Actor Abbas: ಭಾರತದ ರೊಮ್ಯಾಂಟಿಕ್ ಸಿನಿಮಾ ನಟ ನ್ಯೂಜಿಲೆಂಡ್‌ನಲ್ಲಿ ಟ್ಯಾಕ್ಸಿ ಚಾಲಕ, ನಾನು ಸತ್ತಿಲ್ಲ ಬದುಕಿದ್ದೇನೆ ಎಂದ ಅಬ್ಬಾಸ್ ಆಲಿ
Jul 21, 2023 05:41 PM IST
Actor Abbas: ಭಾರತದ ರೊಮ್ಯಾಂಟಿಕ್ ಸಿನಿಮಾ ನಟ ನ್ಯೂಜಿಲೆಂಡ್‌ನಲ್ಲಿ ಟ್ಯಾಕ್ಸಿ ಚಾಲಕ
- Tamil actor Abbas Life: ನ್ಯೂಜಿಲೆಂಡ್‌ನಲ್ಲಿ ಟ್ಯಾಕ್ಸಿ ಚಾಲಕ, ಮೆಕ್ಯಾನಿಕ್ ಆಗಿ ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ಅಬ್ಬಾಸ್ ಆಲಿ, ಹಿಂದೊಮ್ಮೆ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿದ್ದರು. ತಮಿಳು ಚಿತ್ರರಂಗದ ರೊಮ್ಯಾಂಟಿಕ್ ನಟ ಈಗ ತನ್ನ ಬದುಕಿನ ಕುರಿತು ಮಾತನಾಡಿದ್ದಾರೆ.
ತಮಿಳು ಸಿನಿಮಾ ಪ್ರಿಯರಿಗೆ ಅಬ್ಬಾಸ್ ಎಂಬ ಹೆಸರು ಪರಿಚಯ ಇರಬಹುದು. ಸಾಕಷ್ಟು ಜಾಹೀರಾತುಗಳಲ್ಲಿಯೂ ಅಬ್ಬಾಸ್ ಫೇಮಸ್ಸು. ತಮಿಳು ಮಾತ್ರವಲ್ಲ ಸ್ಯಾಂಡಲ್‌ವುಡ್‌ನಲ್ಲಿಯೂ ಅಬ್ಬಾಸ್ ನಟಿಸಿದ್ದು, ಸಾಕಷ್ಟು ಜನರ ಮೆಚ್ಚುಗೆಗೂ ಪಾತ್ರರಾಗಿದ್ದರು. ಯಾರೀ ಅಬ್ಬಾಸ್ ಎಂದು ಯೋಚಿಸಿದ್ದೀರಾ, ಹಲೋ, ಅಪ್ಪು ಅಂಡ್ ಪಪ್ಪು, ಶಾಂತಿ ಶಾಂತಿ ಶಾಂತಿ, ಸವಾರಿ 2 ಚಿತ್ರಗಳಲ್ಲಿ ಇವರು ನಟಿಸಿದ್ದರು. ಅಂತಹ ಅಬ್ಬಾಸ್ ಈಗ ನ್ಯೂಜಿಲೆಂಡ್‌ನಲ್ಲಿ ಹೊಟ್ಟೆಪಾಡಿಗಾಗಿ ಟ್ಯಾಕ್ಸಿ ಚಾಲಕರಾಗಿದ್ದಾರೆ. ಮೆಕ್ಯಾನಿಕ್ ಕೆಲಸವನ್ನೂ ಮಾಡುತ್ತಿದ್ದಾರೆ. ಈ ಅಬ್ಬಾಸ್ ಕುರಿತು ಈಗಾಗಲೇ ಹಲವು ಸುದ್ದಿಗಳನ್ನು ಓದಿರುವಿರಿ. ನಮ್ಮ ಹಿಂದೂಸ್ತಾನ್ ಟೈಮ್ಸ್ ಕನ್ನಡವೂ ಅವರ ಸಂದರ್ಶನದ ಸಾರವೊಂದನ್ನು ಪ್ರಕಟಿಸಿತ್ತು. ಅಬ್ಬಾಸ್ ಆಲಿ ಈ ರೀತಿ ಸಂದರ್ಶನ ಕೊಡುವುದು ಅಪರೂಪ. ಇದೀಗ ಮತ್ತೆ ಅವರು ಮಾಧ್ಯಮದ ಮುಂದೆ ಮಾತನಾಡಿರುವ ವಿಷಯ ವೈರಲ್ ಆಗಿದೆ. ತನ್ನ ಕುಟುಂಬದ ಜತೆಗೆ ವಾಸಿಸುವ ಇವರ ತನ್ನ ಇತ್ತೀಚಿನ ಅಪ್‌ಡೇಟ್ ನೀಡಿದ್ದಾರೆ.
ತಮಿಳಿನಲ್ಲಿ ನಾಯಕ ನಟನಾಗಿ ಜನಪ್ರಿಯತೆ ಪಡೆದ ಇವರು ತೆಲುಗು, ಮಲಯಾಳಂ, ಹಿಂದಿ, ಕನ್ನಡ ಸೇರಿ 5 ಭಾಷೆಗಳಲ್ಲಿ ನಟಿಸಿದ್ದರು. ಸಿನಿಮಾ ಕ್ಷೇತ್ರದಲ್ಲಿ ಒಂಬತ್ತು ವರ್ಷಗಳ ಕಾಲ ಹಲವು ಪಾತ್ರಗಳನ್ನು ನಿರ್ವಹಿಸಿ ವಾಹ್ ಎನಿಸಿಕೊಂಡಿದ್ದರು. ಇತ್ತೀಚೆಗೆ ಮಾತನಾಡಿದ ಇವರು "ಬಾಲ್ಯದಲ್ಲಿ ನನಗೆ ಆತ್ಮಹತ್ಯೆ ಆಲೋಚನೆ ಬಂದಿತ್ತು " ಎಂಬ ವಿಚಾರವನ್ನೂ ಹೇಳಿದ್ದಾರೆ. ಜತೆಗೆ ನಾನು ಚಿತ್ರರಂಗದಿಂದ ಏಕೆ ದೂರಾದೆ ಎಂಬ ವಿವರವನ್ನೂ ಹಂಚಿಕೊಂಡಿದ್ದಾರೆ. ಅಂದಹಾಗೆ ಅಬ್ಬಾಸ್ ಆಲಿ ಸೋಷಿಯಲ್ ಮೀಡಿಯಾ, ಮಾಧ್ಯಮ ಇತ್ಯಾದಿಗಳಿಂದ ಬಹುದೂರ. "ಕೊರೊನಾ ಸಮಯದಲ್ಲಿ ಮಾತ್ರ ನಾನು ಜನರೊಂದಿಗೆ ಬೆರೆಯುತ್ತಿದ್ದೆ. ನ್ಯೂಜಿಲೆಂಡ್‌ನಲ್ಲಿರುವಾಗ ಝೂಮ್ ಕಾಲ್ ಮೂಲಕ ಅಭಿಮಾನಿಗಳ ಜತೆ ಸಂಪರ್ಕದಲ್ಲಿದ್ದೆ. ಯಾರಿಗಾದರೂ ಅಗತ್ಯ ಬಿದ್ದರೆ ಸಹಾಯ ಮಾಡೋಣ ಎಂಬ ಉದ್ದೇಶ ನನ್ನದಾಗಿತ್ತು. ವಿಶೇಷವಾಗಿ ಯಾರಾದರೂ ಆತ್ಮಹತ್ಯೆಯಂತಹ ಯೋಚನೆಯಲ್ಲಿದ್ದರೆ ಅವರಿಗೆ ಸಹಾಯ ಮಾಡುವ ಉದ್ದೇಶ ಹೊಂದಿದ್ದೆ" ಎಂದು ಅವರು ಹೇಳಿದ್ದಾರೆ.
ವಾಹನದಡಿಗೆ ಬಿದ್ದು ಸಾಯೋಣ ಎಂದುಕೊಂಡೆ, ಆದರೆ...
"ನನ್ನ ಯೌವನದ ದಿನಗಳಲ್ಲಿ ನಾನೂ ಆತ್ಮಹತ್ಯೆಯ ಕುರಿತು ಆಲೋಚನೆ ಮಾಡಿದ್ದೆ. 10ನೇ ತರಗತಿಯ ಫೇಲ್ ಆದ ಸಂದರ್ಭದಲ್ಲಿ ಸಾಯುವ ಕುರಿತು ಆಲೋಚಣೆ ಮಾಡಿದ್ದೆ. ಪ್ರಿಯತಮೆ ಕೈಕೊಟ್ಟಾಗಲೂ ಇದೇ ರೀತಿ ಆಲೋಚನೆ ಮಾಡಿದ್ದೆ. ಆದರೆ, ಕೆಲವೊಂದು ವಿಷಯಗಳು ನನ್ನನ್ನು ಬದಲಾಯಿಸಿತು. ಅಂದು ವಾಹನವೊಂದರ ಕೆಳಗೆ ಬಿದ್ದು ಸಾಯೋಣ ಎಂದುಕೊಂಡಿದ್ದೆ. ಆದರೆ, ಆಗ ನನ್ನ ಯೋಚನೆ ಬದಲಾಯಿತು. ನಾನು ಸತ್ತರೆ ವಾಹನ ಚಾಲಕ ಏನು ಕಷ್ಟ ಅನುಭವಿಸಬೇಕಾಗಬಹುದು ಎಂದು ಯೋಚಿಸಿದೆ. ನನ್ನಿಂದಾಗಿ ಇನ್ನೊಬ್ಬರಿಗೆ ತೊಂದರೆಯಾಗುವ ಅರಿವಾಯಿತು. ನಾನು ಇತರರಿಗೆ ಒಳಿತು ಮಾಡಬೇಕು ಎಂದು ಅವತ್ತೇ ಅಂದುಕೊಂಡೆ" ಎಂದು ಅವರು ಹೇಳಿದ್ದಾರೆ.
ಪರೀಕ್ಷೆಯಲ್ಲಿ ಫೇಲಾದೆ
ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ಇವರ ಸಂದರ್ಶನದ ವಿವರವಿದೆ. ಅದರ ಪ್ರಕಾರ, "ನನಗೆ ಓದುವ ಕುರಿತು ಆಸಕ್ತಿ ಇರಲಿಲ್ಲ. ಆದರೆ, ಶೈಕ್ಷಣಿಕವಾಗಿ ಸಾಧನೆ ಮಾಡುವವರ ಕುರಿತು ನನಗೆ ಗೌರವವಿದೆ. ಕೆಲವರಿಗೆ ಬೇರೆ ಪ್ರತಿಭೆ ಇರುತ್ತದೆ. ಇಂತಹ ಪ್ರತಿಭೆಯನ್ನು ಗುರುತಿಸಬೇಕು. ಪುರುಷರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಕಷ್ಟಪಡುತ್ತಾರೆ. ಮೌನವಾಗಿ ಕೊರಗುತ್ತಾರೆ. ನಿಮ್ಮ ಭಾವನೆಗಳನ್ನು ಹಂಚಿಕೊಳ್ಳುವಂತೆ ನಾನು ಅಭಿಮಾನಿಗಳಲ್ಲಿ ಕೇಳಿಕೊಳ್ಳುವುದು ಇದೇ ಕಾರಣಕ್ಕೆ" ಎಂದು ಅವರು ಹೇಳಿದ್ದಾರೆ.
ಸಿನಿಮಾ ರಂಗ ಬಿಟ್ಟು ನ್ಯೂಜಿಲೆಂಡ್‌ಗೆ ಹೋದ ಕಥೆ
ಎಲ್ಲಾ ಸರಿ, ಇಷ್ಟೊಂದು ಜನಪ್ರಿಯತೆ ಇರುವಾಗ ಸಿನಿಮಾ ರಂಗವನ್ನು ಏಕೆ ಬಿಟ್ಟಿರಿ ಎಂಬ ಪ್ರಶ್ನೆಗೂ ಅಬ್ಬಾಸ್ ಉತ್ತರಿಸಿದ್ದಾರೆ. "ನನ್ನ ಆರಂಭಿಕ ಸಾಧನೆಯ ಬಳಿಕ ನನ್ನ ಕೆಲವು ಸಿನಿಮಾಗಳು ವೈಫಲ್ಯ ಅನುಭವಿಸಿದವು. ಇದರಿಂದ ನನಗೆ ಆರ್ಥಿಕವಾಗಿ ಸಂಕಷ್ಟವಾಯಿತು. ಮನೆ ಬಾಡಿಗೆ, ಸಿಗರೇಟ್ ಇತ್ಯಾದಿ ಅಗತ್ಯ ವಿಷಯಗಳಿಗೆ ಹಣವಿರಲಿಲ್ಲ. ಇಂತಹ ಸಮಯದಲ್ಲಿ ಬೇರೆ ಕೆಲಸ ಮಾಡೋಣ ಎಂದು ನನ್ನ ಸ್ವಾಭಿಮಾನ ಹೇಳಿತು. ಆರ್‌ಬಿ ಚೌಧರಿಯವರಲ್ಲಿ ಕೆಲಸ ಕೇಳಿದೆ. ಅವರು ಪೊವೆಲಿ ಸಿನಿಮಾದ ಭಾಗವಾಗಲು ತಿಳಿಸಿದರು. ಆದರೆ, ನಾನು ಮುಂದುವರೆಯಲಿಲ್ಲ. ನನಗೆ ಬೋರಿಂಗ್ ಅನಿಸಿತು. ನಾನು ನನ್ನ ಕೆಲಸವನ್ನು ಪ್ರೀತಿಸಲಿಲ್ಲ. ನನ್ನ ಸ್ನೇಹಿತರಿಗೆ ಹೇಳುವೆ, ನನ್ನ ಬಾಲಿವುಡ್ ಶಿನಿಮಾ ಅನ್ಸ್ ಅನ್ನು ನೋಡಬೇಡಿ, ನಿಮ್ಮ ಸಮಯ ವ್ಯರ್ಥ ಮಾಡಬೇಡಿ ಎಂದು ಹೇಳುವೆ" ಎಂದರು.
ಹಣವಿಲ್ಲದೆ ತುಂಬಾ ಕಷ್ಟಪಟ್ಟೆ
ನನಗೆ ಜೀವನದಲ್ಲಿ ಹಣ ತುಂಬಾ ತೊಂದರೆ ನೀಡಿದೆ. ಕುಟುಂಬ ನಿರ್ವಹಣೆಯೇ ಕಷ್ಟವಾಗಿತ್ತು. ನ್ಯೂಜಿಲೆಂಡ್‌ನಲ್ಲಿ ಬೈಕ್ ಮೆಕ್ಯಾನಿಕ್ ಆಗಿ, ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡಿದೆ. ನಾನು ಸಾಮಾನ್ಯವಾಗಿ ಖಾಸಗಿಯಾಗಿ ಇರಲು ಬಯಸುವೆ. ಇದೇ ಕಾರಣಕ್ಕೆ ವಿದೇಶದಲ್ಲಿದ್ದೇನೆ. ಪ್ರಮುಖ ಮಾಧ್ಯಮ ಸಂಸ್ಥೆಗಳಿಗೆ ಇದೇ ಕಾರಣಕ್ಕೆ ಸಂದರ್ಶನ ನೀಡಲಿಲ್ಲ. ಮತ್ತೆ ಬನ್ನಿ ಎಂದು ಅಭಿಮಾನಿಗಳು ಕರೆಯುತ್ತಿದ್ದಾರೆ. ನಾನು ಸತ್ತಿದ್ದೇನೆ, ನಾನು ಮೆಂಟಲ್ ಆಸ್ಪತ್ರೆಯಲ್ಲಿದ್ದೇನೆ ಎಂಬ ಸುದ್ದಿಗಳನ್ನೂ ಕೇಳಿದ್ದೇನೆ. ಇದೇ ಕಾರಣಕ್ಕೆ ಇಂದು ನಾನು ಮಾತನಾಡಿದ್ದೇನೆ, ನಾನು ಜೀವಂತವಾಗಿದ್ದೇನೆ" ಎಂದು ಅವರು ಹೇಳಿದ್ದಾರೆ.