800 The Movie Review: ಸಂಘರ್ಷದ ನಡುವೆಯೇ ಸಾಧನೆಯ ಶಿಖರ ಏರಿದ; ಮುತ್ತಯ್ಯ ಮುರಳೀಧರನ್ ಬಯೋಪಿಕ್ 800 ಹೇಗಿದೆ?
Oct 06, 2023 07:11 AM IST
800 The Movie Review: ಸಂಘರ್ಷದ ನಡುವೆಯೇ ಸಾಧನೆಯ ಶಿಖರ ಏರಿದ; ಮುತ್ತಯ್ಯ ಮುರಳೀಧರನ್ ಬಯೋಪಿಕ್ 800 ಚಿತ್ರ ಹೇಗಿದೆ?
- ಶ್ರೀಲಂಕಾ ಕ್ರಿಕೆಟ್ ದಂತಕತೆ ಮುತ್ತಯ್ಯ ಮುರಳೀಧರನ್ ಜೀವನ ಆಧರಿತ 800 ಶೀರ್ಷಿಕೆಯ ಸಿನಿಮಾ ಇಂದು (ಅ.6) ಬಿಡುಗಡೆ ಆಗಿದೆ. ಜನಾಂಗೀಯ ಸಂಘರ್ಷದ ನಡುವೆಯೂ ಸಾಧನೆಯ ಶಿಖರ ಏರಿದ ಸ್ಪಿನ್ ಮಾಂತ್ರಿಕನ ಕ್ರಿಕೆಟ್ ಜೀವನ ಮತ್ತು ಅದರಾಚೆಗಿನ ಬದುಕಿನ ಚಿತ್ರಣವನ್ನೂ ಈ ಚಿತ್ರದಲ್ಲಿ ಭರ್ತಿಯಾಗಿ ತುಂಬಿಸಿದ್ದಾರೆ ನಿರ್ದೇಶಕ ಶ್ರೀಪತಿ.
800 The Movie Review: ಶ್ರೀಲಂಕನ್ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರ ಜೀವನ ಆಧರಿತ 800 ದಿ ಮೂವಿ ಸಿನಿಮಾ ಇಂದು (ಅ. 6) ರಿಲೀಸ್ ಆಗಿದೆ. ಎಂ.ಎಸ್ ಶ್ರೀಪತಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಮಧುರ್ ಮಿತ್ತಲ್ ಮುತ್ತಯ್ಯ ಮುರಳೀಧರನ್ ಅವರ ಪಾತ್ರ ನಿಭಾಯಿಸಿ ಅಚ್ಚರಿ ಮೂಡಿಸಿದ್ದಾರೆ. ಕ್ರೀಡೆ ಆಧರಿತ ಸಿನಿಮಾ ಎಂದ ತಕ್ಷಣ ಅಲ್ಲಿ ಒಬ್ಬ ವ್ಯಕ್ತಿಯ ಜೀವನದ ಕಥೆ ಕಣ್ಣ ಮುಂದೆ ಬಂದು ನಿಲ್ಲುತ್ತದೆ. 800 ಚಿತ್ರದಲ್ಲೂ ಅದೇ ಆಗಿದೆ. ಮುತ್ತಯ್ಯ ಮುರಳೀಧರ್ ಹೇಗೆ ಒಬ್ಬ ದಂತಕಥೆಯಾದ ಎಂಬ ಎಳೆಯನ್ನು ನಿರ್ದೇಶಕರು ಸಿನಿಮಾ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಜತೆಗೊಂದಿಷ್ಟು ಮಸಾಲೆ ರೂಪದಲ್ಲಿ, ಆರಂಭದ ಏಳುಬೀಳು ಸಹ ಈ ಸಿನಿಮಾದಲ್ಲಿದೆ.
ಸಿನಿಮಾ ಶುರುವಾಗುವುದೇ ತಮಿಳರು ಮತ್ತು ಸಿಂಹಳರ ನಡುವಿನ ಭಿನ್ನಮತದಿಂದ. ಅಲ್ಲಿ ರಾಜಕೀಯ ಮಧ್ಯಪ್ರವೇಶಿಸುತ್ತದೆ. ಎರಡೂ ಗುಂಪಿನ ನಡುವೆ ಸಮರವೇ ನಡೆದು ಹೋಗುತ್ತದೆ. ಹೀಗೆ ಸಾಗುವ ಕಥೆಯಲ್ಲಿ ಮುತ್ತಯ್ಯ ಮುರಳೀಧರನ್ ಕ್ರಿಕೆಟ್ ಪ್ರೀತಿಯೂ ಶ್ರೀಲಂಕಾದಲ್ಲಿ ಚಿಗುರುತ್ತದೆ. ಸಮಸ್ಯೆಗಳನ್ನೇ ಹೊತ್ತು ಸಾಗಿದ ಯುವಕ ಹೇಗೆ ಕೊನೆಗೂ ಸಾಧನೆಯ ಮೈಲಿಗಲ್ಲನ್ನು ತಲುಪಿದ ಎಂಬುದೇ 800 ಚಿತ್ರದ ಒಂದೆಳೆ. ಕ್ರೀಡೆ ಆಧರಿತ ಚಿತ್ರಗಳ ಹಿಂದಿರುವ ಮುಖ್ಯ ಉದ್ದೇಶವೇ ಅದು. ಮುತ್ತಯ್ಯ ಮುರಳೀಧರನ್ ಅನ್ನೋ ತಮಿಳು ಮೂಲದ ಶ್ರೀಲಂಕನ್ ಕ್ರಿಕೆಟಿಗನ ಜೀವನದ ಏಳುಬೀಳಿನ, ಅವಮಾನದ, ಸಂಘರ್ಷದ ಕಥಾನಕವೂ 800 ಸಿನಿಮಾದಲ್ಲಿ ಸೇರಿದೆ.
ಶ್ರೀಲಂಕಾದಲ್ಲಿ ಜನಾಂಗೀಯ ಸಂಘರ್ಷದ ಹಿನ್ನೆಲೆಯಲ್ಲಿ ಅಲ್ಲಿನ ಚಹಾ ತೋಟದಲ್ಲಿ ಕೆಲಸ ಮಾಡುವ ಮುತ್ತಯ್ಯ, ತನ್ನ ಮಗನನ್ನು ಕ್ರಿಶ್ಚಿಯನ್ ಶಾಲೆಗೆ ಸೇರಿಸುತ್ತಾನೆ. ಅಲ್ಲಿ ಕ್ರಿಕೆಟ್ ಮೇಲೆ ಆಕರ್ಷಿತನಾಗಿ ಆರನೇ ವಯಸ್ಸಿಗೇ ಬಾಲ್ ಹಿಡಿದು ಕ್ರಿಕೆಟ್ ಅಂಗಳ ಪ್ರವೇಶಿಸುತ್ತಾನೆ. ಸಿಂಹಳೀಯರ ಪ್ರಾಬಲ್ಯದ ನಡುವೆಯೇ ಒಬ್ಬನೇ ತಮಿಳಿಗನಾಗಿ ಮುರಳಿ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದ ರೀತಿಯೇ ಒಂದು ಅಚ್ಚರಿ. ಅಲ್ಲಿಂದ ಶುರುವಾಗುವ ಈ ಪ್ರಯಾಣ, ಮುಂದೆ ಹತ್ತು ಹಲವು ರೋಚಕತೆಯ ನಡುವೆಯೇ ನೋಡುಗನನ್ನು ಕರೆದೊಯ್ಯುತ್ತದೆ.
ಮುಂದೆ ಶ್ರೀಲಂಕಾ ತಂಡಕ್ಕೆ ಸೇರಿದ ಬಳಿಕ ಮುತ್ತಯ್ಯ ಮುರಳೀಧರನ್ ಅವರನ್ನು ಸುತ್ತುವರೆದ ಸಮಸ್ಯೆಗಳೇನು? ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ ಬಳಿಕ ಅಲ್ಲಿ ತಂಡದಿಂದ ಸ್ಥಾನ ಕಳೆದುಕೊಂಡಿದ್ದೇಕೆ? ಮತ್ತೆ ಶ್ರೀಲಂಕಾ ತಂಡದಲ್ಲಿ ಸ್ಥಾನ ಪಡೆದಿದ್ದು ಹೇಗೆ? ಶ್ರೀಲಂಕಾದಲ್ಲಿ ತಮಿಳರ ವಿರುದ್ಧದ ತಾರತಮ್ಯದಿಂದ ಮುರಳೀಧರನ್ ಮೇಲೂ ತುಂಬ ಪರಿಣಾಮ ಬೀರಿತು. ಆಗ ಶ್ರೀಲಂಕಾ ತಂಡದಲ್ಲಿ ತಮಗೆ ಎದುರಾದ ಅವಮಾನಗಳನ್ನು ಸಹಿಸಿಕೊಂಡು ಹೇಗೆ ಮಿಂಚಿದರು?ಶ್ರೀಲಂಕಾದಲ್ಲಿ ಎಲ್‌ಟಿಟಿಇ ವಿಚಾರದಲ್ಲಿ ಪ್ರಭಾಕರನ್‌ಗೆ ಮುರಳೀಧರನ್ ಪ್ರತಿಕ್ರಿಯೆ ಏನಾಗಿತ್ತು? ಹೀಗೆ ಯಾರಿಗೂ ಗೊತ್ತಿಲ್ಲದ ಒಂದಷ್ಟು ಪ್ರಶ್ನೆಗಳಿಗೆ 800 ಚಿತ್ರದಲ್ಲಿ ಉತ್ತರ ನೀಡಿದ್ದಾರೆ ಮುತ್ತಯ್ಯ ಮುರಳೀಧರನ್.
ಮುತ್ತಯ್ಯ ಮುರಳೀಧರನ್ ಪಾತ್ರದಲ್ಲಿ ಮಧುರ್ ಮಿತ್ತಲ್ ಅವರಿಂದ ಅತ್ಯದ್ಭುತ ನಟನೆ ಸಂದಾಯವಾಗಿದೆ. ನೋಡುಗನಿಗೆ ಪರದೆಯ ಮೇಲೆ ಮಧುರ್ ಮಿತ್ತಲ್ ಕಾಣಿಸುವುದೇ ಇಲ್ಲ ಎನ್ನುವಂತೆ ಮುತ್ತಯ್ಯ ಮುರಳೀಧರನ್ ಆಗಿಯೇ ಜೀವಿಸಿದ್ದಾರೆ. ಇದೆಲ್ಲದರಾಚೆಗೆ ಚಿತ್ರದ ಕಥೆ ಸಾಗುವ ಪರಿ ಕೊಂಚ ನಿಧಾನ. ಚಿತ್ರಕಥೆಯನ್ನು ಮತ್ತಷ್ಟು ಮೊನಚು ಮಾಡಿ, ಬೇಡದ ದೃಶ್ಯಕ್ಕೆ ಕತ್ತರಿ ಹಾಕಿದ್ದರೆ, ಚಿತ್ರದ ಓಟ ಹೆಚ್ಚುತ್ತಿತ್ತು. ಕ್ಯಾಮರಾ ಕೆಲಸ ಮತ್ತು ಹಿನ್ನೆಲೆ ಸಂಗೀತ ಕಥೆಗೆ ಬೆನ್ನೆಲುಬಾಗಿ ನಿಂತಿವೆ. ಪಾತ್ರಧಾರಿಗಳಿಂದಲೂ ನಟನೆಯ ವಿಚಾರದಲ್ಲಿ ಪೂರ್ಣಾಂಕ ಪ್ರಾಪ್ತವಾಗಿದೆ.