ದಾರೆ. ಮೋಹನ್ ಲಾಲ್ ಅವರು ಮ್ಯಾಥ್ಯೂ ಪಾತ್ರವನ್ನು ನಿರ್ವಹಿಸಿದ್ದಾರೆ. ಸೆಂಚುರಿಸ್ಟಾರ್ ಶಿವರಾಜ್‌ಕುಮಾರ್ ಅವರು ನರಸಿಂಹ ಎಂಬ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗಿದೆ. ಈ ಮೂವರು ಕ್ಲೈಮ್ಯಾಕ್ಸ್‌ನಲ್ಲಿ ಸಿಗರೇಟು ಸೇದುವ ದೃಶ್ಯವಿದ್ದು, ಆ ದೃಶ್ಯವನ್ನು ತೆಗೆದುಹಾಕಲು ಸೆನ್ಸಾರ್ ಮಂಡಳಿ ಸೂಚಿಸಿದೆ ಎನ್ನಲಾಗಿದೆ.
ರಜನೀಕಾಂತ್ ಮತ್ತು ಮೋಹನ್ ಲಾಲ್ ಕಾಂಬಿನೇಷನ್ ಒಂದು ಸಿನಿಮಾದಲ್ಲಿ ಮೊದಲ ಬಾರಿಗೆ ಜೋಡಿಯಾಗಿದ್ದಾರೆ. ಹೀಗಾಗಿ ಇದು ಹೊಸ ಹವಾ ಕ್ರಿಯೆಟ್ ಮಾಡಿದೆ. ಕನ್ನಡದ ಶಿವರಾಜ್ ಕುಮಾರ್ ನಟಿಸಿರುವುದರಿಂದ ಕರ್ನಾಟಕದಲ್ಲಿಯೂ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಇದು ರಜನಿಕಾಂತ್ ಅವರ 169 ನೇ ಚಿತ್ರ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸಿದ್ದಾರೆ. ಚಿತ್ರವು ಆಗಸ್ಟ್ 10 ರಂದು ಥಿಯೇಟರ್‌ಗೆ ಆಗಮಿಸುವ ನಿರೀಕ್ಷೆಯಿದೆ. ಸ್ಟಂಟ್ ಶಿವ ಸಾಹಸ, ಕಾರ್ತಿಕ್ ಕಣ್ಣನ್ ಛಾಯಾಗ್ರಹಣವಿದೆ. ರಮ್ಯಾ ಕೃಷ್ಣನ್, ವಿನಾಯಕನ್, ಜಾಕಿ ಶ್ರಾಫ್ ಮತ್ತು ಸುನೀಲ್ ಮುಂತಾದ ಕಲಾವಿದರು ನಟಿಸಿದ್ದಾರೆ. ರಜನಿಕಾಂತ್ ನಾಯಕನಾದರೆ, ತಮನ್ನಾ ಭಾಟಿಯಾ ನಾಯಕಿಯಾಗಿದ್ದಾರೆ. ಈಗಾಗಲೇ ಕಾವಲಯ್ಯ ಎಂಬ ಜೈಲರ್ ಹಾಡು ಸಾಕಷ್ಟು ಜನ ಮೆಚ್ಚುಗೆ ಪಡೆದಿದೆ.
ಜೈಲರ್ ಚಿತ್ರದ ಕತೆ ಏನು ಎಂಬ ಪ್ರಶ್ನೆಗೆ ಇನ್ನೂ ಉತ್ತರ ದೊರಕಿಲ್ಲ. ಕಥೆಯ ಬಗ್ಗೆ ಯಾವುದೇ ಸುಳಿವು ನೀಡದೆ ಸಿನಿಮಾದ ಬಗ್ಗೆ ಕ್ರೇಜ್ ಹೆಚ್ಚಿಸುವಂತೆ ಚಿತ್ರತಂಡ ಮಾಡಿದೆ. ಜೈಲರ್ ಎಂಬ ಹೆಸರು ಇರುವುದರಿಂದ ರಜನಿಕಾಂತ್ ಈ ಚಿತ್ರದಲ್ಲಿ ಜೈಲರ್ (ಪೊಲೀಸ್ ಅಧಿಕಾರಿ)ಯಾಗಿರುವ ಸಾಧ್ಯತೆಯಿದೆ. ಇತ್ತೀಚಿನ ವರ್ಷಗಳಲ್ಲಿ ರಜನಿಕಾಂತ್ ಸಿನಿಮಾಗಳು ಅಂದುಕೊಂಡಷ್ಟು ಸದ್ದು ಮಾಡಿಲ್ಲ. ಆದರೆ, ಜೈಲರ್ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.